15.26 ಕೋಟಿ ನಷ್ಟ ಪ್ರಕರಣ ಮುಖ್ಯ ಕಾರ್ಯದರ್ಶಿ ಅಂಗಳಕ್ಕೆ; ಲೋಪವೆಸಗಿದ್ದವರಿಗೆ ಆಯುಕ್ತರ ರಕ್ಷಣೆ?

photo credit;deccan hearald

ಬೆಂಗಳೂರು; ಭೂ ಪರಿಹಾರ ನೀಡುವ ಸಂಬಂಧ ಕರ್ತವ್ಯಲೋಪ ಎಸಗಿದ ಪರಿಣಾಮ ಕರ್ನಾಟಕ ಗೃಹ ಮಂಡಳಿಯು 15.26 ಕೋಟಿ ರು.ಗಳನ್ನು ಸಂದಾಯ ಮಾಡಬೇಕಿದ್ದ ಪ್ರಕರಣದಲ್ಲಿ ಕರ್ನಾಟಕ ಗೃಹ ಮಂಡಳಿ ಆಯುಕ್ತರು ನ್ಯಾಯಾಲಯದ ಪ್ರಕರಣದಂತೆ ಕ್ರಮವಹಿಸಿರುವುದನ್ನು ಮರೆಮಾಚಿದ್ದಾರೆ ಎಂಬ ಮತ್ತೊಂದು ಆರೋಪ ಕೇಳಿ ಬಂದಿದೆ.

 

ಮಹಾಲೇಖಪಾಲರ ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಿದ್ದ ಆಕ್ಷೇಪಣೆಗಳ ಅಂಶಗಳನ್ನು ತಪ್ಪಾಗಿ ಆರ್ಥೈಸಿಕೊಂಡು 1993ರಿಂದ 1999ರವರೆಗೂ ಕಾರ್ಯನಿರ್ವಹಿಸಿದ ಅಂದಿನ ಎಲ್ಲಾ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡದ ಮಂಡಳಿ ಆಯುಕ್ತರು ಅವರ ರಕ್ಷಣೆಗೆ ನಿಂತಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

ಮಂಡಳಿಗೆ 15.26 ಕೋಟಿಯಷ್ಟು ನಷ್ಟವಾಗಿರುವ ಕುರಿತು ‘ದಿ ಫೈಲ್‌’ ಮತ್ತು ವಾರ್ತಾಭಾರತಿ ವರದಿ ಪ್ರಕಟಿಸುತ್ತಿದ್ದಂತೆ ಆರೋಪಿತ ಅಧಿಕಾರಿ ಸಿ ನಾಗರಾಜು ಅವರು ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಬರೆದಿರುವ ಪತ್ರವು ಈ ಪ್ರಕರಣವನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದೆ. ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲೇನಿದೆ?

 

ಕರ್ನಾಟಕ ಗೃಹ ಮಂಡಳಿಯಲ್ಲಿ 2013ರ ನವೆಂಬರ್‌ 11ರಿಂದ 2016ರ ಜುಲೈ 27ರವರೆಗೆ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಎಚ್‌ಬಿಯು ಕಲಂ 16(2) ರಲ್ಲಿ 1992ರಲ್ಲಿ ಅಧಿಸೂಚಿಸಿ 1999ರಲ್ಲಿ ಸ್ವಾಧೀನಕ್ಕೆ ಪಡೆದಿದ್ದ ಬೆಂಗಳೂರಿನ ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಗ್ರಾಮದ ರಿ.ಸ.ನಂ. 20/8ರಲ್ಲಿನ 1-20 ಎಕರೆ ಪ್ರದೇಶವನ್ನು ಹೊಸ ಭೂ ಸ್ವಾಧೀನ ಕಾಯ್ದೆಯ ಸೆಕ್ಷನ್‌ 24(2)ರ ಪ್ರಕಾರ ಭೂ ಸ್ವಾಧೀನ ವ್ಯಾಪ್ತಿಯಿಂದ 2015ರ ಆಗಸ್ಟ್‌ 3ರಂದು ಉಚ್ಛ ನ್ಯಾಯಾಲಯವು ರದ್ದುಗೊಳಿಸಿ ಆದೇಶಿಸಿದೆ.

 

ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದ ಪ್ರತಿ

 

ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರತಿ ನಿರ್ಧಾರವನ್ನು ಕರ್ನಾಟಕ ಗೃಹ ಮಂಡಳಿಯ ನಿರ್ದೇಶನದ ಮೇರೆಗೆ ನಿರ್ವಹಿಸಲಾಗಿದೆಯೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿ ಇರುವುದಿಲ್ಲ.
ಅಂದಿನ ಭೂ ಸ್ವಾಧೀನ ಅಧಿಕಾರಿಗಳು ಐತೀರ್ಪು (ಅವಾರ್ಡ್ ನೋಟೀಸ್‌ನಲ್ಲಿ) ಮೇಲ್ಕಂಡ ಸರ್ವೆ ನಂಬರಿನ ಹಕ್ಕು ಬಾಧ್ಯತೆ ಬಗ್ಗೆ ದಾಖಲಾತಿಗಳನ್ನು ಒದಗಿಸಿ, ಪರಿಹಾರ ಪಾವತಿ ಮಾಡುವ ಬಗ್ಗೆ ಸ್ಪಷ್ಟೀಕರಣ ನೀಡದೇ ಇರುವುದರಿಂದ ಭೂ ಪರಿಹಾರದ ಮೊಬಲಗನ್ನು ಭೂ ಸ್ವಾಧೀನ ಕಾಯ್ದೆ ಕಾಲಂ 30-31ರಂತೆ ನ್ಯಾಯಾಲಯದಲ್ಲಿ ಠೇವಣಿ ಇಡಲಾಗುವುದು ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ.

 

ತದನಂತರ, ಭೂ ಮಾಲೀಕರು (ಡಬ್ಲೂ.ಪಿ. ಸಂಖ್ಯೆ: 28022 ಮತ್ತು 28955) 4(1) ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಲ್ಲದೆ ಈ ದಾವೆಯು 2011ರ ಅಕ್ಟೋಬರ್‌ 28ರಂದೇ ಇತ್ಯರ್ಥವಾಗಿದೆ. ಈ ಯಾವ ಸಂದರ್ಭದಲ್ಲಿಯೂ ಕರ್ನಾಟಕ ಗೃಹ ಮಂಡಳಿಯ ಸೇವೆಯಲ್ಲಿ ಇರಲಿಲ್ಲ ಎಂದು ಸಿ ನಾಗರಾಜು ಅವರು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.

 

ಭೂ ಸ್ವಾಧೀನ ಕಾಯ್ದೆಯಡಿಯಲ್ಲಿ ಯಾವುದೇ ಭೂಮಿಯನ್ನು ಸೆಕ್ಷನ್ 16(2) ರಡಿಯಲ್ಲಿ ಸುಪರ್ದಿಗೆ ಪಡೆಯುವ ಮೊದಲು ಐತೀರ್ಪು ಮೊತ್ತವನ್ನು ಪೂರ್ಣ ಪಾವತಿಸಿರಬೇಕು ಅಥವಾ ವ್ಯಾಜ್ಯಗಳು/ದಾಖಲೆಗಳು ಸಲ್ಲಿಕೆಯಾಗದಿದ್ದಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಠೇವಣಿ ಇರಿಸಬೇಕು. ಆ ಕರ್ತವ್ಯವನ್ನು ಅಂದಿನ ಭೂ ಸ್ವಾಧೀನ ಅಧಿಕಾರಿಗಳು ಮಾಡಬೇಕಿತ್ತು.

 

ಮಹಾಲೇಖಪಾಲರೂ ತಮ್ಮ ವರದಿಯಲ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಅಂದು ಕಾರ್ಯನಿರ್ವಹಿಸಿದ್ದ ಕೆಲವು ಅಧಿಕಾರಿಗಳ ನಿರ್ಲಕ್ಷತನ ಅಥವಾ ದುರುದ್ದೇಶ ಪೂರಿತವಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇದರಿಂದ ನ್ಯಾಯಾಲಯದ ಆದೇಶದ ಮೇರೆಗೆ ಮಂಡಳಿಯಿಂದ ಕೈತಪ್ಪಿದ್ದ ಸುಮಾರು 50 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಕರ್ನಾಟಕ ಗೃಹ ಮಂಡಳಿಗೆ, ನ್ಯಾಯಾಲಯದ ಆದೇಶದಂತೆ ಹಾಗೂ ಮಂಡಳಿಯ ನಿರ್ದೇಶನದಂತೆ ಕ್ರಮವಹಿಸಿ ವಾಪಸ್ಸು ದೊರಕಿಸಿದ್ದೇನೆ ಎಂದು ಸಿ ನಾಗರಾಜು ಅವರು ಸಮಜಾಯಿಷಿ ನೀಡಿದ್ದಾರೆ.

 

1999ರಲ್ಲಿ ಕರ್ನಾಟಕ ಗೃಹ ಮಂಡಳಿಯ ಜಮೀನು ಸುಪರ್ದಿಗೆ ಬಂದ ನಂತರ ಬಿ.ಡಿ.ಎ.ನಿಂದ ಹೊರವರ್ತುಲ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರು/ಕಾರ್ಯಪಾಲಕ ಅಭಿಯಂತರರು/ ಮುಖ್ಯ ಅಭಿಯಂತರರದ್ದು ಮಂಡಳಿಯ ಆಸ್ತಿ ಸಂರಕ್ಷಣೆಯ ಜವಾಬ್ದಾರಿ ಆಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಚರ್ಚಿತವಾಗಿತ್ತು.

 

ಉಚ್ಛ ನ್ಯಾಯಾಲಯವು (ಡಬ್ಲೂ.ಎ. ಸಂಖ್ಯೆ: 2632-2633) ವಿಚಾರಣೆ ಸಂದರ್ಭದಲ್ಲಿ ಬಿಡಿಎ ಮತ್ತು ಕೆಎಚ್‌ಬಿ ತಮ್ಮಲ್ಲಿ ಈ ವಿಚಾರವಾಗಿ, ಎರಡೂ ಸರ್ಕಾರಿ ಸಂಸ್ಥೆಗಳಾಗಿರುವುದರಿಂದ ಕ್ರಮವಹಿಸಿ, ಜಮೀನು ಮಾಲೀಕರಿಗೆ ಕರ್ನಾಟಕ ಗೃಹ ಮಂಡಳಿಯು 1999ರಲ್ಲಿ ಜಮೀನು ಸುಪರ್ದಿಗೆ ಪಡೆದಿರುವುದರಿಂದ ಬಿ.ಡಿ.ಎ. ಯಿಂದ ಪರಿಹಾರ ಪಡೆಯಬಹುದೆಂದು ವಾದ-ವಿವಾದ ಸಂದರ್ಭದಲ್ಲಿ ಅಭಿಪ್ರಾಯಿಸಿತ್ತು.ಈ ವಿಚಾರವನ್ನು 460ನೇ ಮಂಡಳಿ ಸಭೆಯ ಗಮನಕ್ಕೆ ತರಲಾಗಿತ್ತು ಎಂದು ಪತ್ರದಲ್ಲಿ ಸಿ ನಾಗರಾಜು ಅವರು ವಿವರಿಸಿದ್ದಾರೆ.

 

‘ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಮಂಡಳಿಯ ಆದೇಶಗಳನ್ನು ಮಾತ್ರ ಪಾಲಿಸಿ, ಕರ್ತವ್ಯ ನಿರ್ವಹಿಸಿರುವ ನನ್ನ ಮೇಲಿನ ಆರೋಪಗಳನ್ನು ಕೈಬಿಡಬೇಕು. ಹಾಗೂ 1993 ಮತ್ತು 1994ರ ನಡುವೆ ಕರ್ತವ್ಯ ನಿರ್ವಹಿಸಿದ ಮತ್ತು ಈ ರೀತಿ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.

 

ವಿಶೇಷ ಭೂಸ್ವಾಧೀನಾಧಿಕಾರಿ ಸಿ ನಾಗರಾಜು, ಸಿಬ್ಬಂದಿಯಾದ ಅನುರಾಧ ಅವರು ಕರ್ತವ್ಯಲೋಪವೆಸಗಿದ್ದರಿಂದಾಗಿ ಈ ಜಮೀನಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ವ್ಯಾಜ್ಯಗಳ ಮೇಲೆ ವ್ಯಾಜ್ಯಗಳಾಗಿ ಅಂತಿಮವಾಗಿ ಕರ್ನಾಟಕ ಗೃಹ ಮಂಡಳಿಯು 1,89,000 ರು. ಬದಲಿಗೆ 15,26,40,000 ರು. ಸಂದಾಯ ಮಾಡುವ ಸಂದಿಗ್ಧ ಪರಿಸ್ಥಿಯನ್ನುಂಟುಮಾಡಲು ಕಾರಣಿಕರ್ತರಾಗಿರುತ್ತಾರೆ. ಈ ಕಾರಣಗಳಿಂದ ಇವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು,’ ಎಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts