ಬೆಂಗಳೂರು; ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಪೌರ ಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳಲ್ಲಿ ಮೀಸಲಾತಿ ಅನ್ವಯ (ನೇರ ನೇಮಕಾತಿ ರೋಸ್ಟರ್) ಆಯ್ಕೆಯಾಗದ ಕಾರಣ 5,533ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿದೆ. ಅದೇ ರೀತಿ ಕಳೆದ 7 ವರ್ಷಗಳ ಹಿಂದೆಯೇ ನೇರ ನೇಮಕಾತಿಯಡಿಯಲ್ಲಿ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯು ಅನುಮತಿ ನೀಡಿದ್ದರೂ ಉಡುಪಿ ಜಿಲ್ಲೆ ಹೊರತುಪಡಿಸಿ ಉಳಿದ 29 ಜಿಲ್ಲೆಗಳಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಂಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
ವಿವಿಧ ಬೇಡಿಕೆಗಳನ್ನು ಮುಂದಿರಿಸಿ ರಾಜ್ಯದ ಪೌರ ಕಾರ್ಮಿಕರು ಅನಿರ್ದಿಷ್ಟ ಹೋರಾಟಕ್ಕಿಳಿದಿರುವುದು ಮತ್ತು ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಂ ಟಿ ಬಿ ನಾಗರಾಜ್ ಅವರು ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿರುವ ಬೆನ್ನಲ್ಲೇ ಮೀಸಲಾತಿ ಅನ್ವಯ ಆಯ್ಕೆ ಪ್ರಕ್ರಿಯೆ ನಡೆಸದ ಕಾರಣ 5,533ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿದಿರುವುದು ಮುನ್ನೆಲೆಗೆ ಬಂದಿದೆ.
ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇವೆ. 7,530 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತಾದರೂ 2,162 ಅಭ್ಯರ್ಥಿಗಳಷ್ಟೇ ಆಯ್ಕೆಯಾಗಿದ್ದಾರೆ. ಆದರೆ ಬಹುತೇಕ ಪೌರ ಕಾರ್ಮಿಕರ ಹುದ್ದೆಗಳು ಮೀಸಲಾತಿ ಸಂಬಂಧ ಆಯ್ಕೆಯಾಗದೇ ಖಾಲಿ ಉಳಿದಿರುವುದು ಪೌರಾಡಳಿತ ನಿರ್ದೇಶನಾಲಯದ ದಾಖಲೆಗಳಿಂದ ತಿಳಿದು ಬಂದಿದೆ. ಪೌರ ಕಾರ್ಮಿಕರ ನೇಮಕಾತಿ ಸಂಬಂಧ ಪೌರಾಡಳಿತ ನಿರ್ದೇಶನಾಲಯವು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರತಿ, ಕೆಲ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಪೌರ ಕಾರ್ಮಿಕರ ವಿಶೇಷ ನೇಮಕಾತಿಯಲ್ಲಿ ಅಧಿಸೂಚನೆ ಹೊರಡಿಸಿದ ಹುದ್ದೆಗಳಲ್ಲಿ ಮೀಸಲಾತಿಯನ್ವಯ (ನೇರ ನೇಮಕಾತಿ ರೋಸ್ಟರ್ ಪದ್ಧತಿ ) ಆಯ್ಕೆಯಾಗದೇ ಬಹುತೇಕ ಹುದ್ದೆಗಳು ಖಾಲಿ ಉಳಿದಿವೆ,’ ಎಂದು ಪೌರಾಡಳಿತ ನಿರ್ದೇಶನಾಲಯವು ಆರ್ಥಿಕ ಇಲಾಖೆಗೆ ತಿಳಿಸಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.
ನಿಯಮಿತವಾಗಿ ಪೌರ ಕಾರ್ಮಿಕರ ನೇಮಕಾತಿ ಆಗದ ಕಾರಣ ನಗರ/ಪಟ್ಟಣಗಳಲ್ಲಿನ ಸ್ವಚ್ಛತೆ, ಬೀದಿಗಳ ಕಸ ಗುಡಿಸುವುದು, ನಗರಗಳ ಸ್ವಚ್ಛತೆ, ಒಟ್ಟಾರೆಯಾಗಿ ನಗರಗಳಲ್ಲಿ ನೈರ್ಮಲ್ಯ ಕಾಪಾಡುವುದರಲ್ಲಿ ಹಿಂದೆ ಬಿದ್ದಿದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡುವುದು ಅವಶ್ಯವಾಗಿದೆ ಎಂದು ನಿರ್ದೇಶಕರು ಸಲ್ಲಿಸಿರುವ ಪ್ರಸ್ತಾವನೆಯಿಂದ ತಿಳಿದು ಬಂದಿದೆ.
ನೇರ ನೇಮಕಾತಿಯಡಿಯಲ್ಲಿ 10,772 ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾಗಿದೆ. ಈ ಪೈಕಿ 5,239 ಕಾಯಂ ಪೌರ ಕಾರ್ಮಿಕರಿದ್ದಾರೆ. 5,533 ಹುದ್ದೆಗಳು ನೇರ ನೇಮಕಾತಿಯಡಿಯಲ್ಲಿ ಖಾಲಿ ಇವೆ. 17,000-28,590 ವೇತನ ಶ್ರೇಣಿಯಲ್ಲಿ 5,533 ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಲ್ಲಿ ಮಾಸಿಕ 12.71 ಕೋಟಿ ರು., ವಾರ್ಷಿಕವಾಗಿ ಒಟ್ಟಾರೆಯಾಗಿ 152.54 ಕೋಟಿ ಯಷ್ಟು ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
2,064 ಗ್ರೂಪ್ ಡಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2014ರ ಆಗಸ್ಟ್ 16ರಂದೇ ಅನುಮತಿ ದೊರೆತಿತ್ತು. ಈ ಪೈಕಿ 1,125 ಹುದ್ದೆಗಳನ್ನು ಭರ್ತಿ ಮಾಡಲು 2015ರ ಸೆಪ್ಟಂಬರ್ 16ರಂದೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಉಳಿದಂತೆ 29 ಜಿಲ್ಲೆಗಳಲ್ಲಿ ಪೌರ ಕಾರ್ಮಿಕರ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದರೂ ಸಹ ಗ್ರೂಪ್ ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಲ್ಲ ಎಂಬುದು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾಪಿಸಲಾಗಿದೆ.
ಖಾಲಿ ಹುದ್ದೆಗಳಿಗೆ ಎದುರಾಗಿ ನೇರ ಪಾವತಿಯಡಿಯಲ್ಲಿ ಒಟ್ಟು 2,696 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 2015ರ ಮೇ 18ರ ಸರ್ಕಾರದ ಆದೇಶದ ಅನ್ವಯ ರಾಜ್ಯ ಹಣಕಾಸು ಅನುದಾನ ಮುಕ್ತ ನಿಧಿಯಡಿಯಲ್ಲಿ ಶೇ. 75ರಷ್ಟು ಅನುದಾನವನ್ನು ವೇತ ಭರಿಸಲು ಮತ್ತು ಶೇ. 25ರಷ್ಟು ಸ್ಥಳೀಯ ಸಂಸ್ಥೆಗಳ ಸ್ವಂತ ನಿಧಿಯಿಂದ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ನಗರಸಭೆ ಗ್ರೇಡ್-1ರಲ್ಲಿ 152 ಹುದ್ದೆಗಳಿಗೆ ಮಾಸಿಕ 27.87ಲಕ್ಷ ರು., ವಾರ್ಷಿಕ 3.34 ಕೋಟಿ ರು. ವೆಚ್ಚವಾಗುತ್ತಿದೆ. ನಗರಸಭೆ ಗ್ರೇಡ್ 2 ಮತ್ತು ಪುರಸಭೆಗಳಲ್ಲಿ 1,669 ಹುದ್ದೆಗಳಿಗೆ ಮಾಸಿಕ 2,98,41,720 ರು. ನಂತೆ ವಾರ್ಷಿಕ 35,81,00, 640 ರು., ವಾರ್ಷಿಕ ವೆಚ್ಚವಾಗುತ್ತಿದೆ. ಪಟ್ಟಣ ಪಂಚಾಯ್ತಿಗಳಲ್ಲಿ 875 ಹುದ್ದೆಗಳಿಗೆ ಮಾಸಿಕ 1,52,51,250 ರು. ನಂತೆ ವಾರ್ಷಿಕ 18,30,15,000 ಸೇರಿದಂತೆ ಒಟ್ಟಾರೆ 2,696 ಹುದ್ದೆಗಳಿಗೆ ಮಾಸಿಕ 4,78,80,650 ರು.ನಂತೆ ವಾರ್ಷಿಕ 57,45,67,800 ರು. ವೆಚ್ಚವಾಗುತ್ತಿದೆ ಎಂದು ಪೌರಾಡಳಿತ ನಿರ್ದೇಶನಾಲಯವು ಪ್ರಸ್ತಾವನೆಯಲ್ಲಿ ವಿವರಿಸಿದೆ.
‘ನೇರ ನೇಮಕಾತಿಯಡಿಯಲ್ಲಿ ಖಾಲಿ ಇರುವ 5,533 ಪೌರ ಕಾರ್ಮಿಕರ ಹುದ್ದೆಗಳಿಗೆ ವಾರ್ಷಿಕ 152,54,48,100 ರು., ನೇರ ನೇಮಕಾತಿ ಖಾಲಿ ಹುದ್ದೆಗಳ ಎದುರಾಗಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವಾರ್ಷಿಕ 57,45,67,800 ರು. ವೇತನ ಪಾವತಿಸಲಾಗುತ್ತಿರುವುದರಿಂದ ನೇಋ ನೇಮಕಾತಿ ಹುದ್ದೆಗಳ ಭರ್ತಿಕ ವಾರ್ಷಿಕ 95,08,80,300 ರು. (152,54,48,100+57,45,67,800) ವಾರ್ಷಿಕ ವೆಚ್ಚವಾಗುತ್ತದೆ,’ ಎಂಬ ಲೆಕ್ಕಾಚಾರವನ್ನು ಮುಂದಿಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಂಬಡ್ತಿ/ನಿವೃತ್ತಿ/ಮರಣ ಮುಂತಾದ ಕಾರಣಗಳಿಂದ ಹುದ್ದೆಗಳು ಖಾಲಿಯಾಗುತ್ತಿವೆ. ಅಲ್ಲದೇ ಗ್ರಾಮ ಪಂಚಾಯ್ತಿಗಳಿಂದ ಮೇಲ್ದರ್ಜೆಗೇರಿಸಲ್ಪಟ್ಟ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳಿಂದಾಗಿ ಮಂಜೂರಾದ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಆದರೆ ಪೌರ ಕಾರ್ಮಿಕರ ವಿಶೇಷ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ 36 (ಬೆಳಗಾವಿಯ 32, ಮತ್ತು ಚಿಕ್ಕಮಗಳೂರು, ಕೋಲಾರ, ಕೆಜಿಎಫ್, ಬಂಗಾರಪೇಟೆಯಲ್ಲಿ 4 ) ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ 3 (ನೆಲಮಂಗಲ, ಚಳ್ಳಕೆರೆ, ಮಾಲೂರು) ನಗರ ಸ್ಥಳೀಯ ಸಂಸ್ಥೆಗಳ ಮಂಜೂರಾದ, ಕಾರ್ಯನಿರ್ವಹಿಸುತ್ತಿರುವ ಹಾಗೂ ಖಾಲಿ ಹುದ್ದೆಗಳ ವಿವರವು ಒಟ್ಟು ಖಾಲಿ ಇರುವ ಹುದ್ದೆಗಳಲ್ಲಿ ಒಳಗೊಂಡಿಲ್ಲ ಎಂದು ತಿಳಿದು ಬಂದಿದೆ.