ಬೆಂಗಳೂರು; ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರ ಟಿಪ್ಪಣಿಯನ್ನು ಕಾಲೇಜು ಶಿಕ್ಷಣ ಇಲಾಖೆ ಕಸದ ಬುಟ್ಟಿಗೆ ಎಸೆದಿತ್ತು.
ಅಲ್ಲದೆ ಸೇವಾ ಭದ್ರತೆ ಒದಗಿಸಲು ನಿಯಮಗಳಲ್ಲಿ ಅವಕಾಶವಿಲ್ಲವೆಂದು ಅತಿಥಿ ಉಪನ್ಯಾಸಕರ ಸಂಘದ ಬೇಡಿಕೆಯನ್ನು ಕೈಬಿಡಲಾಗಿತ್ತು. ಮತ್ತು ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನವನ್ನು 25,000ಕ್ಕೆ ಹೆಚ್ಚಿಸಲು ಹಿಂದಿನ ಕಾಂಗ್ರೆಸ್ ಸರ್ಕಾರವು ನಿರಾಕರಿಸಿತ್ತು. ಅದೇ ರೀತಿ ಕಾಂಗ್ರೆಸ್ ಸರ್ಕಾರ ತಳೆದಿದ್ದ ನಿಲುವನ್ನೇ ಮೈತ್ರಿ ಸರ್ಕಾರವು ಮುಂದುವರೆಸಿತ್ತು.
ಸೇವಾ ಭದ್ರತೆ ಒದಗಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರ್ಚಿಸಲು ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ ಅಗತ್ಯವೇ ಕಂಡು ಬರುವುದಿಲ್ಲ ಎಂದು ಉತ್ತರಿಸಿರುವುದು ಇದೀಗ ಬಹಿರಂಗವಾಗಿದೆ. ಈ ಸಂಬಂಧ ಸಮಗ್ರ ಕಡತವನ್ನು ‘ದಿ ಫೈಲ್’ ಪಡೆದುಕೊಂಡಿದೆ.
ಅಲ್ಲದೆ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸಂಬಂಧಿಸಿದಂತೆ 2017ರ ಸೆ.15 ಮತ್ತು 27ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅತಿಥಿ ಉಪನ್ಯಾಸಕರ ಗೌರವ ಧನವನ್ನು 25,000 ರು.ಗಳಿಗೆ ಹೆಚ್ಚಿಸಲು ಸಾಧ್ಯವಾಗದೆಂದು ತಿಳಿಸಿದ್ದರು ಎಂಬ ಸಂಗತಿ ಆರ್‌ಟಿಐ ಅಡಿ ಪಡೆದಿರುವ ಕಡತಗಳ ಹಾಳೆಯಿಂದ ತಿಳಿದು ಬಂದಿದೆ.
ಹಾಗೆಯೇ ‘ಅತಿಥಿ ಉಪನ್ಯಾಸಕರಾಗಿ ಗೌರವ ಧನದ ಆಧಾರದ ಮೇಲೆ ಆಯ್ಕೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಸೇವಾ ಭದ್ರತೆ ಒದಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ,’ ಎಂದು ಇದೇ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದರು ಎಂಬ ಅಂಶ ಸಭೆಯ ನಡವಳಿಯಿಂದ ಗೊತ್ತಾಗಿದೆ.
ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಕೇಳುವ ಅತಿಥಿ ಉಪನ್ಯಾಸಕರನ್ನು ನಿಂದಿಸುವುದು, ಹಂಗಿಸುವುದು ಅಮಾನವೀಯ ನಡವಳಿಕೆಯಾಗಿರುತ್ತದೆ. ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ ಸರ್ಕಾರ ಅವರ ಬದುಕನ್ನು ಅಭದ್ರಗೊಳಿಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದರಲ್ಲದೆ ಈ ಸಂಬಂಧ ‘ 2022ರ ಜನವರಿ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು. ಅದರೆ ತಮ್ಮ ಸರ್ಕಾರದ ಅವಧಿಯಲ್ಲಿ ಅವಕಾಶವಿದ್ದರೂ ಅಧಿಕಾರಶಾಹಿ ಮಾತು ಕೇಳಿ ಸೇವಾ ಭದ್ರತೆ ಒದಗಿಸಿರಲಿಲ್ಲ.
ಸೇವೆ ಭದ್ರತೆ ಕಲ್ಪಿಸಲು ಅವಕಾಶವಿಲ್ಲವೆಂದಿದ್ದ ಅಧಿಕಾರಶಾಹಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಸೇವಾ ಭದ್ರತೆ ಮತ್ತು ಶಾಶ್ವತ ನಿಯಮಾವಳಿ ರಚಿಸುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು 2017ರ ಡಿಸೆಂಬರ್ 22ರಂದು ಪತ್ರ ಬರೆದಿದ್ದರು. ಈ ಪತ್ರದಲ್ಲಿ ‘ ಅತಿಥಿ ಉಪನ್ಯಾಸಕರುಗಳು ಇಲಾಖೆಯಲ್ಲಿ ಯಾವುದೇ ಮಂಜೂರಾದ ಖಾಲಿ ಹುದ್ದೆಗಳ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆದ್ದರಿಂದ ಅವರುಗಳ ತಾತ್ಕಾಲಿಕ ಸೇವೆಯನ್ನು ಪರಿಗಣಿಸಿ ಸೇವಾ ಭದ್ರತೆಯನ್ನು ಒದಗಿಸಿ, ಖಾಯಂ ಮಾಡಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಇರುವುದಿಲ್ಲ,’ ಎಂದು ವಿವರಿಸಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳನ್ನು ಪಡೆದಿದ್ದು, ಎನ್‌ಇಟಿ/ಎಸ್‌ಎಲ್‌ಇಟಿ ಅಥವಾ ಪಿಎಚ್‌ಡಿ ಮಾಡಿಕೊಂಡಿರುವ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವ ಮಾಸಿಕ ಗೌರವ ಧನದ ಮೊತ್ತವನ್ನು ಮಾರ್ಚ್ 2017ರಿಂದ ಜಾರಿಗೆ ಬರುವಂತೆ 11,500 ರು ಗಳಿಂದ 13,000 ಹಾಗೂ ಇತರೆ ಅತಿಥಿ ಉಪನ್ಯಾಸಕರ ಮಾಸಿಕ ಗೌರವ ಧನದ ಮೊತ್ತವನ್ನು 9,500 ರು.ಗಳಿಂದ 11,000 ರು.ಗಳಿಗೆ ಹೆಚ್ಚಿಸಿ 2017ರ ಏಪ್ರಿಲ್ 4ರಂದು ಆದೇಶಿಸಿತ್ತು ಎಂಬ ಮಾಹಿತಿಯನ್ನು ಒದಗಿಸಿರುವುದು ಪತ್ರದಿಂದ ಗೊತ್ತಾಗಿದೆ.
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಡಾ ಸೋಮಶೇಖರ ಶಿಮೊಗ್ಗಿ ಅವರು ಸೇವಾ ಭದ್ರತೆ, ಶಾಶ್ವತ ನಿಯಮಾವಳಿ ರಚನೆ ಕುರಿತು ಮನವಿ ಸಲ್ಲಿಸಿದ್ದರು. ಇದನ್ನಾಧರಿಸಿ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದು ಸೂಕ್ತ ಮತ್ತು ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಂದ ವರದಿ ಪಡೆಯಬೇಕು ಎಂದು ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಕಡತ ಮಂಡಿಸಲು ಸೂಚಿಸಿದ್ದರು.
ನ್ಯಾಯಮೂರ್ತಿ ಸಮಿತಿಯೇ ಬೇಡ ಎಂದಿದ್ದ ಆಯುಕ್ತರು
ತಾತ್ಕಾಲಿಕ ವ್ಯವಸ್ಥೆಯಡಿ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗೆ ಹಂಚಿಕೆಯಾದ ನಂತರ ಉಳಿಕೆ ಕಾರ್ಯಭಾರವನ್ನು ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲವೆಂಬುದು ಸ್ಪಷ್ಟವಾಗಿರುತ್ತದೆ. ಅವರಿಗೆ ನೀಡುತ್ತಿರುವ ಮಾಸಿಕ ಗೌರವ ಧನದ ಮೊತ್ತವನ್ನು ಸರ್ಕಾರ ಕಾಲಕಾಲಕ್ಕೆ ಪರಿಷ್ಕರಿಸುತ್ತಾ ಬಂದಿದ್ದು ಪ್ರತಿ ವರ್ಷ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಸಹ ವಿದ್ಯಾರ್ಹತೆ ಆಧಾರದ ಮೇಲೆ ಹಾಗೂ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಪ್ರಾಧಾನ್ಯತೆ ನೀಡಿ ಆದಷ್ಟು ಪಾರದರ್ಶಕವಾಗಿ ಮಾಡಲಾಗುತ್ತಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಗೆ ಶಾಶ್ವತ ನಿಯಮಾವಳಿ ರಚಿಸಲು ಸಮಿತಿ ರಚಿಸಲು ಅಗತ್ಯತೆ ಕಂಡು ಬರುವುದಿಲ್ಲ ಎಂದು ಆಯುಕ್ತರು ಟಿಪ್ಪಣಿ ಹಾಕಿದ್ದರು.
ಅದೇ ರೀತಿ ವಿಧಾನಪರಿಷತ್‌ನ ಜೆಡಿಎಸ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಅವರು ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್ ಡಿ ಕುಮಾರಸ್ವಾಮಿ ಅವರಿಗೂ 2018ರ ಜೂನ್ 19ರಂದು ಪತ್ರ ಬರೆದಿದ್ದರು.
‘ರಾಜ್ಯದ ಪದವಿ ಕಾಲೇಜುಗಳಲ್ಲಿ ಕಳೆದ 15-20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು ಸೇವಾ ಭದ್ರತೆ ಇಲ್ಲದೇ ಜೀವನ ನಡೆಸುವುದು ದುಸ್ತರವಾಗಿದೆ. ಇವರಲ್ಲಿ ಕೆಲವರಿಗೆ ವಯೋಮಿತಿ ಮೀರಿರುವುದರಿಂದ ಬೇರೆಲ್ಲೂ ನೇಮಕಾತಿಗೆ ಅವಕಾಶವಿಲ್ಲ. ಆದ್ದರಿಂದ ಅವರ ಸೇವೆಯನ್ನು ಮಾನವೀಯತೆಯ ಆಧಾರದ ಮೇಲೆ ವಿಶೇಷ ನಿಯಮಾವಳಿಗಳನ್ನು ರೂಪಿಸಿ ಅವರ ವಿದ್ಯಾರ್ಹತೆ ಅನಸುಆರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಸೇವಾ ವಿಲೀನ ಮಾಡುವುದರೊಂದಿಗೆ ಖಾಯಂ ಮಾಡಬೇಕು,’ ಎಂದು ಕೋರಿದ್ದರು.