Wednesday | August 19, 2026 |

ದ್ವಿತೀಯ ಪಿಯು ಇತಿಹಾಸ ಪಠ್ಯ ಪರಿಷ್ಕರಣೆಗೆ ಸರ್ಕಾರದ ಆದೇಶವೇ ಇಲ್ಲ; ಟಿಪ್ಪಣಿಯು ಸರ್ಕಾರಿ ಆದೇಶವೇ?

ಬೆಂಗಳೂರು; ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ ಮತ್ತು ಭಾಷಾ ವಿಷಯಗಳ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸರ್ಕಾರವು ಆದೇಶ ಹೊರಡಿಸಿದ್ದರೇ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4.2ರಲ್ಲಿನ ಹೊಸ ಧರ್ಮಗಳ ಉದಯ ಪಠ್ಯಭಾಗವನ್ನು ಪರಿಷ್ಕರಿಸಲು ಯಾವುದೇ ಆದೇಶ ಹೊರಡಿಸದೆಯೇ ಇದೇ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಗೆ ವಹಿಸಿರುವುದು ಇದೀಗ ಬಹಿರಂಗವಾಗಿದೆ.

 

ಯಾವುದೇ ಆದೇಶವಿಲ್ಲದೆಯೇ ಕೇವಲ ಸಚಿವರ ಟಿಪ್ಪಣಿ ಆಧರಿಸಿ ಪರಿಷ್ಕರಿಸಿರುವುದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಈಗಾಗಲೇ ಪರಿಷ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈ ಸಮಿತಿಯು ಪರಿಷ್ಕರಿಸಿರುವ ಪಠ್ಯ ಪುಸ್ತಕ ಮುದ್ರಣ ಮಾಡಲು ಅನುಮತಿ ನೀಡುವ ಸಂಬಂಧ ಏಕಕಡತವನ್ನು ಪಿಯು ಮಂಡಳಿಗೆ ಕಳಿಸಿದೆ ಎಂದು ಗೊತ್ತಾಗಿದೆ.

 

ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧದ ಕಡತವನ್ನು ಶರವೇಗದಲ್ಲಿ ಪಿಯು ಮಂಡಳಿಗೆ ರವಾನಿಸಿದೆ ಎಂದು ತಿಳಿದು ಬಂದಿದೆ.

 

ಜುಲೈನಿಂದ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿದ್ದು ಅಷ್ಟರೊಳಗೆ ಪರಿಷ್ಕೃತ ಪಠ್ಯಕ್ಕೆ ಅನುಮತಿ ದೊರೆತರೆ ಮುದ್ರಣದ ಕುರಿತು ತೀರ್ಮಾನ ಕೈಗೊಳ್ಳಬಹುದು. ಈ ಅವಧಿಯೊಳಗೆ ಯಾವುದೇ ತೀರ್ಮಾನ ಕೈಗೊಳ್ಳದಿದ್ದರೆ ಚಾಲ್ತಿಯಲ್ಲಿರುವ ಪಠ್ಯವನ್ನೇ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದರು.

 

ಟಿಪ್ಪಣಿಯಲ್ಲೇನಿತ್ತು?

 

ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಭಾರತದ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖದೊಂದಿಗೆ) ಪಠ್ಯಪುಸ್ತಕದ 4.2ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯಭಾಗದಲ್ಲಿ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯವಿರುವ ಬಗ್ಗೆ ದೂರು ಬಂದಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಮಾಜ ಅಧ್ಯಯನ ಪಠ್ಯಪುಸ್ತಕದ ಪರಿಶೀಲನೆಗಾಗಿ ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರಚನೆಯಾಗಿರುತ್ತದೆ. ದ್ವಿತೀಯ ಪಿಯುನ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸಲು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲು ಹಾಗೂ ಈ ಪರಿಷ್ಕೃತ ಪಠ್ಯಪುಸ್ತಕವನ್ನು 2022-23ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು,’ ಎಂದು ಸಚಿವ ಬಿ ಸಿ ನಾಗೇಶ್‌ ಅವರು ಟಿಪ್ಪಣಿಯಲ್ಲಿ ಸೂಚಿಸಿದ್ದರು.

 

ಸಚಿವ ಬಿ ಸಿ ನಾಗೇಶ್‌ ಹೊರಡಿಸಿರುವ ಟಿಪ್ಪಣಿ ಪ್ರತಿ

 

ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಸಂಬಂಧ ಅಂದು ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವರು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಟಿಪ್ಪಣಿ ಹಾಳೆಯಲ್ಲಿಯೇ ಸೂಚಿಸಿದ್ದರು. ಈ ಟಿಪ್ಪಣಿಯನ್ನಾಧರಿಸಿ ಸಚಿವ ಬಿ ಸಿ ನಾಗೇಶ್‌ ಅವರು ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಅನುಮೋದನೆ ನೀಡಿದ್ದರು. ಆ ನಂತರ ಈ ಸಂಬಂಧ ಸರ್ಕಾರದ ಆದೇಶವೂ ಪ್ರಕಟವಾಗಿತ್ತು.

 

ಆದರೆ ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಷ್ಕರಿಸಲು ಸರ್ಕಾರವು ಯಾವುದೇ ಆದೇಶ ಹೊರಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಸಚಿವರ ಟಿಪ್ಪಣಿ ಮೇಲೆ ಸರ್ಕಾರದ ಆದೇಶವು ಪ್ರಕಟವಾಗಬೇಕು. ಆಗಷ್ಟೇ ಅದಕ್ಕೆ ಮಾನ್ಯತೆ ದೊರೆತಂತೆ. ಹಾಗೆಯೇ ಸಚಿವರ ಟಿಪ್ಪಣಿಯು ಎಂದಿಗೂ ಸರ್ಕಾರದ ಆದೇಶವಲ್ಲ. ಹೀಗಿದ್ದರೂ ಸರ್ಕಾರದ ಆದೇಶವಿಲ್ಲದೆಯೇ ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ಸೂಚಿಸಿರುವುದು ‘ಅನಧಿಕೃತ’ವಾಗುತ್ತದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು.

 

ಸಚಿವ ಬಿ ಸಿ ನಾಗೇಶ್‌ ಅವರು ಟಿಪ್ಪಣಿಯಲ್ಲಿ ನೀಡಿರುವ ಸೂಚನೆ ಮೇರೆಗೆ ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರು ‘ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದರಿಂದ ಅದರಂತೆ ಪರಿಶೀಲಿಸಿ ಹಂತ ಹಂತವಾಗಿ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆ ಮಾಡಬಹುದು,; ಎಂದು ಪ್ರಸ್ತಾಪಿಸಿದ್ದರು. ಅಲ್ಲದೆ ಸಚಿವರು ಹೊರಡಿಸಿದ್ದ ಅದೇ ಟಿಪ್ಪಣಿಯಲ್ಲಿ ಸೂಚಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದೂ ಉಲ್ಲೇಖಿಸಿದ್ದರು ಎಂದು ಗೊತ್ತಾಗಿದೆ.

 

4.2 ಅಧ್ಯಾಯದಲ್ಲೇನಿದೆ?

 

ಪಠ್ಯಪುಸ್ತಕದ 4.2 ಅಧ್ಯಾಯದಲ್ಲಿ ಹೊಸ ಧರ್ಮಗಳ ಉದಯ-ಜೈನ ಧರ್ಮ ಮತ್ತು ಬೌದ್ಧ ಧರ್ಮ ಎಂಬ ಪಾಠಾಂಶವಿತ್ತು. ವೈದಿಕ ಧರ್ಮದಲ್ಲಿನ ಗೊಂದಲಗಳು, ಪುರೋಹಿತ ವರ್ಗದ ಪರಮಾಧಿಕಾರ, ಪ್ರಾಣಿಬಲಿ, ಮಂತ್ರಗಳ ಪಠಣ, ಜಾತಿಪದ್ಧತಿ, ಮಹಾನ್‌ ವ್ಯಕ್ತಿಗಳ ಜನನವು ಹೊಸ ಧರ್ಮಗಳ ಉದಯಕ್ಕೆ ಕಾರಣವಾದವು ಎಂಬ ಅಂಶವಿದೆ.

 

‘ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸಧರ್ಮಗಳಲ್ಲಿ ಕಂಡುಕೊಂಡರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನುಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

 

ಪ್ರಾಣಿ ಬಲಿ, ಶಾಸ್ತ್ರ ವಿಧಿಗಳೊಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು.ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು. ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.

 

ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು. ಜಾತಿ ಪದ್ಧತಿಯು ಸಾಮಾಜಿಕ ವ್ಯವಸ್ಥೆಯ ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಬೇಧಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.

 

ಜನರು ಅಸಂತುಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧನಂತಹ ಇಬ್ಬರು ಮಹಾನ್‌ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು ಎಂಬ ಸಾಲುಗಳಿವೆ.

Hot this week

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಹಿಂದುಳಿದ ಸಮುದಾಯ ಅಭಿವೃದ್ಧಿ ನಿಗಮಗಳಿಗೆ 473.41 ಕೋಟಿ ಅನುದಾನ ಹಂಚಿಕೆ; ನಾಲ್ಕೂವರೆ ತಿಂಗಳಾದರೂ ನಯಾಪೈಸೆಯೂ ಬಿಡುಗಡೆಯಾಗಿಲ್ಲ

ಬೆಂಗಳೂರು; ಆರ್ಥಿಕ ವರ್ಷ ಆರಂಭವಾಗಿ ನಾಲ್ಕೂವರೆ ತಿಂಗಳಾದರೂ ಸಹ ಹಿಂದುಳಿದ ವರ್ಗಗಳ...
Please Scan to make Your Contribution

Topics

30,01,169 ರೈತರಿಂದ 25,180.77 ಕೋಟಿ ಹೊರಬಾಕಿ; ರೈತರ ಸಾಲ ಮನ್ನಾ ಪ್ರಸ್ತಾವವಿಲ್ಲ, ರೈತರ ಕೆಂಗಣ್ಣಿಗೆ ಗುರಿಯಾಗಲಿದೆಯೇ ಸರ್ಕಾರ?

ಬೆಂಗಳೂರು; ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ...

ಇ-ಆಫೀಸ್‌ ತಂತ್ರಾಂಶದಲ್ಲೇ ಬೆಟ್ಟದಷ್ಟು ಬೆಳೆದು ನಿಂತ ಕಡತಗಳ ರಾಶಿ; ಗರಿಷ್ಠ 3,187, ಕನಿಷ್ಟ 32 ದಿನಗಳಾದರೂ ವಿಲೇವಾರಿಯಾಗಿಲ್ಲ, ಜಡ್ಡುಗಟ್ಟಿದೆಯೇ ಆಡಳಿತ?

ಬೆಂಗಳೂರು;   ಭೌತಿಕ ಕಡತಗಳ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಇ-ಆಫೀಸ್‌...

ಫ್ರೀಡಂ ಹಬ್ಬಕ್ಕೆ 6 ಕೋಟಿ ವೆಚ್ಚ!; ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಕೆಲಸ ಆರಂಭಿಸಿದ ಕಂಪನಿ

ಬೆಂಗಳೂರು; ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಅನುಮೋದಿತ ಕಾಮಗಾರಿಗಳ ಕಾರ್ಯಭಾರಕ್ಕೆ ನಲುಗಿ...

3,206 ಪಂಚಾಯ್ತಿಗಳಲ್ಲಿ ಶಾಸನಬದ್ಧ ತೆರಿಗೆ ವಸೂಲು; ಸರ್ಕಾರಕ್ಕೆ ಪಾವತಿಯಾಗದ 17.28 ಕೋಟಿ ಎಲ್ಲಿದೆ?

ಬೆಂಗಳೂರು; ರಾಜ್ಯದ 27 ಜಿಲ್ಲೆಗಳ 3,206 ಪಂಚಾಯ್ತಿಗಳು ಸರಕು ಸೇವಾ ತೆರಿಗೆ,...

Related Articles

Popular Categories

error: Content is protected !!