718 ಪಂಚಾಯ್ತಿಗಳಲ್ಲಿ ಅಕ್ರಮ; ಪರಿಶೋಧನೆಗೆ ಒಳಪಡದ 29.87 ಕೋಟಿ ರು. ಮೊತ್ತದ ಓಚರ್‌, ದಾಖಲಾತಿಗಳು

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರವು 13 ಮತ್ತು 14ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ ನೀಡಿದ್ದ ಒಟ್ಟು ಅನುದಾನದ ಪೈಕಿ 1,592 ಕೋಟಿ ರು. ವೆಚ್ಚವಾಗದೇ ಬಾಕಿ ಉಳಿದಿತ್ತು ಎಂಬುದು ಲೆಕ್ಕ ಪರಿಶೋಧನೆ ವೇಳೆಯಲ್ಲಿ ಕಂಡು ಬಂದಿದೆ.

 

ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ 2018-19ನೇ ಸಾಲಿನ ಕ್ರೋಢೀಕೃತ ವಾರ್ಷಿಕ ಲೆಕ್ಕಪರಿಶೋಧನೆ ವರದಿಯು 13 ಮತ್ತು 14ನೇ ಹಣಕಾಸು ಆಯೋಗದ ಯೋಜನೆಯಡಿ ಬಳಕೆಯಾಗದೇ ಉಳಿದಿರುವ ಮೊತ್ತ ಹಾಗೂ ಲೆಕ್ಕ ಪರಿಶೋಧನೆಗೆ ಹಾಜರುಪಡಿಸದೇ ಇರುವ ಓಚರ್‌ಗಳ ಮೊತ್ತವನ್ನು ವಿವರಿಸಿದೆ.

 

13 ಮತ್ತು 14 ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ 1,722 ಕೋಟಿ, ಇತರೆ ಮೂಲಗಳಿಂದ 62 ಕೋಟಿ, ಹಿಂದಿನ ಸಾಲಿನ ಆರಂಭಿಕ ಶಿಲ್ಕು 81.54 ಕೋಟಿ, ಸೇರಿ ಒಟ್ಟು 2,599.67 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರವು ಸ್ವೀಕರಿಸಿತ್ತು. ಈ ಪೈಕಿ 1,006.87 ಕೋಟಿ ರು. ವೆಚ್ಚವಾಗಿತ್ತು. ಈ ಸಾಲಿನಲ್ಲಿ 1,592 ಕೋಟಿ ರು.ವೆಚ್ಚವಾಗದೇ ಉಳಿದಿತ್ತು ಎಂದು ಲೆಕ್ಕ ಪರಿಶೋಧನೆ ವರದಿಯು ಹೊರಗೆಡವಿದೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮತೀಯ ಸಾಮರಸ್ಯ ಹಾಳುಗೆಡುವುದರಲ್ಲಿಯೇ ಮಗ್ನರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಲೆಕ್ಕ ಪತ್ರ ಇಲಾಖೆ ನೀಡಿರುವ ವರದಿ ಆಧರಿಸಿ ಲೋಪಗಳನ್ನು ತಡೆಗಟ್ಟುಲು ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿಲ್ಲ.

 

ಈ ಎರಡೂ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ 2018-19ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಬಾಗಲಕೋಟೆ ಸೇರಿದಂತೆ 21 ಜಿಲ್ಲೆಗಳ 718 ಗ್ರಾಮಪಂಚಾಯ್ತಿಗಳಲ್ಲಿ 29.87 ಕೋಟಿ ರು. ಮೊತ್ತದಷ್ಟು ಓಚರ್‌/ದಾಖಲಾತಿಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಿರಲಿಲ್ಲ. ಇದನ್ನು ಲೆಕ್ಕ ಪರಿಶೋಧನೆಗೆ ಪರಿಶೀಲನೆ ಮಾಡಲು ಸಾಧ್ಯವಾಗದ ಕಾರಣ ಇಷ್ಟು ಪಂಚಾಯ್ತಿಗಳಲ್ಲಿ ಆಗಿರಬಹುದಾದ ಸಂಭವನೀಯನ ಅಕ್ರಮ, ವಂಚನೆ ಮತ್ತು ದುರುಪಯೋಗಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇರುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂಬುದು ವರದಿಯಿಂದ ಗೊತ್ತಾಗಿದೆ.

 

ಒಟ್ಟು 29.79 ಕೋಟಿ ರು. ಪೈಕಿ 1.08 ಕೋಟಿಯಷ್ಟೇ ವಸೂಲು ಮಾಡಲಾಗಿದೆ. ಬಳ್ಳಾರಿ, ಚಾಮರಾಜನನಗರ, ಬೀದರ್‌, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಕೊಡಗು, ರಾಯಚೂರು, ಶಿವಮೊಗ್ಗ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬಿಡಿಗಾಸನ್ನೂ ವಸೂಲು ಮಾಡಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.

 

ಚಾಮರಾಜನಗರ, ದಾವಣಗೆರೆ, ಗದಗ್‌, ಮಂಡ್ಯ, ಉಡುಪಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿನ ಒಟ್ಟು 89 ಪಂಚಾಯ್ತಿಗಳಲ್ಲಿ ಅಂದಾಜು ಪಟ್ಟಿ ತಯಾರಿಸದೇ ಕಾಮಗಾರಿ ನಿರ್ವಹಿಸಿಲ್ಲ. ಅಳತಗೆ ಪುಸ್ತಕದಲ್ಲಿ ದಾಖಲಿಸದೇ ಕಾಮಗಾರಿ ನಿರ್ವಹಿಸಲಾಗಿದೆ. ಮೂಲ ಅಂದಾಜು ಪಟ್ಟಿ ಇಲ್ಲದೆಯೇ ಕಾಮಗಾರಿ ಬಿಲ್‌ ಪಾವತಿ, ಅಂದಾಜು ಪಟ್ಟಿಗೆ ತಾಂತ್ರಿಕ ಮಂಜೂರಾತಿ ಪಡೆಯದಿರುವುದು, ಕಾಮಗಾರಿಗಳಿಗೆ ಸಂಬಂಧಿಸಿದ ಆಡಳಿತ ಮಂಜೂರಾತಿ, ತಾಂತ್ರಿಕ ಮಂಜೂರಾತಿ ಇಲ್ಲದಿರುವುದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮೋದನೆ ಇಲ್ಲದೇ ಕಾಮಗಾರಿ ಕೈಗೊಂಡಿರುವುದು ಮತ್ತು ಮುಕ್ತಾಯ ಪ್ರಮಾಣ ಪತ್ರ ಇಲ್ಲದಿರುವ ಪ್ರಕರಣಗಳಲ್ಲಿ ಒಟ್ಟು 1.09 ಕೋಟಿ ರು. ಆಕ್ಷೇಪಣೆಯಲ್ಲಿಡಲಾಗಿದೆ. ಈ ಪೈಕಿ ಕೇವಲ 0.23 ಲಕ್ಷ ರು.ಮಾತ್ರ ವಸೂಲಾಗಿದೆ.

 

ಬೆಳಗಾವಿ ಜಿಲ್ಲೆಯ 30 ಪಂಚಾಯ್ತಿಗಳು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿನ 90 ಪಂಚಾಯ್ತಿಗಳಲ್ಲಿ ಕಾಮಗಾರಿಗಳ ವಿವರವನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿರಲಿಲ್ಲ. ಕ್ರಿಯಾ ಯೋಜನೆಗೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ಒಟ್ಟು 3.07 ಕೋಟಿ ರು. ವೆಚ್ಚ ಮಾಡಲಾಗಿತ್ತು. ಈ ಪೈಕಿ ಕೇವಲ 4.74 ಲಕ್ಷ ರು. ಮಾತ್ರ ವಸೂಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

13 ಮತ್ತು 14ನೇ ಹಣಕಾಸು ಯೋಜನೆ, ಉದ್ಯೋಗ ಖಾತರಿ, ನೀರು ಸರಬರಾಜು ಮತ್ತು ಇತರೆ ಯೋಜನೆ ಕಾಮಗಾರಿ ಬಿಲ್‌ಗಳನ್ನು ಪಾಸು ಮಾಡುವಲ್ಲಿ 15 ಜಿಲ್ಲೆಗಳ 147 ಗ್ರಾಮ ಪಂಚಾಯ್ತಿಗಳಲ್ಲಿ ಬಿಲ್‌ಗಳ ಮೊತ್ತಕ್ಕಿಂತ 33.44 ಲಕ್ಷ ರು. ಅಧಿಕ ಮೊತ್ತ ಪಾವತಿ ಮಾಡಿರುವುದು ವರದಿಯಿಂದ ಕಂಡು ಬಂದಿದೆ. ಇದು ಕರ್ನಾಟಕ ಆರ್ಥಿಕ ಸಂಹಿತೆ 1958ರ ಅನುಚ್ಛೇದ 16ರ ವಿರುದ್ಧವಾಗಿದೆ.

 

ಕಾಮಗಾರಿ ಮತ್ತು ಖರೀದಿಗಳಲ್ಲಿ ಗುಣಮಟ್ಟ ಪರೀಕ್ಷೆ ಮಾಡಿಸದಿರುವುದು ಸೇರಿದಂತೆ ಇನ್ನಿತರೆ ನ್ಯೂನತೆಗಳನ್ನು ಲೆಕ್ಕ ಪರಿಶೋಧನೆಯು ಬಹಿರಂಗಪಡಿಸಿದೆ. ಬಾಗಲಕೋಟೆ ಜಿಲ್ಲೆಯ 88 ಪಂಚಾಯ್ತಿ ಸೇರಿದಂತೆ ರಾಜ್ಯದ 11 ಜಿಲ್ಲೆಗಳ 318 ಪಂಚಾಯ್ತಿಗಳಲ್ಲಿ ಕಂಡು ಬಂದಿರುವ ನ್ಯೂನತೆಗಳಿಂದಾಗಿ ಒಟ್ಟು 7.61 ಕೋಟಿ ರು. ಆಕ್ಷೇಪಣೆಯಲ್ಲಿರಿಸಿದೆ.

the fil favicon

SUPPORT THE FILE

Latest News

Related Posts