ಬೆಂಗಳೂರು; ‘ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗವುಂಟು ಮಾಡಿದ್ದಾರೆ’ ಎನ್ನಲಾದ ನಟ ಚೇತನ್ ವಿರುದ್ಧ ಪ್ರಕರಣದಲ್ಲಿ ಐಪಿಸಿ ಕಲಂ 153 (ಬಿ) ಹಾಗೂ 295(ಎ) ರಡಿಯ ವ್ಯಾಖ್ಯಾನದ ಅನ್ವಯ ಅಪರಾಧವಾಗಿಲ್ಲ ಹಾಗೂ ಈ ಕಲಂಗಳನ್ವಯ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರವು ಪೂರ್ವಾನುಮತಿ ನೀಡುವುದು ಸೂಕ್ತವಲ್ಲ ಎಂದು ಆರಂಭದಲ್ಲಿ ಸ್ಪಷ್ಟ ಅಭಿಪ್ರಾಯ ನೀಡಿದ್ದ ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿಗಳು ಆ ನಂತರ ಅದಕ್ಕೆ ಬದ್ಧವಾಗದೇ ಅಭಿಪ್ರಾಯವನ್ನೇ ಬದಲಿಸಿರುವುದು ಇದೀಗ ಬಹಿರಂಗವಾಗಿದೆ.
ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿಯ ಬದಲಾದ ಅಭಿಪ್ರಾಯವನ್ನು ಪುರಸ್ಕರಿಸಿದೆಯಲ್ಲದೆ ಡಿಜಿಐಜಿಪಿಯವರಿಂದ ಪರಿಷ್ಕೃತ ಪ್ರಸ್ತಾವನೆ ಪಡೆದಿದೆ. ಇದರ ಆಧಾರದ ಮೇಲೆ ಸರ್ಕಾರವು ನಟ ಚೇತನ್ ವಿರುದ್ಧ ದೋಷಾರೋಪಣೆ ಪಟ್ಟಿ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಐಪಿಸಿ ಕಲಂ 153 (ಬಿ)(1)(ಸಿ) ಅಡಿ 2022ರ ಮಾರ್ಚ್ 19ರಂದು ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೇತನ್ ವಿರುದ್ಧದ ದೋಷಾರೋಪಣೆ ಪಟ್ಟಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಸರ್ಕಾರದ ಪೂರ್ವಾನುಮತಿ ಕೋರಿ ಸಲ್ಲಿಕೆಯಾಗಿರುವ ಪ್ರಸ್ತಾವನೆಯೂ ಸೇರಿದಂತೆ ಒಟ್ಟು 338 ಪುಟಗಳನ್ನು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ನಟ ಚೇತನ್ ವಿರುದ್ಧ ಬಸವನಗುಡಿ ಠಾಣೆಯಲ್ಲಿ 2021ರ ಜೂನ್ 10ರಂದು ಎಫ್‌ಐಆರ್ ದಾಖಲಾಗಿತ್ತು. ಆದರೆ ನಟ ಚೇತನ್ ವಿರುದ್ಧ ಮಾಡಲಾಗಿದ್ದ ಯಾವ ಆರೋಪಗಳು ದೃಢಪಟ್ಟಿಲ್ಲ ಮತ್ತು ಪೂರ್ವಾನುಮತಿ ನೀಡುವ ಸಂಬಂಧ ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿಗಳು ಆರಂಭದಲ್ಲಿ ಅಸಮ್ಮತಿ ವ್ಯಕ್ತಪಡಿಸಿದ್ದರು. ಅದರಂತೆ ಅಧಿಕಾರಿಗಳು ಮೊದಲು ತಳೆದಿದ್ದ ನಿಲುವನ್ನು ಬದಲಾಯಿಸಿರುವುದರ ಹಿಂದೆ ಸರ್ಕಾರದ ಒತ್ತಡವಿತ್ತು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಲ್ಲದೆ ಐ ಪಿ ಸಿ ಕಲಂ 153(ಎ) ಮತ್ತು 295(ಎ) ಅಡಿಯಲ್ಲಿ ಯಾವುದೇ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಯನ್ನು ನಡೆಸಬೇಕಾದಲ್ಲಿ ಆಪಾದನೆಗಳಿಗೆ ಪೂರಕವಾಗಿ ಆರೋಪಿಯು ಕೃತ್ಯ ಎಸಗಿರುವುದು ತನಿಖೆಯ ಸಂದರ್ಭದಲ್ಲಿ ದೃಢಪಡಬೇಕು. ನಟ ಚೇತನ್ ದುರುದ್ದೇಶಪೂರ್ವಕವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಹೇಳಿಕೆಗಳನ್ನು ನೀಡಿಲ್ಲ. ಮತ್ತು ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗಿರುವುದಿಲ್ಲ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಿದೆ. ಆದರೂ ಅದನ್ನು ಬದಿಗಿರಿಸಿ ಪರಿಷ್ಕೃತ ಪ್ರಸ್ತಾವನೆ ಅಧಾರದ ಮೇಲೆ ಐಪಿಸಿ ಕಲಂ 153 (ಬಿ)(1)(ಸಿ) ಅಡಿ ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿದೆ.
ಕಾನೂನು ಅಧಿಕಾರಿಯ ಮೊದಲ ಅಭಿಪ್ರಾಯವಿದು
ಚೇತನ್ ಮಾಡಿದ್ದ ವಿಡಿಯೋವನ್ನು ಕಾನೂನು ಅಧಿಕಾರಿ ಕಾಮಾಕ್ಷಿ ಅವರು ಪರಿಶೀಲಿಸಿದ್ದಾರೆ. ತನಿಖಾಧಿಕಾರಿ ಮುಂದೆ ನೀಡಿರುವ ತನ್ನ ವಿವಾದಿತ ವಿಡಿಯೋಗೆ ಸಂಬಂಧಿಸಿದ ಹೇಳಿಕೆಗಳಿಗೆ ಪೂರಕವಾಗಿಯೇ ಇದ್ದು ವಿಡಿಯೋದ ದೃಶ್ಯಗಳಲ್ಲಿ ಹಾಗೂ ಹೇಳಿಕೆಗಳಲ್ಲಿ ನಿರ್ದಿಷ್ಟವಾಗಿ ಯಾವುದೇ ಜಾತಿ, ಪಂಥಗಳಿಗೆ ಅನ್ವಯಿಸುವಂತೆ ಅವರುಗಳ ಧಾರ್ಮಿಕ ಆಚರಣೆಗಳಿಗೆ ವ್ಯತಿರಿಕ್ತವಾಗುವಂತಹ ಹೇಳಿಕೆಗಳನ್ನು ನೀಡದೇ ಕೇವಲ ಸಮಾಜದಲ್ಲಿರುವ ಸ್ಪೃಶ್ಯ-ಅಸ್ಪೃಶ್ಯ, ಮೇಲು, ಕೀಳು, ಶ್ರೇಷ್ಟ, ಕನಿಷ್ಟ, ಮಡಿ, ಮೈಲಿಗೆ ಇವುಗಳನ್ನು ಆಚರಿಸುವ ಆಚರಣೆಗಳನ್ನು ಇತರರ ಮೇಲೆ ಹೇರುವ ವ್ಯವಸ್ಥೆಯ ಕುರಿತಂತೆ ಟೀಕಿಸಿ ಸಾಮಾಜಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಜನಜಾಗೃತಿ ಉಂಟು ಮಾಡುವ ಸದುದ್ದೇಶದಿಂದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಕಂಡು ಬರುತ್ತದೆ.
ಆರೋಪಿಯು ‘ಭಾರತ ಸಂವಿಧಾನದಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳನ್ನು ಅನುಭವಿಸುವ ಹಕ್ಕನ್ನು ಹೊಂದಿರುವುದರಿಂದಾಗಿ ಆರೋಪಿಯು ತನ್ನ ವಿಡಿಯೋ ಮೂಲಕ ಮಾಡಿದ್ದಾನೆನ್ನಲಾದ ಹೇಳಿಕೆಗಳು ಆತನ ಸ್ವಂತ ಅಭಿಪ್ರಾಯವಾಗಿದೆ. ಆತನು ದುರುದ್ದೇಶಪೂರ್ವಕವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಹೇಳಿಕೆಗಳನ್ನು ನೀಡಿರುವುದಿಲ್ಲ. ಆರೋಪಿತನ ವಿವಾದಿತ ಹೇಳಿಕೆಯಿಂದ ಸಾಮಾಜಿಕ ಶಾಂತಿ, ಸುವ್ಯವಸ್ಥೆಗೆ ಭಂಗವುಂಟಾಗಿರುವುದಿಲ್ಲ. ಹಾಗೂ ಆರೋಪಿಯ ಹೇಳಿಕೆಗಳು ಭಾರತ ಸಂವಿಧಾನದ ಅನುಚ್ಛೇದ 19 ರಡಿ ಸಂರಕ್ಷಿತ ಹಕ್ಕುಗಳ ಅಡಿಯಲ್ಲಿ ಬರುವುದರಿಂದ ಆರೋಪಿಯು ವಾಕ್ ಸ್ವಾತಂತ್ರ್ಯವನ್ನು ಕೇವಲ ಚರ್ಚೆಯ ವಿಷಯವನ್ನಾಗಿ ಪರಿಭಾವಿಸಿ ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ನಿಟ್ಟಿನಲ್ಲಿ ಒಂದು ಜಾಗೃತಿ ವೇದಿಕೆಯನ್ನಾಗಿ ಪರಿಗಣಿಸುವುದು ಸೂಕ್ತವಾಗಿರುತ್ತದೆ,’ ಎಂದು 2022ರ ಮಾರ್ಚ್ 3ರಂದು ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಕಾಮಾಕ್ಷಿ ಅವರು ಅಭಿಪ್ರಾಯ (ಕಂಡಿಕೆ 33) ನೀಡಿದ್ದಾರೆ.
ಅಲ್ಲದೆ ‘ ಆರೋಪಿಯ ಕೃತ್ಯವು ಐ ಪಿ ಸಿ ಕಲಂ 153(ಬಿ) ಹಾಗೂ 295(ಎ)ರಡಿ ವ್ಯಾಖ್ಯಾನದನ್ವಯ ಅಪರಾಧವಾಗಿಲ್ಲದಿರುವುದರಿಂದ ಆರೋಪಿಯನ್ನು ಈ ಕಲಂಗಳನ್ವಯ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರದ ಪೂರ್ವಾನುಮತಿಯನ್ನು ನೀಡುವುದು ಸೂಕ್ತವಾಗಿರುವುದಿಲ್ಲ,’ ಎಂದೂ ಅಭಿಪ್ರಾಯ (ಕಂಡಿಕೆ 33)(2022 ಮಾರ್ಚ್ 3) ನೀಡಿದ್ದಾರೆ.
ಇದೇ ಅಭಿಪ್ರಾಯವು ಒಳಾಡಳಿತ ಇಲಾಖೆಯ ಕಂಡಿಕೆ 37, 38, 40ರಲ್ಲೂ (2022 ಮಾರ್ಚ್ 4) ಮುಂದುವರೆದಿದೆ. ಆದರೆ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸೂಕ್ತ ಕಲಂಗಳೊಂದಿಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಬೇಕು ಎಂದು (ಕಂಡಿಕೆ 42) 2022ರ ಮಾರ್ಚ್ 5ರಂದು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ. ಹಿರಿಯ ಕಾನೂನು ಅಧಿಕಾರಿ ಕಾಮಾಕ್ಷಿ ಅವರು ನೀಡಿದ್ದ ಈ ಅಭಿಪ್ರಾಯವನ್ನು ಪುರಸ್ಕರಿಸಿಲ್ಲ ಎಂಬುದಕ್ಕೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿರುವುದೇ ನಿದರ್ಶನವಾಗಿದೆ.
ರಜನೀಶ್ ಗೋಯಲ್ ಅವರ ಸೂಚನೆಯಂತೆ ಡಿಜಿಐಜಿಪಿ ಕಚೇರಿಯು 2022ರ ಮಾರ್ಚ್ 8ರಂದು ಪರಿಷ್ಕೃತ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಹೊಸದಾಗಿ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಲ್ಲಿನ ಕಲಂಗಳಡಿಯಲ್ಲಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಪೂರ್ವಾನುಮತಿ ನೀಡುವ ಕುರಿತು ಅಭಿಪ್ರಾಯ ಕೋರಿ ಒಳಾಡಳಿತ ಇಲಾಖೆಗೆ ಮಂಡಿಸಿದ್ದ ಕಡತವನ್ನು 2022ರ ಮಾರ್ಚ್ 9ರಂದು ಕಾನೂನು ಅಧಿಕಾರಿಗೆ ಕಳಿಸಲಾಗಿತ್ತು.
ಡಿಜಿಐಜಿಪಿ ಅವರು ಮಾರ್ಚ್ 8ರಂದು ನೀಡಿದ್ದ ಪರಿಷ್ಕೃತ ದೋಷಾರೋಪಣೆ ಪಟ್ಟಿ ಮತ್ತು ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಒಳಾಡಳಿತ ಇಲಾಖೆ ಅಧಿಕಾರಿಗಳು ಕಾನೂನು ಅಧಿಕಾರಿ ಕಾಮಾಕ್ಷಿ ಅವರು 2022ರ ಮಾರ್ಚ್ 3ರಂದು ನೀಡಿದ್ದ ಅಭಿಪ್ರಾಯವನ್ನು (ಟಿಪ್ಪಣಿ ಹಾಳೆ 47-ಕಂಡಿಕೆ 52ರಿಂದ 56ರವರೆಗೆ ) ಪುನರಾವರ್ತಿಸಲಾಗಿದೆ. ಆದರೆ ಕಂಡಿಕೆ 57ರಿಂದ 60ರವರೆಗೆ (ಟಿಪ್ಪಣಿ ಹಾಳೆ 48) ದಾಖಲಿಸಿರುವ ಅಭಿಪ್ರಾಯವು ಬದಲಾಗಿದೆ.
ಕಾನೂನು ಅಧಿಕಾರಿಯ ಬದಲಾದ ಅಭಿಪ್ರಾಯವೇನು?
ವಿಡಿಯೋದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿ ಕೇಳಿದ ಸ್ಪಷ್ಟೀಕರಣಕ್ಕೆ ಆರೋಪಿಯು ‘ಬ್ರಾಹ್ಮಣ್ಯ ಅನ್ನೋದು ಪುರೋಹಿತಶಾಹಿ ವರ್ಗಕ್ಕೆ ಲಾಭ ಆಗೋ ಒಂದು ಶ್ರೇಣಿಕೃತ ಅಸಮಾನತೆಯ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ದಬ್ಬಾಳಿಕೆ ಮಾಡೋರು ಒಂದ್ಕಡೆ ಮೇಲೆ ಇರೋರಿಂದ ದಬದ್ಬಾಳಿಕೆ ಮಾಡಿಸ್ಕೋತಿರೋರು ಕೆಳಗಿರೋರು. ಆವ್ರೇ ದಬ್ಭಾಳಿಕೆ ಮಾಡ್ತಾ ಇರ್ತಾರೆ. ಈ ರೀತಿಯ ವ್ಯವಸ್ಥೆ ಬ್ರಾಹ್ಮಣ್ಯದ ವ್ಯವಸ್ಥೇಲಿ ಅಲ್ಲದೆ ಬ್ರಾಹ್ಮಣ್ಯ ಅನ್ನೋದು ಆಧ್ಯಾತ್ಮಿಕತೆಯ ಭಯೋತ್ಪಾದನೆ ಅಂತ ಹೇಳಿದ್ರೆ ಸುಳ್ಳಾಗೋಲ್ಲ. ಇದನ್ನುನಾವೆಲ್ಲ ಸೇರಿ ಕಿತ್ತು ಹಾಕಬೇಕು. ನಿರ್ಮೂಲನೆ ಮಾಡಬೇಕು. ತೆಗಿಬೇಕು ಸಮಾಜದಿಂದ,’ ಎಂದು ಬ್ರಾಹ್ಮಣ್ಯದ ಬಗ್ಗೆ ಮತೀಯ ನಂಬಿಕೆಗಳನ್ನು ಅಪಮಾನಗೊಳಿಸಿ ಬುದ್ಧಿಪೂರ್ವಕವಾಗಿ ಬ್ರಾಹ್ಮಣ್ಯದ ಬಗ್ಗೆ ದ್ವೇಷ ಭಾವನೆಯಿಂದ ಮಾತನಾಡುತ್ತಾ ಆರೋಪಿಯು ದುರ್ಬಲ ವರ್ಗದ ಜನರನ್ನು ಬ್ರಾಹ್ಮಣ್ಯದ ವಿರುದ್ಧ ಪ್ರೇರಿಪಿಸಿರುತ್ತಾರೆ. (ಕಂಡಿಕೆ 57)
ಆರೋಪಿಯು ತನ್ನ ವಿಡಿಯೋದ ಮೂಲಕ ಸಾಮಾಜಿಕ ಜಾಲತಾಣದದಲ್ಲಿನ ತನ್ನ ಅನುಯಾಯಿಗಳು ಹಾಗೂ ವಿಡಿಯೋಗಳನ್ನು ವೀಕ್ಷಿಸಿದ ಇತರ ಸಾರ್ವಜನಿಕರ ಮನಸ್ಸಿನಲ್ಲಿ ಬ್ರಾಹ್ಮಣ್ಯದ ಬಗ್ಗೆ ಹಾಗೂ ಪುರೋಹಿತಶಾಹಿಯ ವಿರುದ್ಧ ಅಸಹನೆಯುಂಟಾಗುತ್ತದೆ. ಅದರಿಂದಾಗಿ ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುತ್ತದೆ ಎಂಬ ತಿಳುವಳಿಕೆ ಇದ್ದರೂ ಸಹ ವಿವಾದಿತ ಅಂಶಗಳ ಕುರಿತಂತೆ ಬೇಜವಾಬ್ದಾರಿಯಿಂದ ಹಾಗೂ ನಿರ್ಲಕ್ಷ್ಯತನದಿಂದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿ ಸಾಮಾಜಿಕ ಶಾಂತಿ ಸುವ್ಯವಸ್ಥೆಗೆ ಭಂಗವುಂಟು ಮಾಡಿರುತ್ತಾನೆ ಎಂಬ ಆರೋಪಗಳಿಗೆ ಈ ಹಂತದಲ್ಲಿ ಸಾಕ್ಷ್ಯಾಧಾರಗಳು ಲಭ್ಯವಾಗಿರುತ್ತವೆ. (ಕಂಡಿಕೆ 58)
‘ಆರೋಪಿತನನ್ನು ಐಪಿಸಿ ಕಲಂ 153 (ಬಿ) (1)(ಸಿ) ಅಡಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರದ ಪೂರ್ವಾನುಮತಿಯನ್ನು ನೀಡಬಹುದಾಗಿರುತ್ತದೆ. ಆರೋಪಿತನ ವಿರುದ್ಧದ ಆರೋಪಗಳು ಅತ್ಯಂತ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದ್ದು ಆರೋಪಿತನನ್ನು ಅಭಿಯೋಜನೆಗೊಳಪಡಿಸುವ ಕುರಿತಂತೆ ಕಾನೂನು ತಜ್ಞರ ಅಭಿಪ್ರಾಯವನ್ನು ಸಹ ಪಡೆದುಕೊಳ್ಳುವುದು ಸೂಕ್ತವಾಗಿರುತ್ತದೆ ,’ ಎಂದು ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಕಾಮಾಕ್ಷಿ ಅವರು 2022ರ ಮಾರ್ಚ್ 10ರಂದು (ಟಿಪ್ಪಣಿ ಹಾಳೆ 48- ಕಂಡಿಕೆ 59 ಮತ್ತು 60) ಅಭಿಪ್ರಾಯ ನೀಡಿದ್ದಾರೆ.
ಕಂಡಿಕೆ 52ರಿಂದ 60ರವರೆಗೆ ನೀಡಿರುವ ಅಭಿಪ್ರಾಯಗಳ ಪೈಕಿ 59 ಮತ್ತು 60ರ ಕಂಡಿಕೆಯನ್ನು (ಪುಟ ಸಂಖ್ಯೆ 49) ಕಂಡಿಕೆ 68ರಲ್ಲಿ ಅನುಮೋದಿಸಿರುವ ಸಚಿವ ಆರಗ ಜ್ಞಾನೇಂದ್ರ ಅವರು ಕಂಡಿಕೆ 52ರಿಂದ 56ರಲ್ಲಿದ್ದ ಅಭಿಪ್ರಾಯವನ್ನು (ಟಿಪ್ಪಣಿ ಹಾಳೆ 47) ತಿರಸ್ಕರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಅಂತಿಮವಾಗಿ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು ‘ ಆರೋಪಿತ ಚೇತನ್ ಕುಮಾರ್ ಅವರು ಕಲಂ ಐಪಿಸಿ 153(ಬಿ)(1)(ಸಿ) ಅನ್ವಯ ಕೃತ್ಯವೆಸಗಿರುವುದು ಸಾಕ್ಷ್ಯಾಧಾರಗಳಿಂದ ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಸಿಆರ್‌ಪಿಸಿ ಕಲಂ 196(1)(ಎ) ರಡಿಯಲ್ಲಿ ಆರೋಪಿತರ ವಿರುದ್ಧ ಆರೋಪಿಸಲಾದ ಐಪಿಸಿ ಕಲಂ 153(ಬಿ)(1)(ಸಿ) ರಡಿ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಹಾಗೂ ವಿಚಾರಣೆಗೊಳಪಡಿಸಲು ಸರ್ಕಾರದ ಪೂರ್ವಾನುಮತಿ ನೀಡಲಾಗಿದೆ,’ ಎಂದು 2022ರ ಮಾರ್ಚ್ 19ರಂದು ಆದೇಶ ಹೊರಡಿಸಿದ್ದಾರೆ.