ಬೆಂಗಳೂರು; ಕೃಷ್ಣಭಾಗ್ಯ ಜಲನಿಗಮದ ನಾರಾಯಣಪುರ ಬಲದಂಡೆ ಕಾಲುವೆ ಅಧುನೀಕರಣ, ನವೀಕರಣ ಮತ್ತು ವಿಸ್ತರಣೆ ಕಾಮಗಾರಿಗಳ ಗುಣಮಟ್ಟ ಮತ್ತು ಭೌತಿಕ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅಧ್ಯಕ್ಷತೆಯ ಕರ್ನಾಟಕ ವಿಧಾನಸಭೆಯ ಅಂದಾಜುಗಳ ಸಮಿತಿಯ ಶಾಸಕ ಸದಸ್ಯರ ಮೇಲೆ ಗುತ್ತಿಗೆದಾರರ ಬೆಂಬಲಿಗರ ಗುಂಪೊಂದು ಮುಗಿಬಿದ್ದು ಹಲ್ಲೆಗೂ ಮುಂದಾಗಿತ್ತು ಎಂಬ ಪ್ರಕರಣ ಇದೀಗ ಬಹಿರಂಗವಾಗಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ಮತ್ತು ಸುತ್ತಮುತ್ತ ತಾಲೂಕುಗಳಲ್ಲಿ 95 ಕಿ ಮೀ ವರೆಗೆ ಪ್ರವಾಸ ನಡೆಸಿದ್ದರೂ ಅಂದಾಜುಗಳ ಸಮಿತಿಯ ಶಾಸಕರುಗಳಿಗೆ ಪೊಲೀಸ್ ಅಧಿಕಾರಿಗಳು ಸಮರ್ಪಕವಾಗಿ ಬಂದೋಬಸ್ತ್ ಒದಗಿಸಿರಲಿಲ್ಲ. ಕಾಲುವೆಗಳ ಭೌತಿಕ ಪರಿಶೀಲನೆಗೆ 2022ರ ಮೇ 4 ಮತ್ತು 5ರಂದು ಕೈಗೊಂಡಿದ್ದ ಪ್ರವಾಸದ ವೇಳೆಯಲ್ಲಿ ಭದ್ರತಾ ವೈಫಲ್ಯವೂ ಕಂಡು ಬಂದಿದೆ.
ಪ್ರವಾಸದ ವಿವರಗಳನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಂದಾಜುಗಳ ಸಮಿತಿಯ ಅಧಿಕಾರಿಗಳು ಮೊದಲೇ ನೀಡಿದ್ದಾರಾದರೂ ಸಮಿತಿ ಸದಸ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದ ಘಟನೆಯು ಪೊಲೀಸರ ವೈಫಲ್ಯಕ್ಕೆ ಕೈಗನ್ನಡಿ ಹಿಡಿದಂತಾಗಿದೆ.
ಈ ಸಂಬಂಧ ವಿಡಿಯೋ ತುಣುಕೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಾಲುವೆಗಳ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಗುತ್ತಿಗೆದಾರರ ಗುಂಪೊಂದು ಮುಗಿಬಿದ್ದು ಅವಾಚ್ಯ ಪದಗಳಿಂದ ನಿಂದಿಸಿರುವುದಲ್ಲದೆ ಶಾಸಕರುಗಳಿದ್ದ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡಿರುವುದು ಮತ್ತು ಸದಸ್ಯರನ್ನೇ ಗುರಿಯಾಗಿಸಿಕೊಂಡು ನುಗ್ಗಿದ ಗುಂಪೊಂದು ಸಮಿತಿಯ ಸದಸ್ಯರನ್ನು ತಳ್ಳಾಡಿರುವುದು ವಿಡಿಯೋ ತುಣುಕಿನಿಂದ ಗೊತ್ತಾಗಿದೆ.
ಈ ಸಮಿತಿಯಲ್ಲಿ ಅಧ್ಯಕ್ಷ ಅಭಯ್ ಪಾಟೀಲ್ ಸೇರಿ ಒಟ್ಟು 15 ಮಂದಿ ಶಾಸಕರಿದ್ದರು. ಕಾಲುವೆಗಳ ಕಾಮಗಾರಿ ಭೌತಿಕ ಪರಿಶೀಲನೆಗೆ ಮುಂದಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಗುತ್ತಿಗೆದಾರರ ಗುಂಪೊಂದು ಸಮಿತಿಯ ಸುತ್ತಲೂ ಘೇರಾಯಿಸಿ ಬೆದರಿಕೆಯನ್ನೂ ಒಡ್ಡಿತು. ಮತ್ತು ಪರಿಶೀಲನೆಗೆ ಅಡ್ಡಿಯುಂಟು ಮಾಡಿತು. ಆದರೆ ಈ ವೇಳೆಯಲ್ಲಿ ಬೆರಳಣಿಕೆಯಷ್ಟು ಪೊಲೀಸರು ಇದ್ದುದ್ದರಿಂದಾಗಿ ಸಮಿತಿಯ ಸದಸ್ಯರ ಜೀವಕ್ಕೂ ಆಪತ್ತು ಬಂದೊದಗಿತ್ತು ಎಂದು ತಿಳಿದು ಬಂದಿದೆ.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಸೀಳು ಕಾಲುವೆ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಡಿ ವೈ ಉಪ್ಪಾರ್ ಮತ್ತು ಎನ್ ಡಿ ವಡ್ಡರ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ಈ ಪೈಕಿ ಎನ್ ಡಿ ವಡ್ಡರ್ ಅವರು ಬಿಜೆಪಿಯ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ.
ವಿಶೇಷವೆಂದರೆ ಸಮಿತಿ ಸದಸ್ಯರಿಗೆ ಬಂದೋಬಸ್ತ್ ಮತ್ತು ಭದ್ರತೆ ನೀಡಲು ನಿಯೋಜಿತವಾಗಿದ್ದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಎಂಬುವರು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಹಗರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪದಡಿ ಸಮಿತಿ ಭೇಟಿ ನೀಡಿದ ದಿನದಂದೇ ಬಂಧನಕ್ಕೊಳಗಾಗಿದ್ದರು.
ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ, ಉಪ ಕಾಲುವೆ ಮತ್ತು ಸೀಳು ಕಾಲುವೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಕಾಮಗಾರಿಗಳಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಅವ್ಯವಹಾರ ಎಸಗಲಾಗಿದೆ ಎಂದು ಸ್ಥಳೀಯ ಶಾಸಕರೂ ಸೇರಿದಂತೆ ಇನ್ನಿತರರು ಅಂದಾಜುಗಳ ಸಮಿತಿಗೆ ದೂರು ಸಲ್ಲಿಸಿತ್ತು. ಇದನ್ನಾಧರಿಸಿ ಸಮಿತಿಯು ಪ್ರವಾಸ ನಡೆಸಿ ಭೌತಿಕ ಪರಿಶೀಲನೆಗೆ ಮುಂದಾಗಿತ್ತು ಎಂದು ತಿಳಿದು ಬಂದಿದೆ.
ಶಾಸಕ ಐಹೊಳೆ ಮಹಾಲಿಂಗಪ್ಪ ದುರ್ಯೋಧನ, ವೀರಣ್ಣ ಚರಂತಿಮಠ್, ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ, ಡಾ ಶಿವರಾಜ್ ಪಾಟೀಲ್, ದೊಡ್ಡಗೌಡರ ಮಹಾಂತೇಶ ಬಸವಂತರಾಯ್, ಸಂಜೀವ್ ಮಠಂದೂರು, ಎಚ್ ನಾಗೇಶ್, ಸುನೀಲ್ ಬಿಳಿಯಾನಾಯ್ಕ, ಅಮರೇಗೌಡ ಬಯ್ಯಾಪುರ, ಶರಣಬಸಪ್ಪಗೌಡ ದರ್ಶನಾಪುರ, ಕೌಜಲಿಗೆ ಮಹಾಂತೇಶ್ ಶಿವಾನಂದ, ಸತೀಶ್ ಎಲ್ ಜಾರಕಿಹೊಳಿ, ಯಶವಂತರಾಯಗೌಡ ವಿಠಲಗೌಡ ಪಾಟೀಲ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.