ಬೆಂಗಳೂರು; ‘ಬಸವೇಶ್ವರರು ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು, ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು,’ ಎಂಬ ಸಾಲುಗಳನ್ನು ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಿರುವ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯ ಅಪಕ್ವ ತಿಳಿವಳಿಕೆಯನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಪರವಾಗಿ ಡಾ ಮಹಾಂತಲಿಂಗ ಶಿವಚಾರ್ಯರು ವಿವಿಧ ಆಕರಗಳನ್ನಾಧರಿಸಿ ವಿಶ್ಲೇಷಿಸಿದ್ದಾರೆ.
ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಪರವಾಗಿ ಡಾ ಮಹಾಂತಲಿಂಗ ಶಿವಚಾರ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಜೂನ್ 5ರಂದು ಬರೆದಿರುವ ಪತ್ರದಲ್ಲಿ ಡಾ ಎಂ ಎಂ ಕಲ್ಬುರ್ಗಿ ಅವರ ಸಂಶೋಧನಾ ಗ್ರಂಥಗಳೂ ಸೇರಿದಂತೆ ಇನ್ನಿತರೆ ಸಂಶೋಧಕರ ಆಕರಗಳನ್ನು ಉಲ್ಲೇಖಿಸಿ ಸಮಿತಿಯು ಇತಿಹಾಸವಸನ್ನು ಅಧ್ಯಯನ ಮಾಡದೇ ಇರುವುದು ಮತ್ತು ಅವರಲ್ಲಿರುವ ಅಜ್ಞಾನವನ್ನೂ ಹೊರಗೆಳೆದಿದ್ದಾರೆ.
ಅಲ್ಲದೆ ನಿಜ ವೀರಶೈವ ಬಸವಣ್ಣನವರನ್ನು ಲಿಂಗಾಯತಕ್ಕೆ ರೂಪಾಂತರಗೊಳಿಸಬೇಕೆಂಬ ಹುಸಿಯನ್ನು ಸತ್ಯವೆಂದು ನಂಬಿಸುವ ಮೂಲಕ ಸಾಮಾನ್ಯ ಜನತೆಯನ್ನು ಏಕೆ ಗೊಂದಲಕ್ಕೀಡು ಮಾಡಬೇಕು ಎಂದೂ ಪ್ರಶ್ನಿಸಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರು ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಿದರು ಎಂಬುದು ಅಭಿವೃದ್ಧಿ ಶಬ್ದದ ಬದಲಾಗಿ ಪ್ರಚಾರ ಮಾಡಿದರು ಎಂಬ ಶಬ್ದವಿದ್ದರೆ ಅದು ಸರಿಯಾಗಿರುತ್ತಿತ್ತು. ಬಸವಣ್ಣನವರನ್ನು ವೀರಶೈವ ಧರ್ಮದೊಂದಿಗೆ ಸಮೀಕರಿಸಿರುವುದಕ್ಕೆ ನಮ್ಮ ಸಹಮತವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಧ್ಯಾನ ಸಾಧನೆ ಮಾಡಿದರು ಎಂಬುದು ಅರ್ಧ ಸತ್ಯ. ಏಕೆಂದರೆ ವೀರಶೈವವನ್ನು ಮೊಟಕುಗೊಳಿಸಿ ಬರೀ ಶೈವ ಎಂದು ಪರಿಷ್ಕರಿಸಿರುವುದೇ ಇತಿಹಾಸವನ್ನು ಅಧ್ಯಯನ ಮಾಡಿದಿಲ್ಲದಿರುವುದನ್ನು ಸಾಬೀತುಪಡಿಸುತ್ತದೆ ಎಂದು ಪತ್ರದಲ್ಲಿ ವಿಶ್ಲೇಷಿಸಿದ್ದಾರೆ.
‘ನಿರಾಕಾರವಾಗಿ ಮತ್ತು ಸ್ಪಷ್ಟತೆ ಇಲ್ಲದಂತೆ ಶೈವ ಗುರುಗಳು ಎಂಬುದಕ್ಕಿಂತ ಸಾರಂಗ ಮಠದ ಅಂದಿನ ಮಠಾಧಿಪತಿಗಳಾಗಿದ್ದ ಜಾತವೇದಮುನಿಗಳು ಬಸವಣ್ಣನವರಿಗೆ ಲಿಂಗದೀಕ್ಷೆ ಮಾಡಿದರು ಎಂದು ಇರಬೇಕಾಗಿತ್ತು. ಭಾರತದ ಸನಾತನ ಪರಂಪರೆಯ ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ಉಜ್ಜಯನಿ ಪೀಠದ ಶಾಖಾಮಠಕ್ಕೆ ಜಾದವೇದ ಮುನಿಗಳು ಊಪಾಚಾರ್ಯರಾಗಿದ್ದರು. ವಚನ ಸಾಹಿತ್ಯದ ಪಿತಾಮಹ ಫ.ಗು ಹಳಕಟ್ಟಿ ಅವರು ತಮ್ಮ ಪ್ರಕಟಿತ ಗ್ರಂಥದಲ್ಲಿ ಸಾರಂಗಮಠಗಳು ಉಜ್ಜಯನಿ ಪೀಠದ ಶಾಖಾ ಮಠಗಳು ಎಂಬುದನ್ನು ಪ್ರತಿಪಾದಿಸಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಲಿಂಗ ದೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಆಕರಗಳನ್ನು ಒದಗಿಸಿದ್ದಾರೆ. ‘ಲಿಂಗ ದೀಕ್ಷೆ ಸಂಸ್ಕಾರ ವೀರಶೈವ ಲಿಂಗಾಯತ ಧರ್ಮದಲ್ಲಿ ಅವಿಭಾಜ್ಯ ಅಂಗ. ಲಿಂಗಪೂಜೆ ಈ ಧರ್ಮದ ನಿತ್ಯ ಆಚಾರ. ಇಂದಿನ ಲಿಂಗಾಯತರು ತಮ್ಮ ಎದೆ ಮೇಲೆ ಧರಿಸುವ ಇಷ್ಟಲಿಂಗಗಳು ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಯಲ್ಲಿ ದೊರಕಿವೆ ಎಂದು ಭಾರತದ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾನಿರ್ದೇಶಕರಾಗಿದ್ದ ಸರ್ ಜಾನ್ ಮಾರ್ಷಲ್ ಅವರು ತಮ್ಮ ಮೊಹಂಜೋದಾರೋ ಇಂಡಸ್ ಸಿವಿಲೈಜೇಷನ್ ಗ್ರಂಥದ ಪುಟ ಸಂಖ್ಯೆ 49ರಲ್ಲಿ ದಾಖಲಿಸಿದ್ದಾರೆ. ಬಸವಣ್ಣನವರಿಗಿಂತಲೂ ಪೂರ್ವದಲ್ಲಿದ್ದ ಜೇಡರ ದಾಸಿಮಯ್ಯ, ಕೊಂಡಗುಳಿ ಕೇಶಿರಾಜ ಶಿವಶರಣರು ಲಿಂಗ, ಲಿಂಗಪೂಜೆ, ಲಿಂಗದೀಕ್ಷೆ ಕುರಿತು ತಮ್ಮ ವಚನಗಳಲ್ಲಿ ಉಲ್ಲೇಖ ಮಾಡಿದ್ದಾರೆ,’ ಎಂದು ಮಾಹಿತಿ ಒದಗಿಸಿದ್ದಾರೆ.
ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದನ್ನು ಮತಗಳನ್ನು ಸ್ಥಾಪಿಸಿದರು ಅಥವಾ ಪ್ರಚುರಪಡಿಸಿದರು ಎಂಬ ಕ್ರಿಯಾಪದಗಳಿಂದ ಗುರುತಿಸಿರುತ್ತಾರೆ. ಅಭಿವೃದ್ಧಿ ಶಬ್ದವನ್ನು ಬೇರೆ ಕ್ಷೇತ್ರ ಮತ್ತು ಬೇರೆಯದೇ ಚಟುವಟಿಕೆಗಳಿಗೆ ಅನ್ವಯಿಸಲಾಗುತ್ತದೆ. ಭಾಷಾ ಸಾಹಿತ್ಯದ ಯತಾರ್ಥ ಜ್ಞಾನದಿಂದ ಈ ಅಪಕ್ವ ತಿಳಿವಳಿಕೆಯನ್ನು ತಪ್ಪಿಸುವುದಕ್ಕೆ ಸಾಧ್ಯವಿತ್ತು ಎಂದೂ ಪತ್ರದಲ್ಲಿ ಹೇಳಿದ್ದಾರೆ.
ಬಸವಣ್ಣ ಬೋಧಿಸಿದ ತತ್ವವನ್ನು ಶಕ್ತಿವಿಶಿಷ್ಟಾದ್ವೈತ ಎನ್ನಲಾಗುತ್ತದೆ ಎಂಬುದಕ್ಕೆ ತಕರಾರು ಎತ್ತಿರುವ ಅವರು ‘ದ್ವೈತ, ಅದ್ವೈತ ಶಿಕ್ತಿ ವಿಶಿಷ್ಟಾದ್ವೈತ ದಂತಹ ಶಬ್ದ ಮತ್ತು ತತ್ವಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಗಳೇ ಸರಿ. ಅದಕ್ಕಿಂತ ಅವರು ತಮ್ಮ ವಚನಗಳ ಮೂಲಕ ಸಾರಿದ ಸಾಮಾಜಿಕ ಸಂದೇಶಗಳಿಗೆ ಸೀಮಿತವಾಗಿಸಿದ್ದರೆ ಸಾಕಿತ್ತು. ಬಸವಣ್ಣನವರು ಶಕ್ತಿ ವಿಶಿಷ್ಟಾದ್ವೈತವನ್ನು ಬೋಧಿಸಲಿಲ್ಲ. ಅದನ್ನು ಆಚರಿಸಿದರು ಎಂದಿರಬೇಕಿತ್ತು,’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಸವಣ್ಣನವರು ಉಪನಯನ ಆದ ನಂತರ ಕೂಡಲಸಂಗಮಕ್ಕೆ ನಡೆದರು ಎಂಬ ವಿಷಯವೂ ಸತ್ಯಕ್ಕೆ ದೂರವಾದದ್ದಾಗಿದೆ ಎಂದಿರುವ ಅವರು ‘ಬಸವಣ್ಣನವರಿಗೆ ಇನ್ನೇನು ಉಪನಯನ ಸಂಸ್ಕಾರ ನೀಡಬೇಕೆಂದುಮುಂದಾದಾಗ ತಮ್ಮ ಅಕ್ಕ ನಾಗಮ್ಮನಿಗೂ ಉಪನಯನ ಸಂಸ್ಕಾರ ನೀಡಬೇಕೆಂದು ಆಗ್ರಹಿಸಿದಾಗ ಸ್ತ್ರೀಯರಿಗೆ ಸಂಸ್ಕಾರವನ್ನು ಧಿಕ್ಕರಿಸಿ ಬಸವಣ್ಣನವರು ಕೂಡಲಸಂಗಮಕ್ಕೆ ನಡೆದರು ಎಂಬ ವಿಷಯವು ಎಲ್ಲಾ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದು ಸರ್ವವಿಧಿತ,’ ಎಂಬ ಮಾಹಿತಿ ನೀಡಿದ್ದಾರೆ.
ಪ್ರಚಾರದ ಬೆಳಕನ್ನು ಕಾಣದೇ ಸರ್ಕಾರಿ ಪ್ರಕಟಿತ ಗ್ರಂಥಗಳ ಕತ್ತಲೆಯಲ್ಲೇ ಹುದುಗಿ ಹೋಗಿರುವ ಪ್ರಖರ ಸತ್ಯವೊಂದರ ತಿಳಿವಳಿಕೆಯನ್ನು ಅತಿ ತುರ್ತಾಗಿ ಕರ್ನಾಟಕ ಸರ್ಕಾರ ಮಾಡಬೇಕು. ರಾಜಕಾರಣದ ಗರ್ಭದಿಂದ ಜನಿಸಿದ ವಿಚಾರ ಎಂದರೆ ಬಸವಣ್ಣನವರು ಲಿಂಗಾಯತ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು ಎಂಬ ಅಪಪ್ರಚಾರಕ್ಕೆ ಅಂತಿಮ ತೆರೆಯೆಳೆಯಬಹುದು ಎಂದೂ ಸಲಹೆ ನೀಡಿದ್ದಾರೆ.
ಡಾ ಎಂ ಎಂ ಕಲ್ಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಸಮಗ್ರ ವಚನ ಸಂಪುಟಗಳಲ್ಲಿರುವ ವಚನಗಳಲ್ಲಿ ಬಸವಣ್ಣ ಆದಿಯಾಗಿ 30 ಜನ ಶಿವಶರಣರು ತಮ್ಮ 142 ವಚನಗಳಲ್ಲಿ 221 ಬಾರಿ ವೀರಶೈವ ಪದ ಪ್ರಯೋಗ ಮಾಡಿದ್ದಾರೆ. ಕೇವಲ 8 ಜನ ಶರಣರು ತಮ್ಮ 10 ವಚನಗಳಲ್ಲಿ 12 ಬಾರಿ ಮಾತ್ರ ಲಿಂಗಾಯತ ಪದ ಪ್ರಯೋಗ ಮಾಡಿದ್ದಾರೆ. ಆದರೆ ಬಸವೇಶ್ವರರು ತಮ್ಮ ಯಾವ ಒಂದು ವಚನದಲ್ಲಿಯೂ ಲಿಂಗಾಯತ ಎಂಬ ಪದ ಪ್ರಯೋಗವನ್ನೇ ಮಾಡಿರುವುದಿಲ್ಲ ಎಂದು ವಿವರ ಒದಗಿಸಿದ್ದಾರೆ.
ಕೆಲವು ಜನರು ಬಸವಾದಿ ಶಿವಶರಣರ ಸಂಪೂರ್ಣ ವಚನ ಸಾಹಿತ್ಯವನ್ನು ಸರಿಯಾಗಿ ಅಧ್ಯಯನ ಮಾಡದೇ ಮತ್ತು ಪೂರ್ವಾಗ್ರಹ ಪೀಡಿತರಾಗಿ ತಾವು ಅಂದುಕೋಂಡ ಅಭಿಪ್ರಾಯವೇ ಬಸವಾದಿ ಶರಣರ ಅಭಿಪ್ರಾಯ ಎಂದು ಬಿಂಬಿಸಲಿಕ್ಕೆ ಅವರುಕೊಡುವ ಕಾರಣ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
‘ಸ್ವಯಂ ಬಸವೇಶ್ವರರೇ ತಮ್ಮ ವಚನದಲ್ಲಿ ಬರಿಯ ಶೈವನಾಗಿದ್ದ ನಾನು ನಿಜ ವೀರಶೈವನಾದೆ (ವಚನ ಸಂಖ್ಯೆ 1092) ಕರ್ನಾಟಕ ಸರ್ಕಾರ 2016ರಲ್ಲಿ ಪ್ರಕಟಿಸಿದ ಬೈಬಲ್ ಆವೃತ್ತಿ ಸಂಪೂರ್ಣ ವಚನ ಮತಿಥ ಸಾರಾಂಶ) ಎಂದು ಹೇಳಿದ್ದಾರೆ. ಒಟ್ಟಾರೆ ನಾಲ್ಕು ಆವೃತ್ತಿ (2021ರನ್ನೂ ಸೇರಿಸಿ) ಕಂಡ ವಚನ ಮಹಾಸಂಪುಟಗಳಲ್ಲಿಯೂ ಇದೇ ವಚನವಿದೆ. ಹಾಗೆಯೆ ಅತೀ ಮುಖ್ಯವಾದ ಚನ್ನಬಸವಣ್ಣನವರ ವಚನ ಸಂ;1190ರಲ್ಲಿ ಅವಿರಳಜ್ಞಾನಿ ಚನ್ನಬಸವಣ್ಣನವರು ಇದೊಂದೇ ವಚನದಲ್ಲಿ ಎರಡು ಸಲ ವೀರಶೈವ ಶಬ್ದ ಪ್ರಯೋಗ ಮಾಡಿದ್ದಾರೆ,’ ಎಂಬ ಮಾಹಿತಿ ಒದಗಿಸಿದ್ದಾರೆ.