ಬೆಂಗಳೂರು; ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು 2 ತಿಂಗಳ ಹಿಂದೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಇಫ್ತಿಯಾರ್ ಔತಣ ಕೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಪಾವತಿಸಬೇಕಿರುವ ಸಂಚಾರ ನಿಯಂತ್ರಣ ಶುಲ್ಕದಿಂದ ವಿನಾಯಿತಿ ಕೋರಿದ್ದಾರೆ. ಅದೇ ರೀತಿ ಪ್ರಮೋದಾದೇವಿ ಒಡೆಯರ್ ಜಾಗದಲ್ಲಿ ನಡೆದಿದ್ದ 5 ಕಾರ್ಯಕ್ರಮಗಳ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಗುರಿಯಾಗಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿರುವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಬಿಬಿಎಂಪಿಗೆ ಪಾವತಿಸಬೇಕಿರುವ ಕೇವಲ 15,000 ರು. ಸಂಚಾರ ನಿಯಂತ್ರಣ ಶುಲ್ಕದಿಂದ ವಿನಾಯಿತಿ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು ಅರಮನೆ ಮೈದಾನದ ನಲಪಾದ್ ಪೆವಿಲಿಯನ್ ಜಾಗದಲ್ಲಿ 2022ರ ಏಪ್ರಿಲ್ 15ರಂದು ನಡೆಸಿದ್ದ ಇಫ್ತಿಯಾರ್ ಕೂಟವು ಖಾಸಗಿ ಕಾರ್ಯಕ್ರಮವಾಗಿದ್ದರೂ ಸಂಚಾರ ನಿಯಂತ್ರಣ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಕೋರಿರುವುದಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಕರಾರು ಎತ್ತಿದೆ. ಈ ಸಂಬಂಧ ಬೆಂಗಳೂರು ಅರಮನೆ ಮೈದಾನದ ಶ್ರೇಯಂ ಗೇಟ್ ನಂ 5ರ ರುದ್ರಪ್ರತಾಪ್ ಸಿಂಗ್ ಅವರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು 2022ರ ಜುಲೈ 6ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಬಿಬಿಎಂಪಿಗೆ ಪಾವತಿಸಬೇಕಾದ 15,000 ರು.ಗಳಿಂದ ವಿನಾಯಿತಿ ಕೋರಿರುವ ಮನವಿಯನ್ನು ಪರಿಶೀಲಿಸಲಾಗಿದೆ. ಪ್ರಸ್ತಾಪಿತ ಕಾರ್ಯಕ್ರಮವು ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಬಿಬಿಎಂಪಿಗೆ ಪಾವತಿಸಬೇಕಾದ ಶುಲ್ಕದಿಂದ ವಿನಾಯಿತಿ ನೀಡುವಂತೆ ಕೋರಿರುವುದನ್ನು ಒಪ್ಪಲು ಬರುವುದಿಲ್ಲ. ಆದ್ದರಿಂದ ನಿಯಮಾನುಸಾರ ಬಿಬಿಎಂಪಿಗೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿ ಕೂಡಲೇ ದಾಖಲೆ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿದ್ದಾರೆ.
ಇನ್ನು, ಪ್ರಮೋದಾದೇವಿ ಒಡೆಯರ್ ಇವರ ಜಾಗದಲ್ಲಿ 2010 ಮತ್ತು 2018ನೆ ಸಾಲಿನಲ್ಲಿ ಒಟ್ಟು 10 ಕಾರ್ಯಕ್ರಮಗಳು ನಡೆದಿದ್ದವು. ಈ ಪೈಕಿ 5 ಕಾರ್ಯಕ್ರಮಗಳಿಗೆ ಮಾತ್ರ ಶುಲ್ಕ ಪಾವತಿಸಿ ಇನ್ನುಳಿದ 5 ಕಾರ್ಯಕ್ರಮಗಳ ಶುಲ್ಕವನ್ನು ಪಾವತಿಸಿಲ್ಲ.
ಶುಲ್ಕ ಪಾವತಿಸಿ ಎಂದು ವಾರಸುದಾರರಿಗೆ ಸೂಚಿಸಿದ್ದರೂ ಇದುವರೆಗೂ ಪಾವತಿಯಾಗಿಲ್ಲ ಎಂಬುದು 2022ರ ಜೂನ್ 29ರಂದು ನಡೆದ ಸಭೆ ನಡವಳಿಯಿಂದ ತಿಳಿದು ಬಂದಿದೆ.