ಸಿರಿಗೆರೆಗೆ ಪ್ರವೇಶಿಸದಂತೆ ಪಂಡಿತಾರಾಧ್ಯರಿಗೆ ನಿರ್ಬಂಧ!; ತರಳಬಾಳು ಮಠದಲ್ಲಿ ಉಸಿರುಕಟ್ಟುವ ವಾತಾವರಣವೇ?

photo credit;vijayakarnataka

ಬೆಂಗಳೂರು; ನಾಡಿನಲ್ಲಿ ನಡೆಯುತ್ತಿರುವ ಅನೇಕ ಪ್ರಗತಿಪರ ಚಳವಳಿ, ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳಿಗೆ ಸಿರಿಗೆರೆಯಲ್ಲಿರುವ ತರಳಬಾಳು ಮಠಕ್ಕೆ ಬಾರದಂತೆ ಕಟ್ಟಪ್ಪಣೆ ಮಾಡಿಸಲಾಗಿತ್ತು ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.

 

ಸಾಣೆಹಳ್ಳಿ ಪಂಡಿತಾರಾಧ್ಯರು 2022ರ ಮೇ 26ರಂದು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಈ ಅಂಶವು ಪ್ರಸ್ತಾಪವಾಗಿದೆ. ಪಂಡಿತಾರಾಧ್ಯರು ಬರೆದಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸಿರಿಗೆರೆಗೆ ಬರಬಾರದು ಎಂದು ನಮಗೆ ಕಟ್ಟಪ್ಪಣೆ ಮಾಡಿಸಿದ್ದರ ಹಿಂದಿನ ಕರಾಮತ್ತೇನು, ಈಗ ಮಾತು ಮಾತಿಗೂ ಶ್ರೀ ಹಿರಿಯ ಜಗದ್ಗುರುಗಳ ಸಂದೇಶವೇ ನಮಗೆ ಸಂವಿಧಾನ ಎನ್ನುವವರು ಪೂಜ್ಯರ ಸಂದೇಶವನ್ನು ಎಷ್ಟರಮಟ್ಟಿಗೆ ಪಾಲಿಸಿದ್ದಾರೆ ಎಂದು ಅತ್ಮಾವಲೋಕನ ಮಾಡಿಕೊಳ್ಳಲಿ,’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

 

ಅಲ್ಲದೆ ವಾಟ್ಸಾಪ್‌, ಈ ಮೇಲ್‌ ಕೂಡ ಮಾಡಬಾರದು ಎಂಬ ಸೂಚನೆಯನ್ನೂ ಪಂಡಿತಾರಾಧ್ಯರಿಗೆ ನೀಡಲಾಗಿತ್ತು ಎಂಬ ಅಂಶವೂ ತಿಳಿದು ಬಂದಿದೆ. ‘2021ರ ನವೆಂಬರ್‌ನಲ್ಲಿ ಕೆಲವರನ್ನು ನಮ್ಮ ಬಳಿ ಕಳಿಸಿ ಯಾವ ಕಾರಣಕ್ಕೂ ವಾಟ್ಸ್‌ಪ್‌ ಮಾಡಬಾರದು, ಈ ಮೇಲ್‌ಮಾಡಬಾರದು,’ ಎಂದು ಸೂಚಿಸಿದ್ದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

 

ಸಿರಿಗೆರೆ ತರಳಬಾಳು ಜಗದ್ಗುರು ಮಠದಲ್ಲಿ ನಡೆದಿದೆ ಎನ್ನಲಾದ ಹಣದ ವ್ಯವಹಾರ, ಜಮೀನು ಖರೀದಿ, ಟ್ರಸ್ಟ್‌ ಡೀಡ್‌, ನಿಧಿ ಸಂಗ್ರಹ, ಬಡ್ಡಿ ಹಣ, ಲೇವಾದೇವಿ ವ್ಯವಹಾರ,ಸದ್ಧರ್ಮ ನ್ಯಾಯಪೀಠದಲ್ಲಿ ಮಾಡಿದ ಪಂಚಾಯ್ತಿ ಮತ್ತು ಅಲ್ಲಿ ನಡೆದಿವೆ ಎನ್ನಲಾದ ಹಣಕಾಸಿನ ಲೇವಾದೇವಿಗಳ ಕುರಿತಾಗಿ ಬರೆದಿದ್ದ ಪತ್ರದಲ್ಲಿಯೇ ಸಿರಿಗೆರೆಗೆ ಬಾರದಂತೆ ಕಟ್ಟಪ್ಪಣೆ ಮಾಡಲಾಗಿತ್ತು ಎಂಬ ಅಂಶವನ್ನು ಉಲ್ಲೇಖಿಸಿರುವುದು ಮುನ್ನೆಲೆಗೆ ಬಂದಿದೆ.

ಸಿರಿಗೆರೆ ಶ್ರೀಗಳ ವಿರುದ್ಧ ಪಂಡಿತಾರಾಧ್ಯರ ಕಿಡಿ; ಜಮೀನು ಖರೀದಿ, ಬಡ್ಡಿಹಣ, ಲೇವಾದೇವಿ ಕುರಿತಾದ ಪತ್ರ ಬಹಿರಂಗ

ಇದಷ್ಟೇ ಅಲ್ಲ ‘ನಮಗೂ ಸಹಿಸಿಕೊಂಡು ಸಾಕಾಗಿದೆ. ಹಾಗಾಗಿ 2021ರ ನವೆಂಬರ್‌ 19ರಂದು ಸಿರಿಗೆರೆಯಲ್ಲಿ ಕರೆದಿರುವ ಸಭೆಗೆ ಬಂದು ಅಲ್ಲೇನಾದರೂ ನಮ್ಮ ವಿಚಾರ ಬಂದರೆ ಎಲ್ಲವನ್ನೂ ಮುಕ್ತವಾಗಿ ಭಕ್ತರೆದರು ಹೇಳಬೇಕೆಂದಿದ್ದೇವೆ. ಮಠದ ವ್ಯವಹಾರದಲ್ಲಿ ನಾವು ತಪ್ಪು ಮಾಡಿದ್ದರೆ ಅದನ್ನು ಖುದ್ದಾಗಿ ಹೇಳುವ ಹಕ್ಕು ತಮಗಿದ್ದರೂ ತಾವು ಹಾಗೇ ಮಾಡದೇ ಸಾರ್ವಜನಿಕರೆದರು ಹೇಳುವುದು ಏನು ತೋರಿಸುತ್ತದೆ,’ ಎಂದು ಪ್ರಶ್ನಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಸಿರಿಗೆರೆಯ ಗ್ರಾಮದ ಕೆಲವರು ಸಭೆ ಮಾಡಿ ನಮ್ಮ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ತಾವು ಅವರ ಜೊತೆ ಫೋನ್‌ನಲ್ಲೇ ಮಾತನಾಡಿದ್ದೀರಿ. ಅವರೆಲ್ಲ ಸಾಣೇಹಳ್ಳಿಯ ಸಭೆಗೆ ಬಂದು ಪ್ರಶ್ನೆ ಕೇಳಬೇಕು ಎಂದು ನಿರ್ಣಯಿಸಿದ್ದರಂತೆ. ನಂತರ ಅದು ಬದಲಾಗಿ ಸಿರಿಗೆರೆಗೆ ಬಂದಾಗ ಗೇಟಿಗೆ ಬೀಗ ಹಾಕಿ ಹೊರಗಡೆಯೇ ತಡೆದು ಪ್ರಶ್ನೆ ಮಾಡಬೇಕು ಎಂದು ಕೆಲವರು ಮಾತನಾಡಿಕೊಂಡಿದ್ದರು ಎಂಬ ಸಂಗತಿಯನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

‘ಈ ವಿಚಾರ ಜನಜನಿತವಾಗಿ ಹಲವರು ತಾವು ಸಿರಿಗೆರೆಗೆ ಹೋಗುವುದಾದರೆ ನಾವೂ ಬರುತ್ತೇವೆ ಎಂದು ಫೋನ್‌ ಮಾಡಿದ್ದರು. ನಾವು ಅದೆಲ್ಲ ಸುಳ್ಳು ಸುದ್ದಿ. ಹಾಗೇನೂ ಅಗುವುದಿಲ್ಲ ಎಂದು ಅವರನ್ನು ಸಮಾಧಾನ ಮಾಡಿದರೂ ಕೆಲವರು ಉದ್ವಿಗ್ನತೆಗೆ ಒಳಗಾಗಿ ಕಣ್ಣೀರು ಸುರಿಸಿದರು. ಅಂಥ ಕಹಿ ಘಟನೆ ನಡೆದರೆ ಅದು ಮರುಳಸಿದ್ಧರ ಹಾಗೂ ಹಿರಿಯ ಗುರುಗಳ ಆಶೀರ್ವಾದ ಎಂದು ಭಾವಿಸುತ್ತೇವೆ. ಯಾರೂ ನಮ್ಮ ಜತೆ ಬರುವುದು ಬೇಡ ಎಂದು ಸಮಾಧಾನ ಮಾಡಿದ್ದಾಯ್ತು,’ ಎಂದು ವಿವರಿಸಿದ್ದಾರೆ.

 

‘ಯಾಕೆ ಇಂಥ ಅಭಿಪ್ರಾಯ ಬಂತು, ನಾವು ಸಿರಿಗೆರೆಗೆ 2021ರ ನವೆಂಬರ್‌ 9ರಂದು ಬಂದಾಗ ಅದೇನೂ ನಡೆಯಲಿಲ್ಲ. ಆದರೆ ನಾಲ್ಕಾರು ಜನರು ಬಂದು ರೂಮಿನಲ್ಲೇ ಪ್ರಶ್ನೆ ಮಾಡುತ್ತಾರೆ ಎನ್ನುವ ಸುದ್ದಿಯೂ ಬಂತು. ಪಂಚಾಕ್ಷರಿ ಮಾತ್ರ ನಮ್ಮ ರೂಮಿನ ಬಳಿ ಬಂದಿದ್ದ. ಆಧರೆ ಅತ ನಮ್ಮನ್ನು ಕಾಣದೇ ವಾಪಾಸ್‌ ಹೋಗಿದ್ದಾನೆ. ಹೀಗೆ ಹೇಳುತ್ತ ಹೋದರೆ ಅದಕ್ಕೆ ಮುಕ್ತಾಯವೇ ಇಲ್ಲ,’ ಎಂದೂ ಪತ್ರದಲ್ಲಿ ಹೇಳಿದ್ದಾರೆ.

 

ಅಧಿಕಾರದ ಬಗ್ಗೆ ಪ್ಯಾರಾ ನಂ 16ರಲ್ಲಿ ಪ್ರಸ್ತಾಪಿಸಿರುವ ಪಂಡಿತಾರಾಧ್ಯರು ‘ಮಲ್ಲಿಕಾರ್ಜುನ ಶ್ರಿಗಳವರು ಲಿಂಗೈಕ್ಯರಾದ ತಕ್ಷಣವೇ ತಮ್ಮನ್ನು ಉಪಾಧ್ಯಕ್ಷರನ್ನಾಗಿ ಮಾಡಲಿಲ್ಲವೆಂದು ಆಕ್ಷೇಪಿಸಿ ಸಾಣೇಹಳ್ಳಿಯ ಶ್ರೀಗಳವರು ಸಂಸ್ಥೆಯ ಕಾರ್ಯಕಾರಿ ಸಮಿತಿಯ ನಡಾವಳಿಕೆಗಳ ಪುಸ್ತಕಕ್ಕೆ ಸಹಿಯನ್ನೇ ಮಾಡಲಿಲ್ಲ, ನಂತರ ಸಹಿ ಮಾಡಿದರು ಎಂದು ಬರೆಸಿರುವದು ಹಸಿಹಸಿ ಸುಳ್ಳೆಂದು ಶ್ರೀ ಜಗದ್ಗುರುಗಳ ಅಂತರಾತ್ಮಕ್ಕೆ ಗೊತ್ತಿದೆ. ಆದರೂ ಹೀಗೆ ಸುಳ್ಳು ಆರೋಪೊ ಮಾಡುವಲ್ಲಿ ಅವರ ಉದ್ದೇಶ ಏನಿದೆ ಎನ್ನುವುದನ್ನು ಭಕ್ತರೇ ಅರ್ಥ ಮಾಡಿಕೊಳ್ಳಬೇಕು. ನಮಗೆ ಯಾವ ಅಧಿಕಾರದ ಹಪಾಹಪಿ ಆಗಲೂ ಇರಲಿಲ್ಲ, ಈಗಲೂ ಇಲ್ಲ,ಮುಂದೆಯೂ ಇರುವುದಿಲ್ಲ,’ ಎಂದು ವಿವರಿಸಿದ್ದಾರೆ.

 

‘ನಾವು ಹಾಜರಿದ್ದ ಸಭೆಗೆ ಮಾತ್ರ ಸಹಿ ಮಾಡುತ್ತೇವೆ. ಕಾರಣಾಂತರಗಳಿಂದ ಸಭೆಗೆ ಹೋಗದಿದ್ದರೆ ಹಿಂದಿನಿಂದ ಸಹಿ ಮಾಡುವ ಪದ್ಧತಿ ನಮಗಿಲ್ಲ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸ್ಥಾನದಿಂದ ನಮ್ಮನ್ನು ತೆಗೆದಾಗಲೂ ನಾವು ಪ್ರಶ್ನೆ ಮಾಡಿಲ್ಲ. ಈಗಲೂ ಉಪಾಧ್ಯಕ್ಷ ಸ್ಥಾನದಿಂದ ಏಕೆ ತೆಗೆದಿದ್ದೀರೆಂದು ಪ್ರಶ್ನಿಸುವುದಿಲ್ಲ. ಆದರೆ ಸರ್ವ ಸದಸ್ಯರ ಸಭೆ ನಂತರ ಆಡಳಿತ ಸಮಿತಿಯಲ್ಲಿ ಬದಲಾವಣೆ ಮಾಡುವುದು ನಿಯಮ. ಸರ್ವಸದಸ್ಯರ ಸಭೆ ಮಾಡದೇ ನಿಯಮ ಉಲ್ಲಂಘಿಸಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿರುವುದು ಏನನ್ನು ತೋರಿಸುತ್ತದೆ ಎಂದು ಜನರೇ ಅರ್ಥ ಮಾಡಿಕೊಂಡಿದ್ದಾರೆ,’ ಎಂದು ಪತ್ರದಲ್ಲಿ ಹೇಳಿದ್ದಾರೆ.

 

ಪ್ಯಾರಾ ನಂಬರ್‌ 18ರಲ್ಲಿ ‘ನಮ್ಮ ಮಠಗಳೆಲ್ಲಾ ಏಕಾಡಳಿತಕ್ಕೆ ಬಂದಿರುವುದನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗಬೇಕು ಎಂದು ಹಿರಿಯ ಗುರುಗಳ ಸಂದೇಶದ ನುಡಿಗಳನ್ನು ಪ್ರಸ್ತಾಪಿಸಿದ್ದಾರೆ. ಹಿರಿಯ ಗುರುಗಳ ಈ ಸಂದೇಶವನ್ನು ಮುರಿಯುವ ಪ್ರಯತ್ನ ಮಾಡುತ್ತಿರುವವರು ಯಾರು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

the fil favicon

SUPPORT THE FILE

Latest News

Related Posts