ಭೂದಾಖಲೆ ಪರಿಶೀಲಿಸದೇ ಶಾಲೆ ನೋಂದಣಿಗೆ ಶಿಫಾರಸ್ಸು: ಗೃಹ ಸಚಿವರ ಆಪ್ತ ಕಾರ್ಯದರ್ಶಿ ವಿರುದ್ಧ ಆರೋಪ

ಬೆಂಗಳೂರು; ಭೂ ದಾಖಲೆಗಳನ್ನು ಪರಿಶೀಲಿಸದೆಯೇ ಆನೇಕಲ್‌ ತಾಲೂಕಿನ ಹೆಬ್ಬಗೋಡಿಯಲ್ಲಿರುವ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ನೋಂದಣಿಗೆ ಅನುಮತಿ ನೀಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಪ್ತ ಕಾರ್ಯದರ್ಶಿಯಾಗಿರುವ ಗಣಪತಿ ಭಟ್‌ ಅವರು ಶಿಫಾರಸ್ಸು ಮಾಡಿದ್ದರು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

 

ಶಾಲೆ ಆಡಳಿತ ಮಂಡಳಿಯು ಸುಳ್ಳು ದಾಖಲೆಗಳನ್ನು ಸಲ್ಲಿಸಿದ್ದರೂ ಅದನ್ನು ಪರಿಶೀಲಿಸದೆಯೇ ನಿಯಮ ಉಲ್ಲಂಘಿಸಿದ್ದಲ್ಲದೇ ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪದ ಆರೋಪವನ್ನು ಗಣಪತಿ ಭಟ್‌ ಅವರು ಎದುರಿಸುತ್ತಿದ್ದಾರೆ.

 

2019-20ನೇ ಸಾಲಿನಲ್ಲಿ ಹೊಸ ಖಾಸಗಿ ಶಾಲೆಗಳಿಗೆ ನೋಂದಣಿ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ರಚನೆಯಾಗಿದ್ದ ಜಿಲ್ಲಾ ಇಲಾಖೆಯ ತ್ರಿಸದಸ್ಯ ಸಮಿತಿಯಲ್ಲಿ ಒಬ್ಬರಾಗಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕ ಗಣಪತಿ ಭಟ್‌ ಅವರು ಆಡಳಿತ ಮಂಡಳಿಯವರು ನೀಡಿದ್ದ ಭೂ ದಾಖಲೆಗಳನ್ನು ಪರಿಶೀಲಿಸಿರಲಿಲ್ಲ. ಸುಳ್ಳು ಭೂ ದಾಖಲೆಗಳನ್ನು ಪರಿಶೀಲಿಸದೆಯೇ ನೋಂದಣಿಗೆ ಅನುಮತಿ ನೀಡಿ ಶಿಫಾರಸ್ಸು ಮಾಡಿದ್ದರು. ಈ ಸಂಬಂಧ ಇಲಾಖೆಯ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಧಿಕಾರ ದುರುಪಯೋಗ, ನಿಯಮ ಉಲ್ಲಂಘನೆಯ ಆರೋಪವನ್ನು ಒಪ್ಪಿಕೊಳ್ಳದ ಗಣಪತಿ ಭಟ್‌ ಅವರು ಲಿಖಿತ ರಕ್ಷಣಾ ಹೇಳಿಕೆಯನ್ನು ನೀಡಿದ್ದಾರೆ. ಈ ಸಂಬಂಧ ಕೆಲ ದಾಖಲೆಗಳನ್ನು ಒದಗಿಸಿದ್ದು ತಮ್ಮ ವಿರುದ್ಧದ ಆರೋಪವನ್ನು ಕೈಬಿಡುವಂತೆ ಕೋರಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಪ್ರಕರಣದ ವಿವರ

 

2019-20ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಖಾಸಗಿ ಶಾಲೆಗಳಿಗೆ ನೋಂದಣಿ ಅನುಮತಿ ನೀಡುವ ಸಂದರ್ಭದಲ್ಲಿ ಜಿಲ್ಲಾ ಇಲಾಖಾ ತ್ರಿಸದಸ್ಯ ಸಮಿತಿಯ ಸದಸ್ಯರನ್ನಾಗಿ ಗಣಪತಿ ಭಟ್‌, ಹಿಂದಿನ ಶಿಕ್ಷಣಾಧಿಕಾರಿ ಜಯಪ್ರಕಾಶ್‌, ಕೆನ್ನಾಗರದ ನಿವೃತ್ತ ಮುಖ್ಯ ಶಿಕ್ಷಕ ಯರಪ್ಪ ಎಲ್‌ ಎಂ ಅವರನ್ನು ನೇಮಿಸಲಾಗಿತ್ತು. ಈ ಸಮಿತಿಯು ಸಂಬಂಧಿಸಿದ ಶಾಲೆಗೆ ಭೇಟಿ ನೀಡಿ ನಿಯಮಗಳ ಅನ್ವಯ ಪರಿಶೀಲಿಸಿ ಅಭಿಪ್ರಾಯವನ್ನು ಸಲ್ಲಿಸಬೇಕಿತ್ತು.

 

ಹೆಬ್ಬಗೋಡಿಯ ಹೊಸೂರು ರಸ್ತೆಯಲ್ಲಿರುವ ಕಮ್ಮಸಂದ್ರದ ಸರ್ವೆ ನಂಬರ್‌ 64/1ರಲ್ಲಿರುವ ನ್ಯಾಷನಲ್‌ ಪಬ್ಲಿಕ್ ಶಾಲೆ ನೋಂದಣಿಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಅದರಂತೆ ಆಡಳಿತ ಮಂಡಳಿಯವರು ಪ್ರಸ್ತಾವನೆಯೊಂದಿಗೆ ಭೂ ದಾಖಲೆಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದರು ಎಂಬ ಆರೋಪವಿತ್ತು. ಆದರೆ ಜಿಲ್ಲಾ ಹಂತದ ಇಲಾಖೆ ಸಮಿತಿಯ ಸದಸ್ಯರಾಗಿದ್ದವರು ಸುಳ್ಳು ಭೂ ದಾಖಲೆಗಳನ್ನು ನಿಯಮಾನುಸಾರ ಪರಿಸೀಲಿಸದೆಯೇ ಹೊಸ ಶಾಲೆಗೆ ಅನುಮತಿ ನೀಡಲು ಶಿಫಾರಸ್ಸು ಮಾಡಿ ಅಭಿಪ್ರಾಯ ಸಲ್ಲಿಸಿದ್ದರು. ಇದು ಕರ್ನಾಟಕ ನಾಘರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3(1)(i)(ii)(iii) ಉಲ್ಲಂಘಿಸಿದ್ದರು. ಅಲ್ಲದೆ ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿರುವ ಆರೋಪಕ್ಕೆ ಗುರಿಯಾಗಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

‘ಅಲ್ಲದೆ ನಿರ್ಮಾಣ ಹಂತದ ಕಟ್ಟಡವು ಮುಕ್ತಾಯ ಹಂತದಲ್ಲಿದೆ’ ಎಂದು ತ್ರಿಸದಸ್ಯ ಸಮಿತಿಯ ವರದಿಯಲ್ಲಿ ಹೇಳಲಾಗಿತ್ತು. ‘ಈ ರೀತಿಯ ಸೌಲಭ್ಯಗಳು ಕಂಡುಬಂದಿರುವುದಿಲ್ಲ ಬದಲಾಗಿ ಹೊಸ ಕಟ್ಟಡ ನಿರ್ಮಾಣವಾಗಿದೆ ಎಂದು ಇನ್ನೊಂದೆಡೆ ಹೇಳಲಾಗಿದೆ. ಈ ಎರಡೂ ಹೇಳಿಕೆಗಳೂ ಒಂದಕ್ಕೊಂದು ವೈರುಧ್ಯದಿಂದ ಕೂಡಿವೆ,’ ಎಂದು ತಿಳಿದು ಬಂದಿದೆ.

 

ಒಂದು ವೇಳೆ ಆ ಸಂದರ್ಭದಲ್ಲಿ ತ್ರಿಸದಸ್ಯ ಸಮಿತಿಯ ಹೇಳಿಕೆ ಪಡೆದಿದ್ದಲ್ಲಿ ಆಡಳಿತ ಮಂಡಳಿಯು ಇಲಾಖೆಗೆ ಹಾಗೂ ಇಲಖಾ ಸಮಿತಿಗೆ ಸುಳ್ಳು ಹೇಳಿರುವುದು ಸಾಬೀತಾಗುವ ಸಾಧ್ಯತೆಗಳಿದ್ದವು. ಆದರೆ ಸಮಿತಿಯು ಇವುಗಳನ್ನು ಪರಿಗಣಿಸಿರುವುದಿಲ್ಲ ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

 

ಉಷಾ ಎಜುಕೇಷನಲ್‌ ಫೌಂಡೇಷನ್‌ ಅವರು ಆನೇಕಲ್‌ ತಾಲೂಕಿನ ಹೆಬ್ಬಗೋಡಿಯಲ್ಲಿರುವ ಕಮ್ಮಸಂದ್ರದಲ್ಲಿ ಹೊಸ ಶಾಖೆ ಆರಂಭಿಸಲು 2019ರ ಫೆ.20ರಂದು ಅರ್ಜಿ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಸ್ಥಳೀಯ ಇಲಾಖೆ ಅಧಿಕಾರಿಯಾದ ಆನೇಕಲ್‌ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಾಥಮಿಕವಾಗಿ ಸ್ಥಳ ಪರಿಶೀಲನೆ ಮಾಡಿ 2019ರ ಮೇ 6ರಂದು ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ಈ ಹಂತದಲ್ಲಿ ಅವರು  ಭೂ ದಾಖಲೆ ಅಥವಾ ಕಟ್ಟಡವನ್ನು ಸರ್ವೆ ನಂಬರ್‌ 64/1ರ ಬದಲು 143/2ರಲ್ಲಿ ನಿರ್ಮಿಸಿ ಪರಿಶೀಲನೆಗೆ ತೋರಿಸಿರುವ ಬಗ್ಗೆ ಹಾಗೂ ನ್ಯಾಯಾಲಯದಲ್ಲಿ ಪ್ರಕರಣವಿರುವ ಬಗ್ಗೆ ಯಾವುದೇ ವರದಿ ಸಲ್ಲಿಸಿರಲಿಲ್ಲ.

 

ಹೀಗಾಗಿ ಗಣಪತಿಭಟ್‌ ಅವರು ಸದಸ್ಯರಾಗಿದ್ದ ತ್ರಿ ಸದಸ್ಯ ಸಮಿತಿಯು 2019ರ ಮೇ 21ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಆ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಕಟ್ಟಡ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ತೋರಿಸಿದ್ದರು. ಆ ಸಂದರ್ಭದಲ್ಲಿ ಹೊಸ ಕಟ್ಟಡದ ನಿರ್ಮಾಣ ಮುಕ್ತಾಯ ಹಂತದಲ್ಲಿದೆ ಎಂದು ವರದಿಯಲ್ಲಿ ನಮೂದಿಸಲಾಗಿತ್ತು. ಆದರೆ ಆ ಸಮಯದಲ್ಲಿ ಆಡಳಿತ ಮಂಡಳಿಯವರು ಸರ್ವೆ ನಂಬರ್‌ 143/2ರಲ್ಲಿ ನಿರ್ಮಿಸಿದ್ದ ಹೊಸ ಕಟ್ಟಡವನ್ನು ಪರಿಶೀಲನೆಗೆ ತೋರಿಸಿದ್ದು ಸಮಿತಿಯ ಗಮನಕ್ಕೆ ಬಂದಿರಲಿಲ್ಲ ಎಂದು ರಕ್ಷಣಾತ್ಮಕ ಹೇಳಿಕೆಯಲ್ಲಿ ವಿವರಿಸಲಾಗಿದೆ.

 

ಸದ್ಯ ಈ ಅಂಶಗಳನ್ನಾಧರಿಸಿ ಗಣಪತಿ ಭಟ್‌ ಅವರೂ ಸೇರಿದಂತೆ ಇನ್ನಿಬ್ಬರು ಸಲ್ಲಿಸಿರುವ ಲಿಖಿತ ರಕ್ಷಣಾ ಹೇಳಿಕೆಯನ್ನು ಒಪ್ಪುವ ಅಥವಾ ಒಪ್ಪದಿರುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಇಲಾಖೆಯ ಮೇಲಾಧಿಕಾರಿಗಳಿಗೆ ಕಡತವನ್ನು ಮಂಡಿಸಲಾಗಿದೆ ಎಂಬುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts