ಮಸೀದಿಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆ; ಪೊಲೀಸ್‌ ಠಾಣೆಗೆ ಪರವಾನಿಗೆ ಅಧಿಕಾರ ನೀಡಲು ಪ್ರಸ್ತಾವ

photo credit;vijayakarnataka

ಬೆಂಗಳೂರು; ಮಸೀದಿಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆ ವಿಚಾರವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯಾಪ್ತಿಗೆ ತರುವ ಸಂಬಂಧ ಸಂಘ ಪರಿವಾರ ಹಿನ್ನೆಲೆಯ ವಿಧಾನಪರಿಷತ್‌ನ ಸದಸ್ಯ ಎನ್‌ ರವಿಕುಮಾರ್‌ ಮತ್ತಿತರರು ಒತ್ತಡ ಮುಂದುವರೆಸಿದ್ದಾದರೂ ಲೌಡ್‌ ಸ್ಪೀಕರ್‌ ಅಳವಡಿಕೆ ನೀಡುವ ಪರವಾನಿಗೆ ಅಧಿಕಾರವನ್ನು ಪೊಲೀಸ್‌ ಠಾಣೆಯ ಅಧಿಕಾರಿಗೆ ನೀಡಬಹುದು ಎಂದು ಸರ್ಕಾರ ತನ್ನ ನಿಲುವು ಪ್ರಕಟಿಸಿದೆ.

 

ಮಸೀದಿಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆಗೆ ಅನುಮತಿ ನೀಡುವ ಸಂಬಂಧ ವಿಧಾನಪರಿಷತ್‌ ಸದಸ್ಯ ಎನ್‌ ರವಿಕುಮಾರ್‌ ಅವರು ಕೇಳಿದ್ದ ಪ್ರಶ್ನೆಗೆ ಮುಜುರಾಯಿ ಮತ್ತು ವಕ್ಫ್‌ ಸಚಿವರಾದ ಶಶಿಕಲಾ ಜೊಲ್ಲೆ ಅವರು 2022ರ ಫೆ.16ರಂದು ಉತ್ತರಿಸಿದ್ದಾರೆ.

 

ಹಿಜಾಬ್‌, ಹಲಾಲ್‌, ಜಟ್ಕಾ ಕಟ್‌ ವಿವಾದ ಎಬ್ಬಿಸಿ ಸಾಮಾಜಿಕ ಸಾಮರಸ್ಯ ಹಾಳುಗೆಡವಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಆಜಾನ್‌ ಮತ್ತು ಮಸೀದಿಗಳಲ್ಲಿ ಲೌಡ್‌ ಸ್ಪೀಕರ್‌ ಅಳವಡಿಕೆ ಮತ್ತು ಶಬ್ದದ ಕುರಿತು ಆಕ್ಷೇಪಗಳ ನಡುವೆಯೇ ಸರ್ಕಾರ ಪ್ರಕಟಿಸಿರುವ ನಿಲುವು ಮುನ್ನೆಲೆಗೆ ಬಂದಿದೆ.

 

‘ಲೌಡ್‌ ಸ್ಪೀಕರ್‌ ಅಳವಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯಗೊಳಿಸುವುದಕ್ಕಿಂತಲೂ ಆಯಾ ತಾಲೂಕಿನ ಪೊಲೀಸ್‌ ಠಾಣೆಯ ಅಧಿಕಾರಿಗೆ ಪರವಾನಿಗೆ ನೀಡುವ ಅಧಿಕಾರ ನೀಡಬಹುದು ಎಂದು ಸರ್ಕಾರದ ನಿಲುವಾಗಿದೆ,’ ಎಂದು ಶಶಿಕಲಾ ಜೊಲ್ಲೆ ಅವರು ಹೇಳಿದ್ದಾರೆ.

 

ಶಶಿಕಲಾಜೊಲ್ಲೆ ಅವರು ನೀಡಿರುವ ಉತ್ತರದ ಪ್ರತಿ

 

ಅಲ್ಲದೆ ಮಸೀದಿಗಳಲ್ಲಿನ ಲೌಡ್‌ ಸ್ಪೀಕರ್‌ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಸಹ ವಿಧಾನಸಭೆಗೆ ಉತ್ತರ ಒದಗಿಸಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತು ಸುಪ್ರೀಂ ಕೋರ್ಟ್‌ (ಆದೇಶ ಸಂಖ್ಯೆ; ರಿಟ್‌ ಅರ್ಜಿ (ಸಿವಿಲ್‌) 72/1998) ಸಂಪೂರ್ಣ ನಿಷೇಧ ಮಾಡಿಲ್ಲ. ಧ್ವನಿವರ್ಧಕಗಳ ಬಳಕೆ ಕುರಿತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ 2000 ಅನ್ವಯ ಶಬ್ದಮಿತಿಯ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಧ್ವನಿವರ್ಧಕಗಳ ಬಳಕೆಗೆ ಅವಕಾಶ ಕಲ್ಪಿಸಿದೆ ಎಂದು ವಿವರ ಒದಗಿಸಿದ್ಧಾರೆ.

 

‘ಲೌಡ್‌ ಸ್ಪೀಕರ್‌ ಹಾವಳಿಯನ್ನು ತಪ್ಪಿಸಲು ಕೇಂದ್ರ ಸರ್ಕಾರದ Noise Pollution (Regulation and control) ರೂಲ್ಸ್‌ ಜಾರಿಯಲ್ಲಿರುತ್ತದೆ. ಲೌಡ್‌ ಸ್ಪೀಕರ್‌ ತೆರವುಗೊಳಿಸದೇ ನಿಯಂತ್ರಿಸುವ ಕ್ರಮ ಕೈಗೊಳ್ಳಲಾಗಿದೆ. ಇದರ ಪ್ರಕಾರ ಖಾಯಂ ಧ್ವನಿವರ್ಧಕಗಳನ್ನು ಅಳವಡಿಸುವಂತೆ ಅಥವಾ ಬಳಸುವಂತೆ ಅನುಮತಿಯನ್ನು ಪೊಲೀಸ್‌ ಇಲಾಖೆಯಿಂದ ನೀಡಿಲ್ಲ,’ ಎಂದು ಉತ್ತರ ಒದಗಿಸಿದ್ದಾರೆ.

 

ಹಾಗೆಯೇ ಬೆಂಗಳೂರು ನಗರ ವ್ಯಾಪ್ತಿಯ ಪೊಲೀಸ್‌  ಠಾಣಾ ಸರಹದ್ದಿನಲ್ಲಿರುವ ಮಸೀದಿಗಳಿಗೆ ಲೌಡ್‌ ಸ್ಪೀಕರ್‌ನಿಂದ ಹೊರಡುವ ಶಬ್ದ 55 ಡೆಸಿಬಲ್‌ ನಿಯಮಿತದಲ್ಲಿ ಇರುವಂತೆ ನೋಡಿಕೊಳ್ಳುವಂತೆ ಮಸೀದಿ ಮೇಲ್ವಿಚಾರಕರಿಗೆ 2022ರ ಫೆ.2ರವರೆಗೆ ಒಟ್ಟು 150 ನೋಟೀಸ್‌ ನೀಡಿದೆ. ಹಾಗೂ ಈ ಬಗ್ಗೆ ಪಿಸಿಆರ್‌ ಕಾಯ್ದೆ ಅನ್ವಯ 27 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

 

ಘಟಕಗಳ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಗಂಟೆಯ ಶಬ್ದವು ಆಜಾನ್‌ ಶಬ್ದಕ್ಕಿಂತ ಹೆಚ್ಚಾಗಿರುವುದು ಕಂಡು ಬರುವುದಿಲ್ಲ. ಈ ಬಗ್ಗೆ ಪೊಲೀಸ್‌ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂಬ ಮಾಹಿತಿ ಒದಗಿಸಿದ್ದಾರೆ.

 

‘ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಯ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಲ್ಲಿ ಮಸೀದಿಗಳಿಗೆ ಲೌಡ್‌ ಸ್ಪೀಕರ್‌ ಮೂಲಕ ದಿನಕ್ಕೆ 5 ಬಾರಿ ಶಬ್ದ ಮಾಡಲು ಅವಕಾಶ ಕಲ್ಪಿಸಿರುವ ಸಂಬಂಧ ಪೊಲೀಸ್‌ ಇಲಾಖೆಯಿಂದ ಯಾವುದೇ ರೀತಿಯ ಅವಕಾಶ ಕಲ್ಪಿಸಿರುವುದಿಲ್ಲ,’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎನ್‌ ರವಿಕುಮಾರ್‌ ಅವರಿಗೆ 2022ರ ಮಾರ್ಚ್‌ 17ರಂದು ಉತ್ತರ ಒದಗಿಸಿದ್ದಾರೆ.
ಅನುಮತಿಯನ್ನು ನವೀಕರಿಸುವ ಬಗ್ಗೆ ಯಾವುದೇ ಅರ್ಜಿಗಳನ್ನು ಸ್ವೀಕರಿಸಿರುವುದಿಲ್ಲ. ಹಾಗೂ ಯಾವುದೇ ಅನುಮತಿಯನ್ನು ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

 

ಮಸೀದಿಗಳಿಂದ ಲೌಡ್‌ ಸ್ಪೀಕರ್‌ ಮೂಲಕ ಬೆಳಗ್ಗಿನ ಸಮಯ ಮತ್ತು ತಡರಾತ್ರಿಯಲ್ಲಿ ಆಜಾನ್‌ ನೀಡುತ್ತಿರುವ ಕುರಿತು ಎನ್‌ ರವಿಕುಮಾರ್‌ ಅವರು 2022ರ ಫೆ.16ರಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಜುರಾಯಿ, ಹಜ್‌ ವಕ್ಫ್‌ ಸಚಿವರಾದ ಶಶಿಕಲಾಜೊಲ್ಲೆ ಅವರು ಈ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶ ಪಾಲಿಸುವುದು ಸರ್ಕಾರದ ನಿಲುವಾಗಿದೆ ಎಂದು ತಿಳಿಸಿದ್ದಾರೆ.

 

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಪ್ರಕಾರ ರಾಜ್ಯದಲ್ಲಿ 11,718 ಮಸೀದಿಗಳಿವೆ. ರಾಜ್ಯ ವಕ್ಫ್‌ ಮಂಡಳಿಯಲ್ಲಿ 10,182 ಮಸೀದಿಗಳು ನೋಂದಾಯಿಸಲಾಗಿದೆ. ಮತ್ತು 1,536 ಮಸೀದಿಗಳು ನೋಂದಾವಣೆ ಪ್ರಕ್ರಿಯೆಯಲ್ಲಿವೆ.

 

ಬೆಂಗಳೂರು ನಗರ ಜಿಲ್ಲೆಯಲ್ಲಿ 145 ಮಸೀದಿಗಳಿವೆ. ಚಿತ್ರದುರ್ಗದಲ್ಲಿ 171, ದಾವಣಗೆರೆಯಲ್ಲಿ 241, ಕೋಲಾರದಲ್ಲಿ 248, ಶಿವಮೊಗ್ಗದಲ್ಲಿ 279, ಬಾಗಲಕೋಟೆಯಲ್ಲಿ 672, ಬೆಳಗಾವಿಯಲ್ಲಿ 340, ಧಾರವಾಡದಲ್ಲಿ 452, ಹಾವೇರಿಯಲ್ಲಿ 495, ವಿಜಯಪುರದಲ್ಲಿ 958, ಕಲ್ಬುರ್ಗಿಯಲ್ಲಿ 744, ಬೀದರ್‌ನಲ್ಲಿ 558, ರಾಯಚೂರಿನಲ್ಲಿ 326, ಮೈಸೂರಿನಲ್ಲಿ 214, ದಕ್ಷಿಣ ಕನ್ನಡದಲ್ಲಿ 740 ಮಸೀದಿಗಳು ನೋಂದಾವಣೆ ಆಗಿವೆ.

 

ಬೆಂಗಳೂರು ನಗರದ ಹಲವು ಮಸೀದಿಗಳಲ್ಲಿನ ಧ್ವನಿ ವರ್ಧಕಗಳಿಂದ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್‌ ವಿಚಾರಣೆ ನಡೆಸಿತ್ತು.

 

ಪಿ. ರಾಕೇಶ್‌ ಮತ್ತು ಅಯ್ಯಪ್ಪ ದಾಸ್‌ ಬಾಲ ಗೋಪಾಲ್‌ ಸೇರಿ ಥಣಿ ಸಂದ್ರ ಮುಖ್ಯ ರಸ್ತೆಯ ಐಕಾನ್‌ ಅಪಾರ್ಟ್‌ಮೆಂಟ್‌ನ 32 ಮಂದಿ ನಿವಾಸಿಗಳು ಸುತ್ತಲಿನ 16 ಮಸೀದಿಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

 

ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಅಲ್ಲದೆ, ರಾಷ್ಟೀಯ ಹಸಿರು ನ್ಯಾಯಾಧಿಕರಣದ ನಿರ್ದೇಶನಗಳ ಪ್ರಕಾರ, ಈ ಅರ್ಜಿಯ ವಿಚಾರಣಾ ಮಾನ್ಯತೆಯನ್ನು ಮುಂದಿನ ವಿಚಾರಣೆ ದಿನದಂದು ಪರಿಶೀಲಿಸಲಾಗುವುದು ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತ್ತು.

 

ಅರ್ಜಿದಾರರ ಪರ ವಾದಿಸಿದ ವಕೀಲ ಶ್ರೀಧರ ಪ್ರಭು, ‘ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು – 2000 ರ ಅನ್ವಯ ಲಿಖಿತ ಪರವಾನಗಿ ಪಡೆಯದ ಹೊರತು ಧ್ವನಿ ವರ್ಧಕಗಳನ್ನು ಬಳಸುವುದಿಲ್ಲವೆಂದು ಸ್ಪಷ್ಟಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ನಗರದ ಥಣಿಸಂದ್ರ ಹಾಗೂ ಸುತ್ತಲಿನ 16 ಮಸೀದಿಗಳಿಗೆ ಕೋರ್ಟ್‌ ನಿರ್ದೇಶನ ನೀಡಿತ್ತು’ ಎಂದು ನ್ಯಾಯ ಪೀಠದ ಗಮನಕ್ಕೆ ತಂದಿದ್ದರು.

 

ಅದಕ್ಕೆ ಪ್ರತಿಕ್ರಿಯಿಸಿದ್ದ ಮಸೀದಿಗಳ ಆಡಳಿತ ಮಂಡಳಿ ಪರ ವಕೀಲರು, ‘ಎಲ್ಲಾ 16 ಮಸೀದಿಗಳಲ್ಲಿ ಶಬ್ದ ಅಳತೆ ಮತ್ತು ನಿಯಂತ್ರಣ ಮಾಪಕಗಳನ್ನು ಅಳವಡಿಸಲಾಗಿದೆ. ಇದು ಶಬ್ದ ಮಿತಿಯನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಮಿತಿಗಿಂತ ಅಧಿಕ ಶಬ್ದ ಉಂಟಾದರೆ ಅದು ನೇರವಾಗಿ ಸಂಬಂಧಪಟ್ಟ ಪೊಲೀಸ್‌ ಠಾಣೆಯ ಗಮನಕ್ಕೆ ಬರುತ್ತದೆ. ಅದಕ್ಕೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಅಲ್ಲದೆ, ಧ್ವನಿ ವರ್ಧಕಗಳ ಬಳಕೆಗೆ ಲಿಖಿತ ಪರವಾನಗಿ ಪಡೆದುಕೊಳ್ಳಲಾಗಿದೆ’ ಎಂಬ ಮಾಹಿತಿ ಒದಗಿಸಿದ್ದರು.

 

ಆಜಾನ್‌ ವೇಳೆ ಧ್ವನಿವರ್ಧಕ ಅಥವಾ ಶಬ್ದ ಹೆಚ್ಚಿಸುವ ಯಾವುದೇ ಪರಿಕರ (ಆಂಪ್ಲಿಫೈಯರ್‌) ಬಳಸುವಂತಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಧ್ವನಿವರ್ಧಕ ಬಳಕೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಬಿಎಸ್ಪಿ ಸಂಸದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ಕೋರ್ಟ್‌ ತಳ್ಳಿಹಾಕಿದ್ದನ್ನು ಸ್ಮರಿಸಬಹುದು.

 

ಆಜಾನ್‌ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ, ಲೌಡ್‌ ಸ್ಪೀಕರ್‌ ಅಥವಾ ಧ್ವನಿ ಹೆಚ್ಚಳ ಮಾಡುವ ಯಾವುದೇ ಪರಿಕರ ಬಳಸುವುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವೆಂದು ಹೇಳಲಾಗದು. ಯಾವುದೇ ವ್ಯಕ್ತಿಗೆ ಆತನಿಗೆ ಇಷ್ಟವಾಗದ್ದನ್ನು ಅಥವಾ ಅನಗತ್ಯವಾಗಿದ್ದನ್ನು ಕೇಳಲು ಬಲವಂತಪಡಿಸಲಾಗದು. ಇದು ಸಂವಿಧಾನದ ವಿಧಿ 25ರ ಅಡಿಯಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ,’’ ಎಂದು ನ್ಯಾ. ಶಶಿಕಾಂತ್‌ ಗಪ್ತಾ ನೇತೃತ್ವದ ಪೀಠ ಅಭಿಪ್ರಾಯ ಪಟ್ಟಿತ್ತು.

the fil favicon

SUPPORT THE FILE

Latest News

Related Posts