ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು, ನೋಂದಾಯಿತ ಸಂಸ್ಥೆಯಲ್ಲವೆಂದ ಕಾನೂನು ಇಲಾಖೆ

ಬೆಂಗಳೂರು; ರಾಜ್ಯದ ವಿವಿಧೆಡೆ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್‌ ನೋಂದಾಯಿತ ಸಂಸ್ಥೆಯಾಗಿರುವುದಿಲ್ಲ ಎಂದು ಕಾನೂನು ಇಲಾಖೆ ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿಯಲ್ಲಿ 9-32 ಎಕರೆ ಗೋಮಾಳ ಮಂಜೂರಾತಿ ಸಂಬಂಧ ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದಲ್ಲಿ ಈ ಅಂಶವಿದೆ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೋತ್ಥಾನ ಪರಿಷತ್‌ ಕೂಡ ತನ್ನ ದಾಖಲಾತಿಗಳನ್ನು ಇಲಾಖೆಗೆ ಸಲ್ಲಿಸಿದ್ದು, ಇದರಲ್ಲಿ ಸಂಸ್ಥೆಯು ನೋಂದಾಯಿತ ಎಂದು ಪ್ರಮಾಣ ಪತ್ರ ಸಲ್ಲಿಸಿದೆ.

 

ಹುರುಳಿಚಿಕ್ಕನಹಳ್ಳಿ ಯಲ್ಲಿ 9-32 ಎಕರೆ ಗೋಮಾಳ ಮಂಜೂರಾತಿಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದಲ್ಲಿ ‘ಪ್ರಸ್ತಾಪಿತ ಜಮೀನನ್ನು ಮಂಜೂರು ಮಾಡಲು ಕೋರಿರುವ ಉದ್ದೇಶವು ಶೈಕ್ಷಣಿಕ ಉದ್ದೇಶವಾಗಿದ್ದರೂ ಸಹ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ಒಂದು ಖಾಸಗಿ ಸಂಸ್ಥೆಯಾಗಿದ್ದು ಸದರಿ ಸಂಸ್ಥೆಯು ನೋಂದಾಯಿತ ಸಂಸ್ಥೆಯಾಗಿರುವುದಿಲ್ಲ ಎಂದು ಹೇಳಿದೆ. ಈ ಟಿಪ್ಪಣಿ ಹಾಳೆಗೆ ಕಾನೂನು ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ನರಹರಿ ಪ್ರಭಾಕರ ಮರಾಠೆ ಮತ್ತು ಕಾನೂನು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೂ ಅನುಮೋದಿಸಿದ್ದಾರೆ.

 

ಕಾನೂನು ಇಲಾಖೆಯ ಅಪರ ಕಾರ್ಯದರ್ಶಿ ನೀಡಿರುವ ಅಭಿಪ್ರಾಯದ ಪ್ರತಿ

 

ಆದರೆ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ನೋಂದಾಯಿತ ಸಂಸ್ಥೆ ಎಂದು (ನಂ 155, 1964-65 ದಿನಾಂಕ 27.02.1965) ಪ್ರಮಾಣ ಪತ್ರ ಸಲ್ಲಿಸಿದೆ. ಕಾನೂನು ಇಲಾಖೆಯ ಸರ್ಕಾರದ ಅಪರ ಕಾರ್ಯದರ್ಶಿ ನರಹರಿ ಪ್ರಭಾಕರ್‌ ಮರಾಠೆ ಅವರು ನೀಡಿರುವ ಅಭಿಪ್ರಾಯದ ಪ್ರಕಾರ ರಾಷ್ಟ್ರೋತ್ಥಾನ ಪರಿಷತ್‌ ನೋಂದಾಯಿತ ಸಂಸ್ಥೆಯಾಗಿರುವುದಿಲ್ಲ. ಆದರೆ  ರಾಷ್ಟ್ರೋತ್ಥಾನ ಪರಿಷತ್‌ ತಮ್ಮದು ನೋಂದಣಿಯಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿರುವುದು ಗೊಂದಲಕ್ಕೆ ದಾರಿಮಾಡಿಕೊಟ್ಟಿದೆ.

 

ಬಹುಕೋಟಿ ಮೌಲ್ಯದ ಜಮೀನನ್ನು ಮಾರುಕಟ್ಟೆ ಬೆಲೆಯ ಶೇ.25ರಷ್ಟು ದರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಸಂಬಂಧ ಆಡಳಿತ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಕಾನೂನು ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳೂ ಆಡಳಿತ ಇಲಾಖೆ ಸಲ್ಲಿಸಿದ್ದ ದಾಖಲಾತಿಗಳನ್ನು ಪರಿಶೀಲಿಸಿದ ನಂತರವೇ ಅಭಿಪ್ರಾಯ ನೀಡಿದ್ದಾರೆ.
ಈ ಹಂತದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ ಸಂಸ್ಥೆಯು ನೋಂದಾಯಿತವಾಗಿದೆ ಎಂಬ ಪ್ರಮಾಣ ಪತ್ರವನ್ನು ಆಡಳಿತ ಇಲಾಖೆಯು ಕಡತದಲ್ಲಿ ಇರಿಸಲಿಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ. ಒಂದೊಮ್ಮೆ ನೋಂದಾಯಿತ ಪ್ರಮಾಣಪತ್ರವನ್ನು ಇರಿಸಿದ್ದರೂ ಸಹ ಸಂಸ್ಥೆಯು ನೋಂದಾಯಿತವಾಗಿಲ್ಲ ಎಂದು ಹೇಗೆ ಅಭಿಪ್ರಾಯಿಸಿದರು ಎಂಬುದು ಕೂಡ ಪ್ರಶ್ನಾರ್ಹ.

 

ಗೋಮಾಳ ಮಂಜೂರಾತಿ ಮಾಡಿಸಿಕೊಳ್ಳಲು ಈ ಸಂಸ್ಥೆಯು 80 ಜಿ, 12 ಎ ಪ್ರಮಾಣ ಪತ್ರವನ್ನು ಹೊಂದಿದೆ ಎಂದು ನೋಂದಾಯಿತ ಪ್ರಮಾಣಪತ್ರವನ್ನು ಸಲ್ಲಿಸಿರುವುದು ಕಡತದಿಂದ ತಿಳಿದು ಬಂದಿದೆ.
ಜಿಲ್ಲಾಧಿಕಾರಿಯವರ ವರದಿಯನ್ನು ಪರಿಶೀಲಿಸಲಾಗಿ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿ ಹುರಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ 69ರ ಜಮೀನು ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿರುವುದು ಕಂಡು ಬರುತ್ತದೆ. ಈ ಜಮೀನು ಗೋಮಾಳ ಜಮೀನಾಗಿರುವುದರಿಂದ ಕರ್ನಾಟಕ ಭೂ ಕಂದಾಯ ನಿಯಮ 1966ರ ನಿಯಮ 97ನ್ನು ಗಮನಿಸಬೇಕಾಗುತ್ತದೆ.

 

ಕರ್ನಾಟಕ ಭೂ ಕಂದಾಯ ನಿಯಮ 1966ರ ನಿಯಮ 97ರ ಅನ್ವಯ ಗ್ರಾಮದಲ್ಲಿಯ ಪ್ರತಿ ನೂರು ಜಾನುವಾರುಗಳಿಗೆ 12 ಹೆಕ್ಟೇರ್‌ ಪ್ರದೇಶಗಳಂತೆ ಗೋಮಾಳ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಆಡಳಿತ ಇಲಾಖೆಯ ಪರಿಶೀಲನೆಯಿಂದ ಮೇಲೆ ನಿಗದಿಪಡಿಸಿದ ಪ್ರದೇಶಕ್ಕಿಂತಲೂ ಕಡಿಮೆ ಪ್ರದೇಶವಿರುವುದು ಕಂಡು ಬರುತ್ತದೆ. ಗೋಮಾಳ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಅಥವಾ ಗುತ್ತಿಗೆ ನೀಡಲು ಉದ್ದೇಶಿಸಿದಲ್ಲಿ ಮೊದಲು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಬೇಕಾಗುತ್ತದೆ. ಗೋಮಾಳ ಶೀರ್ಷಿಕೆಯಿಂದ ತಗ್ಗಿಸದೇ ಜಮೀನನ್ನು ಅನ್ಯ ಉದ್ಧೇಶಕ್ಕೆ ಬಳಸಲು ಅವಕಾಶವಿರುವುದಿಲ್ಲ.

 

ಸರ್ವೋಚ್ಛ ನ್ಯಾಯಾಲಯದ ಜಗಪಾಲ್‌ ಸಿಂಗ್‌ ಮತ್ತಿತರರ ಮತ್ತು ಪಂಜಾಬ್‌ ರಾಜ್ಯ ಸರ್ಕಾರದ ವಿರುದ್ಧದ ಪ್ರಕರಣದಲ್ಲಿ ನೀಡಿರುವ ಎಸ್‌ಸಿಸಿ 396 ಅನ್ವಯ ಗೋಮಾಳ ಜಮೀನನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts