ಸಾರಾಯಿ, ಸೇಂದಿ ಗುತ್ತಿಗೆದಾರರಿಂದ ಸರ್ಕಾರಕ್ಕೆ 723.42 ಕೋಟಿ ಬಾಕಿ; ವಸೂಲಿಯಲ್ಲಿ ಹಿಂದೆ ಬಿದ್ದ ಇಲಾಖೆ

photo credit;deccanhearald

ಬೆಂಗಳೂರು; ಸಾರಾಯಿ, ಸೇಂದಿ ಗುತ್ತಿಗೆದಾರರಿಂದ ಸರ್ಕಾರಕ್ಕೆ ಹಲವು ವರ್ಷಗಳಿಂದಲೂ ಬರಬೇಕಿರುವ ಬಾಕಿ ಮೊತ್ತವು ಬೆಟ್ಟದಂತೆ ಬೆಳೆಯುತ್ತಿದೆ. 2021ರ ಮಾರ್ಚ್ ಅಂತ್ಯಕ್ಕೆ ಈ ಗುತ್ತಿಗೆದಾರರಿಂದ ಒಟ್ಟು 723.42 ಕೋಟಿ ರು. ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿ ಅಬಕಾರಿ ಸಚಿವ ಗೋಪಾಲಯ್ಯ ಅವರು ಉತ್ತರಿಸಿದ್ದಾರೆ. ಅಬಕಾರಿ ಇಲಾಖೆಗೆ ಗುತ್ತಿಗೆದಾರರಿಂದ ಯಾವುದೇ ತೆರಿಗೆ ಮತ್ತು ದಂಡಗಳು ಬಾಕಿ ಇಲ್ಲ ಎಂದು ಉತ್ತರ ಒದಗಿಸಿದ್ದಾರಾದರೂ ಸಾರಾಯಿ, ಸೇಂದಿ ಗುತ್ತಿಗೆದಾರರಿಂದ 723.42 ಕೋಟಿ ರು. ಬಾಕಿ ಇದ್ದರೂ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳದೆಯೇ ಕಾಲಹರಣ ಮಾಡುತ್ತಿರುವುದು ತಿಳಿದು ಬಂದಿದೆ.

 

‘ಸಾರಾಯಿ/ಸೇಂದಿ ಬಾಡಿಗೆ, ನಷ್ಟ , ಬಡ್ಡಿ ಇತ್ಯಾದಿ ಮೂಲಗಳಿಂದ 2021ರ ಮಾರ್ಚ್‌ ಅಂತ್ಯಕ್ಕೆ ಒಟ್ಟು 607 ಗುತ್ತಿಗೆದಾರರಿಂದ 723.42 ಕೋಟಿ ರು. ಸರ್ಕಾರಕ್ಕೆ ಬರಬೇಕಿರುವ ಬಾಕಿಯಾಗಿರುತ್ತದೆ. ಇದರಲ್ಲಿ 173.49 ಕೋಟಿ ಅಸಲು ಮೊತ್ತವಾಗಿದ್ದು ಬಡ್ಡಿ 549.93 ಕೋಟಿ ರು. ಇದೆ,’ ಎಂದು ಅಂಕಿ ಅಂಶವನ್ನು ಒದಗಿಸಿರುವುದು ಉತ್ತರದಿಂದ ಗೊತ್ತಾಗಿದೆ. ಆದರೆ ಬಾಕಿ ಉಳಿಸಿಕೊಂಡಿರುವ ಗುತ್ತಿಗೆದಾರರ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ.

 

ಸಾರಾಯಿ, ಸೇಂದಿ ಗುತ್ತಿಗೆದಾರರಿಂದ ಕೋಟ್ಯಂತರ ರುಪಾಯಿನಷ್ಟು ಬಾಕಿ ಇರುವುದಕ್ಕೆ ಸರ್ಕಾರದ ನೀತಿ ಮತ್ತು ನಿಯಮಗಳಲ್ಲಿ ಇರುವ ನ್ಯೂನತೆಗಳೇ ಕಾರಣ ಎಂದು ಉತ್ತರದಲ್ಲಿ ವಿವರಿಸಲಾಗಿದೆ.
ಮುಂಗಡ ಠೇವಣಿ ಹಣವನ್ನು ಪಾವತಿಸಿ ಯಾರು ಬೇಕಾದರೂ ಹರಾಜು/ವಿಲೇವಾರಿಯಲ್ಲಿ ಭಾಗವಹಿಸಬಹುದಾಗಿತ್ತು. ಇದನ್ನು ಬದಲಾವಣೆ ಮಾಡಿ ಅಬಕಾರಿ ಗುತ್ತಿಗೆದಾರರಾಗಿ ಹೆಸರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದು ಬಾಕಿ ಉಳಿಯಲು ಕಾರಣ ಎನ್ನಲಾಗಿದೆ.

 

ಜಿಲ್ಲೆಯ ತಾಲೂಕುಗಳ ಸಾರಾಯಿ ಹಾಗೂ ಸೇಂದಿಯ ಗುತ್ತಿಗೆಯ ಹಕ್ಕನ್ನು ಚಾಲ್ತಿ ವರ್ಷ ಪೂರ್ಣಗೊಳ್ಳುವ ಅಂದರೆ 3-4 ತಿಂಗಳ ಹಿಂದೆಯೇ ಹರಾಜು ಪ್ರಕ್ರಿಯೆ ನಡೆಸುವ ಅನಿವಾರ್ಯವಾಗಿತ್ತು. ಹೀಗಾಗಿ ಮುಂದಿನ ಅಬಕಾರಿ ವರ್ಷದ ರಾಜಸ್ವ ಖೋತಾ ಆಗುವ ಸಂಭವ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಚಾಲ್ತಿವರ್ಷ ಪೂರ್ಣಗೊಳ್ಳುವ ಮುಂಚೆಯೇ ಮುಂದಿನ ಅಬಕಾರಿ ವರ್ಷದ ಹರಾಜು ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ಬಾಕಿ ಉಳ್ಳ ಗುತ್ತಿಗೆದಾರರು ಹೊಸ ಅಬಕಾರಿ ವರ್ಷಕ್ಕೆ ಹೆಸರುಗಳನ್ನು ನೋಂದಾಯಿಸಿ ಗುತ್ತಿಗೆಯನ್ನು ಪಡೆಯಬಹುದಾದ ಸಾಧ್ಯತೆ ಇರುತ್ತಿತ್ತು ಎಂದು ಗೋಪಾಲಯ್ಯ ಅವರು ಉತ್ತರದಲ್ಲಿ ವಿವರಿಸಿದ್ದಾರೆ.

 

ಷೆಡ್ಯೂಲ್‌ ಬ್ಯಾಂಕ್‌ನಿಂದ ನೀಡಲಾಗುವ ಬ್ಯಾಂಕ್‌ ಸಾಲ್ವೇನ್ಸಿಯ ಬದಲಾಗಿ ಬ್ಯಾಂಕ್‌ ಗ್ಯಾರಂಟಿಯನ್ನು ಅಥವಾ ಕಂದಾಯ ಅಧಿಕಾರಿಗಳು ನೀಡುವ ಸಾಲ್ವೇನ್ಸಿ ಪತ್ರವನ್ನು ಪಡೆಯಲು ಕ್ರಮ ಕೈಗೊಳ್ಳಲಾಯಿತು. ಸಿವಿಲ್ ನ್ಯಾಯಾಲಯಗಳು ಅಬಕಾರಿ ಬಾಕಿ ತಡೆಯಾಜ್ಞೆ ನೀಡದಂತೆ ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು.
ಸಾರಾಯಿ/ಸೇಂದಿ ಬಾಡಿಗೆ ಮೇಲಿನ ಬಡ್ಡಿಯನ್ನು ಶೇ. 12ರಿಂದ ಶೆ.15ಕ್ಕೆ ಏರಿಸಲಾಯಿತು. ಮುಂಗಡ ಠೇವಣಿಯ ಮೊತ್ತವನ್ನು ಒಂದು ತಿಂಗಳ ಬಾಡಿಗೆಗಿಂತ ಒಂದೂವರೆ ತಿಂಗಳ ಬಾಡಿಗೆಗೆ ಹೆಚ್ಚಿಸಲಾಗಿದ್ದು ಸಹ ಬಾಕಿ ಉಳಿಯಲು ಕಾರಣವಾಗಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

 

ನ್ಯೂನತೆಗಳನ್ನು ಸರಿಪಡಿಸಲು ನಿಯಮಗಳಲ್ಲಿ ಕಾಲಾನುಕಾಲಕ್ಕೆ ತಿದ್ದುಪಡಿ ತಂದು ನಿಯಮವನ್ನು ಬಿಗಿಪಡಿಸಿದ ಹಿನ್ನೆಲೆಯಲ್ಲಿ 2004-05ನೇ ಸಾಲಿನಿಂದ ಬಾಕಿ ಉದ್ಭವಾಗಿರುವುದಿಲ್ಲ. ಅಲ್ಲದೆ ಅಬಕಾರಿ ಬಾಕಿಯನ್ನು ವಸೂಲು ಮಾಡುವ ಸಲುವಾಗಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಸಂಬಂಧ ಒಟ್ಟು ನಾಲ್ಕು ಬಾರಿ ಕರಸಮಾಧಾನ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಈ ನಾಲ್ಕು ಯೋಜನೆಗಳಲ್ಲಿ 2017ರ ಅಂತ್ಯಕ್ಕೆ ಬಾಕಿ ಇರುವ ಮೊತ್ತದ ಪೈಕಿ ಒಟ್ಟು 107.06 ಕೋಟಿ ರು. ಅಸಲು ಮೊತ್ತವನ್ನಷ್ಟೇ ವಸೂಲಿ ಮಾಡಿರುವುದು ತಿಳಿದು ಬಂದಿದೆ.

 

‘ಪ್ರಾಥಮಿಕ ವರದಿಯಿಂದ ಕುಳವಾರು ಬಾಕಿ ಪಟ್ಟಿಗಳಲ್ಲಿ ಇರುವ ಕೆಲವರು ಮೃತಪಟ್ಟಿದ್ದಾರೆ ಮತ್ತೆ ಕೆಲವರಲ್ಲಿ ಯಾವುದೇ ಆಸ್ತಿ ಇರುವುದಿಲ್ಲವೆಂದು ತಿಳಿದು ಬಂದಿರುತ್ತದೆ. ಆದಾಗ್ಯೂ ಜಿಲ್ಲಾಮಟ್ಟದಲ್ಲಿ ಕುಳವಾರು ಬಾಕಿ ಪಟ್ಟಿಗಳಲ್ಲಿ ಇರುವ ಗುತ್ತಿಗೆದಾರರನ್ನು ಪರಾಮರ್ಶಿಸಿ ಮಾಹಿತಿ ಒದಗಿಸುವ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು ಮತ್ತು ಅಬಕಾರಿ ಜಂಟಿ ಆಯುಕ್ತರು ತಮ್ಮ ಜಿಲ್ಲೆ, ವಿಭಾಗಗಳಲ್ಲಿ ಅಬಕಾರಿ ಹಳೇ ಬಾಕಿಯನ್ನು ವಸೂಲಿ ಮಾಡಲು ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ,’ ಎಂದು ಕೈಗೊಂಡಿರುವ ಕ್ರಮದ ವಿವರ ಒದಗಿಸಿದ್ದಾರೆ.

 

ಅದೇ ರೀತಿ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಕಾರ್ಯನಿರ್ವಾಹಕ ಸಿಬ್ಬಂದಿಗಳೀಗೆ ಸೂಚನೆಗಳನ್ನು ನೀಡಿ ವಲಯವಾರು ಬಾಕಿ ಉಳಿಸಿರುವ ಮೊತ್ತಗಳನ್ನು ಪರಿಶೀಲಿಸಿ ಬಾಕಿದಾರರು, ವಾರಸುದಾರರ ಹೆಸರುಗಳಲ್ಲಿ ಚರ ಸ್ಥಿರಾಸ್ತಿಗಳು ಇರುವ ಬಗ್ಗೆ ಪ್ರಕರಣವಾರು ಸುದೀರ್ಘವಾಗಿ ಪರಾಮರ್ಶಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

 

‘ಈ ಎಲ್ಲಾ ಕ್ರಮಗಳು ಹಾಗೂ ಯೋಜನೆಗಳನ್ನು ಜಾರಿಗೆ ತಂದಿದಾಗ್ಯೂ ಇಲಾಖೆಯಲ್ಲಿ ಇನ್ನು ವಸೂಲಾಗದೇ ಬಾಕಿ ಉಳಿದಿರುತ್ತದೆ. ಈಹಣವನ್ನು ವಸೂಲು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿರುತ್ತದೆ. ಹಾಗೂ ಇಲಾಖೆಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಬಾಕಿ ವಸೂಲಾತಿ ಬಗ್ಗೆ ಅಬಕಾರಿ ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತರುಗಳೊಂದಿಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ,’ ಎಂದು ಗೋಪಾಲಯ್ಯ ಅವರು ವಿವರಿಸಿದ್ದಾರೆ.

the fil favicon

SUPPORT THE FILE

Latest News

Related Posts