ಅರವಿಂದ್‌ ಜಾಧವ್‌ ಭೂ ಹಗರಣ ಪ್ರಕರಣ; ಮುನೀಶ್‌ ಮೌದ್ಗಿಲ್‌ರನ್ನು ದಾರಿತಪ್ಪಿಸಿದರೇ ಅಧಿಕಾರಿಗಳು?

ಬೆಂಗಳೂರು; ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ತಾಯಿ ಹಾಗೂ ಮತ್ತಿತರರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಸಲು ಭೂ ದಾಖಲೆಗಳ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕರು ನೆರವು ನೀಡಿದ್ದಾರೆ ಎಂಬ ಪ್ರಕರಣದಲ್ಲಿ ಭೂ ಮಾಪನ ಇಲಾಖೆಯ ಆಯುಕ್ತ ಹಿರಿಯ ಐಎಎಸ್‌ ಅಧಿಕಾರಿ ಮುನೀಶ್‌ ಮೌದ್ಗಿಲ್‌ ಅವರನ್ನು ಕೆಳ ಹಂತದ ಅಧಿಕಾರಿಗಳು ದಾರಿತಪ್ಪಿಸಿರುವುದು ಇದೀಗ ಬಹಿರಂಗವಾಗಿದೆ.

 

ಪ್ರಕರಣ ಕುರಿತು ಪರಿಶೀಲನೆ ನಡೆಸಿದ್ದ ಅಂದಿನ ಭೂ ದಾಖಲೆಗಳ ಉಪ ನಿರ್ದೇಶಕಿ ವಿಜಯ ಭವಾನಿ ಅವರು ತಪ್ಪು ವರದಿ ಸಲ್ಲಿಸಿದ್ದರು ಮತ್ತು ಇದೇ ವರದಿಯನ್ನು ಭೂ ಮಾಪನ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ಸರಿಯಾಗಿ ಪರಿಶೀಲನೆ ನಡೆಸದೆಯೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರವಾನಿಸಿದ್ದರು ಎಂಬುದು ತಿಳಿದು ಬಂದಿದೆ.

 

ಈ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ  ಭೂ ದಾಖಲೆ ಇಲಾಖೆಯ ಹಿಂದಿನ  ಜಂಟಿ ನಿರ್ದೇಶಕರು ವಿಶೇಷ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿರುವ ಬೆನ್ನಲ್ಲೇ ಮುನೀಶ್‌ ಮೌದ್ಗಿಲ್‌ ಅವರನ್ನು ದಾರಿ ತಪ್ಪಿಸಿರುವುದು ಮುನ್ನೆಲೆಗೆ ಬಂದಿದೆ.

 

ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಮೂಲ ಮಂಜೂರಿ ದಾಖಲೆಗಳು, 2010ರಲ್ಲಿ ಅಂದಿನ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶ, 2016ರಲ್ಲಿ ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿ ಭೂಮಾಪನ ಶಾಖೆಗೆ ಕಳಿಸಿದ್ದ ಪೋಡಿ ಪ್ರಸ್ತಾವನೆ, ಭೂ ಮಾಪನ ಅಧಿಕಾರಿಗಳಿಂದ ಆದ ಪೋಡಿ ನಡವಳಿಗಳ ಬಗ್ಗೆ ನೈಜ ಮಾಹಿತಿಯನ್ನು ಮುನೀಶ್‌ ಮೌದ್ಗಿಲ್‌ ಅವರ ಗಮನಕ್ಕೆ ತರದಯೇ ವಿಜಯ ಭವಾನಿ ಅವರು ಮುಚ್ಚಿಟ್ಟಿದ್ದರು ಎಂಬ ಗುರುತರವಾದ ಆರೋಪವೂ ಕೇಳಿ ಬಂದಿದೆ.

 

ಪ್ರಕರಣದಲ್ಲಿ ವಸ್ತುನಿಷ್ಠ ಅಂಶಗಳ ವಿವರ ಇಲ್ಲಿದೆ

 

ಅರವಿಂದ್ ಜಾದವ್‌ರವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಅವಧಿಯಲ್ಲಿ ಅವರ ತಾಯಿಯ ಹೆಸರಿಗೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ ಹಾಗೂ ಅಕ್ರಮವಾಗಿ ಪೋಡಿ ಮಾಡಿಸಿಕೊಳ್ಳಲು ಕಂದಾಯ ಅಧಿಕಾರಿಗಳು ಸಹಕರಿಸಿರುತ್ತಾರೆ ಎಂದು ಖಾಸಗಿಯವರೊರ್ವರು ಎ.ಸಿ.ಬಿ.ಗೆ ದೂರು ದಾಖಲಿಸಿದ್ದರು.

 

ಇದನ್ನು ಪರಿಶೀಲಿಸಬೇಕೆಂದು ಭೂಮಾಪನ ಇಲಾಖೆಯ ಆಯುಕ್ತರಿಗೆ ಎಸಿಬಿ ಕೋರಿತ್ತು. ಅಂದಿನ ಡಿ.ಡಿ.ಎಲ್.ಆರ್. (ಪಿ.ಎಂ.ಯು) ರವರಾದ ವಿಜಯ ಭವಾನಿ, ರಾಮನಗರದ ಅಂದಿನ ಡಿ.ಡಿ.ಎಲ್.ಆರ್ ಉಮೇಶ್ ಹಾಗೂ ಎ.ಡಿ.ಎಲ್.ಆರ್. ಅವರನ್ನೊಳಗೊಂಡ ತಂಡವನ್ನು ರಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

 

ನೋಟೀಸ್ ನೀಡದೇ ನಕ್ಷೆ ತಯಾರಿಸಲಾಗಿತ್ತೇ?

 

ಆಯುಕ್ತರ ಸೂಚನೆಯಂತೆ ಪರಿಶೀಲನೆ ಕೈಗೆತ್ತಿಕೊಂಡಿದ್ದ ಭೂ ಮಾಪಕರು ಸರ್ವೆ ನಂಬರ್‌ನ ಎಲ್ಲರಿಗೂ ನೋಟೀಸ್‌ ನೀಡದೆಯೇ ನಕ್ಷೆ ತಯಾರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ನಕ್ಷೆಯನ್ನು ತಹಶೀಲ್ದಾರ್‌ ಮೂಲಕ ರಾಮನಗರದ ಉಪ ನಿರ್ದೇಶಕರಿಗೆ ರವಾನಿಸಲಾಗಿತ್ತು. ಆ ನಂತರ ಇದೇ ನಕ್ಷೆಯು ಉಪ ನಿರ್ದೇಶಕಿ ವಿಜಯಭವಾನಿ ಅವರಿಗೂ ರವಾನಿಸಲಾಗಿತ್ತು. ಈ ಕಡತವನ್ನು ವಿಜಯ ಭವಾನಿ ಅವರು ಸಮರ್ಪಕವಾಗಿ ಪರಿಶೀಲನೆ ನಡೆಸದೆಯೇ ಇದಕ್ಕೆ ಸಂಬಂಧಪಡದ ಅಂಶಗಳನ್ನು ಕಡತದಲ್ಲಿ ಸೇರಿಸುವ ಮೂಲಕ ಮುನೀಶ್‌ ಮೌದ್ಗಿಲ್‌ ಅವರನ್ನು ದಾರಿತಪ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಜಾಧವ್‌ ತಾಯಿಗೆ ಜಮೀನು ಮಂಜೂರಾಗಿರಲಿಲ್ಲವೇ?

 

ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿರುವ ಆರ್ಜಿದಾರರ ಆರೋಪದ ಪ್ರಕಾರ ಅರವಿಂದ್ ಜಾದವ್ ರವರ ತಾಯಿಗೆ ಜಮೀನು ಮಂಜೂರಾಗಿತ್ತು. ಆದರೆ ನೈಜವಾಗಿ ಈ ಜಮೀನು ಜಾಧವ್‌ ಅವರ ತಾಯಿಗೆ ಮಂಜೂರಾಗಿರಲಿಲ್ಲ. ಬದಲಿಗೆ ಅವರು ಕ್ರಯಕ್ಕೆ ಪಡೆದಿದ್ದರು ಎಂಬ ವಾದವೂ ಕೇಳಿ ಬಂದಿದೆ. ಲಭ್ಯವಿರುವ ಮೂಲ ಮಂಜೂರಿ ಕಡತ ಹಾಗೂ ದಾಖಲೆಗಳು, 2014ರ ಎ.ಸಿ. ನ್ಯಾಯಾಲಯದ ಆದೇಶ, ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶ, 2016ರಲ್ಲಿ ತಹಶೀಲ್ದಾರ್ ಮತ್ತು ಎ.ಸಿ.ರವರಿಂದ ಭೂಮಾಪನ ಶಾಖೆಗೆ ಕಳುಹಿಸಿದ ಪೋಡಿ ಪ್ರಸ್ತಾವನೆ, ಭೂಮಾಪನ ಅಧಿಕಾರಿಗಳಿಂದ ಆಗಿರುವ ಪೋಡಿ ನಡವಳಿಗಳನ್ನು ಸಮರ್ಪಕವಾಗಿ ಪರಿಶೀಲನೆ ನಡೆಸಿದರೆ ಜಾಧವ್‌ ಅವರ ತಾಯಿ ಜಮೀನು ಮಂಜೂರಾಗಿರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಜಾಧವ್‌ ತಾಯಿ ಹೆಸರಿಗೆ ಪೋಡಿ ಆಗಿತ್ತೇ?

 

ಪ್ರಸ್ತುತ ವಿವಾದಾತ್ಮಕವಾಗಿರುವ 02 ಎಕರೆ ಜಮೀನನ್ನು 2010ರಲ್ಲಿಯೇ ಅಂದಿನ ಎ.ಸಿ. ಅರವಿಂದ್ ಜಾಧವ್‌ರವರ ತಾಯಿಯ ಹೆಸರಿಗೆ ಆಗಿದ್ದ ಖಾತೆಯನ್ನು ನ್ಯಾಯಾಲಯದಲ್ಲಿ ರದ್ದುಪಡಿಸಿದ್ದರು. ಅದನ್ನು ಮೂಲ ಮಂಜೂರಿದಾರರು ಎಂದು ಹೇಳಲಾಗಿರುವ ರಾಮಕೃಷ್ಣಯ್ಯ ಬಿನ್ ರಾಮಯ್ಯನವರ ಹೆಸರಿಗೆ ಪುನರ್ ಪ್ರತಿಷ್ಠಾಪಿಸಿದ್ದರು. ತದನಂತರ ವಿಶೇಷ ಜಿಲ್ಲಾಧಿಕಾರಿಗಳು ಸಹ ಎ.ಸಿ. ರವರ ಆದೇಶವನ್ನು ಎತ್ತಿಹಿಡಿದಿದ್ದರು. 2016 ರಲ್ಲಿ ಭೂಮಾಪನ ಅಧಿಕಾರಿಗಳು ಸಹ ಇದೇ ಮೂಲ ಮಂಜೂರಿದಾರಾದ ರಾಮಕೃಷ್ಣಯ್ಯ ಬಿನ್ ರಾಮಯ್ಯನವರ ಹೆಸರಿಗೆ ಪೋಡಿ ಮಾಡಿರುತ್ತಾರೆಯೇ ಹೊರತು ಅರವಿಂದ್ ಜಾದವ್ ರವರ ತಾಯಿಯ ಹೆಸರಿಗೆ ಪೋಡಿ ಮಾಡಿರುವುದಿಲ್ಲ ಎಂಬುದು ದಾಖಲೆಗಳಿಂದ ಕಂಡು ಬಂದಿದೆ.

 

ವಿಜಯಭವಾನಿ ಅವರ ವರದಿಯೇ ಅಸಮರ್ಪಕ!

 

ಅರವಿಂದ್‌ ಜಾಧವ್ ಅವರ ತಾಯಿ ಹೆಸರಿಗೆ ಪೋಡಿ ಮಾಡದೇ ಇದ್ದರೂ ಅಂದಿನ ಡಿಡಿಎಲ್‌ಆರ್‌ ವಿಜಯಭವಾನಿ ಅವರು ಭೂಮಾಪನ ಆಯುಕ್ತರಿಗೆ ಅಸಮರ್ಪಕವಾದ ವರದಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಹಾಗೆಯೇ ಅರ್ಹರಲ್ಲದ ವ್ಯಕ್ತಿಗೆ ಭೂ ಮಂಜೂರಾತಿ ಮಾಡಿ 2016ರ ಜನವರಿ 14ರಂದು ಜಿಲ್ಲಾಧಿಕಾರಿಗಳಿಗೆ ಕಡತ ಮಂಡಿಸಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದರು ಹಾಗೂ ಆಕ್ರಮ ವ್ಯಕ್ತಿಯಾದ ರಾಮಕೃಷ್ಣಯ್ಯ ಬಿನ್ ರಾಮಯ್ಯ ಇವರಿಗೆ ಪೋಡಿ ದುರಸ್ತಿ ಮಾಡಿರುತ್ತಾರೆ ಎಂದು ಭೂಮಾಪನ ಆಯುಕ್ತರಿಗೆ ವಿಜಯಭವಾನಿ ಅವರು ವರದಿ ಸಲ್ಲಿಸಿದ್ದರು ಎಂಬುದು ಗೊತ್ತಾಗಿದೆ.

 

ರಾಮಕೃಷ್ಣಯ್ಯ ಬೋಗಸ್‌ ವ್ಯಕ್ತಿಯೇ?

 

2010ರ ಎ.ಸಿ. ನ್ಯಾಯಾಲಯದ ಆದೇಶ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಮಕೃಷ್ಣಯ್ಯ ಬಿನ್ ರಾಮಯ್ಯನವರು ಬೋಗಸ್‌ ವ್ಯಕ್ತಿ ಹೇಗಾಗುತ್ತಾರೇ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಆದರೆ ವಾಸ್ತವದಲ್ಲಿ ಮೂಲ ಮಂಜೂರಿದಾರರಾಗಿದ್ದಾರೆ. ತಾರಾಬಾಯಿ ಮಾರುತಿ ರಾವ್ ಜಾಧವ್‌ರವರ ಹೆಸರಿನಲ್ಲಿದ್ದ ಖಾತೆಯನ್ನು ಅಂದಿನ ಎ.ಸಿ. 2010ರಲ್ಲಿ ರದ್ದು ಪಡಿಸಿದ ನಂತರ ಅದನ್ನು ಮೂಲ ಮಂಜೂರಿದಾರರಾದ ರಾಮಕೃಷ್ಣಯ್ಯ ಬಿನ್ ರಾಮಯ್ಯನವರ ಹೆಸರಿಗೆ ಪುನರ್ ಪ್ರತಿಷ್ಟಾಪಿಸಿದ್ದರು. ಇದನ್ನು ಗಮನಿಸುವಲ್ಲಿ ವಿಜಯಭವಾನಿರವರು ವಿಫಲರಾಗಿದ್ದಾರೆ. ಇದನ್ನು ಗಮನಿಸದೆಯೇ ಭೂಮಾಪನ ಆಯುಕ್ತರಿಗೆ ತಪ್ಪು ವರದಿಯನ್ನು ನೀಡಿದ್ದಾರೆ ಎಂಬ ಮತ್ತೊಂದು ವಾದವೂ ಕೇಳಿ ಬಂದಿದೆ.

 

ಭೂಮಾಪನ ಅಧಿಕಾರಿಗಳು ಯಾವುದೇ ಹಂತದಲ್ಲಿ ಜಿಲ್ಲಾಧಿಕಾರಿಗಳಿಗೆ ಮಂಜೂರಾತಿ ಬಗ್ಗೆ ಶಿಫಾರಸ್ಸನ್ನು ಮಾಡಿರುವುದು ಕಂಡುಬರುವುದಿಲ್ಲ. ಅಲ್ಲದೆ 2010ರಲ್ಲಿ ಅಂದಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯವು ( ಪ್ರಕರಣ ಸಂಖ್ಯೆ : ಆರ್.ಎ. 146/09-10- ದಿನಾಂಕ : 30-04-2010) ನೀಡಿರುವ ಆದೇಶದನ್ವಯ (ಆರ್.ಪಿ. 10/2003-4) ರಾಮಕೃಷ್ಣಯ್ಯ ಬಿನ್ ರಾಮಯ್ಯ ಎಂಬುವವರ ಹೆಸರಿಗೆ ಇದ್ದ ಖಾತೆಯನ್ನು ರದ್ದುಪಡಿಸಿಯೇ ಇಲ್ಲ ಎಂದು ಕಂಡು ಬಂದಿದೆ ಎಂಬ ವಾದವಿದೆ.

 

ಎ ಸಿ ಆದೇಶವನ್ನು ಎತ್ತಿ ಹಿಡಿದಿದ್ದ ವಿಶೇಷ ಜಿಲ್ಲಾಧಿಕಾರಿ

 

ಪ್ರಕರಣದ ಕುರಿತು ವಿಶೇಷ ಜಿಲ್ಲಾಧಿಕಾರಿಗಳ ನ್ಯಾಯಾಲಯವು (ಪ್ರಕರಣ ಸಂಖ್ಯೆ : ಆರ್.ಪಿ. 114/2010-11- ದಿನಾಂಕ : 20-07-2011 ) ಆದೇಶವನ್ನು ಹೊರಡಿಸುವ ಮೂಲಕ 2010ರ ಎಪ್ರಿಲ್‌ 30ರಂದು ಉಪ ವಿಭಾಗಾಧಿಕಾರಿಗಳು ಮಾಡಿದ್ದ ಆದೇಶವನ್ನೇ ಎತ್ತಿ ಹಿಡಿದಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿಗಳು ತಾರಾಬಾಯಿ ಮಾರುತಿರಾವ್ ಜಾಧವ್ ಇವರ ಹೆಸರಿನಲ್ಲಿದ್ದ ಖಾತೆಯನ್ನು ರದ್ದುಪಡಿಸಿ ಮೂಲ ಮಂಜೂರಿದಾರರ ಹೆಸರಿಗೆ ಖಾತೆಯನ್ನು ಪುನರ್ ಪ್ರತಿಷ್ಟಾಪಿಸಿ ಆದೇಶ ಮಾಡಿದ್ದರು. ಅಂದರೆ ಮೂಲ ಮಂಜೂರಿದಾರರಾದ ರಾಮಕೃಷ್ಣಯ್ಯ ಬಿನ್ ರಾಮಯ್ಯ ಇವರ ಹೆಸರಿಗೆ ಖಾತೆಯನ್ನು ಪುನರ್‌ ಪ್ರತಿಷ್ಟಾಪಿಸಿದ್ದಾರೆ ಎಂಬುದು ನಿಚ್ಚಳವಾಗಿ ಕಂಡು ಬಂದಿದೆ.

 

ಈ ಮೇಲಿನ ಆದೇಶಗಳನ್ನು ಅನುಸರಿಸಿದ್ದ ತಹಶೀಲ್ದಾರ್‌, ಉಪ ವಿಭಾಗಾಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಕಳಿಸಿದ್ದ ಪ್ರಸ್ತಾವನೆಗಳಿಗೆ 2016ರಲ್ಲಿ ತಹಸೀಲ್ದಾರರು, ಉಪವಿಭಾಗಾಧಿಕಾರಿಗಳು, ಭೂದಾಖಲೆಗಳ ಸಹಾಯಕ ನಿರ್ದೇಶಕರು ಕಳುಹಿಸಿದ ಪ್ರಸ್ತಾವನೆಯ ಅನುಸಾರ ಭೂದಾಖಲೆಗಳ ಜಂಟಿ ನಿರ್ದೇಶಕರು ಕಛೇರಿ ಮಟ್ಟದಲ್ಲಿ ಕಡತ ಪರಿಶೀಲಿಸಿಕೊಂಡು ಮೇಲು ಸಹಿ ಮಾಡಿದ್ದರು ಎಂದು ಗೊತ್ತಾಗಿದೆ.

 

ಹೀಗಾಗಿ ರಾಮಕೃಷ್ಣಯ್ಯ ಬಿನ್ ರಾಮಯ್ಯ ಎಂಬುವವರ ಹೆಸರಿಗೆ 02 ಎಕರೆ ಜಮೀನು ಮಂಜೂರಾಗಿರುವುದು ಮಂಜೂರಾತಿ ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ವಾದ ಕೇಳಿಬಂದಿದೆಯಲ್ಲದೆ ಇದು ಬೋಗಸ್ ಪ್ರಕರಣವಲ್ಲವೆಂದು ಹೇಳಲಾಗುತ್ತಿದೆ. ವಿಜಯಭವಾನಿ ಅವರು ವರದಿ ಮಾಡಿರುವಂತೆ ಭೂಮಾಪನ ಅಧಿಕಾರಿಗಳು ಮಂಜೂರಿ ಬಗ್ಗೆ ಯಾವುದೇ ಶಿಫಾರಸ್ಸನ್ನು ಯಾವುದೇ ಹಂತದಲ್ಲಿಯೂ ಮಾಡಿರುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ರಾಮನಗರದ ಡಿ.ಡಿ.ಎಲ್.ಆರ್. ಉಮೇಶ್‌ ಎಂಬುವರು, ಡಿ.ಡಿ.ಎಲ್.ಆರ್. (ಪಿ.ಎಂ.ಯು) ವಿಜಯಭವಾನಿರವರಿಗೆ ಸಲ್ಲಿಸಿದ್ದ ವರದಿ ಮತ್ತು ನಕ್ಷೆಯಲ್ಲಿ ರಾಮಕೃಷ್ಣಯ್ಯ ಬಿನ್ ಬಸಪ್ಪ @ ರಾಮಯ್ಯ ಎಂಬುವವರು ತೋರಿಸಿರುವ ಅನುಭವದಂತೆ ನಕ್ಷೆ ತಯಾರಿಸಲಾಗಿದೆ ಎಂದು ಬರೆದಿರುತ್ತಾರೆ. ಹಾಗೆಯೇ ರಾಮಕೃಷ್ಣಯ್ಯ ಬಿನ್ ಬಸಪ್ಪ @ ರಾಮಯ್ಯ ಅವರು 2010ರಲ್ಲಿ ತಾರಾಬಾಯಿ ಮಾರುತಿರಾವ್ ಜಾಧವ್‌ರವರೊಂದಿಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರು. ಇವರ ಕ್ಲೈಮ್‌ನ್ನು ಉಪವಿಭಾಗಾಧಿಕಾರಿಗಳು ತಿರಸ್ಕರಿಸಿದ್ದರು. ಬೋಗಸ್‌ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ವಿಜಯ ಭವಾನಿರವರು ಆಯುಕ್ತರಿಗೆ ತಪ್ಪಾದ ವರದಿಯನ್ನು ಸಲ್ಲಿಸಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.

 

ಇನ್ನು ವಿಜಯಭವಾನಿ ಅವರು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿಯೇ ಸುಮಾರು 20 ವರ್ಷ ಕೆಲಸ ನಿರ್ವಹಿಸಿದ್ದಾರೆಯೇ ವಿನಃ ಕ್ಷೇತ್ರ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಕೆಲಸ ಮಾಡಿಲ್ಲ ಎನ್ನಲಾಗಿದೆ. ಕ್ಷೇತ್ರ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಕಾರ್ಯನಿರ್ವಹಿಸದ ವಿಜಯಭವಾನಿರವರು ಭೂಮಾಪನ ಆಯುಕ್ತರಿಗೆ ತಪ್ಪು ವರದಿಯನ್ನು ನೀಡಿರುವುದೇ ಎಲ್ಲಾ ಪ್ರಮಾದಗಳಿಗೆ ಕಾರಣ ಎಂದು ಹೇಳಲಾಗುತ್ತಿದೆ.

 

ಅಲ್ಲದೆ ಪ್ರಕರಣದಲ್ಲಿ ವಾಸ್ತವ ಸಂಗತಿಗಳನ್ನು ಬದಿಗಿರಿಸಿ ಭೂಮಾಪನ ಇಲಾಖೆಯ ಆಯುಕ್ತರಿಗೆ ತಪ್ಪು ತಿಳಿವಳಿಕೆಯನ್ನು ಉಂಟು ಮಾಡಿದ್ದಾರೆ. ಸದ್ಯ ನಿವೃತ್ತಿಯಾಗಿರುವ ವಿಜಯ ಭವಾನಿ ಅವರು ನೀಡಿರುವ ವರದಿಯಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವೃಥಾ ಆಪಾದನೆಗೆ ಗುರಿಯಾಗಿದ್ದಾರೆ. ಹಾಗೆಯೇ ಇವರು ನೀಡಿರುವ ತಪ್ಪು ವರದಿಯಿಂದಾಗಿಯೇ ತನಿಖಾಧಿಕಾರಿಗಳ ಸಮಯವೂ ವ್ಯರ್ಥವಾಗಿದೆ ಎಂದು ಹೇಳಲಾಗುತ್ತಿದೆ.

the fil favicon

SUPPORT THE FILE

Latest News

Related Posts