ಬೆಂಗಳೂರು; ವಿವಿಧ ತೆರಿಗೆಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಹಿಗಳನ್ನು ಗ್ರಾಮ ಪಂಚಾಯ್ತಿಗಳು ಸಮರ್ಥವಾಗಿ ನಿರ್ವಹಿಸದ ಕಾರಣ ಈ ವಿಭಾಗದಲ್ಲಿ ಬೇಡಿಕೆ ಇದ್ದ ಒಟ್ಟು 1,855 ಕೋಟಿ ರು. ಪೈಕಿ 660 ಕೋಟಿ ರುಗಳನ್ನಷ್ಟೇ ವಸೂಲು ಮಾಡಿ ಇನ್ನೂ 1,195.59 ಕೋಟಿ ರು. ಬಾಕಿ ಉಳಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಬಹಿರಂಗಗೊಳಿಸಿದೆ.
ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ 2018-19ನೇ ಸಾಲಿನ ಕ್ರೋಢೀಕೃತ ವಾರ್ಷಿಕ ಲೆಕ್ಕಪರಿಶೋಧನೆ ವರದಿಯು ಪಂಚಾಯ್ತಿಗಳ ಹಣಕಾಸಿನ ಅಶಿಸ್ತನ್ನು ಪರಿಚಯಿಸಿದೆ. ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಕರ್ನಾಟಕ ಪಂಚಾಯತ್‌ರಾಜ್ (ಗ್ರಾಮ ಪಂಚಾಯ್ತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು) ನಿಯಮ 2006ರ ನಿಯಮ 33 ಮತ್ತು 34ರ ಪ್ರಕಾರ ವಿವಿಧ ತೆರಿಗೆಗಳ ಬೇಡಿಕೆ, ವಸೂಲಾತಿ, ಬಾಕಿ ವಹಿಗಳನ್ನು ನಿರ್ವಹಿಸಬೇಕಿತ್ತು. ಆದರೆ ತೆರಿಗೆಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಹಿಗಳನ್ನು ನಿರ್ವಹಿಸದ ಪಂಚಾಯ್ತಿಗಳ ಅಶಿಸ್ತಿನಿಂದಾಗಿ ದೊಡ್ಡ ಪ್ರಮಾಣದಲ್ಲಿ ಆದಾಯವೂ ಕೈ ತಪ್ಪಿ ಹೋಗಿದೆ.
ಗ್ರಾಮ ಪಂಚಾಯ್ತಿಗಳ ಲೆಕ್ಕ ಪುಸ್ತಕಗಳು,ರಿಜಿಸ್ಟರ್‌ಗಳು ಮತ್ತು ದಾಖಲೆಗಳ ಸಮರ್ಪಕ ನಿರ್ವಹಣೆ, ಆಸ್ತಿ ತೆರಿಗೆ, ಶುಲ್ಕ, ನೀರಿನ ದರಗಳ ಲೆವಿ ಮತ್ತು ಸಂಗ್ರಹಗಳನ್ನು ಪರಿಶೀಲಿಸುವುದು ಪಂಚಾಯತ್ ಜಮಾಮಂದಿ ನಿರ್ವಾಹಣಾಧಿಕಾರಿಯ ಕರ್ತವ್ಯ ಮತ್ತು ಜವಾಬ್ದಾರಿಯೂ ಆಗಿದೆ. ಆದರೆ ಇದರ ಮೇಲ್ವಿಚಾರಣೆ ನಡೆಸಬೇಕಿದ್ದ ಪಂಚಾಯ್ತಿಗಳ ಆಡಳಿತ ವರ್ಗವು ವಿಫಲವಾಗಿದೆ.
‘ಪಂಚಾಯ್ತಿಗಳ ಆಡಳಿತ ವರ್ಗವು ಬರಬಹುದಾದ ಆದಾಯ ಕೈ ತಪ್ಪುವುದನ್ನು ತಡೆಗಟ್ಟಲು ಬೇಡಿಕೆ, ವಸೂಲಿ ಹಾಗೂ ಬಾಕಿಯ ವಿವರಗಳ ವಹಿಯನ್ನು ನಿರ್ವಹಿಸಿ ತೆರಿಗೆಗಳನ್ನು ವಸೂಲಿ ಮಾಡಿ ಪಂಚಾಯ್ತಿಗಳ ಆದಾಯ ವೃದ್ಧಿಸಿಕೊಳ್ಳಬೇಕು. ತೆರಿಗೆ ಪಾವತಿಯಿಂದ ನುಣುಚಿಕೊಳ್ಳುವ ಪ್ರಕರಣಗಳನ್ನು ತಡೆಗಟ್ಟಬೇಕು,’ ಎಂದು ಲೆಕ್ಕ ಪರಿಶೋಧನೆಯಲ್ಲಿ ಸಲಹೆ ನೀಡಲಾಗಿದೆ.
2018-19ನೇ ಸಾಲಿನಲ್ಲಿ 1,034 ಕೋಟಿ ರು.ಗಳು ಪ್ರಾರಂಭ ಶಿಲ್ಕು ಇತ್ತು. ವರದಿ ಸಾಲಿನಲ್ಲಿ 82.90 ಕೋಟಿ ರು. ಸೇರಿದಂತೆ ಒಟ್ಟಾರೆ 1,855 ಕೋಟಿ ರು. ಬೇಡಿಕೆ ಇತ್ತು. ಈ ಪೈಕಿ ಪೈಕಿ 660 ಕೋಟಿ ರುಗಳನ್ನಷ್ಟೇ ವಸೂಲು ಮಾಡಿರುವ ಪಂಚಾಯ್ತಿಗಳು ಇನ್ನೂ 1,195.59 ಕೋಟಿ ರು.ಗಳನ್ನು ವಸೂಲಿಗೆ ಬಾಕಿ ಇರಿಸಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯ ಪಂಚಾಯ್ತಿಗಳು 25.27 ಕೋಟಿ ರು. ವಸೂಲಿಗೆ ಬಾಕಿ ಇದೆ. ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 136.95 ಕೋಟಿ ರು. ವಸೂಲಿಗೆ ಬಾಕಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ 129.05 ಕೋಟಿ, ಮೈಸೂರು ಜಿಲ್ಲೆಯಲ್ಲಿ 116.24 ಕೋಟಿ, ತುಮಕೂರು ಜಿಲ್ಲೆಯಲ್ಲಿ 103.27 ಕೋಟಿ ರು., ದಕ್ಷಿಣ ಕನ್ನಡದಲ್ಲಿ 11.48 ಕೋಟಿ ರು. ಬಾಕಿ ಇರುವುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಇದರಲ್ಲಿ ಆಸ್ತಿ ತೆರಿಗೆ, ನೀರಿನ ತೆರಿಗೆ, ಬಾಡಿಗೆ/ಹರಾಜು ಸೇರಿದಂತೆ ಇನ್ನಿತರೆ ತೆರಿಗೆಗಳೂ ಒಳಗೊಂಡಿದೆ. ರಾಜ್ಯದ 6,035 ಗ್ರಾಮ ಪಂಚಾಯ್ತಿಗಳ ಪೈಕಿ 5,493 ಪಂಚಾಯ್ತಿಗಳ ಲೆಕ್ಕ ಪರಿಶೋಧನೆಯು 2018-19ನೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಂಡಿದ್ದರೂ ಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳು ನಿಗದಿತ ಅವಧಿಯಲ್ಲಿ ಸಲ್ಲಿಕೆಯಾಗಿರಲಿಲ್ಲ. ಈ ಬಗ್ಗೆ ಲೆಕ್ಕಪರಿಶೋಧನೆ ವೇಳೆಯಲ್ಲಿ ಪಂಚಾಯ್ತಿಗಳಿಗೆ ಸೂಚನೆ ನೀಡಿದ್ದರೂ ಲೆಕ್ಕಪತ್ರಗಳನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಿರಲಿಲ್ಲ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ 243ನೇ ಪ್ರಕರಣ ಮತ್ತು ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆಗಳ ಅಧಿನಿಯಮ 2000, ಕರ್ನಾಟಕ ಪಂಚಾಯತ್‌ರಾಜ್ ನಿಯಮ 2006ರ ನಿಯಮ 101ರ ಮೇರೆಗೆ ಗ್ರಾಮ ಪಂಚಾಯ್ತಿಗಳಲ್ಲಿ ಜೋಡಿ ದಾಖಲೆ ಲೆಕ್ಕಪತ್ರ ಪದ್ಧತಿ ಜಾರಿಗೊಳಿಸಲಾಗಿತ್ತು. ಈ ನಿಯಮದ ಮೇರೆಗೆ ಗ್ರಾಮ ಪಂಚಾಯ್ತಿಯ ಆದಾಯ ಮತ್ತು ವೆಚ್ಚದ ಲೆಕ್ಕಪತ್ರಗಳನ್ನು ಏಕ ದಾಖಲೆ ಲೆಕ್ಕಪತ್ರ ಪದ್ಧತಿಯ ಬದಲಾಗಿ ಜೋಡಿ ದಾಖಲೆ ಲೆಕ್ಕಪದ್ಧತಿ ನಿರ್ವಹಿಸಬೇಕು. ಆದರೆ 2,306 ಗ್ರಾಮ ಪಂಚಾಯ್ತಿಗಳು ಜೋಡಿ ದಾಖಲೆ ಲೆಕ್ಕ ಪದ್ಧತಿಯನ್ನು ನಿರ್ವಹಿಸಿರಲಿಲ್ಲ ಎಂಬ ಸಂಗತಿಯು ಲೆಕ್ಕಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯ 452, ಬೀದರ್‌ನ 186, ಚಿತ್ರದುರ್ಗದ 189, ಹಾವೇರಿಯ 224, ರಾಯಚೂರಿನ 186, ಶಿವಮೊಗ್ಗದ 227, ವಿಜಯಪುರದ 213, ಯಾದಗಿರಿಯ 123 ಪಂಚಾಯ್ತಿಗಳು ಜೋಡಿ ಲೆಕ್ಕಪದ್ಧತಿಯನ್ನು ಅಳವಡಿಸಿಕೊಂಡಿರಲಿಲ್ಲ ಎಂದು ವರದಿಯು ಉಲ್ಲೇಖಿಸಿದೆ.