ಬೆಂಗಳೂರು; ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿದ್ದರು ಎನ್ನಲಾದ ಇಬ್ಬರು ಮಹಿಳಾ ಆರೋಪಿಗಳಿಗೆ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ರಾತ್ರಿ ಪಾಳಿಯ ವೈದ್ಯಾಧಿಕಾರಿಗಳು ನೀಡಿದ್ದ ವೈದ್ಯಕೀಯ ವರದಿಯನ್ನೇ ಮುಚ್ಚಿಟ್ಟು ನ್ಯಾಯಾಲಯವನ್ನು ದಾರಿತಪ್ಪಿಸಿದ್ದರು ಎಂಬುದನ್ನು ಜನಾಧಿಕಾರ ಸಂಘರ್ಷ ಪರಿಷತ್ ಆರ್‌ಟಿಐ ದಾಖಲೆಗಳ ಮೂಲಕ ಹೊರಗೆಡವಿದೆ.
ಯಲಚೇನಹಳ್ಳಿ ನಿವಾಸಿ ಜಿ ಎಂ ರಾಜೇಶ್ವರಿ ಎಂಬುವರು ನೀಡಿದ್ದ ದೂರನ್ನಾಧರಿಸಿ ಅಮೂಲ್ಯ , ಮೇಘನಾ ಎಂಬ ಮಹಿಳಾ ಆರೋಪಿಗಳನ್ನು ಅಕ್ರಮ ಬಂಧನಲ್ಲಿರಿಸಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಆರೋಪಿಗಳಿಗೆ ಚಿತ್ರಹಿಂಸೆ ನೀಡಿದ್ದರು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಈ ಮೊದಲು ಆರೋಪಿಸಿತ್ತು. ಆದರೆ ಪೊಲೀಸರು ಇದನ್ನು ಅಲ್ಲಗಳೆದಿದ್ದರು.
ಆದರೀಗ ಆರ್‌ಟಿಐ ಅಡಿಯಲ್ಲಿ ವೈದ್ಯಕೀಯ ವರದಿಗಳ ದಾಖಲೆ ಪಡೆದಿರುವ ಜನಾಧಿಕಾರ ಸಂಘರ್ಷ ಪರಿಷತ್, ಪೊಲೀಸರು ಆರೋಪಿಗಳಿಗೆ ಚಿತ್ರಹಿಂಸೆ ನೀಡಿದ್ದರು ಎಂಬುದನ್ನು ರಾತ್ರಿ ಪಾಳಿ ವೈದ್ಯರು ನೀಡಿದ್ದ ವೈದ್ಯಕೀಯ ವರದಿಯನ್ನು ಬಹಿರಂಗಗೊಳಿಸಿದೆ. ಈ ಮೂಲಕ ನ್ಯಾಯಾಲಯವನ್ನು ಪೊಲೀಸರು ಹೇಗೆ ದಿಕ್ಕುತಪ್ಪಿಸಿದ್ದರು ಎಂಬುದನ್ನು ಮುನ್ನೆಲೆಗೆ ತಂದಿದೆ.
ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಮಹಾನಿರ್ದೇಶಕರು ಮತ್ತು ಬೆಂಗಳೂರುನಗರ ಪೊಲೀಸ್ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿದೆ. ದೂರಿನ ಪ್ರತಿ ಮತ್ತು ಆರ್‌ಟಿಐ ಅಡಿಯಲ್ಲಿ ಪಡೆದಿರುವ ವೈದ್ಯಕೀಯ ವರದಿಗಳ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಠಾಣೆಯ ಇನ್ಸ್‌ಪೆಕ್ಟರ್ ಕೊಟ್ರೇಶಿ, ಸಬ್ ಇನ್ಸ್ ಪೆಕ್ಟರ್ ನಾಗೇಶ್ ಎಚ್ ಎಂ, ಎಎಸ್‌ಐ ವೆಂಕಟರಾಮ್, ಮುಖ್ಯ ಪೇದೆ ದಿನೇಶ್ ಬಿ ವಿ (ಎಚ್ ಸಿ 10585) ಸೇರಿದಂತೆ ಮತ್ತಿತರರು ಅಮೂಲ್ಯ ಮತ್ತು ಮೇಘನಾ ಎಂಬುವರನ್ನು ಅಕ್ರಮ ಬಂಧನಲ್ಲಿರಿಸಿ ಚಿತ್ರಹಿಂಸೆ ನೀಡಿದ್ದರು. ಈ ಸಂಬಂಧ ವೈದ್ಯಾಧಿಕಾರಿಗಳು ನೀಡಿದ್ದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದರು ಎನ್ನಲಾದ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಜಯನಗರ ಜನರಲ್ ಆಸ್ಪತ್ರೆಗೆ ರಾತ್ರಿ ವೇಳೆಯಲ್ಲಿ ಕರೆದೊಯ್ದಿದ್ದರು.
ಆ ವೇಳೆಯಲ್ಲಿ ಆರೋಪಿಗಳನ್ನು ರಾತ್ರಿ ಪಾಳಿಯಲ್ಲಿದ್ದ ವೈದ್ಯರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರ ಆರೋಪಿಗಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಆರ್‌ಟಿಐ ಅಡಿಯಲ್ಲಿ ನೀಡಿರುವ ದಾಖಲೆಗಳಿಂದ ತಿಳಿದು ಬಂದಿದೆ.
ಇದರಿಂದ ವಿಚಲಿತರಾದ ಪೊಲೀಸರು ರಾತ್ರಿ ಪಾಳಿಯ ವೈದ್ಯರು ನೀಡಿದ್ದ ವರದಿಯನ್ನು ಮುಚ್ಚಿಟ್ಟಿದ್ದರಲ್ಲದೆ ಬೆಳಗಿನ ಪಾಳಿಯ ವೈದ್ಯರೊಂದಿಗೆ ಸಮಾಲೋಚಿಸಿ ಬೇರೊಂದು ವರದಿಯನ್ನು ಸಿದ್ಧಪಡಿಸಿದ್ದರು ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ. ಬೆಳಗಿನ ಪಾಳಿಯ ವೈದ್ಯರು 8 ಗಂಟೆ ನಂತರ ನೀಡಿರುವ ವೈದ್ಯಕೀಯ ವರದಿ ಪ್ರಕಾರ ವರದಿಯಲ್ಲಿ ಆರೋಪಿಗಳಿಗೆ ಯಾವುದೇ ಚಿತ್ರಹಿಂಸೆ ನೀಡಿರುವ ಯಾವುದೆ ಉಲ್ಲೇಖಿಸಿಲ್ಲ. ಬೆಳಗಿನ ಪಾಳಿಯ ವೈದ್ಯರು ನೀಡಿದ್ದ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ರಾಜೇಶ್ವರಿ ಅವರು ನೀಡಿದ್ದ ದೂರಿನಲ್ಲೇನಿತ್ತು?
ಬೆಂಗಳೂರು ನಗರದ ಯಲಚೇನಹಳ್ಳಿಯ ಆಸ್ಪೀನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಜಿ ಎಂ ರಾಜೇಶ್ವರಿ ಎಂಬುವರ ಪತಿ ಜಯರಾಮ್ ಎಂಬುವರನ್ನು ನೋಡಿಕೊಳ್ಳಲು ರಾಜೇಶ್ ಎಂಬಾತ ಕೆಲಸಕ್ಕೆ ಸೇರಿಕೊಂಡಿದ್ದರು. ಕಳೆದ 3 ವರ್ಷಗಳ ಹಿಂದೆಯೇ ರಾಜೇಶ್ವರಿ ಅವರ ಪತಿ ಜಯರಾಮ್ ಎಂಬುವರು ತೀರಿಕೊಂಡಿದ್ದರು. ಇದಾದ ಬಳಿಕವೂ ರಾಜೇಶ್ ಎಂಬಾತ ಅದೇ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆಯಲ್ಲಿ ರಾಜೇಶ್ವರಿ ಅವರ ಬಳಿ ಇದ್ದ ಚಿನ್ನದ ಒಡವೆಗಳ ಬಗ್ಗೆ ರಾಜೇಶ್‌ನಿಗೆ ಗೊತ್ತಿತ್ತು. ಚಿನ್ನದ ಒಡವೆಗಳನ್ನು ಬೆಡ್ ರೂಂನಲ್ಲಿರುವ ಬೀರುವಿನಲ್ಲಿಟ್ಟು ಬೀಗ ಹಾಕಿ ಬೀಗದ ಕೈಯನ್ನು ಅಲ್ಲಿಯೇ ಇಡುತ್ತಿದ್ದರು ಎಂದು ರಾಜೇಶ್ವರಿ ಅವರು ದೂರಿನಲ್ಲಿ ವಿವರಿಸಿದ್ದಾರೆ.
ಬೀರುವಿನಲ್ಲಿದ್ದ ಚಿನ್ನದ ಒಡವೆಗಳು ಕೆಲ ದಿನಗಳ ನಂತರ ಕಾಣಲಿಲ್ಲ. ಇದು ಗಮನಕ್ಕೆ ಬಂದ ಐದು ದಿನಗಳಿಮದ ರಾಜೇಶ್ ಮನೆಯಿಂದ ಹೊರಟು ಹೋಗಿದ್ದ. ತಮ್ಮ ಬಳಿ ಇದ್ದ ಚಿನ್ನದ ಒಂದು ಕಲ್ಲಿನ ಡಾಲರ್ ಚೈನ್, ಒಂದು ಚೈನ್ ಪದಕ, ಎರಡು ಕಲ್ಲಿನ ಬಳೆಗಳು, ಮೂರು ಚಿನ್ನದ ಉಂಗುರುಗಳು, ಎರಡು ಜತೆ ಕಿವಿ ಓಲೆಗಳನ್ನು ರಾಜೇಶ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ರಾಜೇಶ್ವರಿ ಅವರು ದೂರು ನೀಡಿದ್ದರು.
ಈ ದೂರಿಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ರಾಜೇಶ್, ಅಮೂಲ್ಯ, ಮೇಘನಾ ವಿ. ಎಂಬುವರನ್ನು ದಸ್ತಗಿರಿ ಮಾಡಿದ್ದರು. ಆದರೆ ವಾಸ್ತವದಲ್ಲಿ ಆರೋಪಿಗಳನ್ನು ಅಕ್ರಮ ಬಂಧನದಲ್ಲಿರಿಸಿದ್ದರು ಎಂದು ಜನಾಧಿಕಾರ ಸಂಘರ್ಷ ಪರಿಷತ್ ದೂರಿದೆ.