ಬೆಂಗಳೂರು; ಶಾಲಾ ವಿದ್ಯಾರ್ಥಿಗಳ ಕಲಿಕೆ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಬೈಸಿಕಲ್ ನೀಡುವ ಯೋಜನೆ ಪ್ರಸ್ತಾವನೆಯನ್ನೇ ಆರ್ಥಿಕ ಇಲಾಖೆಯು ತಿರಸ್ಕರಿಸಿದೆ. ವಿಶೇಷವೆಂದರೆ ಶಿಕ್ಷಣ ಇಲಾಖೆಯ ಪ್ರಸ್ತಾವನೆ ತಿರಸ್ಕರಿಸಿರುವ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ತಿಂಗಳ ಹಿಂದೆಯೇ ಅನುಮೋದಿಸಿದ್ದಾರೆ. ಆದರೂ ‘ಈ ವರ್ಷದಿಂದಲೇ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ಗಳನ್ನು ಕೊಡಲಾಗುವುದು,’ ಎಂದು ಭರವಸೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ನಗರದ ಎಂಪ್ರೆಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ಉಚಿತ ಪಠ್ಯಪುಸ್ತಕ ವಿತರಣೆ, ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಬೈಸಿಕಲ್‌ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿರುವ ಭರವಸೆಯೇ ಹುಸಿಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.
ಬೈಸಿಕಲ್ ಯೋಜನೆ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಆರ್ಥಿಕ ಇಲಾಖೆಯು 2022ರ ಏಪ್ರಿಲ್ 19ರಂದೇ ತನ್ನ ಅಭಿಪ್ರಾಯವನ್ನು ನೀಡಿದೆ. ಈ ಕುರಿತು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
2006-07ರಿಂದ 2017-18ರವರೆಗೆ ಕರ್ನಾಟಕದಲ್ಲಿ ಸರ್ಕಾರಿ ಮತ್ತುಅನುದಾನಿತ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಅಧ್ಯಯನ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್ ಪೂರೈಕೆ ಯೋಜನೆ ಕುರಿತು ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್‌ಮೆಂಟ್ ಸಂಸ್ಥೆಯ ಮೂಲಕ ನಡೆಸಿದ್ದ ಮೌಲ್ಯಮಾಪನ ವರದಿಯು 2021ರ ನವೆಂಬರ್‌ನಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿಯ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಬೈಸಿಕಲ್‌ಗಳನ್ನು ನೀಡುವುದರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಿದೆಯೇ ಎಂಬ ಬಗ್ಗೆ ಸ್ಪಷ್ಟ ಪುರಾವೆಗಳಿಲ್ಲ. ರಾಜ್ಯಮಟ್ಟದಲ್ಲಿ 8ನೇ ತರಗತಿಯ (ಶೇ.25) ದಾಖಲಾತಿಯಲ್ಲಿ ಲಿಂಗ ಅಂತರವು ಉಳಿದಿರುವುದು ಕಂಡುಬಂದಿದೆ. ಸೈಕಲ್ ವಿತರಣೆ ಮಾಡಿದರೂ ಹುಡುಗ ಮತ್ತು ಹುಡುಗಿಯರ ಮಾಧ್ಯಮಿಕ ಶಾಲೆ ದಾಖಲಾತಿಯನ್ನು ಸಮನಾಗಿ ತರಲು ಸಾಧ್ಯವಾಗಲಿಲ್ಲ ಎಂದು ಸೂಚಿಸುತ್ತದೆ. ಪರೀಕ್ಷೆಯ ಫಲಿತಾಂಶಗಳಲ್ಲಿ ಕೇವಲ ಶೇ. 3ರಷ್ಟು ಏರಿಕೆಯಾಗಿರುವದುರಿಂದ ಕಲಿಕೆಯ ಫಲಿತಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಿರುವುದಿಲ್ಲ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು 2021ರ ನವೆಂಬರ್‌ನಲ್ಲಿ ವರದಿ ನೀಡಿತ್ತು. ಮೌಲ್ಯಮಾಪನ ವರದಿ ಆಧರಿಸಿ ಆರ್ಥಿಕ ಇಲಾಖೆಯು ಈ ಅಭಿಪ್ರಾಯವನ್ನು ನೀಡಿದೆ ಎಂದು ತಿಳಿದು ಬಂದಿದೆ.
ಆದರೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಉಚಿತ ಬೈಸಿಕಲ್ ಯೋಜನೆಯನ್ನು ಈ ಬಾರಿಯೂ ಪ್ರಸ್ತಾಪಿಸಿತ್ತು. ಈ ಸಂಬಂಧ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ಗೊತ್ತಾಗಿದೆ.
‘ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳಿಗೆ ಸಾಕಷ್ಟು ದೂರ ನಡೆದುಕೊಂಡು ಹೋಗಬೇಕಿದೆ. ಹಿಂದಿನಂತೆ ಸೈಕಲ್ ಕೊಟ್ಟರೆ ಸಕಾಲಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಮುಖ್ಯಮಂತ್ರಿ ಈ ಭರವಸೆ ನೀಡಿದ್ದರು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಶಾಲೆಗಳು ನಡೆದಿಲ್ಲ. ಹಾಗಾಗಿ ಸೈಕಲ್ ಕೊಡಲು ಸಾಧ್ಯವಾಗಿಲ್ಲ. ಈ ವರ್ಷ ವ್ಯವಸ್ಥೆ ಮಾಡಲಾಗುವುದು ಎಂದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೂರಕ ಬಜೆಟ್‌ನಲ್ಲಿ ಇದಕ್ಕೆ ಹಣ ಒದಗಿಸಲಾಗುವುದು’ ಎಂದು ಹೇಳಿದ್ದನ್ನು ಸ್ಮರಿಸಬಹುದು.
2022-23ನೇ ಸಾಲಿನಿಂದ ಮುಂದಿನ ಮೂರು ವರ್ಷಕ್ಕೆ ಬೈಸಿಕಲ್ ವಿತರಣೆ ಮಾಡುವ ಸಂಬಂಧ ತಲಾ ವರ್ಷದಲ್ಲಿ 6 ಲಕ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 250 ಕೋಟಿ ರು.ನಂತೆ 750 ಕೋಟಿ ರು. ವೆಚ್ಚವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಅಂದಾಜಿಸಿತ್ತು. ಇದೇ ಪ್ರಸ್ತಾವನೆಯನ್ನು ಬಜೆಟ್‌ನಲ್ಲಿ ಘೋಷಿಸಲು ಸಲ್ಲಿಸಿತ್ತು ಎಂದು ಗೊತ್ತಾಗಿದೆ. ಆದರೆ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾಗಲಿಲ್ಲ.
2006-07ರ ಆರಂಭದಿಂದ 2017-18ರವರೆಗೆ ಈ ಯೋಜನೆಯು ಸುಮಾರು 1,800 ಕೋಟಿ ರು.ಗಳ ವೆಚ್ಚದಲ್ಲಿ 62 ಲಕ್ಷ ಸೈಕಲ್‌ಗಳನ್ನು ವಿತರಿಸಿದೆ. ಈ ಯೋಜನೆಯು 2006-07ರಲ್ಲಿ 4.2 ಲಕ್ಷ ಬೈಸಿಕಲ್‌ಗಳಿಗೆ 85 ಕೋಟಿ ರು., 2014-15ರಲ್ಲಿ ಸುಮಾರು 5.5 ಲಕ್ಷ ಬೈಸಿಕಲ್‌ಗಳಿಗೆ 180 ಕೋಟಿ ರು. ವ್ಯಯಿಸಿದೆ. 2017-18ರಲ್ಲಿ 172 ಕೋಟಿ ರು. ವೆಚ್ಚದಲ್ಲಿ 5.5 ಲಕ್ಷ ಬೈಸಿಕಲ್ ತಲುಪಿಸಿದೆ ಎಂಬುದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿಯಿಂದ ತಿಳಿದು ಬಂದಿದೆ.
ಕಳೆದ 5 ವರ್ಷಗಳಲ್ಲಿ ಕಲ್ಬುರ್ಗಿ ವಿಭಾಗದ ಯಾದಗಿರಿಯಲ್ಲಿ 69, 572, ಕಲ್ಬುರ್ಗಿಯಲ್ಲಿ 1,31,759, ಬೆಳಗಾವಿ ವಿಭಾಗದ ಉತ್ತರ ಕನ್ನಡದಲ್ಲಿ 36,344, ಬೆಳಗಾವಿಯಲ್ಲಿ 1,71, 128, ಮೈಸೂರು ವಿಭಾಗದ ಕೊಡಗಿನಲ್ಲಿ 23,328, ಮೈಸೂರಿನಲ್ಲಿ 1,03,548, , ಬೆಂಗಳೂರು ವಿಭಾಗದ ಬೆಂಗಳೂರಿನಲ್ಲಿ 32,655, ಚಿತ್ರದುರ್ಗ ಜಿಲ್ಲೆಯಲ್ಲಿ 92,466 ಬೈಸಿಕಲ್‌ಗಳನ್ನು ವಿತರಿಸಲಾಗಿದೆ.
ಪ್ರೌಢಶಾಲಾ ಮಟ್ಟದಲ್ಲಿ ಶಾಲಾ ಹಾಜರಾತಿಯನ್ನು ಸುಧಾರಿಸುವ ಉದ್ದೇಶದಿಂದ ಹಾಗೂ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಉಚಿತವಾಗಿ ಬೈಸಿಕಲ್ ಒದಗಿಸುವ ಯೋಜನೆಯನ್ನು 2006-07ರಿಂದ ಪರಿಚಯಿಸಲಾಗಿದೆ. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ಮಾಧ್ಯಮಿಕ ಶಾಲೆಯ ದಾಖಲಾತಿಯನ್ನು ಸುಧಾರಿಸುವುದು ಯೋಜನೆಯ ಮುಖ್ಯ ಉದ್ಧೇಶ.