3 ವರ್ಷದಲ್ಲಿ ಪೂರ್ಣಗೊಂಡಿದ್ದು 1.05 ಲಕ್ಷ ಮನೆಗಳಷ್ಟೇ; 2.96 ಲಕ್ಷವೆಂದು ಭಾಷಣ ಮಾಡಿಸಿದ್ದೇಕೆ?

ಬೆಂಗಳೂರು; ಕಳೆದ ಮೂರು ವರ್ಷದ ಅವಧಿಯಲ್ಲಿ (2016-17ರಿಂದ 2019-20) ಪ್ರಧಾನಮಂತ್ರಿ ಆವಾಸ್‌ ಗ್ರಾಮೀಣ್‌ ಯೋಜನೆ ಅಡಿಯಲ್ಲಿ ನಿಗದಿಪಡಿಸಿದ್ದ ಒಟ್ಟು ಗುರಿಗೆ ಎದುರಾಗಿ 2022ರ ಫೆಬ್ರುವರಿವರೆಗೆ 1,05,637 ಮನೆಗಳಷ್ಟೇ ಪೂರ್ಣಗೊಂಡಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯಪಾಲರಿಂದ ಪ್ರಸ್ತುತ ಸರ್ಕಾರದ ಅವಧಿಯಲ್ಲಿಯೇ 2.96 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ವಿಧಾನಮಂಡಲದ ಜಂಟಿ ಅಧಿವೇಶನದ ಭಾಷಣದಲ್ಲಿ ಹೇಳಿಸಿ ಬೆನ್ನು ತಟ್ಟಿಕೊಂಡಿದೆ.

 

ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಯುಕ್ತ ಸಮಿತಿಯು 2022ರ ಫೆ.11ರಂದು ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ ವಸತಿ ಇಲಾಖೆಯು ಭಾರತ ಸರ್ಕಾರ ನಿಗದಿಪಡಿಸಿದ್ದ ಗುರಿ, ನೀಡಿದ್ದ ಮಂಜೂರಾತಿ, ಪರಿಷ್ಕೃತ ಗುರಿ ಮತ್ತು ಪೂರ್ಣಗೊಂಡಿರುವ ಮನೆಗಳಿಗೆ ಸಂಬಂಧಿಸಿದಂತೆ ನೀಡಿರುವ ದಾಖಲೆಗಳ ಪ್ರಕಾರ ಕಳೆದ ಮೂರು ವರ್ಷದಲ್ಲಿ 1,05,637ಮನೆಗಳಷ್ಟೇ ಪೂರ್ಣಗೊಂಡಿದೆ. ಅಧಿಕಾರಯುಕ್ತ ಸಮಿತಿಯು ನಡೆಸಿದ್ದ ಪೂರ್ವಭಾವಿ ಸಭೆಯ ಸಮಗ್ರ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಧಿಕಾರಯುಕ್ತ ಸಮಿತಿ ಪೂರ್ವಭಾವಿ ಸಭೆ

 

2016-17ರಲ್ಲಿ 93,065 ಮನೆಗಳ ನಿರ್ಮಾಣಕ್ಕೆ ಭಾರತ ಸರ್ಕಾರವು ಗುರಿ ನಿಗದಿಪಡಿಸಿತ್ತು. ಈ ಪೈಕಿ 92,394 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ತದನಂತರ ಇದನ್ನು ಪರಿಷ್ಕರಿಸಿದ್ದ ಭಾರತ ಸರ್ಕಾರವು 80,272 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿತ್ತು. ಈ ಪೈಕಿ 66,381 ಮನೆಗಳು ಪೂರ್ಣಗೊಂಡಿದ್ದವು.
2017-18ರಲ್ಲಿ 52,284 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿದ್ದರ ಪೈಕಿ 54,629 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು.

 

ನಂತರ ಇದನ್ನೂ ಪರಿಷ್ಕರಿಸಿದ್ದ ಸರ್ಕಾರವು 43,816 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿತ್ತು. ಇದರಲ್ಲಿ 34,651 ಮನೆಗಳು ಪೂರ್ಣಗೊಂಡಿದ್ದವು. 2019-20ರಲ್ಲಿ 86,000 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿ ಈ ಪೈಕಿ 40,593 ಮನೆಗಳಿಗೆ ಮಂಜೂರಾತಿ ನೀಡಿತ್ತು. ಕಡೆಯಲ್ಲಿ ಇದನ್ನು ಪರಿಷ್ಕರಿಸಿದ್ದ ಭಾರತ ಸರ್ಕಾರವು 42,267 ಮನೆಗಳ ನಿರ್ಮಾಣಕ್ಕೆ ಗುರಿ ನಿಗದಿಪಡಿಸಿತ್ತು. ಈ ಪೈಕಿ ಕೇವಲ 4,605 ಮನೆಗಳಷ್ಟೇ ಪೂರ್ಣಗೊಂಡಿತ್ತು ಎಂಬುದು ಪೂರ್ವಭಾವಿ ಸಭೆಯಲ್ಲಿ ಮಂಡಿಸಿದ್ದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

ಒಟ್ಟಾರೆ ಕಳೆದ ಮೂರೂ ವರ್ಷಗಳಲ್ಲಿ 2,31,349 ಮನೆಗಳಿಗೆ ಆರಂಭದಲ್ಲಿ ಗುರಿನಿಗದಿಪಡಿಸಿ ಈ ಪೈಕಿ 1,87,616 ಮನೆಗಳಿಗೆ ಮಂಜೂರಾತಿ ನೀಡಿ ಕಡೆಯಲ್ಲಿ ಈ ಗುರಿಯನ್ನೂ ಪರಿಷ್ಕರಿಸಿ 1,66,355 ಮನೆಗಳ ನಿರ್ಮಾಣ ಗುರಿ ನಿಗದಿಪಡಿಸಿತ್ತು. ಈ ಪೈಕಿ ಒಟ್ಟಾರೆ 1,05,637 ಮನೆಗಳಷ್ಟೇ ಪೂರ್ಣಗೊಂಡಿದೆ.
2022-23ನೇ ಸಾಲಿನಲ್ಲಿ ನಾಲ್ಕು ಹಂತಗಳಲ್ಲಿ ಒಟ್ಟಾರೆ 44,190 ಮನೆಗಳನ್ನು ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಗುರಿ ನಿಗದಿಪಡಿಸಿಕೊಂಡಿದೆ.

 

ಮೊದಲ ಹಂತದಲ್ಲಿ 11,095, ಎರಡನೇ ಹಂತದಲ್ಲಿ 10, 315, ಮೂರನೇ ಹಂತದಲ್ಲಿ 12,020, ನಾಲ್ಕನೇ ಹಂತದಲ್ಲಿ 10,760 ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಗುರಿ ನಿಗದಿಪಡಿಸಿಕೊಂಡಿದೆ.
ಇನ್ನು ಫೌಂಡೇಷನ್‌ ಹಂತದಲ್ಲಿ 17, 297, ಲಿಂಟಲ್‌ ಹಂತದಲ್ಲಿ 9,281, ರೂಫ್‌ ಹಂತದಲ್ಲಿ 11,078 ಸೇರಿದಂತೆ ಒಟ್ಟಾರೆ 37,656 ಮನೆಗಳ ನಿರ್ಮಾಣ ಹಂತದಲ್ಲಿದೆ. ಅದೇ ರೀತಿ 23,062 ಮನೆಗಳ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. 2016-17 ಮತ್ತು 2017-18ರಲ್ಲಿ ನಿಗದಿಪಡಿಸಿದ್ದ ಒಟ್ಟು ಮನೆಗಳ ಪೈಕಿ 21,261 ಮನೆಗಳನ್ನು 2022ರ ಫೆಬ್ರುವರಿವರೆಗೂ ಬ್ಲಾಕ್‌ ಮಾಡಿರುವುದು ತಿಳಿದು ಬಂದಿದೆ.

 

ಈ ಯೋಜನೆಯಡಿಯಲ್ಲಿ ಮನೆಗಳ ನಿರ್ಮಾಣಕ್ಕೆ (2022-23) 1,530 ಕೋಟಿ ರು. ಮೊತ್ತದ ಪ್ರಸ್ತಾವನೆಯನ್ನು ವಸತಿ ಇಲಾಖೆಯು ಸಲ್ಲಿಸಿದೆ. 2 ಲಕ್ಷ ಮನೆಗಳ ನಿರ್ಮಾಣಕ್ಕೆ ಮೊದಲ ಕಂತಿನಲ್ಲಿ 720 ಕೋಟಿ ರು., ಕೇಂದ್ರದ ಪಾಲು 810. 00 ಕೋಟಿ ರುಪಾಯಿ ಇದರಲ್ಲಿ ಒಳಗೊಂಡಿದೆ. ಸದ್ಯ ಈ ಯೋಜನೆಯ ಲೆಕ್ಕ ಶೀರ್ಷಿಕೆಯಲ್ಲಿ 287.43 ಕೋಟಿ ರು. ಬಾಕಿ ಉಳಿದುಕೊಂಡಿದೆ ಎಂದು ಸಭೆಗೆ ಮಾಹಿತಿ ಒದಗಿಸಿದೆ.

the fil favicon

SUPPORT THE FILE

Latest News

Related Posts