ಪದವಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ; ಸರ್ಕಾರದಿಂದ ಯಾವುದೇ ಆದೇಶವಿಲ್ಲದಿದ್ದರೂ ಹೇರಿಕೆಯೇಕೆ?

ಬೆಂಗಳೂರು; ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆಯ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಹಾಗೂ ಸುತ್ತೋಲೆ ಹೊರಡಿಸಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಆರ್‌ಟಿಐನಲ್ಲಿ ಮಾಹಿತಿ ಒದಗಿಸಿದ್ದಾರೆ.

 

ಉಡುಪಿಯ ಅಜ್ಜರಕಾಡು ಡಾ ಜಿ ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ 2022ರ ಫೆಬ್ರುವರಿಯಲ್ಲಿ ತರಗತಿ ಪ್ರವೇಶ ನಿರ್ಬಂಧಿಸಲಾಗಿದ್ದರ ಬೆನ್ನಲ್ಲೇ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಕುರಿತು ಕಾಲೇಜು ಶಿಕ್ಷಣ ಇಲಾಖೆಯು ಒದಗಿಸಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

 

ಬಂಗಾರಪೇಟೆಯ ಎಸ್‌ ಇಕ್ಬಾಲ್‌ ಅಹ್ಮದ್‌ ಎಂಬುವರು ಪದವಿ ಕಾಲೇಜು ವಿದ್ಯಾರ್ತಿಗಳಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಿರುವ ಬಗ್ಗೆ ಮಾಹಿತಿ ದಾಖಲೆಗಳನ್ನು ಕೋರಿ 2022ರ ಏಪ್ರಿಲ್‌ 17ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಜಂಟಿ ನಿರ್ದೇಶಕರು 2022ರ ಮೇ 11ರಂದು ಉತ್ತರಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಇಲಾಖಾ ವ್ಯಾಪ್ತಿಗೊಳಪಡುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆಯ ಬಗ್ಗೆ ಇಲಾಖೆಯಿಂದ ಯಾವುದೇ ಆದೇಶ ಮತ್ತು ಸುತ್ತೋಲೆ ಹೊರಡಿಸಿರುವುದಿಲ್ಲ,’ ಎಂಬ ಮಾಹಿತಿ ಒದಗಿಸಿದ್ದಾರೆ.

 

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ನೀಡಿರುವ ಮಾಹಿತಿ ಪ್ರತಿ

 

ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ, ಯಾವುದೇ ರೀತಿಯ ವಸ್ತ್ರವನ್ನು ಮುಕ್ತವಾಗಿ ಧರಿಸಬಹುದು ಎಂದು ಹೇಳಿಕೆ ನೀಡಿದ್ದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಆ ನಂತರ ರಾಗ ಬದಲಾಯಸಿದ್ದರು. ಈ ಕುರಿತು ಸರಣಿ ಟ್ವೀಟ್‌ ಮಾಡಿದ್ದ ಅವರು ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜ್ ಅಭಿವೃದ್ಧಿ ಸಮಿತಿ ಸೂಚಿಸಿರುವ ವಸ್ತ್ರ ಸಂಹಿತೆ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶ ಸ್ಪಷ್ಟವಾಗಿದೆ. ಇದೇ ಆದೇಶ ಸರ್ಕಾರಿ ಮತ್ತು ಖಾಸಗಿ ಪಿಯುಸಿ, ಡಿಗ್ರಿ ಕಾಲೇಜುಗಳಿಗೂ ಅನ್ವಯವಾಗಲಿದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.

 

ಪದವಿ ಪೂರ್ವ, ಪದವಿ ಕಾಲೇಜುಗಳ ಕಾಲೇಜು ಅಭಿವೃದ್ಧಿ ಮಂಡಳಿ ಸೂಚಿಸಿರುವ ವಸ್ತ್ರ ಸಂಹಿತೆಯನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ವಸ್ತ್ರ ಸಂಹಿತೆ ಅಳವಡಿಸಿಕೊಳ್ಳದ ಕಾಲೇಜುಗಳ ವಿದ್ಯಾರ್ಥಿಗಳು ಈ ಹಿಂದಿನ ನಿಯಮಾನುಸಾರ ತರಗತಿಗಳಿಗೆ ಹಾಜರಾಗಬೇಕು. ನ್ಯಾಯಾಲಯದ ಮಧ್ಯಂತರ ತೀರ್ಪನ್ನು ಕಡ್ಡಾಯವಾಗಿ ಪಾಲಿಸಿ ಮುನ್ನಡೆಯೋಣ ಎಂದಿದ್ದರು.

 

ಸಚಿವ ಅಶ್ವಥ್‌ನಾರಾಯಣ್‌ ಅವರು ದಿಢೀರ್‌ ಎಂದು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರಿಂದಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗದಲ್ಲಿ ಬುಧವಾರ ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿನ ನಾಲ್ಕು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದ 49 ವಿದ್ಯಾರ್ಥಿಗಳಿಗೆ ಕಾಲೇಜ್ ಪ್ರವೇಶ ನಿರಾಕರಿಸಿದ್ದರಿಂದ ಮನೆಗೆ ವಾಪಸ್ ಹೋಗಿದ್ದರು.

 

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ್ದರಿಂದ ದಯಾನಂದ ಪೈ ಡಿಗ್ರಿ ಕಾಲೇಜ್, ಪೊಂಪೈ ಡಿಗ್ರಿ ಕಾಲೇಜ್, ಇಂದಿರಾ ನಗರ ಡಿಗ್ರಿ ಕಾಲೇಜ್ ಮತ್ತು ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಮನೆಗೆ ತೆರಳಿದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿಕದ್ದಾರೆ. ಮುಡಿಪು ಡಿಗ್ರಿ ಕಾಲೇಜ್ ಮತ್ತು ಮೊಂಟೆಪಾಡವು ಕಾಲೇಜಿನ 33 ವಿದ್ಯಾರ್ಥಿಗಳು ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾಗಿದ್ದರು.

the fil favicon

SUPPORT THE FILE

Latest News

Related Posts