ಪಿಯು ಅತಿಥಿ ಉಪನ್ಯಾಸಕರ ಗೌರವ ಸಂಭಾವನೆ; ಕೇಳಿದ್ದು 6 ಸಾವಿರ, ಸರ್ಕಾರ ಹೆಚ್ಚಿಸಿದ್ದು 3 ಸಾವಿರ

ಬೆಂಗಳೂರು; ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ನೀಡುತ್ತಿದ್ದ 9,000 ರು. ಗೌರವ ಸಂಭಾವನೆಯನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರೆ ಸರ್ಕಾರವು ಕೇವಲ ಮೂರು ಸಾವಿರ ಮಾತ್ರ ಹೆಚ್ಚಳ ಮಾಡಿ 12,000 ರು.ಗೇರಿಸಿದೆ.

 

6 ಸಾವಿರ ರುಪಾಯಿ ಗೌರವ ಸಂಭಾವನೆ ಹೆಚ್ಚಳವಾಗಲಿದೆ ಎಂದು ಅತಿಥಿ ಉಪನ್ಯಾಸಕರ ನಿರೀಕ್ಷೆಯನ್ನು ಹುಸಿಗೊಳಿಸಿರುವ ರಾಜ್ಯ ಸರ್ಕಾರವು ಮೂರು ಸಾವಿರ ರುಪಾಯಿ ಹೆಚ್ಚಳ ಮಾಡಿ 2022ರ ಜುಲೈ 5ರಂದು ಆದೇಶ ಹೊರಡಿಸಿದೆ. 9 ಸಾವಿರ ರು.ಗಳನ್ನು ಮೂರು ಸಾವಿರ ರುಪಾಯಿಗೇರಿಸಿ ಒಟ್ಟು 12,000 ರು. ಗೌರವ ಸಂಭಾವನೆ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲು ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದನ್ನು ಸಚಿವ ಬಿ ಸಿ ನಾಗೇಶ್‌ ಅವರು ಅನುಮೋದಿಸಿದ್ದಾರೆ.  ಆದೇಶದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2022-23ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಒಟ್ಟು 3,271 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಬಹುದಾದ 100 ಉಪನ್ಯಾಸಕರು, ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ 337 ಅತಿಥಿ ಉಪನ್ಯಾಸಕರ ಸಂಖ್ಯೆ ಸೇರಿದಂತೆ ಒಟ್ಟಾರೆ 3,708 ಹುದ್ದೆಗಳು ಖಾಲಿ ಇರುವುದು ಆದೇಶದಿಂದ ತಿಳಿದು ಬಂದಿದೆ.

 

ಗೌರವ ಸಂಭಾವನೆ ಹೆಚ್ಚಳ ಮಾಡಿ ಹೊರಡಿಸಿರುವ ಆದೇಶದ ಪ್ರತಿ

 

‘2022-23ನೇ ಶೈಕ್ಷಣಿಕ ಸಾಲಿನಲ್ಲಿ 3,708 ಅತಿಥಿ ಉಪನ್ಯಾಸಕರುಗಳಿಗೆ ಇಲ್ಲಿಯವರೆಗೆ ಹಲವು ವರ್ಷಗಳಿಂದ 9,000 ರು.ಗಳ ಗೌರವ ಸಂಭಾವನೆ ನೀಡಲಾಗುತ್ತಿತ್ತು. ಆದರೆ ಅದನ್ನು ಹೆಚ್ಚಿಸುವಂತೆ ಸಾಕಷ್ಟು ಬೇಡಿಕೆ ಬರುತ್ತಿದೆ. ಹಾಗೂ ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗೌರವ ಸಂಭಾವನೆ ಹೆಚ್ಚಿಸಿ ಆದೇಶಿಸಲಾಗಿದೆ. ಅದರಂತೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳ ಗೌರವ ಸಂಭಾವನೆಯನ್ನು 9,000 ರು.ಗಳಿಂದ 15,000 ರು.ಗಳಿಗೆ ಹೆಚ್ಚಿಸಬೇಕು,’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಸ್ತಾವನೆಯಲ್ಲಿ ಕೋರಿದ್ದರು.

 

 

ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ ಅತಿಥಿ ಉಪನ್ಯಾಸಕರನ್ನು ಭರ್ತಿ ಮಾಡಲು 2016ರ ಜುಲೈ 4ರಂದೇ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆ ನಂತರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿರಲಿಲ್ಲ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆದುರಾಗಿ ಒಟ್ಟು 3,552 ಅತಿಥಿ ಉಪನ್ಯಾಸಕರನ್ನು 08 ತಿಂಗಳುವರೆಗೆ ಮಾಸಿಕ 9,000 ರು.ಗಳ ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಪದವಿಪೂರ್ವ ಶಿಕ್ಷಣ ಇಲಾಖೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.

 

2021-22ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಗಳು ಏಪ್ರಿಲ್‌ 13ವರೆಗೆ ನಡೆದಿತ್ತು. ದ್ವಿತೀಯ ಪಿಯುಸಿ ಪರೀಕ್ಷೆಗಳು ಮೇ 18ರರೆಗೆ ನಡೆಸಲಾಗುತ್ತಿದೆ. 2021-22ನೇ ಶೈಕ್ಷಣಿಕ ಸಾಲಿನಲ್ಲಿ ನೇಮಕ ಮಾಡಿಕೊಂಡ ಅತಿಥಿ ಉಪನ್ಯಾಸಕರುಗಳನ್ನು ಪ್ರಥಮ ಪಿಯುಸಿ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಕಾರ್ಯಗಳಿಗೆ ಉಪಯೋಗಿಸಿಕೊಂಡಿರುವುದರಿಂದ ಈ ಅತಿಥಿ ಉಪನ್ಯಾಸಕರುಗಳಿಗೆ ಮಾರ್ಚ್ ಮತ್ತು ಏಪ್ರಿಲ್‌ 2022ರವರೆಗೆ ಗೌರವ ಧನ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕರುಗಳು ಕೋರಿದ್ದರು.

the fil favicon

SUPPORT THE FILE

Latest News

Related Posts