ಸಣ್ಣ ನೀರಾವರಿ ಇಲಾಖೆಯಲ್ಲೂ ಗೋಲ್ಮಾಲ್‌; ಬೋಗಸ್‌ ಬಿಲ್‌ ಸಲ್ಲಿಸಿ 13.50 ಕೋಟಿ ಲೂಟಿ

photo credit-frontlinethehindu

ಬೆಂಗಳೂರು; ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಗುತ್ತಿಗೆದಾರರು ಸಲ್ಲಿಸಿದ್ದ ಕಾಮಗಾರಿ ನಿರ್ವಹಣಾ ಪತ್ರದ ನೈಜತೆಯನ್ನು ಪರಿಶೀಲಿಸದೆಯೇ ನಿರ್ದಿಷ್ಟ ಗುತ್ತಿಗೆದಾರನಿಗೆ 13.50 ಕೋಟಿ ರು. ಮೊತ್ತದ ಕಾಮಗಾರಿ ವಹಿಸಿರುವುದು ಇದೀಗ ಬಹಿರಂಗವಾಗಿದೆ.

 

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ 14 ಗ್ರಾಮಗಳಲ್ಲಿರುವ ಕೆರೆಗಳ ಅಭಿವೃದ್ಧಿ ಕಾಮಗಾರಿ ಟೆಂಡರ್‌ ಪಡೆದುಕೊಳ್ಳಲು ಕಾಮಗಾರಿ ನಿರ್ವಹಿಸಲಾಗಿದೆ ಎಂದು ನಕಲಿ ಪ್ರಮಾಣ ಪತ್ರವನ್ನು ಪುರಸ್ಕರಿಸಿರುವ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಗುತ್ತಿಗೆದಾರನಿಂದ ಕಮಿಷನ್‌ ಪಡೆದಿದ್ದಾರೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಅವರು ಸಣ್ಣ ನೀರಾವರಿ ಸಚಿವ ಜೆ ಸಿ ಮಾಧುಸ್ವಾಮಿ ಅವರಿಗೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೆ ಕಾಮಗಾರಿ ಆದೇಶ ಪಡೆದು ವರ್ಷ ಕಳೆದರೂ ಕಾಮಗಾರಿ ಆರಂಭಿಸಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ನರೇಗಾದಡಿಯಲ್ಲಿ ಕೆರೆಗಳ ಅಭಿವೃದ್ದಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಆದರೆ ಇದೇ ಕಾಮಗಾರಿಯನ್ನು ಜಲಸಂಪನ್ಮೂಲ ಇಲಾಖೆ ನಡೆಸಿದೆ ಎಂದು ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ ಎಂಬ ಮತ್ತೊಂದು ಗುರುತರವಾದ ಆಪಾದನೆಯೂ ಕೇಳಿ ಬಂದಿದೆ.

 

ಮಾಧುಸ್ವಾಮಿ ಅವರಿಗೆ ಭವಾನಿಮಠ ಅವರು ಬರೆದಿರುವ ಪತ್ರದ ಪ್ರತಿ

 

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಪಡಿಸಲು ಲೆಕ್ಕ ಶೀರ್ಷಿಕೆ 4702 ಪ್ರಧಾನ ಕಾಮಗಾರಿ (ಕೆರೆಗಳ ಆಧುನೀಕರಣ)ಳಡಿಯಲ್ಲಿ ಟೆಂಡರ್‌ ಕರೆಯಲಾಗಿತ್ತು.

 

ಇರಕಲ್‌ಗಡ, ಅಬ್ಬಿಗೇರಿ, ಕಲ್ಲುತಾವರೆಗೇರೆ, ಕಾಮನೂರು, ಚಳ್ಳಾರಿ, ಭಟ್ಟರನಸಾಪೂರ, ಹನುಮನಟ್ಟಿ, ಗಡ್ಡಿ, ಇಂದಿರಿಗಿ, ಮಲಕನಮರಡಿ, ಒಣಬಳ್ಳಾರಿ, ಹಾಲಹೊಸಳ್ಳಿ, ಹೊಸೂರು, ವಿಠಲಾಪೂರ ಗ್ರಾಮದ ಕೆರೆಗಳ ಅಭಿವೃದ್ಧಿಪಡಿಸಲು 2020ರ ಮಾರ್ಚ್‌ 6 ರಂದು ಟೆಂಡರ್ ಕರೆಯಲಾಗಿತ್ತು.

 

ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಡ್‌ದಾರರ ಪೈಕಿ ಕೊಪ್ಪಳದ ಮಹಾದೇವಪ್ಪ ಇದರಮನಿ ಎಂಬ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟು ಕಾಮಗಾರಿ ವಹಿಸಿ ಆದೇಶ ಹೊರಡಿಸಲಾಗಿತ್ತು ಎಂಬ ಆರೋಪವಿದೆ. 9 ತಿಂಗಳ ಕಾಲಮಿತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೂ ಕಾಲಮಿತಿಯೊಳಗೆ ಯಾವುದೇ ಕಾಮಗಾರಿ ಮಾಡದೇ ಇದ್ದರೂ ಬೋಗಸ್‌ ಬಿಲ್‌ಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಇದಷ್ಟೇ ಅಲ್ಲ, ಕಾಮಗಾರಿ ಆದೇಶ ಪಡೆದ ಗುತ್ತಿಗೆದಾರರು 3-4 ತಿಂಗಳಾದರೂ ಉದ್ಧೇಶಪೂರ್ವಕವಾಗಿ ಕಾಮಗಾರಿಗಳನ್ನು ಆರಂಭಿಸದೇ ವಿಳಂಬ ಮಾಡಿದ್ದಾರೆ. ‘ ಕೊಪ್ಪಳ ಜಿಲ್ಲೆಯಲ್ಲಿ ವಾಡಿಕೆಯಂತೆ ಮೇ ಅಂತ್ಯ ಮತ್ತು ಜೂನ್‌ ತಿಂಗಳ ಆರಂಭದಲ್ಲಿ ಮಳೆ ಪ್ರಾರಂಭವಾಗುತ್ತದೆ. ಆಗ ಈ ಗ್ರಾಮಗಳ ಕೆರೆಗಳು ನೈಸರ್ಗಿಕವಾಗಿ ನೀರಿನಿಂದ ತುಂಬಿಕೊಳ್ಳುತ್ತವೆ. ಮತ್ತು ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯ್ತಿ ಪ್ರತಿ ಕೆರೆಗೆ ಹತ್ತಿರ ಒಂದು ನೂರು ಲಕ್ಷ ರು.ಗಳ ಅಂದಾಜು ವೆಚ್ಚದಲ್ಲಿ ಎಲ್ಲಾ ಕೆರೆಗಳ ಹೂಳನ್ನು ಕಾರ್ಮಿಕರನ್ನು ಬಳಸಿ ತೆಗೆದಿದ್ದಾರೆ. ಇದೇ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆಯ ವತಿಯಿಂದ ತೆಗೆಯಲಾಗಿದೆ ಎಂದು ಬೋಗಸ್‌ ದಾಖಲೆಗಳನ್ನು ಸೃಷ್ಟಿಸಿ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಸೇರಿ ಹಣ ಲೂಟಿ ಹೊಡೆಯುವ ಎಲ್ಲಾ ವ್ಯವಸ್ಥಿತವಾದ ಯೋಜನೆಯನ್ನು ತಯಾರಿಸಿ ಮುಗಿಸಿದ್ದಾರೆ,’ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಅವರು ಆರೋಪಿಸುತ್ತಾರೆ.

 

ಹಾಗೆಯೇ ಈ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವಾಗ ನಿಯಮಾವಳಿ ಪ್ರಕಾರ ಈ ಹಿಂದೆ ನಿರ್ವಹಿಸಿರುವ ಕಾಮಗಾರಿಯ ನಿರ್ವಹಣಾ ಪತ್ರ ಲಗತ್ತಿಸಬೇಕು. ಆದರೆ ಈ ಗುತ್ತಿಗೆದಾರರು ಟೆಂಡರ್‌ ಅರ್ಜಿಯ ಜತೆ ಲಗತ್ತಿಸಲಾದ ಕಾಮಗಾರಿ ನಿರ್ವಹಣಾ ಪತ್ರ ನಕಲಿಯಾಗಿದೆ. ಅಧಿಕಾರಿಗಳು ಅಕ್ರಮವಾಗಿ ಗುತ್ತಿಗೆದಾರನ ಜತೆಯಲ್ಲಿ ಶಾಮೀಲಾಗಿ ನಕಲಿ ನಿರ್ವಹಣಾ ಪತ್ರಮೇಲೆ ಟೆಂಡರ್‌ ಪ್ರಕ್ರಿಯೆಯಲ್ಲಿ ಮಹಾದೇವಪ್ಪ ಇದರಮನಿ ಎಂಬುವರಿಗೆ ದೊರಕುವ ಹಾಗೆ ಮಾಡಿದ್ದಾರೆ. ಇದರಲ್ಲಿ ಕೊಪ್ಪಳದ ಅಂದಿನ ಮುಖ್ಯ ಇಂಜಿನಿಯರ್‌ ಶಾಮೀಲಾಗಿದ್ದಾರೆ ಎಂದು ಭವಾನಿಮಠ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ವೀರಯ್ಯ ಹಿರೇಮಠ, ಮಹಾದೇವಪ್ಪ ಇದರಮನಿ, ಬಾಲಚಂದ್ರಸಾಲಬಾವಿ, ಮಲ್ಲನಗೌಡ ಮಾಲಿಪಾಟೀಲ್‌ ಹೊರತುಪಡಿಸಿದರೆ ಬೇರೆ ಯಾವುದೇ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಿಸುವ ಅವಕಾಶಗಳೇ ದೊರಕಿಲ್ಲ. ಇದಕ್ಕೆ ಇಲಾಖೆಯ ಭ್ರಷ್ಟ ಅಧಿಕಾರಿಗಳ ಕಾರಣ ಎಂದೂ ಭವಾನಿ ಮಠ ಅವರು ದೂರಿದ್ದಾರೆ.

the fil favicon

SUPPORT THE FILE

Latest News

Related Posts