ಬೆಂಗಳೂರು; ಗ್ರಾಮೀಣ ಉದ್ಯೋಗ, ಜಲ ಜೀವನ್ ಮಿಷನ್, ನೀರಿನ ಗುಣಮಟ್ಟ ಮೇಲ್ವಿಚಾರಣೆ, ಗ್ರಾಮ ಸಡಕ್ ಯೋಜನೆ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಕ್ಕೆ ಒದಗಿಸಿದ್ದ ಒಟ್ಟಾರೆ ಅನುದಾನದ ಪೈಕಿ 3,834.05 ಕೋಟಿ ರು. ವೆಚ್ಚ ಮಾಡದೇ ಬಾಕಿ ಉಳಿಸಿಕೊಂಡಿದೆ.
2021-22ನೇ ಸಾಲಿನಲ್ಲಿ ಕೈಗೆತ್ತಿಕೊಂಡಿದ್ದ ಹಲವು ಯೋಜನೆಗಳಿಗೆ ಒದಗಿಸಿದ್ದ ಅನುದಾನ, ಬಿಡುಗಡೆ, ವೆಚ್ಚದ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ 2022-23ನೇ ಸಾಲಿನ ನಿರ್ವಹಣಾ ಮುಂಗಡ ಪತ್ರವು ಅಂಕಿ ಅಂಶಗಳನ್ನು ಬಹಿರಂಗಗೊಳಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಗುರುತರವಾದ ಆರೋಪ ಮತ್ತು ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಲು ಘೋಷಿಸಿರುವ ಬೆನ್ನಲ್ಲೇ 2022-23ನೇ ಸಾಲಿನ ನಿರ್ವಹಣಾ ಮುಂಗಡ ಪತ್ರವು ಹೊರಗೆಡವಿರುವ ಅಂಶಗಳು ಮುನ್ನೆಲೆಗೆ ಬಂದಿವೆ.
ಕಳೆದ ವರ್ಷದಲ್ಲಿ ಇಲಾಖೆಯು ಹಲವು ಪ್ರಗತಿ ಸಾಧಿಸಿದೆ ಎಂದು ಸಚಿವ ಈಶ್ವರಪ್ಪ ಅವರು ಬಿಜೆಪಿ ಕಚೇರಿಯಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಬೆನ್ನು ತಟ್ಟಿಕೊಂಡಿದ್ದರು. ಆದರೆ ನರೇಗಾ ಮತ್ತು ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳಿಗೆಂದು ನೀಡಿದ್ದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ ಎಂಬ ವಾಸ್ತವ ಸಂಗತಿಯನ್ನು ನಿರ್ವಹಣಾ ಮುಂಗಡ ಪತ್ರವು ತೆರೆದಿಟ್ಟಿದೆ.
ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳಡಿಯಲ್ಲಿ ಕೈಗೆತ್ತಿಕೊಂಡಿರುವ ನರೇಗಾ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಡಿಯಲ್ಲಿ 2019-20ರಲ್ಲಿ ಒದಗಿಸಿದ್ದ 4,747.40 ಕೋಟಿ ರು. ಅನುದಾನದಲ್ಲಿ 4,553.98 ಕೋಟಿ ರು. ಖರ್ಚು ಮಾಡಿ 93.42 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು ಎಂಬುದು ನಿರ್ವಹಣಾ ಮುಂಗಡ ಪತ್ರದಿಂದ ತಿಳಿದು ಬಂದಿದೆ.
2020-21ರಲ್ಲಿ 6,787 ಕೋಟಿ ರು. ಅನುದಾನದಲ್ಲಿ 5,817.63 ಕೋಟಿ ರು. ವೆಚ್ಚ ಮಾಡಿ 469.37 ಕೋಟಿ ರು. ಬಾಕಿ ಉಳಿಸಿಕೊಂಡಿದೆ. 2021-22ನೇ ಸಾಲಿನಲ್ಲಿ 5,599.47 ಕೋಟಿ ರು. ಅನುದಾನದಲ್ಲಿ 5,433.06 ಕೋಟಿ ರು. ಖರ್ಚು ಮಾಡಿ 566.41 ಕೋಟಿ ರು ಉಳಿಕೆ ಮಾಡಿದೆ.
ಜಲ ಜೀವನ್ ಮಿಷನ್ ಅನುದಾನವೂ ಉಳಿಕೆ
ತುರ್ತು ಕುಡಿಯುವ ನೀರು ಮತ್ತು ಇತರೆ ಕಾರ್ಯಕ್ರಮಗಳಿಗೆ 2021-22ನೇ ಸಾಲಿನಲ್ಲಿ 3,340.27 ಕೋಟಿ ರು. ಲಭ್ಯವಿದ್ದ ಅನುದಾನದಲ್ಲಿ 2,999.02 ಕೋಟಿ ರು. ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 2,190.78 ಕೋಟಿ ರು. ಖರ್ಚು ಮಾಡಿ 808.24 ಕೋಟಿ ರು. ಉಳಿಸಿಕೊಂಡಿರುವುದು ಗೊತ್ತಾಗಿದೆ.
ಒ ಅಂಡ್ ಎಂ ಅಡಿಯಲ್ಲಿ 278.94 ಕೋಟಿ ರು. ಪೈಕಿ 230.01 ಕೋಟಿ ರು. ಖರ್ಚು ಮಾಡಿ 48.93 ಕೋಟಿ ರು. ಉಳಿಕೆ ಮಾಡಿತ್ತು. ಸಹಾಯಕ ಚಟುವಟಿಕೆಗಳಡಿಯಲ್ಲಿ 25.91 ಕೋಟಿ ರು. ನಲ್ಲಿ 14.32 ಕೋಟಿ ರು. ಖರ್ಚು ಮಾಡಿರುವ ಇಲಾಖೆಯು 11.59 ಕೋಟಿ ರು. ವೆಚ್ಚ ಮಾಡದೇ ಬಾಕಿ ಇರಿಸಿದೆ.
ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಸರ್ವೆಲೆನ್ಸ್ ಕಾರ್ಯಕ್ರಮಗಳಡಿಯಲ್ಲಿ 11.42 ಕೋಟಿ ರು. ಪೈಕಿ 5.69 ಕೋಟಿ ರು. ಖರ್ಚು ಮಾಡಿ 5.73 ಕೋಟಿ ರು. ಉಳಿಸಿಕೊಂಡಿದೆ. ಕೇಂದ್ರ ವಲಯ (ಹೆಚ್ಚುವರಿ ನೀತಿ ಆಯೋಗ)ದಡಿಯಲ್ಲಿ 6.21 ಕೋಟಿ ರು. ನೀಡಲಾಗಿದ್ದರೂ ನಯಾ ಪೈಸೆಯನ್ನೂ ಖರ್ಚು ಮಾಡಿಲ್ಲ. ನೀರಿನ ಗುಣಮಟ್ಟ ಯೋಜನೆಯಡಿಯಲ್ಲಿ 51.39 ಕೋಟಿ ರು. ಬಿಡುಗಡೆ ಮಾಡಿದ್ದರೂ ಬಿಡಿಗಾಸೂ ಬಳಕೆ ಮಾಡಿಲ್ಲ.
ಒಟ್ಟಾರೆ ಈ ಎಲ್ಲಾ ಕಾರ್ಯಕ್ರಮಗಳಡಿಯಲ್ಲಿ 3,315.29 ಕೋಟಿ ರು.ನಲ್ಲಿ 2,441.75 ಕೋಟಿ ರು. ಖರ್ಚು ಮಾಡಿ 873.83 ಕೋಟಿ ರು. ಉಳಿಕೆ ಮಾಡಿದೆ ಎಂದು ನಿರ್ವಹಣಾ ಮುಂಗಡ ಪತ್ರವು ವಿವರಿಸಿದೆ.
ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳ ಉದ್ದದ ಆಧಾರದಲ್ಲಿ ಒಟ್ಟು 218.73 ಕೋಟಿ ರು.ಗಳನ್ನು ಒದಗಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಿದ್ದ 164.04 ಕೋಟಿ ರು.ನಲ್ಲಿ 125 ಕೋಟಿ ರು. ಖರ್ಚು ಮಾಡಿ 39.04 ಕೋಟಿ ರು. ಉಳಿಕೆ ಮಾಡಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2019-20ನೇ ಸಾಲಿನಿಂದ 2020-21ನೇ ಸಾಲಿನವರೆಗೆ ಒಟ್ಟು 3,610.43 ಕೋಟಿ ರು. ಅನುಮೋದನೆ ದೊರೆತಿತ್ತು. 2021-22ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯ ಆಯವ್ಯಯದಡಿಯಲ್ಲಿ 1,500.00 ಕೋಟಿ ರು. (ಸಾಮಾನ್ಯ 460.23 ಕೋಟಿ, ಎಸ್‌ಸಿಪಿ ಅಡಿಯಲ್ಲಿ 669.86 ಕೋಟಿ ರು., ಟಿಎಸ್‌ಪಿ 369.91 ಕೋಟಿ ರು) ನಿಗದಿಪಡಿಸಲಾಗಿತ್ತು. ಈ ಪೈಕಿ ವೆಚ್ಚ ಮಾಡಿದ್ದುಇ 872.90 ಕೋಟಿಯಷ್ಟೇ. ಇನ್ನೂ 627.1 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ಹಾಗೆಯೇ 2021-22ನೇ ಸಾಲಿನಲ್ಲಿಕ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಲಯಡಿ ಆರ್ಥಿಕ ಪ್ರೋತ್ಸಾಹಧನ ಅನುದಾನಡಿ 207.90 ಕೋಟಿ ರು. ನೀಡಲಾಗಿತ್ತು. ಈ ಪೈಕಿ 2022ರ ಜನವರಿ ಅಂತ್ಯಕ್ಕೆ 24.14 ಕೋಟಿ ರು.ನಷ್ಟೇ ಆರ್ಥಿಕ ಪ್ರಗತಿಯಾಗಿದೆ. ಉಳಿದ 183.76 ಕೋಟಿ ರು. ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.
ಎಸ್ ಸಿ ಎಸ್ ಟಿ ಕಾಲೋನಿ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ 2020-21ನೇ ಸಾಲಿಗೆ 167.25 ಕೋಟಿ ರು. ನೀಡಲಾಗಿತ್ತು. ಈ ಪೈಕಿ 2022ರ ಜನವರಿ ಅಂತ್ಯಕ್ಕೆ 85.42 ಕೋಟಿ ರು. ಖರ್ಚು ಮಾಡಿ 81.83 ಕೋಟಿ ರು. ವೆಚ್ಚ ಮಾಡದೆಯೇ ಬಾಕಿ ಇರಿಸಿದೆ.
ಹಾಗೆಯೇ 2020-21ನೇ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಒಟ್ಟು 282.74 ಕೋಟಿ ರು. ನೀಡಿದ್ದರ ಪೈಕಿ 2021ರ ಡಿಸೆಂಬರ್ ಅಂತ್ಯಕ್ಕೆ 56.59 ಕೋಟಿ ರು. ಖರ್ಚುಮಾಡಿ 226.15 ಕೋಟಿ ರು. ಬಾಕಿ ಉಳಿಸಿಕೊಂಡಿದೆ.
ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮಗಳಡಿಯಲ್ಲಿ 2021-22ನೇ ಸಾಲಿಗೆ (ಲೆಕ್ಕ ಶೀರ್ಷಿಕೆ-5054-03-337-0-75-422 ಮತ್ತು 423) ಅಡಿ 705.47 ಕೋಟಿ ರು. ಒದಗಿಸಲಾಗಿತ್ತು. ಇದನ್ನು 2018-19, 2019-20, 2020-21ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮ ಮತ್ತು ಮಳೆ ಪರಿಹಾರದ ಕಾರ್ಯಕ್ರಮದಡಿ ಮಂಜೂರಾತಿ ನೀಡಿದ್ದ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಪಾವತಿಸಲು ಜನವರಿ ಅಂತ್ಯಕ್ಕೆ 595.05 ಕೋಟಿ ರು.ಗಳನ್ನು ಜಿಲ್ಲಾ ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿ ವೆಚ್ಚ ಭರಿಸಲಾಗಿದೆ. ಈ ಬಾಬ್ತಿನಲ್ಲಿ ಇನ್ನೂ 110.42 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ.