ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ತುರ್ತು 25 ಲಕ್ಷ ಪರಿಹಾರ ನೀಡಲು ಕೋವಿಡ್‌-19ರ ನಿಧಿ ಬಳಕೆ

photo credit;englishnewstracklive

ಬೆಂಗಳೂರು; ಶಿವಮೊಗ್ಗದಲ್ಲಿ ಕಳೆದ ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಜರಂಗದಳ ಕಾರ್ಯಕರ್ತ ಶಿವಮೊಗ್ಗದ ಹರ್ಷ ಎಂಬಾತನ ಕುಟುಂಬ ಸದಸ್ಯರಿಗೆ ಕೋವಿಡ್‌-19ರಡಿ ಲಭ್ಯವಿದ್ದ ಅನುದಾನದಲ್ಲಿಯೇ ತುರ್ತಾಗಿ 25 ಲಕ್ಷ ರು. ಮೊತ್ತದ ಪರಿಹಾರವನ್ನು ವಿತರಿಸಲು ರಾಜ್ಯ ಸರ್ಕಾರವು ನಿರ್ದೇಶಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.

 

ಕಡು ಬಡವರಿಗೆ, ಅನಾರೋಗ್ಯಪೀಡಿತ ಬಿಪಿಎಲ್‌ ಪಡಿತರ ಚೀಟಿದಾರರಿಗೆ, ವಿಕಲ ಚೇತನರಿಗೆ, ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುತ್ತಿದ್ದ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಕ್ರಿಮಿನಲ್ ಆರೋಪಗಳ ಹಿನ್ನೆಲೆ ಹೊಂದಿದ್ದ ಹರ್ಷ ಎಂಬಾತನ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರವು ದುರ್ಬಳಕೆ ಆಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಕೋವಿಡ್‌ 19ರ ಅಡಿ ಲಭ್ಯವಿದ್ದ ಅನುದಾನವನ್ನು ಬಳಸಿಕೊಂಡು ತುರ್ತಾಗಿ 25 ಲಕ್ಷ ರು.ಗಳನ್ನು ಹರ್ಷನ ಕುಟುಂಬ ಸದಸ್ಯರಿಗೆ ನೀಡಲಾಗಿತ್ತು ಎಂಬ ಮಾಹಿತಿಯು ಮುನ್ನೆಲೆಗೆ ಬಂದಿದೆ.

 

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರು. ಹರ್ಷ ಕುಟುಂಬ ಸದಸ್ಯರಿಗೆ ಮಂಜೂರಾಗಿತ್ತಾದರೂ ಈ ಹಣವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆಗಿರಲಿಲ್ಲ ಎಂಬ ಸಂಗತಿ ತಿಳಿದು ಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು 2022ರ ಮಾರ್ಚ್‌ 10ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು ಎಂದು ಗೊತ್ತಾಗಿದೆ.

 

ಹರ್ಷನ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆ (ಸಂಖ್ಯೆ; 38587794605)ಯಿಂದ 25 ಲಕ್ಷ ರು. ಪರಿಹಾರ ವಿತರಿಸಿ ಸ್ವೀಕೃತಿ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಒಗಿಸಬೇಕು ಎಂದು ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಅವರು ಸೂಚಿಸಿದ್ದರು. ಆದರೆ ಈ ಪರಿಹಾರದ ಮೊತ್ತವು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆಗಿರಲಿಲ್ಲ ಎಂಬುದು ತಿಳಿದು ಬಂದಿದೆ.

 

‘ಮೃತರ ಕುಟುಂಬಕ್ಕೆ ತುರ್ತಾಗಿ ಪರಿಹಾಋ ಹಣ ವಿತರಣೆ ಮಾಡಬೇಕಾಗಿರುವುದರಿಂದ ಕೋವಿಡ್‌ 19 ರಡಿ ತಹಶೀಲ್ದಾರ್‌ ಶಿವಮೊಗ್ಗ ಇವರಲ್ಲಿ ಲಭ್ಯವಿರುವ ಅನುದಾನದಲ್ಲಿ ಮೃತ ಹರ್ಷ ಕುಟುಂಬ ವಾರಸುದಾರರಿಗೆ 25 ಲಕ್ಷ ರು. ಪರಿಹಾರ ವಿತರಿಸಬೇಕುಕ. ಈ ಪರಿಹಾರ ಮೊತ್ತವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್‌ ಖಾತೆಗೆ ಜಮಾ ಆದ ಕೂಡಲೇ ಈ ಮೊತ್ತವನ್ನು ಮರು ಹಂಚಿಕೆ ಮಾಡಬೇಕು,’ ಎಂದು ನಿರ್ದೇಶನ ನೀಡಲಾಗಿತ್ತು ಎಂಬುದು ಗೊತ್ತಾಗಿದೆ.

 

ಈ ಪ್ರಕ್ರಿಯೆ ಆದ ನಂತರ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 25 ಲಕ್ಷ ರು. ಅನುದಾನವು ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಗೆ ಜಮಾ ಆಗಿದ್ದರಿಂದ 25 ಲಕ್ಷ ರು.ಗಳನ್ನು ಶಿವಮೊಗ್ಗ ತಹಶೀಲ್ದಾರ್‌ ಅವರಿಗೆ ಬಿಡುಗಡೆ ಮಾಡಲು ಅನುಮೋದಿಸಲಾಗಿತ್ತು ಎಂಬದು ತಿಳಿದು ಬಂದಿದೆ.

 

ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿರುವ ಮೊತ್ತವನ್ನು ಬಾಧಿತರಿಗೆ ಮಂಜೂರು ಮಾಡುವ ಅಧಿಕಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದ್ದರೂ ಹಿಂದಿನ ಯಾವ ಮುಖ್ಯಮಂತ್ರಿಗಳೂ ಹತ್ಯೆಗೀಡಾಗಿರುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿರಲಿಲ್ಲ.

 

ಆದರೆ ರಾಜ್ಯ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ ಬಳಸಿಕೊಂಡು 25 ಲಕ್ಷ ರು. ಮೊತ್ತದ ಚೆಕ್‌ನ್ನು ನೀಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

ಕೆಲ ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಬಿಚ್ಚುಗತ್ತಿ ಮಾರಮ್ಮ ದೇಗುಲದಲ್ಲಿ ನೀಡಿದ್ದ ಪ್ರಸಾದ ಸೇವನೆಯಿಂದ ಸಾವೀಗೀಡಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರು., ಮತ್ತು ಮಂಡ್ಯ ಜಿಲ್ಲೆಯಲ್ಲಿನ ನಾಲೆಯೊಂದಕ್ಕೆ ಬಸ್‌ ಉರುಳಿದ್ದರಿಂದಾಗಿ ಮೃತಪಟ್ಟಿದ್ದವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರು.ನಂತೆ ಪರಿಹಾರದ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗಿತ್ತು. ಈ ಅವಧಿಯಲ್ಲಿ ಎಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು.

 

ಸಾರ್ವಜನಿಕರು, ಸಂಘ ಸಂಸ್ಥೆಗಳು, ನಿಗಮ, ಮಂಡಳಿಗಳು, ಕಾರ್ಪೋರೇಷನ್‌ಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿವೆ. ಈ ಹಣವನ್ನು ಸನ್ನಿವೇಶ, ಕುಟುಂಬದ ತೀವ್ರತೆ, ದುಡಿಯುವ ವ್ಯಕ್ತಿ ಮೃತಪಟ್ಟಲ್ಲಿ, ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೇ ಭರಿಸಲಾಗುತ್ತಿದೆ. ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರಿಗೆ ಕನಿಷ್ಠ 10ರಿಂದ 25 ಲಕ್ಷ ರು.ವರೆಗೂ ಪರಿಹಾರವನ್ನು ಇದೇ ನಿಧಿಯಿಂದಲೇ ನೀಡಲಾಗುತ್ತಿದೆ.

Your generous support will help us remain independent and work without fear.

Latest News

Related Posts