ನೀರಾವರಿ ನಿಗಮಗಳ ಗುತ್ತಿಗೆದಾರರ ಅಲೆದಾಟ; 2 ವರ್ಷಗಳಾದರೂ ಪಾವತಿಯಾಗದ 12,845 ಕೋಟಿ

Photo Credit;deccanhearld

ಬೆಂಗಳೂರು; ಕೃಷ್ಣಾಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮದಲ್ಲಿ ಅನುಷ್ಠಾನಗೊಂಡಿರುವ ಸಿವಿಲ್ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಕಳೆದ 8 ವರ್ಷಗಳಿಂದಲೂ 22, 225.85 ಕೋಟಿ ರು. ಬಾಕಿ ಪಾವತಿಯಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೇರಿದ 2 ವರ್ಷಗಳಲ್ಲಿ 12,845.91 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದೆ.

 

ಕಾಮಗಾರಿ ನಡೆಸಿ ಬಾಕಿ ಹಣಕ್ಕಾಗಿ ಅಲೆದಾಡಿ ಶೇ.40ರಷ್ಟು ಕಮಿಷನ್‌ ನೀಡಲಾರದೇ ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಜಲಸಂಪನ್ಮೂಲ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಗೋವಿಂದ ಕಾರಜೋಳ ಅವರ ಹೆಸರನ್ನೂ ಉಲ್ಲೇಖಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿನ ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ವಿವರಗಳೂ ಮುನ್ನೆಲೆಗೆ ಬಂದಿವೆ.

 

ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ಕರ್ನಾಟಕ ನೀರಾವರಿ ನಿಗಮ, ಕೃಷ್ಣಭಾಗ್ಯ ಜಲನಿಗಮ, ಕಾವೇರಿ ಜಲ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ವ್ಯಾಪ್ತಿಯಲ್ಲಿ ಗುತ್ತಿಗೆದಾರರರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತದ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

2013-14ರಿಂದ 2020-21ನೇ ಸಾಲಿನವರೆಗೆ ಕಾವೇರಿ ನೀರಾವರಿ ನಿಗಮ ಹೊರತುಪಡಿಸಿ ಉಳಿದ ನಿಗಮಗಳಿಗೆ 1,02, 417.2 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಪೈಕಿ 99,955.62 ಕೋಟಿ ರು. ವೆಚ್ಚ ಮಾಡಿ 2,461.58 ಕೋಟಿ ರು. ಉಳಿಕೆ ಮಾಡಿದೆ. ಇದೇ ಅವಧಿಯಲ್ಲಿ ಗುತ್ತಿಗೆದಾರರಿಗೆ 22,225.85 ಕೋಟಿ ರು. ಬಾಕಿ ಉಳಿಸಿಕೊಂಡಿರುವ ಸರ್ಕಾರವು ಗುತ್ತಿಗೆದಾರರನ್ನು ಕಳೆದ 8 ವರ್ಷಗಳಿಂದಲೂ ಅಲೆದಾಡಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

 

2013-14ರಲ್ಲಿ 719.48 ಕೋಟಿ ರು., 2014-15ರಲ್ಲಿ 796.48 ಕೋಟಿ ರು., 2015-16ರಲ್ಲಿ 1,231.98 ಕೋಟಿ ರು., 2016-17ರಲ್ಲಿ 887.01 ಕೋಟಿ ರು., 2017-18ರಲ್ಲಿ 1,955.34 ಕೋಟಿ ರು., 2018-19ರಲ್ಲಿ 3,789.5 ಕೋಟಿ ರು., 2019-20ರಲ್ಲಿ 5,753.69 ಕೋಟಿ ರು., 2020-21ರಲ್ಲಿ 7,092. 22 ಕೋಟಿ ರು. ಗುತ್ತಿಗೆದಾರರಿಗೆ ಪಾವತಿಸಿಸಲು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

 

ಕೃಷ್ಣ ಭಾಗ್ಯ ಜಲನಿಗಮದಲ್ಲಿ ಕಳೆದ 8 ವರ್ಷಗಳಿಂದ 1,993.44 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಬಾಕಿ ಪಾವತಿಸದೇ ಬಾಕಿ ಉಳಿದಿದೆ. ಅದೇ ರೀತಿ ಕರ್ನಾಟಕ ನೀರಾವರಿ ನಿಗಮದಲ್ಲಿ 12,110.22 ಕೋಟಿ ರು., ಕಾವೇರಿ ನೀರಾವರಿ ನಿಗಮದಲ್ಲಿ 3,745.5 ಕೋಟಿ ರು., ವಿಶ್ವೇಶ್ವರಯ್ಯ ಜಲನಿಗಮದಲ್ಲಿ 4,376.99 ಕೋಟಿ ರು. ಗುತ್ತಿಗೆದಾರರಿಗೆ ಪಾವತಿಸಲು ಬಾಕಿ ಇದೆ ಎಂದು ಗೊತ್ತಾಗಿದೆ.

 

‘ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯ ನೀರಾವರಿ ನಿಗಮಗಳಲ್ಲಿ ಬಾಕಿ ಇರುವ ಮೊತ್ತವನ್ನು ಪಡೆಬೇಕೆಂದರೆ ಜಲ ಸಂಪನ್ಮೂಲ ಸಚಿವರ ಪುತ್ರರೊಬ್ಬರು ಕಮಿಷನ್‌ಗೆ ಬೇಡಿಕೆ ಇರಿಸುತ್ತಾರೆ. ಇದನ್ನು ನೀಡಿದರೆ ಕಡತವನ್ನು ವಿಲೇವಾರಿ ಮಾಡಿ ಬಾಕಿ ಪಾವತಿಗೆ ಅನುಮೋದಿಸಿ ಅದನ್ನು ಆರ್ಥಿಕ ಇಲಾಖೆಗೆ ರವಾನಿಸುತ್ತಾರೆ. ಇಲ್ಲವಾದರೆ ಜಲ ಸಂಪನ್ಮೂಲ ಇಲಾಖೆಯ ಮೆಟ್ಟಿಲುಗಳನ್ನು ಹತ್ತಿಳಿದರೂ ನಯಾಪೈಸೆಯೂ ಸಿಗುವುದಿಲ್ಲ. ಹೀಗಾದರೆ ನಾವೂ ಸಂತೋಷ್‌ ಪಾಟೀಲ್‌ ಅವರ ಹಾದಿಯನ್ನೇ ಹಿಡಿಯಬೇಕಾದೀತು,’ ಎಂದು ಹೆಸರು ಹೇಳಲಿಚ್ಛಿಸದ ಗುತ್ತಿಗೆದಾರರೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯೆ ನೀಡಿದರು.

 

ಸಮ್ಮಿಶ್ರ ಸರ್ಕಾರದ (2018-19) ಅವಧಿಯಿಂದಲೂ ಗುತ್ತಿಗೆದಾರರಿಗೆ ಪಾವತಿಸುವ ಬಾಕಿ ಮೊತ್ತ ಬೆಟ್ಟದಂತೆ ಏರುತ್ತಿದೆ. ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಗುತ್ತಿಗೆದಾರರಿಗೆ ಬಾಕಿ ಇದ್ದ ಮೊತ್ತ 4,500 ಕೋಟಿ ರು.ನಿಂದ 5,000 ಕೋಟಿ ರುವರೆಗಿತ್ತು. 2020,2021 ಮತ್ತು 2022ರವರೆಗೆ ನಿಯಮಿತವಾಗಿ ಗುತ್ತಿಗೆದಾರರಿಗೆ ಬಾಕಿ ಪಾವತಿಯಾಗದ ಕಾರಣ ಬಾಕಿ ಮೊತ್ತ ಏರುತ್ತಿದೆ ಎನ್ನುತ್ತಾರೆ ನಿಗಮದ ಹಿರಿಯ ಅಧಿಕಾರಿಯೊಬ್ಬರು.

 

ಜಲ ಸಂಪನ್ಮೂಲ ಇಲಾಖೆಯ ವಿಶೇಷ ಅಭಿವೃದ್ಧಿ ವಾಹಕಗಳಾಗಿರುವ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಪ್ರಸ್ತುತ ಸಾಲಿನಲ್ಲಿ 10,967.47 ಕೋಟಿ ರು. ಪಾವತಿ ಮಾಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಅವರು ವಿಧಾನ ಪರಿಷತ್‌ನಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts