ಸಚಿವ ಬಿ ಸಿ ಪಾಟೀಲ್‌ರಿಂದ ಲಂಚ ಸಂಗ್ರಹ ಆರೋಪ; ವಸೂಲಿಗಿಳಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ದೇಶನ

ಬೆಂಗಳೂರು; ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರ ಮೂಲಕ ಸಚಿವ ಬಿ ಸಿ ಪಾಟೀಲ್‌ ಅವರು 50 ಸಾವಿರದಿಂದ 1 ಲಕ್ಷ ರು.ವರೆಗೆ ಲಂಚ ಸಂಗ್ರಹ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಸಲ್ಲಿಕೆಯಾಗಿರುವ ಹತ್ತಾರು ದೂರುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಾಗೃತ ಕೋಶದ ಹೆಚ್ಚುವರಿ ನಿರ್ದೇಶಕರಿಗೆ ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿನಿರ್ದೇಶನ ನೀಡಿದ್ದಾರೆ.

 

ತುಮಕೂರು ಜಿಲ್ಲೆಯ ಪಾವಗಡ, ಚಿಕ್ಕನಾಯಕನಹಳ್ಳಿ, ತಿಪಟೂರು ಸೇರಿದಂತೆ ವಿವಿಧೆಡೆ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಸಚಿವ ಬಿ ಸಿ ಪಾಟೀಲ್‌ ಅವರಿಗೆ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಮಂಡ್ಯ ತಾಲೂಕಿನ ಎಂ ಡಿ ಕೇಶವಮೂರ್ತಿ ಎಂಬುವರು ದೂರು ಸಲ್ಲಿಸಿದ್ದರು. ಈ ದೂರಿನ ಮೇಲೆ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಅವರು ಜಾಗೃತ ಕೋಶದ ಹೆಚ್ಚುವರಿ ನಿರ್ದೇಶಕರಿಗೆ 2022ರ ಮೇ 25ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೃಷಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಬರೆದಿರುವ ಪತ್ರದ ಪ್ರತಿ

 

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌, ಡಬ್ಯ್ಲೂಡಿಸಿ, ಐಡಬ್ಲ್ಯೂಎಂಪಿ, ಕೆಡಬ್ಲ್ಯೂಡಿಪಿ, ಎನ್‌ಎಂಎಸ್‌ಎ, ಆರ್‌ಎಡಿ ಮತ್ತು ನಾಲಾ ಬದು ಕಾಮಗಾರಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದೆಯೇ ಅವ್ಯವಹಾರ, ಅಕ್ರಮ ಎಸಗಿ ಕಳಪೆ ಕಾಮಗಾರಿ ನಡೆಸಲಾಗಿದೆ. ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನೂ ಲಪಟಾಯಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

‘ಸಚಿವ ಬಿ ಸಿ ಪಾಟೀಲ್‌ ಅವರಿಗೆ 50 ಸಾವಿರ ರು.ಗಳಿಂದ 1 ಲಕ್ಷ ರು.ವರೆಗೆ ಲಂಚ ಸಂಗ್ರಹ ಮಾಡಿರುವ ಬಗ್ಗೆ ಸಿಬಿಐ, ಸಿಒಡಿ, ಇಡಿ, ಎಸಿಬಿ, ಲೋಕಾಯುಕ್ತ ತನಿಖೆ ನಡಸಬೇಕು. ಅಲ್ಲದೆ ಮಹಾಲೇಖಪಾಲರಿಂದ ಲೆಕ್ಕ ಪರಿಶೋಧನೆ ನಡೆಸಿ ಮೊಕದ್ದಮೆ ದಾಖಲಿಸಬೇಕು,’ ಎಂದು ಕೇಶವಮೂರ್ತಿ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ತುಮಕೂರು ಜಿಲ್ಲೆಯ ಉಪ ನಿರ್ದೇಶಕ ಅಶೋಕ ಟಿ ಎನ್‌, ಡಿ ಉಮೇಶ್‌, ತಿಪಟೂರು ತಾಲೂಕಿನ ಸಹಾಯಕ ನಿರ್ದೇಶಕ ಬಿ ಜಿ ಜಯಪ್ಪ, ಜಗನ್ನಾಥಗೌಡ, ಎನ್‌ ಕೆಂಗೇಗೌಡ, ಪಾವಗಡ ತಾಲೂಕಿನ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ (ಪ್ರಭಾರ), ಎನ್‌ ವಿಜಯಮೂರ್ತಿ, ಕೊರಟಗೆರೆ ತಾಲೂಕಿನ ಅಧಿಕಾರಿ ರಾಮಹನುಯ್ಯ, ಎಚ್‌ ನಾಗರಾಜು, ಚಿಕ್ಕನಾಯಕಹಳ್ಳಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌ ಹೊನ್ನದಾಸೇಗೌಡ, ಡಿ ಅರ್‌ ಹನುಮಂತರಾಜು, ಶಿರಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಚ್‌ ರಂಗರಾಜು, ರಂಗನಾತ್‌, ಮಧುಗಿರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಪರಶುರಾಮ್‌, ಹನುಮಂತಪ್ಪ, ತುರುವೆಕೆರೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ, ಪ್ರಮೋದ್‌ ಕುಮಾರ್‌, ಬಿ ಪೂಜಾ, ಮಂಡ್ಯ ವಿಭಾಗದ ಡಿಡಿ ಪ್ರತಿಭ ಎಚ್‌ ಜಿ ಅವರ ಹೆಸರನ್ನು ಉಲ್ಲೇಖಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

ಅಧಿಕಾರಿ, ನೌಕರರಿಂದ ಲಂಚ ಸಂಗ್ರಹಿಸುತ್ತಿದ್ದಾರೆ ಎಂದು ಬಿ ಸಿ ಪಾಟೀಲ್‌ ಅವರ ವಿರುದ್ಧ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಈ ಕುರಿತು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ರಾಜ್ಯಪಾಲರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ದೂರು ಸಲ್ಲಿಕೆಯಾಗಿತ್ತು.

 

ಸ್ಥಳ ನಿಯೋಜನೆ, ವರ್ಗಾವಣೆ, ಹಾಲಿ ಸ್ಥಳ ಮತ್ತು ಹುದ್ದೆಯಲ್ಲಿಯೇ ಮುಂದುವರೆಸಲು ಕೃಷಿ ಇಲಾಖೆಯ ಜಂಟಿ, ಉಪ, ಸಹಾಯಕ ನಿರ್ದೇಶಕರುಗಳು ಲಂಚದ ಹಣವನ್ನು ಸಂಗ್ರಹಿಸಿ ಬಿ ಸಿ ಪಾಟೀಲ್‌ ಅವರಿಗೆ ತಲುಪಿಸಲಾಗಿದೆ ಎಂದು ಕೆಲ ಅಧಿಕಾರಿ, ನೌಕರರು ದೂರಿನಲ್ಲಿ ಪಟ್ಟಿಯನ್ನೂ ಒದಗಿಸಿದ್ದರು.

SUPPORT THE FILE

Latest News

Related Posts