ಬೆಂಗಳೂರು; ಕಡತ ವಿಲೇವಾರಿ ವಿಳಂಬದ ಹಿಂದೆ ಭ್ರಷ್ಟಾಚಾರವಿದೆ. ಉದ್ದೇಶಪೂರ್ವಕವಾಗಿ ಕಡತಗಳನ್ನು ಸಚಿವಾಲಯಗಳಲ್ಲಿ ಉಳಿಸಿಕೊಳ್ಳಲಾಗಿದೆ. ಅಭಿವೃದ್ಧಿ ಮಾಯವಾಗಿದೆ, ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬರುತ್ತಿರುವ ನಡುವೆಯೂ 41 ಆಡಳಿತ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟಾರೆ 2,17,015 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ.
ಇದರಲ್ಲಿ ಆಡಳಿತ ಇಲಾಖೆಗಳ ಮಧ್ಯೆ ಅಭಿಪ್ರಾಯ, ಅನುಮೋದನೆ, ಸಹಮತಿಗೆಂದು ಕಳಿಸಿರುವ 1,31,470 ಮತ್ತು ಆಯಾ ಇಲಾಖೆ ಹಂತದಲ್ಲೇ 85,545 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ 2022ರ ಏಪ್ರಿಲ್ 11ರಂದು ನಡೆದ ಸಭೆಯಲ್ಲಿ ಕಡತಗಳು ಧೂಳು ತಿನ್ನುತ್ತಿರುವ ವಿಚಾರವು ಬಹಿರಂಗವಾಗಿದೆ. ಈ ಸಭೆಗೆ ಇಲಾಖೆಗಳು ಮಂಡಿಸಿದ್ದ ಅಂಕಿ ಅಂಶಗಳು ‘ದಿ ಫೈಲ್’ ಗೆ ಲಭ್ಯವಾಗಿದೆ.
ಅಹಿತಕರ ಘಟನೆ, ಕೋಮುಗಲಭೆಗೆ ದಾರಿಮಾಡಿಕೊಡುವಂತಹ ಚಟುವಟಿಕೆಗಳು ನಡೆಯುತ್ತಿದ್ದರೂ ಮೌನ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುತ್ತಿರುವ ನಗರಾಭಿವೃದ್ಧಿ ಇಲಾಖೆ, ಧಾರ್ಮಿಕ ದ್ವೇಷ, ಅಸಹಿಷ್ಣುತೆ, ಕೋಮು ಪ್ರಚೋದಕ ಭಾಷಣಗಳಲ್ಲೇ ಮುಳುಗಿರುವ ಕೆ ಎಸ್ ಈಶ್ವರಪ್ಪ ಅವರು ನಿಭಾಯಿಸುತ್ತಿರುವ ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಇಲಾಖೆ, ಪ್ರಕರಣಗಳ ಗಂಭೀರತೆ ಅರಿಯದೇ ಕೋಮು ಉದ್ವಿಗ್ನತೆಗೆ ಕಾರಣವಾಗುವ ಹೇಳಿಕೆ ನೀಡುವ ಅರಗ ಜ್ಞಾನೇಂದ್ರ ಅವರು ವಹಿಸಿಕೊಂಡಿರುವ ಗೃಹ ಇಲಾಖೆಯಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಕಡತಗಳು ಧೂಳು ತಿನ್ನುತ್ತಿವೆ.
ಹಿಜಾಬ್, ಹಲಾಲ್, ಜಟ್ಕಾ ಕಟ್, ವಾಣಿಜ್ಯ ವಹಿವಾಟುಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಧಾರ್ಮಿಕ ದ್ವೇಷ ಬಿತ್ತುವಂತಹ ಅಭಿಯಾನಗಳು ರಾಜ್ಯದಲ್ಲಿ ವೇಗ ಪಡೆದುಕೊಂಡಿರುವ ಹೊತ್ತಿನಲ್ಲೇ ಇಲಾಖೆಗಳ ಹಂತದಲ್ಲೇ 85,545 ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದು ಆಡಳಿತವು ಚಲನಶೀಲತೆಯನ್ನೇ ಕಳೆದುಕೊಂಡಿದೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿಕೊಟ್ಟಂತಾಗಿದೆ.
2022ರ ಫೆ.24ರಿಂದ 2022ರ ಏಪ್ರಿಲ್ 7ರ ಅಂತ್ಯಕ್ಕೆ ಇ-ಆಫೀಸ್‌ನಲ್ಲಿಯೇ ಇಷ್ಟೊಂದು ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಬಾಕಿ ಉಳಿದಿರುವುದು ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ ಎಂಬ ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ 12 ಇಲಾಖೆಗಳು ‘ಸಿ’ ವರ್ಗದಲ್ಲಿದ್ದರೆ, 35 ಇಲಾಖೆಗಳು ‘ಬಿ’ ವರ್ಗ, ಇನ್ನುಳಿದ 6 ಇಲಾಖೆಗಳು ಮಾತ್ರ ‘ಎ’ ವರ್ಗದಲ್ಲಿವೆ. ಬೇರೆ ಬೇರೆ ಇಲಾಖೆಗಳಿಗೆ ಕಳಿಸಿರುವ 1,31,470 ಕಡತಗಳ ಪೈಕಿ ಎಫ್‌ಎಂಎಸ್‌ನಲ್ಲಿ 43,516 ಕಡತಗಳು ಎಫ್‌ಎಂಎಸ್‌ನಲ್ಲಿದ್ದರೆ ಇ-ಆಫೀಸ್‌ನಲ್ಲಿ 87,954 ಕಡತಗಳು ಬಾಕಿ ಇವೆ.
ಇಲಾಖೆ ಹಂತದಲ್ಲೇ ಇರುವ 85,545 ಕಡತಗಳ ಪೈಕಿ 43,516 ಕಡತಗಳು ಎಫ್‌ಎಂಎಸ್‌ನಲ್ಲಿ ಬಾಕಿ ಇದ್ದರೆ ಇನ್ನುಳಿದ 42,209 ಕಡತಗಳು ಇ-ಆಫೀಸ್ ನಲ್ಲಿ ಇಲಾಖಾ ಹಂತದಲ್ಲೇ ಬಾಕಿ ಉಳಿದಿವೆ.
ಅಭಿಪ್ರಾಯ, ಸಹಮತ, ಅನುಮೋದನೆಗೆಂದು ಕಳಿಸಿರುವ ಕಡತಗಳಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿದೆ. 2022ರ ಏಪ್ರಿಲ್ 7ರ ಅಂತ್ಯಕ್ಕೆ ಈ ಇಲಾಖೆಯಲ್ಲಿ 12,465 ಕಡತಗಳು ಬಾಕಿ ಇವೆ.
ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಕಂದಾಯ ಇಲಾಖೆಯಲ್ಲಿ 11,221 ಕಡತಗಳು ಬಾಕಿ ಇವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 10,366, ಒಳಾಡಳಿತ ಇಲಾಖೆಯಲ್ಲಿ 8,317, ಆರ್ಥಿಕ ಇಲಾಖೆಯಲ್ಲಿ 7,364, ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ 8,362, ಜಲ ಸಂಪನ್ಮೂಲ ಇಲಾಖೆಯಲ್ಲಿ 6,018, ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 5,564, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 5,431, ಅರಣ್ಯ ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 5,972 ಕಡತಗಳು ಬಾಕಿ ಇವೆ.
ಇಲಾಖಾ ಹಂತದಲ್ಲಿ 85,545 ಕಡತಗಳು ಬಾಕಿ
ನಗರಾಭಿವೃದ್ಧಿ ಇಲಾಖೆಯಲ್ಲಿ 8,596, ಕಂದಾಯ ಇಲಾಖೆಯಲ್ಲಿ 8,778, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 7,990, ಆರ್ಥಿಕ ಇಲಾಖೆಯಲ್ಲಿ 6,536, ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯಲ್ಲಿ 6,655, ಒಳಾಡಳಿತ ಇಲಾಖೆಯಲ್ಲಿ 5,315, ಅರಣ್ಯ, ಪರಿಸರ ಜೀವಿಶಾಸ್ತ್ರ ಇಲಾಖೆಯಲ್ಲಿ 4,387 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ 3,363, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 3,815, ಜಲಸಂಪನ್ಮೂಲ ಇಲಾಖೆಯಲ್ಲಿ 2,994 ಕಡತಗಳು ವಿಲೇವಾರಿಯಾಗದೇ ಧೂಳು ತಿನ್ನುತ್ತಿವೆ ಎಂಬುದು ಅಂಕಿ ಸಂಖ್ಯೆಯಿಂದ ತಿಳಿದು ಬಂದಿದೆ.
ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಿದ್ದರೂ ಕಡತಗಳು ಕರಗುತ್ತಿಲ್ಲ, ಬದಲಿಗೆ ಬೆಟ್ಟದಂತೆ ಬೆಳೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಿನಪೂರ್ತಿ ಅಲ್ಲಿಯೇ ಮೊಕ್ಕಂ ಹೂಡಿ ಬಾಕಿ ಉಳಿದ ಕಡತಗಳ ವಿಲೇವಾರಿ ಅಭಿಯಾನ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು 2 ತಿಂಗಳ ಹಿಂದೆಯಷ್ಟೇ ಪ್ರಕಟಿಸಿದ್ದರು. ಆದರೆ 2 ತಿಂಗಳು ಕಳೆದ ನಂತರವೂ ಅವರದೇ ಇಲಾಖೆಯಲ್ಲಿ 11,221 ಕಡತಗಳು ಬಾಕಿ ಇವೆ.
ರಾಜ್ಯಾದ್ಯಂತ ಕಡತ ವಿಲೇವಾರಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು, ಸ್ವತಃ ತಾವೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೆ ತೆರಳಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಅಲ್ಲಿನ ಜಿಲ್ಲಾಧಿಕಾರಿ, ತಹಶೀಲ್ದಾರರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಬಾಕಿ ಉಳಿದ ಕಡತಗಳ ಇತ್ಯರ್ಥ ಮಾಡಲಾಗುವುದು ಎಂದು ನೀಡಿದ್ದ ಹೇಳಿಕೆಯೂ ಗೋಡೆ ಮೇಲಿನ ಬರಹದಂತಾಗಿದೆ.