ತುಮಕೂರು; ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವ್ಯಾಪ್ತಿಯಡಿ ಕಾರ್ಯಾಚರಿಸುತ್ತಿರುವ ಸಹಕಾರ ಸಂಘದ ಡೈರಿಗಳಲ್ಲಿ ಹಾಲು ಉತ್ಪಾದಕರಿಗೆ ಭಾರೀ ಮೊತ್ತದ ವಂಚನೆ ಎಸಗಲಾಗುತ್ತಿದೆ. ಪ್ರತಿ ಡೈರಿಗಳಲ್ಲಿ ಹಾಲು ಅಳೆದುಕೊಳ್ಳುವಾಗ ಸಾಂದ್ರತೆ ಪರಿಶೀಲಿಸಲು ದಿನವೊಂದಕ್ಕೆ ಒಬ್ಬ ಉತ್ಪಾದಕನಿಂದ ಒಂದು ಪಾಯಿಂಟ್ ಹಾಲನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
ಹಾಲಿನ ದರವನ್ನು 3ರೂ ಗೆ ಹೆಚ್ಚಿಸಲು ಕರ್ನಾಟಕ ಹಾಲುಮಹಾಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬೆನ್ನಲ್ಲೇ ಹಾಲಿನ ಡೈರಿಗಳಲ್ಲಿ ನಡೆಯುತ್ತಿರುವ ಅಕ್ರಮವು ಮುನ್ನೆಲೆಗೆ ಬಂದಿದೆ. ಅಲ್ಲದೆ ಹಾಲಿನ ದರದಲ್ಲಿ ಹೆಚ್ಚಳದಿಂದ ಬರುವ ಹಣವೂ ಪೋಲಾಗುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ 8.90 ಲಕ್ಷ ಜನ ಸದಸ್ಯರು ಡೈರಿಗಳಿಗೆ ಹಾಲು ಪೂರೈಕೆ ಮಾಡುತ್ತಿದ್ದು, ದಿನವೊಂದಕ್ಕೆ ಸುಮಾರು 89 ಸಾವಿರ ಲೀಟರ್‌ಗೂ ಅಧಿಕ ಹಾಲು ಉತ್ಪಾದಕರ ಪುಸ್ತಕದಲ್ಲಿ ದಾಖಲಾಗುತ್ತಿಲ್ಲ. ಹಾಲಿನ ಪ್ರಮಾಣ (100 ಮಿ.ಲೀ) ಡೈರಿ ಪುಸ್ತಕದಲ್ಲಿ ನಮೂದಾಗದೇ ಇರುವುದರಿಂದ ರೈತರಿಗೂ ಈ ಕುರಿತು ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಬಂದ ಲಾಭಾಂಶವನ್ನು ಸಮರ್ಪಕವಾಗಿ ಹಂಚಿಕೆಯೂ ಮಾಡದೆ ಸಾಕಷ್ಟು ಡೈರಿಗಳಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿ ಶ್ರಮಿಕರ ಕಣ್ಣಿಗೆ ಮಣ್ಣೆರೆರುಚುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜ್ಯದಲ್ಲಿ ಕೆಎಂಎಫ್ ಸಂಸ್ಥೆಯ 14 ಹಾಲು ಒಕ್ಕೂಟಗಳಿದ್ದು, 8.90 ಲಕ್ಷ ಸದಸ್ಯರಿಂದ ಸಕ್ರಿಯವಾಗಿ ಹಾಲು ಪೂರೈಕೆಯಾಗುತ್ತಿದೆ. ಹಾಲಿನ ಜಿಡ್ಡಿನಾಂಶ ಮತ್ತು ಸಾಂದ್ರತೆಯನ್ನು ಅಳೆಯಲು ಬೆಳಗ್ಗೆ ಮತ್ತು ಸಂಜೆ ಎರಡೂ ವೇಳೆ ಸೇರಿ 1 ಪಾಯಿಂಟ್ ಹಾಲನ್ನು ತೆಗೆದುಕೊಳ್ಳುತ್ತಿರುವುದರಿಂದ ಲೀ.ಗೆ 26ರೂ ನಂತೆ 89 ಸಾವಿರ ಲೀ.ಗೆ ಸುಮಾರು 23.14 ಲಕ್ಷ ರೂಪಾಯಿ ಪ್ರತಿದಿನದ ಆದಾಯ ಬರುತ್ತದೆ. ತಿಂಗಳಿಗೆ ಒಟ್ಟು 6.94 ಕೋಟಿ ರೂ. ಹುಟ್ಟುವಳಿಯಾಗುತ್ತದೆ.
ಈ ಹಣ ಎಲ್ಲಾ ಹಾಲು ಒಕ್ಕೂಟಗಳಿಗೆ ಹಂಚಿಕೆಯಾಗುತ್ತದೆಯಾದರೂ ರೈತರ ಕೈಗೆ ಮಾತ್ರ ತಲುಪುತ್ತಿಲ್ಲ ಎಂದು ಗೊತ್ತಾಗಿದೆ. ಇನ್ನು, ಲೆಕ್ಕ ಕೇಳುವ ಹಾಲು ಪೂರೈಕೆದಾರರ ಮೇಲೆಯೇ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಅದೇ ರೀತಿ ಬೇಸಿಗೆಯಲ್ಲಿ ಮೇವು ನೀರಿನ ಕೊರತೆಯನ್ನು ಲೆಕ್ಕಿಸದೆ, ಹೈನುಗಳಿಗೆ ತಗಲುವ ಖಾಯಿಲೆ ಕಸಾರೆ, ಚಿಕಿತ್ಸೆ, ದುಬಾರಿ ದರದ ಬೂಸದ ನಡುವೆಯೂ ಹಾಲು ಹಿಂಡಿ ಡೈರಿಗಳಿಗೆ ರೈತರು ಪೂರೈಕೆ ಮಾಡಿದ್ದಾರೆ. ವರ್ಷಕ್ಕೆ ಸುಮಾರು 80 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ರೈತರ ಕಣ್ತಪ್ಪಿಸಿ ದೋಖಾ ಮಾಡಲಾಗುತ್ತಿದೆ.
ಹಾಲು ಉತ್ಪಾದರಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪಿತಗೊಂಡ ಸಹಕಾರಿ ಹಾಲು ಒಕ್ಕೂಟದಲ್ಲಿಯೇ ಕೋಟ್ಯಾಂತರ ರೂಪಾಯಿ ದೋಖ ಮಾಡುತ್ತಿರುವುದು ರೈತರಲ್ಲಿ ಅಪನಂಬಿಕೆಯನ್ನು ಹೆಚ್ಚಿಸಿದೆ. ಈಗ ಹಾಲಿನ ದರವನ್ನು 3ರೂ ಗೆ ಹೆಚ್ಚಿಸಲು ನಿರ್ಧರಿಸಿರುವುದರಿಂದ ಇನ್ನೂ ಹೆಚ್ಚಿನ ಹಣ ಪೋಲಾಗುವ ಸಾಧ್ಯತೆ ಇದೆ. ಆದ್ದರಿಂದ ಕದ್ದು ಹಾಲು ಕುಡಿಯುತ್ತಿರುವ ಬೆಕ್ಕುಗಳಿಗೆ ನಿರ್ಬಂಧ ಹೇರಬೇಕಿದೆ ಎನ್ನುತ್ತಾರೆ ಡೈರಿ ಸದಸ್ಯರೊಬ್ಬರು.
ಡೈರಿ ಪುಸ್ತಕದಲ್ಲಿ ಲೆಕ್ಕ ನಮೂದಿಸಿ
ಸಾಂದ್ರತೆ ಅಳೆಯಲು ಪ್ರತ್ಯೇಕವಾಗಿ ತೆಗೆದಿರಿಸಿಕೊಳ್ಳುವ ಹಾಲಿನ ಲೆಕ್ಕವನ್ನು ಉತ್ಪಾದಕರ ಡೈರಿ ಪುಸ್ತಕದಲ್ಲಿ ದಾಖಲಿಸಬೇಕು. ಡೈರಿಯ ಲಾಭಾಂಶಕ್ಕೆ ಈ ಉಳಿಕೆ ಹಾಲಿನ ಹಣ ಸೇರ್ಪಡೆಯಾಗುತ್ತದೆ ಎಂಬುದರಲ್ಲಿ ಹುರುಳಿಲ್ಲ. ಡೈರಿಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯದರ್ಶಿಗಳು ಸುಳ್ಳುಲೆಕ್ಕಗಳನ್ನು ತೋರಿಸಿ ಹಣ ಮುಂಡಾಯಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿವೆ. ಮಾಪನಕ್ಕೆಂದು ಮೀಸಲಿರಿಸುವ ಹಾಲನ್ನು ತೆಗೆದುಕೊಳ್ಳಬೇಕೆಂಬುದೇ ಆದಲ್ಲಿ ರೈತರ ಡೈರಿ ಪುಸ್ತಕದಲ್ಲಿ ನಮೂದಿಸಿದರೆ ಸುಲಭವಾಗಿ ಲೆಕ್ಕ ಸಿಗುತ್ತದೆ. ತಮಗೆ ಬೇಕಾದಂತೆ ಲೆಕ್ಕ ಬರೆಯುವ ಹಾಗೂ ದೋಖ ಮಾಡುವ ಕೈಗಳಿಗೂ ಕಡಿವಾಣ ಬೀಳಲಿದೆ.
ಅಲ್ಲದೆ ಡೈರಿಯ ಲಾಭಾಂಶದ ಹಣವನ್ನು ಸದಸ್ಯರಿಗೆ ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಹಾಲು ಉತ್ಪಾದಕರು ಅಲವತ್ತುಕೊಳ್ಳುತ್ತಿದ್ದಾರೆ. ಗ್ರಾಹಕರು ಹಾಲು ಖರೀದಿಸಲು ಬಂದಾಗ ಡೈರಿಯ ವತಿಯಿಂದ ಲೀ.ಗೆ ಕನಿಷ್ಠ 40 ರಿಂದ 42 ರೂ. ಬೆಲೆಗೆ ಮಾರಲಾಗುತ್ತದೆ. ಇತ್ತ ಉತ್ಪಾದಕರಿಗೆ ಸಂದಾಯವಾಗಬೇಕಾದ ನ್ಯಾಯಯುತ ಹಣ ತಲುಪುತ್ತಿಲ್ಲ. ಲೆಕ್ಕ ನಿರ್ವಹಣೆಯಲ್ಲಿಯೂ ಪಾರದರ್ಶಕತೆ ಇಲ್ಲ ಎನ್ನಲಾಗಿದೆ.