ಬರಗೂರು ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳು ಮರು ಮಾರಾಟಕ್ಕೆ, ಓದುಗರ ಕೈ ಸೇರದಂತೆ ನಿರ್ಬಂಧ

ಬೆಂಗಳೂರು; ಬೆಂಗಳೂರು; ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿದ್ದ ಸಮಿತಿಯು ಪರಿಷ್ಕರಿಸಿದ್ದ 83 ಶೀ‍ರ್ಷಿಕೆಗಳ ಪಠ್ಯಪುಸ್ತಕಗಳು ಅನುಪಯುಕ್ತ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘವು ತೀರ್ಮಾನಿಸಿದ್ದ ಪಠ್ಯಪುಸ್ತಕಗಳು ಓದುಗರ ಕೈ ಸೇರಬಾರದು ಎಂದು ಸರ್ಕಾರವು ಕ್ರಮಕೈಗೊಂಡಿರುವುದು ಇದೀಗ ಬಹಿರಂಗವಾಗಿದೆ.

 

ರೋಹಿತ್‌ ಚಕ್ರತೀರ್ಥ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು ಎಂಬ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿದ್ದ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳು ಓದುಗರ ಕೈ ಸೇರಬಾರದು ಎಂದು ಸರ್ಕಾರ ತಳೆದಿದ್ದ ನಿಲುವು ಕೂಡ ಮುನ್ನೆಲೆಗೆ ಬಂದಿದೆ.

 

ಚಕ್ರತೀರ್ಥ ಸಮಿತಿಯು ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ನೀಡಿರುವ ವರದಿ ಮತ್ತು ಕಡತವನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಟಿಪ್ಪಣಿ ಹಾಳೆಯಲ್ಲೇನಿದೆ?

 

’83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳು 2022-23ನೇ ಸಾಲಿನಿಂದ ಅನುಪಯುಕ್ತವಾಗುತ್ತವೆ. ಈ ಪಠ್ಯಪುಸ್ತಕಗಳ ಅಂದಾಜು ಮೌಲ್ಯ 2.5 ಕೋಟಿ ಆಗುತ್ತದೆ. ಈ ಪುಸ್ತಕಗಳನ್ನು ನಿಯಮಾನುಸಾರ ಹರಾಜು ಹಾಕಿ ಬಂದಹಣವನ್ನು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಜಮಾ ಮಾಡಿಕೊಳ್ಳಲು ಅನುಮತಿ ನೀಡವುದು ಎಂದು ಕೋರಿರುತ್ತಾರೆ. ಆದರೆ ಹರಾಜು ಹಾಕಿದರೆ ಈ ಪುಸ್ತಕಗಳನ್ನು ಬೇರೆಯವರಿಗೆ ಮರು ಮಾರಾಟವಾಗದ ರೀತಿ ಅಥವಾ ಬೇರೆಯವರಿಗೆ ದೊರಕದ ಹಾಗೇ ಕ್ರಮವಹಿಸಿದ್ದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯ ಯಶಸ್ವಿಯಾಗುತ್ತದೆ. ತಪ್ಪಿದಲ್ಲಿ ಈ ಪುಸ್ತಕಗಳು ಓದುಗರ ಕೈ ಸೇರಿದರೆ ಸದರಿ ಕಾರ್ಯ ಯಶಸ್ವಿಗೆ ತಡೆಯಾಗಬಹುದಾದ ಸಾಧ್ಯತೆಯನ್ನು ಅಲ್ಲಗಳೆಯಲಾಗದು, ‘ ಎಂಬ ಅಂಶ ಟಿಪ್ಪಣಿ ಹಾಳೆಯಲ್ಲಿದೆ.

 

ಟಿಪ್ಪಣಿ ಹಾಳೆ ಪ್ರತಿ

 

ಅಲ್ಲದೆ 2021-22ನೇ ಸಾಲಿಗೆ ಮುದ್ರಿಸಿ ಸರಬರಾಜು ಮಾಡಿರುವ 83 ಶೀರ್ಷಿಕೆಗಳು ಬ್ಲಾಕ್‌ ಹಂತದಲ್ಲೇ ಉಳಿದಿರುವ ಒಟ್ಟು 6,76,997 ಪಠ್ಯಪುಸ್ತಕಗಳು 2022-23ನೇ ಸಾಲಿನಗೆ ಅನುಪಯುಕ್ತವಾಗಲಿವೆ. ಇದರ ಅಂದಾಜು ಮೌಲ್ಯ 2.5 ಕೋಟಿ ನಷ್ಟವಾಗುವ ಹಿನ್ನೆಲೆಯಲ್ಲಿ ಈ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಬೇಕು ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

 

ಆರ್ಥಿಕ ಇಲಾಖೆ ಜತೆ ಸಮಾಲೋಚಿಸಬೇಕು ಎಂದು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯವನ್ನೂ ಸರ್ಕಾರವು ಬದಿಗೆ ಸರಿಸಿದೆ. 2.5 ಕೋಟಿ ರು. ನಷ್ಟವಾಗಿರುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಇದುವರೆಗೂ ಸಮಾಲೋಚಿಸಿಲ್ಲ.

 

2022-23ನೇ ಸಾಲಿಗೆ ಇಷ್ಟು ಪ್ರಮಾಣದ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಿ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುವ ಹೊತ್ತಿಗೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದರಿಂದ ಪಠ್ಯಪುಸ್ತಕ ವಿತರಣೆ ಕಾರ್ಯ ವಿಳಂಬವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲಿದೆ,’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಭಾರತದ ನಾಗರೀಕತೆಗಳು ಎಂಬ ಅಧ್ಯಾಯದಲ್ಲಿ ಸಿಂಧೂ ನಾಗರೀಕತೆ ಶೀರ್ಷಿಕೆಗೆ ಸರಸ್ವತಿ ಹೆಸರನ್ನೂ ಸೇರಿಸಿ ಸಿಂಧೂ-ಸರಸ್ವತಿ ನಾಗರೀಕತೆ ಎಂದು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಪರಿಷ್ಕರಿಸಲಾಗಿದೆ. ಅಲ್ಲದೆ ಬೌದ್ಧ, ಜೈನ ದರ್ಶನಗಳು ಹೊಸ ಮತಗಳ ಉದಯಕ್ಕೆ ಕಾರಣಗಳು ಎಂಬುದಕ್ಕೆ ನಿರಾಧಾರ ಎಂದಿದ್ದ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯು ಈ ಭಾಗವನ್ನು ಕೈ ಬಿಟ್ಟಿದೆ. ಅದೇ ರೀತಿ ಪಠ್ಯಪುಸ್ತಕದಲ್ಲಿ ಸಿಂಧೂ-ಸರಸ್ವತಿ ಎಂದು ಹೊಸ ಸೇರ್ಪಡೆ ಮಾಡಿದೆ.

 

ಅಲ್ಲದೇ ಶೃಂಗೇರಿ ಮಠ, ಹಿಂದೂ ದೇವಾಲಯಗಳಿಗೆ ಟಿಪ್ಪು ಸುಲ್ತಾನ್‌ ನೀಡಿದ್ದ ದಾನದತ್ತಿ, ರಾಕೆಟ್‌ ತಂತ್ರಜ್ಞಾನ, ರೇಷ್ಮೆ ವ್ಯವಸಾಯವನ್ನು ಪರಿಚಯಿಸಿದ್ದನ್ನೂ ಇದೇ ಸಮಿತಿಯು ಪಠ್ಯದಿಂದ ತೆಗೆದುಹಾಕಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts