ಹಸುಳೆ ಚಿಕಿತ್ಸೆಗೆ 16 ಕೋಟಿ ಹೊಂದಿಸಲು ಪೋಷಕರ ಪರದಾಟ; 5 ಲಕ್ಷ ನೀಡಿ ಕೈತೊಳೆದುಕೊಂಡ ಸಿಎಂ

ಬೆಂಗಳೂರು; ಕ್ರಿಮಿನಲ್‌ ಆರೋಪಗಳಿಗೆ ಗುರಿಯಾಗಿ ಹತ್ಯೆಯಾಗಿರುವ ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನಿಗೆ ವಿವೇಚನೆ ಅಧಿಕಾರ ಬಳಸಿಕೊಂಡು 25 ಲಕ್ಷ ರು. ಪರಿಹಾರ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಯಚೂರು ಮೂಲದ 4 ತಿಂಗಳ ಸಾತ್ವಿಕ್‌ ಜೀವನ್ಮರಣ ಹೋರಾಟದಲ್ಲಿದ್ದರೂ ಕೇವಲ 5 ಲಕ್ಷ ರು. ನೀಡಿ ಕೈತೊಳೆದುಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಸದ್ಯ ಈ ಮಗುವಿಗೆ ಚಿಕಿತ್ಸೆಗೆ ನೀಡುತ್ತಿರುವ ಬೆಂಗಳೂರು ಬ್ಯಾಪಿಸ್ಟ್‌ ಆಸ್ಪತ್ರೆಯು 16.00 ಕೋಟಿ ರು. ವೆಚ್ಚವಾಗಲಿದೆ ಎಂದು ಪತ್ರ ನೀಡಿದೆ. ತೀರಾ ಅಪರೂಪದಲ್ಲಿ ಅಪರೂಪ ಎಂದು ಹೇಳಲಾಗಿರುವ ಬೆನ್ನುಮೂಳೆಯ ಸ್ನಾಯು ಕ್ಷೀಣಿಸುತ್ತಿರುವ ಕಾಯಿಲೆ (Spinal Muscular Atrophy type 1 disease for the last 8 months. This is a Life Threating Disease, which is always fatal) ಎಂದು ತಿಳಿದು ಬಂದಿದೆ.  ಈ ಕಾಯಿಲೆಗೆ ಚಿಕಿತ್ಸೆಗೆ ಔಷಧವು (AXVS-1010 ONASEMNOGENE ABEPARVOVECXIOI) ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಅಮೇರಿಕದಿಂದ ಈ ಔಷಧವನ್ನು ಅಮದು ಮಾಡಿಕೊಳ್ಳಬೇಕಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 

ಈ ಸಂಬಂಧ ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿರುವ ಮಗುವಿನ ತಂದೆ ವೀರೇಶ್‌ ಎಂಬಾತ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದ್ದಾರೆ. ವೀರೇಶ್‌ ರಾಯಚೂರಿನ ವೈಟಿಪಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದು ಈತನಿಗೆ ತಿಂಗಳಿಗೆ 10,000 ರು. ವೇತನವಿದೆ ಎಂದು ಗೊತ್ತಾಗಿದೆ. . ಪೋಷಕರು ನೀಡಿರುವ ಅರ್ಜಿ ಮತ್ತು  2022ರ ಜೂನ್‌ 14ರಂದು ಆಸ್ಪತ್ರೆ ನೀಡಿರುವ ಚಿಕಿತ್ಸೆಗೆ ತಗಲುವ ವೆಚ್ಚದ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬೆಂಗಳೂರು ಬ್ಯಾಪಿಸ್ಟ್‌ ಆಸ್ಪತ್ರೆ ನೀಡಿರುವ ಚಿಕಿತ್ಸೆ ವೆಚ್ಚದ ಪತ್ರ

 

ಆಸ್ಪತ್ರೆಯು ನೀಡಿರುವ ಚಿಕಿತ್ಸಾ ವೆಚ್ಚವನ್ನು ಹೊಂದಿಸಲು ಪರದಾಡುತ್ತಿರುವ ಪೋಷಕರು ಮುಖ್ಯಮಂತ್ರಿ ಕಚೇರಿಗೆ ಇದೀಗ ಮೊರೆಯಿಟ್ಟಿದ್ದಾರೆ. ಚಿಕಿತ್ಸಾ ವೆಚ್ಚಕ್ಕೆ ಮುಖ್ಯಮಂತ್ರಿಗ ಕಚೇರಿಗೆ ಅಲೆದು ಬಸವಳಿದು ಹೋಗಿದ್ದಾರೆ. ಇದೇ ಅರ್ಜಿ ಜತೆಗೆ ಬೆಂಗಳೂರು ಬ್ಯಾಪಿಸ್ಟ್‌ ಆಸ್ಪತ್ರೆಯು ನೀಡಿರುವ 16.00 ಕೋಟಿ ರು. ಚಿಕಿತ್ಸಾ ವೆಚ್ಚದ ಪತ್ರವನ್ನೂ ನೀಡಿದ್ದಾರೆ.

 

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಗರಿಷ್ಠ 10 ಲಕ್ಷ ರು.ವರೆಗೂ ಮಂಜೂರು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ಮತ್ತು ಅವಕಾಶವಿದೆ. ಆದರೆ ಮುಖ್ಯಮಂತ್ರಿಗಳು ಕೇವಲ 5.00 ಲಕ್ಷ ರು. ಮಾತ್ರ ಪರಿಹಾರ ನೀಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 

ಸಾರ್ವಜನಿಕ ಉದ್ಯಮಗಳು, ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳು, ಸಮಾಜ ಸೇವಕರು ಸೇರಿದಂತೆ ಮತ್ತಿತರರು ಆಗಾಗ್ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಈ ನಿಧಿಯಲ್ಲಿ ಜಮೆ ಆಗಿರುವ ಹಣವನ್ನು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ರೋಗಿಗಳಿಗೆ ಆಸ್ಪತ್ರೆ ವೆಚ್ಚವೆಂದು ಪಾವತಿಸಲಾಗುತ್ತಿದೆ.

 

ಹಲವು ಕ್ರಿಮಿನಲ್‌ ಆರೋಪಗಳಿಗೆ ಗುರಿಯಾಗಿದ್ದ ಎಂದು ಹೇಳಲಾಗಿರುವ ಬಜರಂಗದಳ ಕಾರ್ಯಕರ್ತ ಹರ್ಷ ಎಂಬಾತನನ್ನು ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿವೇಚನಾ ಅಧಿಕಾರ ಬಳಸಿಕೊಂಡು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರು. ಪರಿಹಾರ ಒದಗಿಸಿದ್ದರು.

 

ಕ್ರಿಮಿನಲ್‌ ಆರೋಪಗಳನ್ನು ಹೊಂದಿದ್ದ ಆರೋಪಿ ಹತ್ಯೆಯಾದಾಗ ಆತನ ಕುಟುಂಬಕ್ಕೆ 25 ಲಕ್ಷ ರು. ನೀಡುವ ಮೂಲಕ ಔದಾರ್ಯ ಮೆರೆಯುವ ಸರ್ಕಾರವು ಬಿಪಿಎಲ್‌ ಕುಟುಂಬದ ಹಸುಳೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದರೂ ಚಿಕಿತ್ಸೆ ವೆಚ್ಚಕ್ಕೆ ಕೇವಲ 5 ಲಕ್ಷ ರು. ನೀಡಿರುವುದು ಸಮರ್ಥನೀಯವಲ್ಲ ಎಂಬ ಅಭಿಪ್ರಾಯವೂ ಅಧಿಕಾರಿಗಳ ವಲಯದಲ್ಲೇ ಕೇಳಿ ಬಂದಿದೆ.

the fil favicon

SUPPORT THE FILE

Latest News

Related Posts