ಪಿಎಸ್‌ಐ ನೇಮಕ ಅಕ್ರಮ; ಅಭ್ಯರ್ಥಿ ಲೆಕ್ಕದಲ್ಲಿ ತಲಾ 25 ಲಕ್ಷ ಹಂಚಿಕೆ, ದಿವ್ಯಾ ಹಾಗರಗಿಯೇ ಪ್ರಿನ್ಸಿಪಾಲ್‌

ಬೆಂಗಳೂರು; ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಲಾಭ ಗಳಿಸುವ ಉದ್ಧೇಶದಿಂದ ಬಿಜೆಪಿ ಪಕ್ಷದ ನಾಯಕಿ ದಿವ್ಯಾ ಹಾಗರಗಿ ನೇತೃತ್ವದಲ್ಲಿಯೇ ಅಕ್ರಮ ಕೂಟ ರಚನೆಯಾಗಿತ್ತು. ಆರೋಪಿ ಮಂಜುನಾಥ ಮೇಳಕುಂದಿ ಮತ್ತಿತರರೊಂದಿಗೆ ಪರಸ್ಪರ ಶಾಮೀಲಾಗಿ ಒಳಸಂಚು ರೂಪಿಸುವ ಮೂಲಕ ಪ್ರತಿಯೊಬ್ಬ ಪಿಎಸ್‌ಐ ಅಭ್ಯರ್ಥಿ ಲೆಕ್ಕದಲ್ಲಿ ತಲಾ 25 ಲಕ್ಷ ರು.ಗಳನ್ನು ಹಂಚಿಕೊಳ್ಳಲು ತೀರ್ಮಾನವಾಗಿತ್ತು ಎಂಬ ಸಂಗತಿಯನ್ನು ದೋಷಾರೋಪಣೆ ಪಟ್ಟಿಯು ಹೊರಗೆಳೆದಿದೆ.

 

ಕಲ್ಬುರ್ಗಿ ನಗರದ ಜ್ಞಾನಜ್ಯೋತಿ ಇಂಗ್ಲಿಷ್‌ ಮೀಡಿಯಂ ಶಾಲೆಯ ಶಿಕ್ಷಕ, ಶಿಕ್ಷಕಿಯರನ್ನೂ ಈ ಅಕ್ರಮಕೂಟದಲ್ಲಿ ತೊಡಗಿಸಿಕೊಂಡಿದ್ದ ತಂಡವು ಪರೀಕ್ಷಾ ಕೇಂದ್ರದಲ್ಲಿ ಅಕ್ರಮಗಳು ಸುಗಮವಾಗಿ ನಡೆಯುವ ಉದ್ದೇಶದಿಂದ ಅನ್ನಪೂರ್ಣ ಎಜುಕೇಷನಲ್‌ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದ ದಿವ್ಯಾ ಹಾಗರಗಿ ಅವರನ್ನು ‘ಪ್ರಿನ್ಸಿಪಾಲ್’ ಎಂದು ಸೇರಿಸಿ ಪೊಲೀಸ್ ಇಲಾಖೆಗೆ ಸಾಫ್ಟ್‌ ಕಾಪಿ ಕೂಡ ನೀಡಲಾಗಿತ್ತು ಎಂಬುದನ್ನು ದೋಷಾರೋಪಣೆ ಪಟ್ಟಿಯು ಬಹಿರಂಗಗೊಳಿಸಿದೆ. ಕಲ್ಬುರ್ಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹಗರಣದ 18ನೇ ಆರೋಪಿ ದಿವ್ಯಾ ಹಾಗರಗಿ ಅವರು ಜ್ಞಾನಜ್ಯೋತಿ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ನ ಪ್ರಿನ್ಸಿಪಾಲ್‌ ಹುದ್ದೆಯಲ್ಲಿರುವುದಾಗಿ ಉದ್ದೇಶಪೂರ್ವಕವಾಗಿ ಪೊಲೀಸ್‌ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಪರೀಕ್ಷೆ ದಿನದಂದು ಕರ್ತವ್ಯ ನಿರ್ವಹಿಸಿದ್ದರು ಎಂದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.
ದಿವ್ಯಾ ಹಾಗರಗಿ ಅವರು ಟ್ರಸ್ಟ್‌ನ ಕಾರ್ಯದರ್ಶಿಯಾಗಿದ್ದರೂ ಅವರನ್ನು ಪ್ರಿನ್ಸಿಪಾಲ್‌ ಎಂದು ಸೇರಿಸಿ ನೀಡಿದ್ದ ಪಟ್ಟಿಯನ್ನು ಪೊಲೀಸ್ ನೇಮಕಾತಿ ಪ್ರಾಧಿಕಾರವು ಪರಿಶೀಲಿಸದೇ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

‘ದಿವ್ಯಾ ಮೇಡಂ ಅವರು ಎಲ್ಲಾ ಮ್ಯಾನೇಜ್‌ ಮಾಡಿದ್ದಾರೆ. ಅದಕ್ಕಾಗಿಯೇ ಪೊಲೀಸ್‌ ಇಲಾಖೆಯವರು ಕೇಳಿದ್ದ ಸಾಫ್ಟ್‌ ಲಿಸ್ಟ್‌ನಲ್ಲಿ ದಿವ್ಯಾ ಮೇಡಂ ಅವರನ್ನು ಪ್ರಿನ್ಸಿಪಾಲ್‌ ಎಂದು ಸೇರಿಸಿದ್ದು. ಅದಕ್ಕಾಗಿಯೇ ಇಂದು ದಿವ್ಯಾ ಮೇಡಂ ಅವರು ಸ್ಕೂಲಿನಲ್ಲಿ ಹಾಜರಿರುತ್ತಾರೆ. ಪರೀಕ್ಷೆ ಮುಗಿದ ನಂತರ ದಿವ್ಯಾ ಮೇಡಂ ಅವರು ಹೆಚ್ಚುವರಿಯಾಗಿ ಹಣ ಕೊಡುತ್ತಾರೆ. ನೀವು ಭಯಪಡುವ ಅವಶ್ಯಕತೆ ಇಲ್ಲ,’ ಎಂದು ಶಾಲೆಯ ಹಿಂದಿ ಶಿಕ್ಷಕಿಯೂ ಆಗಿರುವ ಆರೋಪಿ ಅರ್ಚನಾ ಹೊನಗೇರಿ ಎಂಬುವರ ಮನವೊಲಿಸಲಾಗಿತ್ತು ಎಂಬ ಅಂಶವು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

 

ಪಿಎಸ್‌ಐ ಅಭ್ಯರ್ಥಿಗಳ ಓಎಂಆರ್‌ ಉತ್ತರ ಪತ್ರಿಕೆಯಲ್ಲಿ ಹಲವು ಆರೋಪಿಗಳಿಂದ ಅಕ್ರಮವಾಗಿ ಉತ್ತರಗಳನ್ನು ಭರ್ತಿ ಮಾಡಿಸಿದ್ದರಿಂದಾಗಿ ಐವರು ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ವೀರೇಶ್‌, ನಂದಗಾಂವ್‌ ಚೇತನ್‌, ಪ್ರವೀಣ್‌ಕುಮಾರ್‌ ಕೆ, ಅರುಣ್‌ಕುಮಾರ್‌, ಶಾಂತಿಬಾಯಿ ಎಂಬವರು 2021ರ ಜನವರಿ 19ರಂದು ಪ್ರಕಟಿಸಿದ್ದ ಆಯ್ಕೆಪಟ್ಟಿಯಲ್ಲಿ ಹೆಸರಿತ್ತು ಎಂಬ ವಿವರಗಳು ದೋಷಾರೋಪಣೆ ಪಟ್ಟಿಯಲ್ಲಿವೆ.

 

ಜ್ಞಾನಜ್ಯೋತಿ ಇಂಗ್ಲೀಷ್‌ ಮೀಡಿಯಂ ಶಾಲೆಯು ಪರೀಕ್ಷಾ ಕೇಂದ್ರವಾಗಿದ್ದರಿಂದಾಗಿ ಟ್ರಸ್ಟ್‌ನ ಕಾರ್ಯದರ್ಶಿ ದಿವ್ಯಾ ಹಾಗರಗಿ ಅವರನ್ನು ಸಂಪರ್ಕಿಸಿದ್ದ ಈ ಹಗರಣದ ಪ್ರಮುಖ ಆರೋಪಿ ಮಂಜುನಾಥ್‌ ಮೇಳಕುಂದಿ ಪಿಎಸ್‌ಐ ಅಭ್ಯರ್ಥಿಗಳ ಪಟ್ಟಿಯನ್ನು ದಿವ್ಯಾ ಹಾಗರಗಿ ಅವರ ಮುಂದಿರಿಸಿ ಕೋಟ್ಯಂತರ ರುಪಾಯಿಗಳನ್ನು ಸುಲಭವಾಗಿ ಗಳಿಸಬಹುದು ಎಂದು ಖೆಡ್ಡಾಕ್ಕೆ ಬೀಳಿಸಿಕೊಂಡು ಆಮಿಷ ಒಡ್ಡಿದ್ದ ಎಂಬ ಅಂಶವೂ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖವಾಗಿದೆ.

 

”ಅಕ್ಕಾ ನಿಮ್ಮ ಜ್ಞಾನಜ್ಯೋತಿ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ ಲಿಖಿತ ಪರೀಕ್ಷೆ ಬರೆಯಲು ಹಾಲ್‌ ಟಿಕೆಟ್‌ ನಂಬರ್‌ ಬಿದ್ದಿರುವ ಕೆಲವು ಪಿಎಸ್‌ಐ ಅಭ್ಯರ್ಥಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ನಾನು ಹೇಳಿದಂತೆ ನೀವು ಮತ್ತು ಪರೀಕ್ಷೆಯ ದಿನ ಪರಿವೀಕ್ಷಕರಾಗಿ ಕೆಲಸ ಮಾಡುವ ಶಿಕ್ಷಕಿಯರು ಸೇರಿ ಪರೀಕ್ಷೆಯಲ್ಲಿ ಸಹಾಯ ಮಾಡಬೇಕು. ಹಾಗೆ ಸಹಾಯ ಮಾಡಿದ್ದಲ್ಲಿ ನಾನು ನಿಮಗೆ ನೀವು ಕೇಳಿದಷ್ಟು ಹಣ ಕೊಡುತ್ತೇನೆ. ಇದರಿಂದ ಅಭ್ಯರ್ಥಿಗಳಿಗೂ ಸಹಾಯ ಮಾಡಿದ ಹಾಗೆ ಆಗುತ್ತದೆ. ಮತ್ತು ಅಕ್ಕಾ ನೀನು ಮತ್ತು ನಾನು ಕೋಟ್ಯಂತರ ರುಪಾಯಿ ಹಣವನ್ನು ಸುಲಭವಾಗಿ ಗಳಿಸಬಹುದು,’ ಎಂದು ಆಮಿಷ ಒಡ್ಡಿದ್ದ ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

 

ಶಾಲೆಯ ಪ್ರಾಂಶುಪಾಲ ಕಾಶಿನಾಥ ಚಿಳ್ಳ ಅವರನ್ನು ಕರೆಸಿಕೊಂಡಿದ್ದ ಈ ತಂಡವು 2021ರ ಅಕ್ಟೋಬರ್‌ 3ರಂದು ನಡೆಯುವ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಒಳಸಂಚು ರೂಪಿಸಿತ್ತು. ಇದೇ ತಂಡವು ಪ್ರತಿ ಪಿಎಸ್‌ಐ ಅಭ್ಯರ್ಥಿಗೆ ಸಹಾಯ ಮಾಡಲು ಹಣವನ್ನು ನಿಗದಿಪಡಿಸಿತ್ತು. ‘ ಪ್ರತಿಯೊಬ್ಬ ಪಿಎಸ್‌ಐ ಅಭ್ಯರ್ಥಿಗೆ ಸಹಾಯ ಮಾಡಲು ತಲಾ 30 ಲಕ್ಷ ರು.ಗಳನ್ನು ಎ-24 ಅವರು ಕೊಡಬೇಕೆಂದು ಕೇಳಿದ್ದು ಅದಕ್ಕೆ ಎ-24 ಅವರು ತುಂಬಾ ಜಾಸ್ತಿಯಾಯಿತು ಎಂದು ಹೇಳಿದ್ದು ನಂತರ ಪರಸ್ಪರ ಚರ್ಚಿಸಿ ಕೊನೆಗೆ ಪ್ರತಿಯೊಬ್ಬ ಪಿಎಸ್‌ಐ ಅಭ್ಯರ್ಥಿಯ ಲೆಕ್ಕದಲ್ಲಿ ತಲಾ 25 ಲಕ್ಷ ರು ಕೊಡುವ ಬಗ್ಗೆ ತೀರ್ಮಾನವಾಗುತ್ತದೆ,’ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

 

ವ್ಯವಹಾರ ಕುದುರಿದ ನಂತರ ಅಕ್ರಮಕೂಟವು ಪರೀಕ್ಷೆ ದಿನದಂದು ನಡೆಸುವ ಕಾರ್ಯಾಚರಣೆಯ ಹಾದಿಯನ್ನೂ ಸಿದ್ಧಪಡಿಸಿತ್ತು. ‘ 2021 ಅಕ್ಟೋಬರ್‌ 3ರಂದು ಎ-18 ಮತ್ತು ಎ-26 ಅವರು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಎ-26 ಅವರು ತನಗೆ ಪೇಪರ್‌ -2 ಪ್ರಶ್ನೆ ಪತ್ರಿಕೆ ಸೀರೀಸ್‌ (ಎ ಬಿ ಸಿ ಡಿ ಇ)ಗಳ ಫೋಟೋ ತೆಗೆದು ವಾಟ್ಸಾಪ್‌ ಮೂಲಕ ನನಗೆ ಕಳಿಸಿಕೊಡಬೇಕು. ನಾನು ಸದರಿ ಪ್ರಶ್ನೆಗಳಿಗೆ ಉತ್ತರಗಳನ್ನು ರೆಡಿ ಮಾಡಿ ಸೀರೀಸ್‌ ಪ್ರಕಾರ ಪಟ್ಟಿ ಮಾಡಿ ಅಭ್ಯರ್ಥಿಗಳ ರೋಲ್‌ ನಂಬರ್‌ ಬರೆದು ಫೋಟೋ ತೆಗೆದು ವಾಟ್ಸಾಪ್‌ ಮೂಲಕ ಎ-26 ಅವರಿಗೆ ಕಳಿಸಿಕೊಡುತ್ತೇನೆ. 3-26 ಅವರು ಸದರಿ ಫೋಟೋಗಳನ್ನು ಡೌನ್‌ಲೌನ್‌ ಮಾಡಿಕೊಂಡು ಪ್ರಿಂಟ್‌ ಹಾಕಿಸಿ ನಮ್ಮ ಅಭ್ಯರ್ಥಿಗಳಿರುವ ಬ್ಲಾಕ್‌ಗಳಲ್ಲಿರುವ ಪರಿವೀಕ್ಷಕರಿಗೆ ತಲುಪಿಸಬೇಕು.

 

ಮಧ್ಯಾಹ್ನ 4-30ಕ್ಕೆ ಪರೀಕ್ಷೆ ಮುಗಿದ ಮೇಲೆ ಅಭ್ಯರ್ಥಿಗಳೆಲ್ಲ ಉತ್ತರ ಬರೆದಿರುವ ಓಎಂಆರ್‌ಗಳನ್ನು ಕೊಟ್ಟು ಹೋದ ಮೇಲೆ ಪರಿವೀಕ್ಷಕರು ಸಿಸಿಟಿವಿಯಲ್ಲಿ ಕಾಣಿಸಿಕೊಳ್ಳದಂತೆ ಮರೆಯಾಗಿದ್ದುಕೊಂಡು ಪ್ರಿಂಟ್‌ ಔಟ್‌ನಲ್ಲಿ ಬರೆದಿರುವ ರೋಲ್‌ ನಂಬರ್‌ನ ಒಎಂಆರ್‌ ಶೀಟ್‌ನಲ್ಲಿ ಅಭ್ಯರ್ಥಿಯು ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಸಂಬಂಧಿಸಿದ ವೃತ್ತಗಳಲ್ಲಿ ಸರಿಯಾದ ಉತ್ತರಗಳಿರುವ ವೃತ್ತಗಳನ್ನು ನೀಲಿ ಇಂಕ್ ಇರುವ ಬಾಲ್‌ಪೆನ್‌ನಿಂದ ಭರ್ತಿ ಮಾಡಿಸಬೇಕು,’ ಎಂದು ಸೂಚನೆಗಳನ್ನು ನೀಡಲಾಗಿತ್ತು ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.

 

ಪರೀಕ್ಷೆ ನಡೆದ ದಿನದ ರಾತ್ರಿ 24ನೇ ಆರೋಪಿ ಮಂಜುನಾಥ ಮೇಳಕುಂದಿ 23 ಲಕ್ಷ ರು. ನಗದುಹಣ ಪಡೆದುಕೊಂಡಿದ್ದರು. 18ನೇ ಆರೋಪಿ ದಿವ್ಯಾ ಹಾಗರಗಿ ಅವರು ಮಂಜುನಾಥ್ ಮೇಳಕುಂದಿ ಅವರಿಂದ ಅಕ್ರಮ ಲಾಭದ ಹಣವಾಗಿ ಒಟ್ಟು 48 ಲಕ್ಷ ರು.ಗಳ ನಗದು ಪಡೆದುಕೊಂಡಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಕರಿಸಿದ್ದ 27ನೇ ಆರೋಪಿ ಆನಂದ ಮೇತ್ರಿಯವರಿಗೆ ಅದೇ ದಿನ ರಾತ್ರಿ 3 ಲಕ್ಷ ರು. ನಗದು ಅಕ್ರಮ ಲಾಭ ಹಣವನ್ನು ಕೊಟ್ಟಿದ್ದರು ಎಂಬ ಅಂಶವು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

the fil favicon

SUPPORT THE FILE

Latest News

Related Posts