ಅನಿಶ್ಚಿತ ಅವಧಿ ಬಂಧನ; 38 ಪ್ರಜೆಗಳ ಬಿಡುಗಡೆಗೆ ಸಿಎಂ ಮೊರೆ ಹೊಕ್ಕ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನ್‌

ಬೆಂಗಳೂರು; ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945ಯಡಿ ಕಳೆದ ಒಂದು ವರ್ಷದಿಂದಲೂ ಬಂಧನದಲ್ಲಿರುವ ಶ್ರೀಲಂಕಾದ 38 ಜನರನ್ನು ಬಿಡುಗಡೆಗೊಳಿಸುವ ಸಂಬಂಧ ದಕ್ಷಿಣ ಭಾರತದ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಮಧ್ಯ ಪ್ರವೇಶಿಸಿದ್ದಾರೆ.

 

ತಮಿಳುನಾಡಿನಿಂದ ಮಂಗಳೂರು ನಗರಕ್ಕೆ ಬಂದು ಆಕ್ರಮವಾಗಿ ನೆಲೆಸಿದ್ದರು ಎಂಬ ಆರೋಪದ ಮೇರೆಗೆ ಕಳೆದ ಒಂದು ವರ್ಷದ (ಜೂನ್‌ 11, 2021) ಬಂಧಿಸಿರುವ ಮಂಗಳೂರು ನಗರ ಪೊಲೀಸರು ತನಿಖೆ ಕೈಗೊಂಡಿರುವ ಬೆನ್ನಲ್ಲೇ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಜೂನ್‌ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್‌ ಬರೆದಿರುವ ಪತ್ರದ ಪ್ರತಿ

 

‘ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು 2021ರ ಜೂನ್‌ 11ರಂದು ಬಂಧಿಸಲಾಗಿತ್ತು. ಆದರೀಗ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದೆ. ಬಂಧನಕ್ಕೊಳಗಾಗಿರುವ ಕುಟುಂಬಗಳು ಅತಂತ್ರವಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಅವರನ್ನು ಬಿಡುಗಡೆಗೊಳಿಸಲು ಕ್ರಮವಹಿಸಬೇಕು. ಮತ್ತು ಅವರನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಶ್ರೀಲಂಕಾಕ್ಕೆ ಕಳಿಸಲು ವ್ಯವಸ್ಥೆ ಮಾಡಬೇಕು,’ ಎಂದು ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಡಾ ಡಿ ವೆಂಕಟೇಶ್ವರನ್‌ ಅವರು ಪತ್ರದಲ್ಲಿ ಕೋರಿದ್ದಾರೆ.

 

ಕಳೆದ ಒಂದು ವರ್ಷದ ಹಿಂದೆಯೇ ಬಂಧನಕ್ಕೊಳಗಾಗಿರುವ ಶ್ರೀಲಂಕಾ ಪ್ರಜೆಗಳನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಈ ಕುರಿತು ಎನ್‌ಐಎ ವಿಶೇಷ ನ್ಯಾಯಾಲಯವು 2021ರ ಅಕ್ಟೋಬರ್‌ 30ರಂದು ನೀಡಿರುವ ಆದೇಶದ ಪ್ರಕಾರ ಬಂಧನಕ್ಕೊಳಗಾದವರನ್ನು ನೆಲಮಂಗಲದಲ್ಲಿರುವ ವಿದೇಶಿಯರ ಬಂಧನ ಕೇಂದ್ರದಲ್ಲಿರಿಸಲು ತನಿಖಾಧಿಕಾರಿಯು ನಿರ್ಧರಿಸಬೇಕು ಎಂದು ಆದೇಶವೊಂದರಲ್ಲಿ ಹೇಳಿದೆ. ಆದರೆ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಡಾ ಡಿ ವೆಂಕಟೇಶ್ವರನ್‌ ಅವರು ಮುಖ್ಯಮಂತ್ರಿಯ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಜೈಲುಗಳಲ್ಲಿ ಮತ್ತು ವಿದೇಶಿಯರ ಬಂಧನ ಕೇಂದ್ರದಲ್ಲಿ ಅನಿಶ್ಚಿತ ಅವಧಿಯವರೆಗೆ  ಶ್ರೀಲಂಕಾ ಪ್ರಜೆಗಳನ್ನು ಬಂಧನದಲ್ಲಿರಿಸಿರುವುದಕ್ಕೆ ಯಾವುದೇ ಅರ್ಥವಿಲ್ಲ ಎಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 

ಶ್ರೀಲಂಕಾದ 38 ಪ್ರಜೆಗಳು ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಮಂಗಳೂರು ತಲುಪಿದ್ದರು. ಕಳೆದ ಒಂದು ವರ್ಷದ ಹಿಂದೆ ಎರಡು ಲಾಡ್ಜ್‌ಗಳು ಮತ್ತು ಎರಡು ಮನೆಗಳಲ್ಲಿ ತಂಗಿದ್ದರು ಮತ್ತು ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಂಡಿದ್ದರು. ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾ ನಗದನ್ನು ಪಾವತಿಸಿ ಶ್ರೀಲಂಕಾದಿಂದ ಹೊರಟಿದ್ದರು.

 

ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಅವರು ಮಾಧ್ಯಮಗಳಿಗೆ ವಿವರಿಸಿದ್ದನ್ನು ಸ್ಮರಿಸಬಹುದು.

 

ಅಲ್ಲದೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನಲ್ಲಿ  ಏಜೆಂಟರೂ ಇದ್ದರು. ಬೆಂಗಳೂರಿನಿಂದ ಅವರು ಮಂಗಳೂರು ತಲುಪಿದ್ದರು. ಇವರ ವಿರುದ್ಧ ಐಪಿಸಿ ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945 ಮತ್ತು ವಿದೇಶಿಯರ ಆದೇಶ 1948 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

the fil favicon

SUPPORT THE FILE

Latest News

Related Posts