ಗ್ರಾಮ ಪಂಚಾಯ್ತಿಗಳಲ್ಲಿ 409.96 ಕೋಟಿ ರು. ದುರುಪಯೋಗ; ಲೆಕ್ಕಪರಿಶೋಧನೆ ವರದಿ ಬಹಿರಂಗ

Photo Credit; Vijaya Karnataka

ಬೆಂಗಳೂರು; ರಾಜಸ್ವ ಸ್ವೀಕೃತಿಯನ್ನು ಪಂಚಾಯ್ತಿ ನಿಧಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದು, ಸರ್ಕಾರದ ಪರವಾಗಿ ವಸೂಲಿ ಮಾಡಿರುವ ಉಪಕರಗಳನ್ನು ಸರ್ಕಾರಕ್ಕೆ ಜಮೆ ಮಾಡದೇ ಇರುವುದು, ಭರಿಸಲಾಗಿರುವ ವೆಚ್ಚಗಳಿಗೆ ಓಚರ್‌ಗಳನ್ನು ಹಾಜರುಪಡಿಸದಿರುವುದು, ಅನುಮೋದಿತ ಪಟ್ಟಿ ದರಕ್ಕಿಂತ ಹೆಚ್ಚಿನ ದರ ಪಾವತಿಸಿರುವ ಪ್ರಕರಣಗಳೂ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ರಾಜ್ಯದ ಗ್ರಾಮ ಪಂಚಾಯ್ತಿಗಳಲ್ಲಿ ಒಟ್ಟು 409.96 ಕೋಟಿ ರು. ದುರುಪಯೋಗವಾಗಿದೆ.

 

ರಾಜ್ಯದ ಗ್ರಾಮ ಪಂಚಾಯ್ತಿಗಳ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ 2019ರ ಮಾರ್ಚ್‌ 31ಕ್ಕೆ ಅಂತ್ಯಗೊಂಡಂತೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಸಿದ್ಧಪಡಿಸಿರುವ ಲೆಕ್ಕಪರಿಶೋಧನೆ ವರದಿಯು ಗ್ರಾಮ ಪಂಚಾಯ್ತಿಗಳಲ್ಲಿನ ಅಕ್ರಮಗಳ ಸ್ವರ್ಗಸೀಮೆಯನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗ್ರಾಮ ಪಂಚಾಯ್ತಿಗಳ ಕ್ರೋಢಿಕೃತ ವಾರ್ಷಿಕ ಲೆಕ್ಕ ಪರಿಶೋಧನಾ ವರದಿ ಪ್ರತಿ

 

ಗ್ರಾಮ ಪಂಚಾಯ್ತಿಗಳಿಗೆ ಹಣಕಾಸಿನ ಹರಿವು, ವಿವಿಧ ಲೆಕ್ಕಶೀರ್ಷಿಕೆಗಳಡಿಯಲ್ಲಿ ಭರಿಸಿರುವ ವೆಚ್ಚಗಳು, ತೆರಿಗೆ ದರ ವಿಧಿಸಿರುವುದು, ತೆರಿಗೆಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ, ಜೋಡಿ ದಾಖಲೆ ಲೆಕ್ಕಪದ್ಧತಿ ನಿರ್ವಹಿಸದಿರುವುದು, ರಾಜಸ್ವ ಸ್ವೀಕೃತಿಯನ್ನು ಪಂಚಾಯ್ತಿ ನಿಧಿಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿರುವುದು, ಗ್ರಾಮ ಪಂಚಾಯ್ತಿ ನಿಧಿಯಿಂದಲೇ ಹಣ ಡ್ರಾ ಮಾಡಿ ಸರ್ಕಾರಕ್ಕೆ ಜಮಾ ಮಾಡದೇ ಇರುವುದು, ನಿಯಮಬಾಹಿರ ವೆಚ್ಚ ಭರಿಸಿರುವ ಪ್ರಕರಣಗಳೂ ಸೇರಿದಂತೆ ಹತ್ತಾರು ಪ್ರಕರಣಗಳನ್ನು ಲೆಕ್ಕಪರಿಶೋಧನೆ ವರದಿಯು ಹೊರಗೆಡವಿದೆ. ವರದಿ ಸಲ್ಲಿಕೆಯಾಗಿ ತಿಂಗಳುಗಳು ಕಳೆದರೂ ಸಚಿವ ಈಶ್ವರಪ್ಪ ಅವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ತೆರಿಗೆಗಳ ದರ ವಿಧಿಸುವುದು, ಬೇಡಿಕೆ, ವಸೂಲಾತಿ ಮತ್ತು ಬಾಕಿ ಉಳಿಸಿಕೊಂಡಿರುವ ಸಂಬಂಧ ಲೆಕ್ಕಪರಿಶೋಧನೆ ವರದಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿದೆ. ‘ ಕರ್ನಾಟಕ ಪಂಚಾಯತ್‌ರಾಜ್‌ ನಿಯಮಗಳು 2006ರ ನಿಯಮ 33 ಮತ್ತು 34ರಂತೆ ಗ್ರಾಮ ಪಂಚಾಯ್ತಿಗಳು ವಿಧಿಸುವ ವಿವಿಧ ತೆರಿಗೆಗಳ ಕುರಿತಂತೆ, ಬೇಡಿಕೆ-ವಸೂಲಾತಿ-ಬಾಕಿ ವಹಿಗಳನ್ನು ನಿರ್ವಹಿಬೇಕು.ಆದರೆ ಬಹಳಷ್ಟು ಗ್ರಾಮ ಪಂಚಾಯ್ತಿಗಳು ಇದನ್ನು ನಿರ್ವಹಿಸಿಲ್ಲ. ಈ ರೀತಿ ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸದಿದ್ದಲ್ಲಿ ಮತ್ತು ಸಂಸ್ಥೆವಾರು ಬಾಕಿ ಪಟ್ಟಿ ತಯಾರಿಸದಿದ್ದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಬರುವ ಆದಾಯವು ಕೈ ತಪ್ಪುವ ಸಾಧ್ಯತೆ ಇರುತ್ತದೆ,’ ಎಂದು ವರದಿಯು ಅಭಿಪ್ರಾಯಿಸಿದೆ.

 

ಬಹುತೇಕ ಗ್ರಾಮ ಪಂಚಾಯ್ತಿಗಳು ಲೆಕ್ಕಪರಿಶೋಧನೆಗೆ ವಾರ್ಷಿಕ ಲೆಕ್ಕಪತ್ರಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸುತ್ತಿಲ್ಲ. 2018-19ನೇ ಸಾಲಿನ ಲೆಕ್ಕಪತ್ರಗಳನ್ನು ಜೋಡಿ ದಾಖಲೆ ಲೆಕ್ಕ ಪದ್ಧತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುತ್ತಿಲ್ಲ ಎಂಬುದು ಲೆಕ್ಕಪತ್ರ ತಪಾಸಣೆಯಿಂದ ತಿಳಿದು ಬಂದಿದೆ.

 

ಗ್ರಾಮ ಪಂಚಾಯ್ತಿಗಳಿಂದ ಭರಿಸಲಾದ ವೆಚ್ಚಗಳಿಗೆ ಸಂಬಂಧಿಸಿದಂತೆ ಓಚರ್‌ಗಳನ್ನು ಹಾಜರುಪಡಿಸದೇ ಇರುವ ಪ್ರಕರಣಗಳಲ್ಲಿ 175.25 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ಮನೆ ಮತ್ತು ಕಂದಾಯಗಳ ಮೇಲೆ ಉಪಕರಗಳನ್ನು ವಸೂಲಿ ಮಾಡಿರುವ ಗ್ರಾಮ ಪಂಚಾಯ್ತಿಗಳು ಈ ಪೈಕಿ 91.82 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ. ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿರುವ ಪಂಚಾಯ್ತಿಗಳಲ್ಲಿ 44.64 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿರುವುದು ಲೆಕ್ಕ ಪರಿಶೋಧನಾ ವರದಿಯಿಂದ ಗೊತ್ತಾಗಿದೆ.

 

2018-19ನೇ ಸಾಲಿನಲ್ಲಿ 1,632 ಗ್ರಾಮ ಪಂಚಾಯ್ತಿಗಳಲ್ಲಿನ ರಾಜಸ್ವ ವಸೂಲಿಯಲ್ಲಿ 10.97 ಕೋಟಿ ದುರುಪಯೋಗವಾಗಿದೆ. ಕೊಪ್ಪಳ ಸೇರಿದಂತೆ 5 ಜಿಲ್ಲೆಗಳ 549 ಪಂಚಾಯ್ತಿಗಳು ಶಾಸನಬದ್ಧ ಕಡಿತಗೊಳಿಸಿರುವ 3.86 ಕೋಟಿ ರು. ಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ. ವಿವಿಧ ಯೋಜನೆಗಳ ಬಿಲ್‌ಗಳನ್ನು ಪಾವತಿಸುವಾಗ ಉಪಕರ/ತೆರಿಗೆಗಳನ್ನು ಕಟಾಯಿಸದೇ, ಕಡಿಮೆ ಕಟಾಯಿಸಿರುವ ಬೆಂಗಳೂರು ನಗರ ಜಿಲ್ಲೆಯ 131 ಗ್ರಾಮ ಪಂಚಾಯ್ತಿಗಳು ಸೇರಿದಂತೆ ಒಟ್ಟು 2,417 ಪಂಚಾಯ್ತಿಗಳಲ್ಲಿ 8.80 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

 

ಬೆಳಗಾವಿಯ 363 ಪಂಚಾಯ್ತಿಗಳು ಸೇರಿದಂತೆ ರಾಜ್ಯದ ಒಟ್ಟು 4,347 ಪಂಚಾಯ್ತಿಗಳು ಮನೆ ಮತ್ತು ಕಂದಾಯಗಳ ಮೇಲೆ ವಸೂಲು ಮಾಡಿರುವ 91.92 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ. ಬೆಂಗಳೂರು ನಗರ ಜಿಲ್ಲೆಯ 142 ಪಂಚಾಯ್ತಿಗಳು ಸೇರಿದಂತೆ 550 ಪಂಚಾಯ್ತಿಗಳು ಕಾಮಗಾರಿ ಬಿಲ್‌ಗಳಲ್ಲಿ ಕಟಾಯಿಸಿದ ತೆರಿಗೆಗಳನ್ನು ಪಾವತಿಸಲು ಡ್ರಾ ಮಾಡಿ ಪೂರ್ತಿಯಾಗಿ ಸರ್ಕಾರಕ್ಕೆ ಜಮೆ ಮಾಡದೇ 6.86 ಕೋಟಿ ದುರುಪಯೋಗಪಡಿಸಿಕೊಂಡಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಬಳ್ಳಾರಿಯ 188 ಪಂಚಾಯ್ತಿಗಳು ಸೇರಿದಂತೆ ರಾಜ್ಯದ 26 ಜಿಲ್ಲೆಗಳ 1,165 ಗ್ರಾಮ ಪಂಚಾಯ್ತಿಗಳು ಭರಿಸಲಾದ ವೆಚ್ಚಗಳಿಗೆ ಸಂಬಂಧಿಸಿದಂತೆ ಓಚರ್‌ಗಳನ್ನು ಹಾಜರುಪಡಿಸಿಲ್ಲ. ಹೀಗಾಗಿ ಈ ಪ್ರಕರಣಗಳಲ್ಲಿ 175.25 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿದೆ. ಮಂಡ್ಯದ 100 ಪಂಚಾಯ್ತಿ ಸೇರಿದಂತೆ ರಾಜ್ಯದ 24 ಜಿಲ್ಲೆಗಳ 774 ಪಂಂಚಾಯ್ತಿಗಳಲ್ಲಿ 3.35 ಕೋಟಿ ರು. ದುರುಪಯೋಗವಾಗಿದೆ ಎಂದು ಲೆಕ್ಕಪರಿಶೋಧಕರು ಶಂಕಿಸಿದ್ದಾರೆ.

 

ದಾವಣಗೆರೆಯ 222 ಪಂಚಾಯ್ತಿಗಳು ಬೀದಿ ದೀಪ ಖರೀದಿಯಲ್ಲಿ ಟೆಂಡರ್‌ ಕರೆಯದಿರುವುದು, ನೀರು ಸರಬರಾಜು ಸಾಮಗ್ರಿಗಳ ಖರೀದಿಯ್ಲಿ ಟೆಂಡರ್‌ ಮತ್ತು ಕೊಟೇಷನ್‌ ಕರೆಯದಿರುವುದು ಕೊಟೇಷನ್‌ಗಳಿಗೆ ಸಹಿ ಇಲ್ಲದಿರುವುದು ಸೇರಿದಂತೆ ರಾಜ್ಯದ 24 ಜಿಲ್ಲೆಗಳ 877 ಪಂಚಾಯ್ತಿಗಳು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿದೆ. ಈ ಪ್ರಕರಣಗಳಲ್ಲಿ 44.64 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

 

ಬೆಳಗಾವಿ ಜಿಲ್ಲೆಯ 37 ಪಂಚಾಯ್ತಿಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳ 146 ಪಂಚಾಯ್ತಿಗಳು ವಿವಿಧ ಯೋಜನೆಗಳಿಲ್ಲಿನ ಖರೀದಿ/ಕಾಮಗಾರಿ ವೆಚ್ಚಗಳಿಗೆಂದು 96.28 ಲಕ್ಷ ರುಗ.ಳನ್ನು ಸ್ವಂತ ಹೆಸರಿನ ಮೇಲೆ ಚೆಕ್‌ ಹಣ ಡ್ರಾ ಮಾಡಿವೆ. ಅಲ್ಲದೆ ಈ ಪಂಚಾಯ್ತಿಗಳು ಲೆಕ್ಕಪರಿಶೋಧನೆಯ ಪರಿಶೀಲನೆಗೆ ನೀಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ತಾಂತ್ರಿಕ ಮಂಜೂರಾತಿ ಪಡೆಯದೇ ಕಾಮಗಾರಿ ನಿರ್ವಹಿಸಿರುವ ಪ್ರಕರಣಗಳಲ್ಲಿ 18.17 ಲಕ್ಷ, ನಿಯಮಬಾಹಿರವಾಗಿ ವೆಚ್ಚ ಭರಿಸಿರುವ ಪ್ರಕರಣಗಳಲ್ಲಿ 8.32 ಕೋಟಿ, ಕಾಮಗಾರಿಗಳ ಅಳತೆಗಳನ್ನು ಅಳತೆ ಪುಸ್ತಕದಲ್ಲಿ ನಮೂದಿಸದೇ ಮತ್ತು ಅಳತೆ ಪುಸ್ತಕಗಳನ್ನುಲೆಕ್ಕಪರಿಶೋಧನೆಗೆ ಹಾಜರಪಡಿಸದೇ ಇರುವ ಪ್ರಕರಣಗಳಲ್ಲಿ 3.82 ಕೋಟಿ, ಕಾಮಗಾರಿ ಅಳತೆಯನ್ನುಇಲಾಖೆಯ ಅಭಿಯಂತರರಿಂದ ಪರಿಶೀಲನೆ ಮಾಡಿಸದೇ ಇರುವ ಪ್ರಕರಣಗಳಲ್ಲಿ 17.33 ಕೋಟಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಳ್ಳದೇ ಸಾಮಗ್ರಿ ಇತರೆ ಬಿಲ್ಲಿನ ಮೊತ್ತ ಪಾವತಿಸಿರುವ ಪ್ರಕರಣಗಳಲ್ಲಿ 5 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿರಿಸಲಾಗಿದೆ.

 

ವಿವಿಧ ಯೋಜನೆ/ನಿಧಿಗಳಿಂದ ಮುಂಗಡಗಳನ್ನು ಪಡೆದು ಹಣ ಹೊಂದಾಣಿಕೆ ಮಾಡದೇ ಇರುವ ಪ್ರಕರಣಗಳಲ್ಲಿ ದಕ್ಷಿಣ ಕನ್ನಡದ ಪಂಚಾಯ್ತಿಗಳಲ್ಲಿ 4.56 ಕೋಟಿ ರು. ಆಕ್ಷೇಪಣೆಯಲ್ಲಿಡಲಾಗಿದೆ. ಅದೇ ರೀತಿ ಧಾರವಾಡದ 59 ಪಂಚಾಯ್ತಿ ಸೇರಿದಂತೆ ರಾಜ್ಯದ 14 ಜಿಲ್ಲೆಗಳ 352 ಪಂಚಾಯ್ತಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಿ ದಾಸ್ತಾನು ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು ಮತ್ತು ವಿತರಣೆಗೆ ದಾಖಲಾತಿಗಳು ಇರದೇ ಇರುವ ಪ್ರಕರಣಗಳಲ್ಲಿ 6.99 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿಟ್ಟಿರುವುದು ತಿಳಿದು ಬಂದಿದೆ.

 

ಹರಾಜು ಮೊತ್ತ ವಸೂಲಿಯಾಗದಿರುವ ಪ್ರಕರಣಗಳಲ್ಲಿ 38.55 ಲಕ್ಷ ರು., ಗುತ್ತಿಗೆದಾರರು, ಸರಬರಾಜುದಾರರು ಮತ್ತುಇತರರ ಹೆಸರಿಗೆ ನೀಡಬೇಕಿರುವ ಬಿಲ್‌ ಪಾವತಿಯ ಬಾಬ್ತನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿ ಹೆಸರಿಗೆ ಧನಾದೇಶ (ಚೆಕ್‌) ಬರೆದು ಇ ಸಂದಾಯ ಮಾಡಲಾಗಿದೆ. ಇಂತಹ ಪ್ರಕರಣಗಳಲ್ಲಿ 1.03 ಕೋಟಿ, ಸಿಬ್ಬಂದಿಗಳನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೇ ನೇಮಕಾತಿ ಮಾಡಿಕೊಂಡಿರುವ ಪ್ರಕರಣಗಳಲ್ಲಿ 9.33 ಕೋಟಿ, ವೇತನ ಖಾತೆಯಲ್ಲಿ ಸಿಬ್ಬಂದಿಗೆ ಹೆಚ್ಚುವರಿ ಪಾವತಿ ಮತ್ತು ಗ್ರಾಮ ಪಂಚಾಯ್ತಿ ಗೌರವಧನ ಹೆಚ್ಚಿಗೆ ಪಾವತಿಯಾಗಿದೆ. ಈ ಪ್ರಕರಣಗಳಲ್ಲಿ 1.79 ಕೋಟಿ, ಕಟ್ಟಡ ಪರವಾನಿಗೆ ಶುಲ್ಕ ವಸೂಲಿಸದಿರುವ ಪ್ರಕರಣಗಳಲ್ಲಿ 6.26 ಲಕ್ಷ ರು.ಗಳನ್ನು ಆಕ್ಷೇಪಣೆಯಲ್ಲಿರಿಸಿರುವುದು ವರದಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts