ಆರನೇ ತರಗತಿಯಲ್ಲಿ ‘ಹೊಸ ಧರ್ಮಗಳ ಉದಯ’ಕ್ಕೆ ಕತ್ತರಿ, ದ್ವಿತೀಯ ಪಿಯುಸಿಯಲ್ಲಿ ಮುಂದುವರಿಕೆ

ಬೆಂಗಳೂರು; ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿದ್ದ ‘ವೈದಿಕ ಧರ್ಮದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು,’ ಎಂಬ ಸಾಲುಗಳನ್ನು ಕಿತ್ತೊಗೆದು ಪರಿಷ್ಕರಿಸಿದ್ದನ್ನು ಅಂಗೀಕರಿಸಿ ಪಠ್ಯಪುಸ್ತಕವನ್ನು ಮುದ್ರಿಸಿರುವ ಸರ್ಕಾರವು, ದ್ವಿತೀಯ ಪಿಯುಸಿ ಇತಿಹಾಸ 4.2 ಅಧ್ಯಾಯದಲ್ಲಿರುವ ‘ಹೊಸ ಧರ್ಮಗಳ ಉದಯ’ ಪಠ್ಯವನ್ನು ಉಳಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದಲ್ಲಿರುವ ಹೊಸ ಧರ್ಮಗಳ ಉದಯ ಅಧ್ಯಾಯವನ್ನು ಪರಿಷ್ಕರಿಸದೆಯೇ ಅದನ್ನು ಅದೇ ಅಧ್ಯಾಯದಲ್ಲಿಯೇ ಮುಂದುವರೆಸಿ 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿರುವ ಇದೇ ಪಾಠವನ್ನು ಪರಿಷ್ಕರಿಸಿರುವುದೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

 

‘ಹೊಸ ಧರ್ಮಗಳ ಉದಯ’ದ ಕುರಿತಾದ ಅಂಶಗಳನ್ನು ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ಅವರ ಸಮಿತಿಗೆ ವಹಿಸಿದ್ದನ್ನು ಹಿಂಪಡೆಯಲಾಗಿದೆ ಎಂದು ಸಚಿವ ಬಿ ಸಿ ನಾಗೇಶ್‌ ಹೇಳಿಕೆ ನೀಡಿದ್ದರು. ಅಲ್ಲದೆ ದ್ವಿತೀಯ ಪಿಯುಸಿ ಇತಿಹಾಸ ಪಠ್ಯದಲ್ಲಿದ್ದ ಈ ಅಧ್ಯಾಯ ಪರಿಷ್ಕರಿಸಿರುವ ಸಂಬಂಧ ಚಕ್ರತೀರ್ಥ ಸಮಿತಿಯಿಂದ ವರದಿಯನ್ನೂ ಪಡೆಯುವುದಿಲ್ಲ ಮತ್ತು ಅದೇ ಅಧ್ಯಾಯ ಮುಂದುವರೆಯಲಿದೆ ಎಂದು ಹೇಳಿಕೆ ನೀಡಿದ್ದರು.

 

ವೈದಿಕ ಧರ್ಮಗಳ ದೋಷಗಳಿಂದಾಗಿಯೇ ಹೊಸ ಧರ್ಮಗಳು ಉದಯವಾದವು ಎಂಬ ಸಾಲುಗಳನ್ನು ಆರನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ತೆಗೆದು ಹಾಕಿ, ದ್ವಿತೀಯ ಪಿಯುಸಿ ಇತಿಹಾಸದಲ್ಲಿ ಮುಂದುವರೆಸಿರುವುದು ಇತಿಹಾಸ ಬೋಧಕರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

 

ಚಕ್ರತೀರ್ಥ ವಿರುದ್ಧ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಇತಿಹಾಸದ 4.2 ಅಧ್ಯಾಯದಲ್ಲಿರುವ ಹೊಸ ಧರ್ಮಗಳ ಉದಯ ಪಾಠವನ್ನೂ ಪರಿಷ್ಕರಿಸಲು ಹಿಂದೆ ಸರಿದಿತ್ತು.

 

‘ಪಠ್ಯಪುಸ್ತಕ ಪರಿಷ್ಕರಣೆಯ ವಿಷಯ ಕೇವಲ ವಿವಾದ ಮಾತ್ರವಲ್ಲ, ದೊಡ್ಡ ಹಗರಣ. ನೂರಾರು ಕೋಟಿ ರುಪಾಯಿಗಳನ್ನು ಲೂಟಿ ಹೊಡೆಯಲು ಈ ಹಗರಣ ಸೃಷ್ಟಿಯಾಗಿದೆ. ಆರನೇ ತರಗತಿಯ ‘ಹೊಸ ಧರ್ಮಗಳ ಉದಯ’ ಪಾಠ ತೆಗೆದಿರುವ ರಾಜ್ಯ ಸರ್ಕಾರ ಅದೇ ಪಾಠವನ್ನು ಪಿಯುಸಿಯಲ್ಲಿ ಉಳಿಸಿಕೊಂಡಿದೆ. ಇದು ಏನನ್ನು ಸೂಚಿಸುತ್ತದೆ? ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪುಟದಿಂದ ವಜಾಗೊಳಿಸುವುದು ಮಾತ್ರವಲ್ಲ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಹಾಗೆಯೇ ಇಷ್ಟೆಲ್ಲ ಹಗರಣಕ್ಕೆ ಕಾರಣನಾದ, ಕರ್ನಾಟಕದಲ್ಲಿ ಅಶಾಂತಿಗೆ ಕಾರಣನಾದ ರೋಹಿತ್ ಚಕ್ರತೀರ್ಥ ಮೇಲೂ ಮೊಕದ್ದಮೆ ದಾಖಲಿಸಿ ಜೈಲಿಗೆ ತಳ್ಳಬೇಕು,’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ದಿನೇಶ್ ಕುಮಾರ್ ಎಸ್.ಸಿ

 

ಅರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ವೈದಿಕ ಧರ್ಮದ ದೋಷಗಳಿಂದಾಗಿಯೇ ಹೊಸ ಧರ್ಮಗಳ ಉದಯವಾದವು ಎಂಬ ಸಾರಾಂಶವನ್ನು ಪಠ್ಯದಿಂದ ತೆಗೆಯಬೇಕು ಎಂದು ಅಂದು ಶಿಕ್ಷಣ ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವರಿಗೆ ದೂರು ಸಲ್ಲಿಕೆಯಾಗಿತ್ತು.

 

ಅದರಂತೆ ಆರನೇ ತರಗತಿ ಸಮಾಜವಿಜ್ಞಾನ ಪಠ್ಯಪುಸ್ತಕದ ಭಾಗವಾಗಿರುವ ವೇದ ಕಾಲದ ಸಂಸ್ಕೃತಿ ಕುರಿತು ಪಾಠ ಮಾಡದಂತೆ ಶಿಕ್ಷಕರಿಗೆ ಆದೇಶ ಹೊರಡಿಸಿದ್ದರು. ಆ ನಂತರ ಈ ಸಾಲುಗಳನ್ನು ಪರಿಷ್ಕರಿಸುವ ಮೂಲ ಉದ್ಧೇಶದಿಂದಲೇ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಸಮಿತಿಯು ಪರಿಷ್ಕರಿಸಿದೆ.

 

ಇದೇ ಅಂಶದ ಕುರಿತು ಚಕ್ರತೀರ್ಥ ಸಮಿತಿ ನೀಡಿರುವ ವರದಿಯು ವಿವಾದಕ್ಕೀಡಾಗಿರುವ ಮಧ್ಯೆಯೇ ದ್ವಿತೀಯ ಪಿಯುಸಿಯಲ್ಲಿಯೂ ‘ಹೊಸ ಧರ್ಮಗಳ ಉದಯ’ ಎಂಬ ಅಧ್ಯಾಯವನ್ನೂ ಪರಿಷ್ಕರಿಸಲು ರೋಹಿತ್‌ ಚಕ್ರತೀರ್ಥ ಸಮಿತಿಗೆ ವಹಿಸಲು ಸಚಿವ ಬಿ ಸಿ ನಾಗೇಶ್‌ ಅವರು ಟಿಪ್ಪಣಿ ಹಾಕಿದ್ದರು.

 

6ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಇದ್ದಿದ್ದೇನು?

 

ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆಯು ಕುಂಠಿತವಾಯಿತು. ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ, ಹಾಲು, ತುಪ್ಪಗಳನ್ನು ಹವಿಸ್ಸು ಎಂದು ದಹಿಸಲಾಗುತ್ತಿತ್ತು. ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು.

 

ಇನ್ನೊಂದು ಕಡೆ ವೈದಿಕ ಆಚರಣೆಗಳಾದ ಯಾಗ, ಯಜ್ಞ, ಮೊದಲಾದ ಆಚರಣೆಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಈ ದುಬಾರಿ ಆಚರಣೆಗಳು ಜನ ಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಈ ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು. ಸಂಸ್ಕೃತ ಪುರೋಹಿತ ಭಾಷೆಯಾದ್ದರಿಂದ ಅದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ.

 

ಜನ ಸಾಮಾನ್ಯರ ಭಾಷೆಯಲ್ಲಿಯೇ ಸರಳಮಾರ್ಗಗಳ ಮೂಲಕ ಮುಕ್ತಿ ತೋರುವ ಹೊಸ ಧರ್ಮಗಳನ್ನು ಜನರು ಅಪೇಕ್ಷಿಸುತ್ತಿದ್ದರು. ಮತ್ತೊಂದು ಕಡೆ ಉತ್ತರ ವೇದಗಳ ಕಾಲದಲ್ಲಿ ವರ್ಣ ವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು. ಇದು ಸಮಾಜದಲ್ಲಿ ತಾರತಮ್ಯಕ್ಕೂ ಎಡೆಮಾಡಿತು.

 

ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗವು ಹಲವು ಸವಲತ್ತುಗಳನ್ನು ಹೊಂದಿತ್ತು. ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು. ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು. ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು ಎಂಬ ವಿವರಣೆ ಇತ್ತು.

 

ಇವೆಲ್ಲವುಗಳ ಪರಿಣಾಮವಾಗಿ 2600 ವರ್ಷಗಳ ಹಿಂದೆ ಗಂಗಾ ಬಯಲಿನಲ್ಲಿ ಸುಮಾರು 62 ಹೊಸ ಧರ್ಮಗಳು ಉದಯಿಸಿದವು. ಅವುಗಳಲ್ಲಿ ಜೈನಧರ್ಮ ಮತ್ತು ಬೌದ್ಧ ಧರ್ಮಗಳು ಪ್ರಮುಖವಾದವು. ಬೌದ್ಧ ಧರ್ಮ ಸ್ಥಾಪಕ ಗೌತಮ ಬುದ್ಧ ಹಾಗೂ ಜೈನ ಧರ್ಮದ ಪ್ರಮುಖ ತೀರ್ಥಂಕರ ವರ್ಧಮಾನ ಮಹಾವೀರ. ಈ ಇಬ್ಬರೂ ಕೂಡ ಗಣರಾಜ್ಯಗಳ ಕುಲಗಳಿಗೆ ಸೇರಿದ ಕ್ಷತ್ರಿಯರು ಎಂದು ಹೇಳಲಾಗಿತ್ತು.

 

‘ರೋಹಿತ್ ಚಕ್ರತೀರ್ಥ ಸಮಿತಿ ಪಠ್ಯಪುಸ್ತಕಗಳ ಮಾಡಿರುವ ಅದ್ವಾನಗಳಿಗೆ ಬಂದ ಪ್ರತಿರೋಧ ಕಂಡು ಬೆಚ್ಚಿರುವ ಸಚಿವ ಬಿ ಸಿ ನಾಗೇಶ್ ಅವರು ಪಿಯುಸಿ ಪಠ್ಯದಲ್ಲಿ ಸಹ ಹೊಸ ಧರ್ಮಗಳ ಉದಯ ಪಾಠದಲ್ಲಿ ಕಡ್ಡಿ ಆಡಿಸುವ ಕೆಲಸದಿಂದ ಹೆಜ್ಜೆ ಹಿಂದಿಟ್ಟಿದ್ದಾರೆ. ಅರ್ಹತೆಯೇ ಇಲ್ಲದವರ ಬಳಿ ಇಂತಹ ಕೆಲಸ ಮಾಡಿಸಿದರೆ ಏನಾಗುತ್ತದೆ ಎಂದು ಅವರಿಗೆ ಅರಿವಾಗಿದೆ. ಈಗ ಪಿಯುಸಿ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಪಾಠ ಮೊದಲಿಂತೆಯೇ ಇರಲಿದೆ. ಆರನೇ ತರಗತಿಯಲ್ಲೂ ಅದೇ ಪಾಠ ಇದ್ದರೆ ತೊಂದರೆ ಏನು, ‘ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಹೋರಾಟಗಾರ ಹರ್ಷಕುಮಾರ್‌ ಕುಗ್ವೆ.

 

ದ್ವಿತೀಯ ಪಿಯುಸಿ ಇತಿಹಾಸ ಪಠ್ಯದ 4.2 ಅಧ್ಯಾಯದಲ್ಲೇನಿದೆ?

ಪಠ್ಯಪುಸ್ತಕದ 4.2 ಅಧ್ಯಾಯದಲ್ಲಿ ಹೊಸ ಧರ್ಮಗಳ ಉದಯ-ಜೈನ ಧರ್ಮ ಮತ್ತು ಬೌದ್ಧ ಧರ್ಮ ಎಂಬ ಪಾಠಾಂಶವಿತ್ತು. ವೈದಿಕ ಧರ್ಮದಲ್ಲಿನ ಗೊಂದಲಗಳು, ಪುರೋಹಿತ ವರ್ಗದ ಪರಮಾಧಿಕಾರ, ಪ್ರಾಣಿಬಲಿ, ಮಂತ್ರಗಳ ಪಠಣ, ಜಾತಿಪದ್ಧತಿ, ಮಹಾನ್‌ ವ್ಯಕ್ತಿಗಳ ಜನನವು ಹೊಸ ಧರ್ಮಗಳ ಉದಯಕ್ಕೆ ಕಾರಣವಾದವು ಎಂಬ ಅಂಶವಿದೆ.

 

‘ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸಧರ್ಮಗಳಲ್ಲಿ ಕಂಡುಕೊಂಡರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನುಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

 

ಪ್ರಾಣಿ ಬಲಿ, ಶಾಸ್ತ್ರ ವಿಧಿಗಳೊಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು.ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು. ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.

 

ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು. ಜಾತಿ ಪದ್ಧತಿಯು ಸಾಮಾಜಿಕ ವ್ಯವಸ್ಥೆಯ ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಬೇಧಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.

 

ಜನರು ಅಸಂತುಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧನಂತಹ ಇಬ್ಬರು ಮಹಾನ್‌ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು ಎಂಬ ಸಾಲುಗಳಿವೆ.

 

ಅರನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ವೈದಿಕ ಕಾಲದ ಬಗ್ಗೆ ತಪ್ಪು ಮಾಹಿತಿ, ನಿರ್ದಿಷ್ಟ ಸಮುದಾಯಗಳ ಅವಹೇಳನ ಮಾಡಲಾಗಿದೆ ಎಂದು ಹೇಳಿರುವ ಚಕ್ರತೀರ್ಥ ಸಮಿತಿಯು ಆಕ್ಷೇಪಾರ್ಹ ಭಾಗಗಳಿಗೆ ಸೂಕ್ತ ಪರಿಷ್ಕರಣೆ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

‘ಯಾಕೆ ಸರ್ಕಾರ ಪಠ್ಯಕ್ರಮ ಪರಿಷ್ಕರಣೆ ಬಗ್ಗೆ ಇಷ್ಟು ಮೊಂಡುತನ ತೋರುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಇದುವರೆಗೆ ದೇಶದ ಎಲ್ಲಾ ಇತಿಹಾಸಕಾರರು ಏನು ಹೇಳಿದ್ದಾರೋ ಅದೇ ಆ ಪಾಠದಲ್ಲಿಯೂ ಇದೆಯೇ ಹೊರತು ಬರಗೂರು ರಾಮಚಂದ್ರಪ್ಪನವರು ಹೊಸದಾಗಿ ಏನನ್ನೋ ಸೃಷ್ಟಿಸಿರುವುದಲ್ಲ. ಅಂಬೇಡ್ಕರ್ ಅವರು ಹೊಸ ಧರ್ಮಗಳ ಉದಯದ ಬಗ್ಗೆ ಬರೆದಿದ್ದನ್ನು ಓದಿದರಂತೂ ಕೇಳುವುದೇ ಬೇಡ.‌ ಅಷ್ಟು ಚನ್ನಾಗಿ ವಿವರಿಸಿದ್ದಾರೆ. ಹೇಗೆ ವೈದಿಕ ರಿಲಿಜನ್ ನ ದುರಾಚಾರಗಳಿಂದಾಗಿ ಬುದ್ದನ ದಮ್ಮ (ರಿಲಿಜನ್ ಅಲ್ಲ) ಹುಟ್ಟಿತು ಅಂತ. ಈಗ ಸರ್ಕಾರ ಆರನೇ ತರಗತಿಯ ಮಕ್ಕಳಿಗೆ ಈ ಇತಿಹಾಸವನ್ನೇ ಮರೆ ಮಾಚಲು ಹೊರಟಿರುವುದು ಶುದ್ಧ ವಿಕೃತಿ‌,’ ಎನ್ನುತ್ತಾರೆ ಹರ್ಷಕುಮಾರ್‌ ಕುಗ್ವೆ

the fil favicon

SUPPORT THE FILE

Latest News

Related Posts