ಕ್ರೈಮ್‌ ಆಫೀಸರ್‌ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ!; ಪೌಲ್‌ ಬಂಧನದ ಬೆನ್ನಲ್ಲೇ ಆಯ್ಕೆಪಟ್ಟಿ ಬಹಿರಂಗ

photo credit-thehindu

ಬೆಂಗಳೂರು; ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಗುರುತರ ಆರೋಪಕ್ಕೆ ಗುರಿಯಾಗಿರುವ ಪೊಲೀಸ್‌ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಡಿಜಿಪಿ ಅಮ್ರಿತ್‌  ಪೌಲ್‌ ಅವರು ಈ ಹುದ್ದೆಯಿಂದ ವರ್ಗಾವಣೆ ಆಗುವ ಮುನ್ನ ನಡೆದಿದ್ದ ಸೀನ್‌ ಅಫ್‌ ಕ್ರೈಮ್‌ ಆಫೀಸರ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ.

 

2021ರಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತಾದರೂ 2022ರ ಜುಲೈ 2ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಸಿಐಡಿ ಪೊಲೀಸರು ಅಮೃತ್‌ ಪೌಲ್‌ ಅವರನ್ನು ಬಂಧನಕ್ಕೊಳಪಡಿಸಿ ಅಮಾನತುಗೊಳಿಸಿರುವ ಬೆನ್ನಲ್ಲೇ 2022ರ ಜುಲೈ 2ರಂದು ಬಿಡುಗಡೆಗೊಂಡಿರುವ 202 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯೂ ಮುನ್ನೆಲೆಗೆ ಬಂದಿದೆ. ಈ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಅಮ್ರಿತ್‌  ಪೌಲ್‌ ಅವರು ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇಡೀ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಆದರೆ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ವಿಚಾರಣೆ ನಡೆಯುತ್ತಿದ್ದರಿಂದಾಗಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಬಿಡುಗಡೆಗೊಳಿಸಿರಲಿಲ್ಲ ಎನ್ನಲಾಗಿದೆ. ನೇಮಕಾತಿ ಪ್ರಾಧಿಕಾರದ ಪ್ರಸ್ತುತ ಅಧ್ಯಕ್ಷರಾದ ಎಡಿಜಿಪಿ ಕಮಲ್‌ ಪಂತ್‌ ಅವರ ಸಹಿಯೊಂದಿಗೆ ತಾತ್ಕಾಲಿಕ ಆಯ್ಕೆಪಟ್ಟಿಯು ಬಿಡುಗಡೆಯಾಗಿದೆ.

 

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನಿರಿಸಿದ್ದ ಭದ್ರತಾ ಕೊಠಡಿಯ ಬೀಗದ ಕೀಯನ್ನು ಕೆಳಗಿನ ನೌಕರರಿಗೆ ನೀಡಿ ಅವರ ಮೂಲಕವೇ ಉತ್ತರ ಪತ್ರಿಕೆಗಳನ್ನು ತಿದ್ದಿಸಿರುವುದು ದೃಢಪಟ್ಟಿತ್ತು. ಹೀಗಾಗಿ ಅಮ್ರಿತ್‌  ಪೌಲ್‌ ಅವರನ್ನು ಬಂಧಿಸಲಾಗಿದೆಯಲ್ಲದೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.

 

ಅಮ್ರಿತ್‌  ಪೌಲ್‌ ಅವರು ಹಲವು ವರ್ಷಗಳಿಂದಲೂ ಪೊಲೀಸ್‌ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಪೊಲೀಸ್‌ ಇಲಾಖೆಯ ವಿವಿಧ ಸ್ತರಗಳಲ್ಲಿ ಖಾಲಿ ಇದ್ದ ಹುದ್ದೆಗಳ ನೇಮಕಾತಿ ನಡೆದಿದೆ. ಇದೀಗ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಗುರುತರ ಆರೋಪಕ್ಕೆ ಗುರಿಯಾಗಿ ಬಂಧನಕ್ಕೊಳಗಾಗಿರುವುದರಿಂದ ಇವರ ಅವಧಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳ ಸುತ್ತಲೂ ಅನುಮಾನಗಳು ವ್ಯಕ್ತವಾಗಿವೆ.

 

ಅಮ್ರಿತ್‌  ಪೌಲ್‌ ನೇಮಕಾತಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾದಾಗಿನಿಂದ ಇಲ್ಲಿಯವರೆಗೂ ಇಲಾಖೆಯಲ್ಲಿ ಯಾವೆಲ್ಲಾ ನೇಮಕಾತಿಗಳು ನಡೆದಿವೆಯೋ ಅವೆಲ್ಲದರ ಪುನರ್‌ ವಿಮರ್ಶೆ ಮತ್ತು ತನಿಖೆ ತುರ್ತಾಗಿ ಆಗಬೇಕು. ಜತೆಗೆ ಇನ್ನೂ ನೇಮಕಾತಿ ಆದೇಶ ಹೊರಬೀಳದ ಎಲ್ಲಾ ಪಟ್ಟಿಗಳನ್ನೂ ತಕ್ಷಣವೇ ತಡೆಹಿಡಿಯಲು ಸರ್ಕಾರವು ಹಾಲಿ ನೇಮಕಾತಿ ಪ್ರಾಧಿಕಾರದ ಆಧ್ಯಕ್ಷ ಎಡಿಜಿಪಿ ಕಮಲ್‌ ಪಂತ್‌ ಅವರಿಗೆ ನಿರ್ದೇಶನ ನೀಡಬೇಕು. ಅಲ್ಲದೆ ಪೌಲ್‌ ಅವಧಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಸರ್ಕಾರಕ್ಕೆ ತಕ್ಷಣವೇ ಪತ್ರ ಬರೆಯಲಿದೆ ಎಂದು ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

the fil favicon

SUPPORT THE FILE

Latest News

Related Posts