ಕಾಯ್ದೆ ತಿದ್ದುಪಡಿ; ಎಪಿಎಂಸಿಗಳ ನಷ್ಟದ ಮಾಹಿತಿ ಲಭ್ಯವಿಲ್ಲವೆಂದ ಕೃಷಿ ಮಾರಾಟ ಇಲಾಖೆ

ಬೆಂಗಳೂರು; ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟುಗಳು ತೀರಾ ಕಡಿಮೆಯಾಗಿದೆ ಮತ್ತು ಎಪಿಎಂಸಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದೆ ಎಂದು ಸರ್ಕಾರವೇ ಅಧಿಕೃತವಾಗಿ ಒಪ್ಪಿಕೊಂಡಿದ್ದರೂ ನಷ್ಟದ ವಿವರವು ಕೃಷಿ ಮಾರಾಟ ಇಲಾಖೆಯಲ್ಲಿ ಮಾಹಿತಿಯೇ ಲಭ್ಯವಿಲ್ಲ.

ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ಮತ್ತು ತಿದ್ದುಪಡಿ ತರುವ ಮುನ್ನ ಅನುಭವಿಸಿರುವ ನಷ್ಟದ ಮಾಹಿತಿ ಕೋರಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದ ‘ದಿ ಫೈಲ್‌’ಗೆ ಉತ್ತರಿಸಿರುವ ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ‘ನಷ್ಟದ ಬಗ್ಗೆ ಕೇಂದ್ರ ಕಚೇರಿಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ,’ ಎಂದು ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ.

ಅಲ್ಲದೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು ಎಂದು ಉತ್ತರಿಸಿರುವ ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ಹಕ್ಕು ಕಾಯ್ದೆಯ ಕಲಂ 6(3)ರ ಅನ್ವಯ ಮಾಹಿತಿ ಪಡೆಯುವುದಕ್ಕಾಗಿ ಕೋರಿಕೆ ಅಧಿನಿಯಮವನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಅಧಿನಿಯಮದ ಪ್ರಕಾರ ‘ಒಬ್ಬ ಅರ್ಜಿದಾರನು ಮತ್ತೊಂದು ಸಾರ್ವಜನಿಕ ಪ್ರಾಧಿಕಾರ ಹೊಂದಿರುವಂತ ಮಾಹಿತಿಗಾಗಿ ಅಥವಾ ವಸ್ತು ವಿಷಯವು ಮತ್ತೊಂದು ಸಾರ್ವಜನಿಕ ಪ್ರಾಧಿಕಾರದ ಕಾರ್ಯನಿರ್ವಹಣೆಗೆ ನಿಕಟವಾಗಿ ಸಂಬಂಧಿಸಿರುವ ಮಾಹಿತಿಗಾಗಿ ಸಾರ್ವಜನಿಕ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರೆ ಯಾವ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆಯೋ ಆ ಸಾರ್ವಜನಿಕ ಪ್ರಾಧಿಕಾರವು ಅರ್ಜಿಯನ್ನು ಅಥವಾ ಸಮುಚಿತವೆನಿಸಬಹುದಾದ ಅದರ ಭಾಗವನ್ನು ಆ ಮತ್ತೊಂದು ಪ್ರಾಧಿಕಾರಕ್ಕೆ ವರ್ಗಾಯಿಸತಕ್ಕದ್ದು ಮತ್ತು ಅಂಥ ವರ್ಗಾವಣೆಯನ್ನು ಅರ್ಜಿದಾರನಿಗೆ ತಿಳಿಸತಕ್ಕದ್ದು,’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದರೆ ಕೃಷಿ ಮಾರಾಟ ಇಲಾಖೆಯ ಜಂಟಿ ನಿರ್ದೇಶಕರು ‘ದಿ ಫೈಲ್‌’ ಸಲ್ಲಿಸಿದ್ದ ಅರ್ಜಿಯನ್ನು ಸಂಬಂಧಿಸಿದ ಎಪಿಎಂಸಿಗಳಿಗೆ ವರ್ಗಾಯಿಸದೇ ‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದೆ,’ ಎಂಬ ಉತ್ತರ ಒದಗಿಸಿದೆ.

ಎಪಿಎಂಸಿ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತಂದ ನಂತರ ರಾಜ್ಯದ ಎಪಿಎಂಸಿಗಳಲ್ಲಿ ವ್ಯಾಪಾರ ವಹಿವಾಟು ತೀರಾ ಕಡಿಮೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಸ್‌ ಟಿ ಸೋಮಶೇಖರ್‌ ಅವರು ‘ಬಂದಿದೆ,’ ಎಂದು ಉತ್ತರಿಸಿದ್ದಾರಾದರೂ ಎಪಿಎಂಸಿಗಳಲ್ಲಿನ ವ್ಯಾಪಾರ ವಹಿವಾಟುಗಳು ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಮತ್ತು ಇದರಿಂದ ಸಂಭವಿಸಿರುವ ನಷ್ಟದ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ 1966 ಕಾಯ್ದೆ (ಸಂಖ್ಯೆ; 59/2020) ಮೂಲಕ ಕಲಂ 8(2) ಹಾಗೂ ಕಲಂ 117ಕ್ಕೆ ತಿದ್ದುಪಡಿ ಮಾಡಿ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿಯೆ ಮಾರಾಟ ಮಾಡಬೇಕು ಎಂಬ ನಿರ್ಬಂಧ ತೆರವುಗೊಳಿಸಿದೆ. ಹಾಗೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಣವನ್ನು ಪ್ರಾಂಗಣಕ್ಕಷ್ಟೇ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117ನ್ನೂ ಕೈ ಬಿಡಲಾಗಿದೆ ಎಂದು ಸಚಿವ ಸೋಮಶೇಖರ್‌ ವಿವರ ಒದಗಿಸಿದ್ದರು.

‘ಕಾಯ್ದೆ ತಿದ್ದುಪಡಿ ನಂತರ ರಾಜ್ಯದಲ್ಲಿನ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಹಿಂದಿನಂತೆ ಪ್ರಾಂಗಣದಲ್ಲಿ ಲೈಸೆನ್ಸ್‌ ಹೊಂದಿರುವ ನೇರ ಖರೀದಿ ಕೇಂದ್ರ, ರೈತ-ಗ್ರಾಹಕ ಮಾರುಕಟ್ಟೆ ಪ್ರಾಂಗಣ, ಖಾಸಗಿ ಮಾರುಕಟ್ಟೆ ಪ್ರಾಂಗಣಗಳಲ್ಲಿ ಅಥವಾ ತಮ್ಮ ಹೊಲದಲ್ಲೇ ತಮ್ಮ ಇಚ್ಛೆಯಂತೆ ಮಾರಾಟ ಮಾಡಲು ಅವಕಾಶ ಲಭ್ಯವಾಗಿದೆ. ಹಾಗಾಗಿ ರೈತ ಸಮುದಾಯಕ್ಕೆ ಅನುಕೂಲವಾಗಿದೆ. ರೈತರು ತೊಂದರೆಗೊಳಾಗಿರುವುದು ಕಂಡು ಬಂದಿರುವುದಿಲ್ಲ,’ ಎಂದು ಉತ್ತರಿಸಿದ್ದರು.

ಆರ್ಥಿಕ ನಷ್ಟವನ್ನು ಸರಿದೂಗಿಸಲು ರಾಜ್ಯ ಸಂಚಿತ ನಿಧಿ ವಂತಿಗೆ ಶೇ. 0.20ರಷ್ಟು ಹಂಚಿಕೆ ಮಾಡಲಾಗಿದೆ. ರಾಜ್ಯ ಕೃಷಿ ಮಾರಾಟ ಮಂಡಳಿಗೆ ಶೇ.0.05ರಷ್ಟು ವಂತಿಗೆ, ಅಡಮಾನ ಸಾಲ ಯೋಜನೆಗೆ ಶೇ. 0.10, ಕೃಷಿ ವಿಶ್ವವಿದ್ಯಾಲಯಗಳ ವಂತಿಗೆ ಶೇ.0.01, ಅಪತದ್ಧನ ಶೇ.0.04, ಅಭಿವೃದ್ಧಿ ವೆಚ್ಚಗಳು ಶೇ. 0.25, ಶಾಸನೇತರ ವೆಚ್ಚಗಳು ಶೇ.0.25, ರೆಮ್ಸ್‌ ಸಂಸ್ಥೆ ವಹಿವಾಟು ವೆಚ್ಚ ಶೇ. 0.10, ಆವರ್ತ ನಿಧಿ ಶೇ. 0.40, ಮಾರುಕಟ್ಟೆ ಸುಧಾರಣೆ ನಿಧಿ ಶೇ.0.10 ವಂತಿಗೆ ಮರು ಹಂಚಿಕೆ ಮಾಡಿದೆ.

ಇದರಂತೆ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವೇತನ, ಭತ್ಯೆ, ಮಾರುಕಟ್ಟೆ ಸಮಿತಿಗಳ ಚುನಾವಣೆ ವೆಚ್ಚ ಮುಂತಾದ ಬಾಬ್ತುಗಳಿಗೆ ತಗಲುವ ವೆಚ್ಚವನ್ನು ಮಾರುಕಟ್ಟೆ ಕಾಯ್ದೆ ಕಲಂ 91ರ ಮೇರೆಗೆ ಇಲಾಖೆ ನಿರ್ದೇಶಕರು ನಿಗದಿಪಡಿಸುವ ದರದಲ್ಲಿ ಮಾರುಕಟ್ಟೆ ಸಮಿತಿಗಳು ರಾಜ್ಯ ಸಂಚಿತ ನಿಧಿಗೆ ವಂತಿಗೆ ರೂಪದಲ್ಲಿ ಪಾವತಿಸಬೇಕಿತ್ತು. ಕಾಯ್ದೆ ಕಲಂ 64-ಬಿರ ಮೇರೆಗೆ ರಾಜ್ಯ ಸರ್ಕಾರವು ಸ್ಥಾಪಿಸಿರುವ ಆವರ್ತ ನಿಧಿಗೆ ಜಮೆ ಮಾಡಬೇಕಿತ್ತು.
ಮಾರುಕಟ್ಟೆ ಸಮಿತಿಗಳು ಆಕರಿಸುವ ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕವನ್ನು ಶೇ. 0.60ಕ್ಕೆ ನಿಗದಿಪಡಿಸಿದೆ. ಹಾಗೆಯೇ ರಾಜ್ಯ ಸಂಚಿತ ನಿಧಿಗೆ ಸಮಿತಿಗಳಿಂದ ಪಾವತಿಸಬೇಕಿದ್ದ ವಂತಿಗೆಗೆ ವಿನಾಯಿತಿ ನೀಡಿ ಈ ವೆಚ್ಚವನ್ನೂ ಸರ್ಕಾರವೇ ಭರಿಸಲು ಕ್ರಮ ವಹಿಸಿದೆ ಎಂಬ ಉತ್ತರಿಸಿದ್ದರು.

ರಾಜ್ಯ ಸರ್ಕಾರವು ನಿಗದಿಪಡಿಸಿದ ಶೇ. 0.60 ಮಾರುಕಟ್ಟೆ ಶುಲ್ಕ, ಬಳಕೆದಾರರ ಶುಲ್ಕದಲ್ಲಿ ಮರು ಹಂಚಿಕೆ ಮಾಡಿತ್ತು. ಆವರ್ತ ನಿಧಿಗೆ ಶೆ. 0.10, ಕೃಷಿ ಮಾರಾಟ ಮಂಡಳಿಗೆ ವಂತಿಗೆ ಶೇ. 0.05, ಮತ್ತು ಪ್ರಾಂಗಣದಲ್ಲಿ ಮೂಲಭೂತ ಸೌಕರ್ಯ, ನಿರ್ವಹಣೆ ಮತ್ತು ಸಮಿತಿ ಆಡಳಿತ ವೆಚ್ಚಕ್ಕೆ ಶೇ. 0.44, ರೆಮ್ಸ್‌ ಸಂಸ್ಥೆಗೆ ವಹಿವಾಟು ಶುಲ್ಕದ ರೂಪದಲ್ಲಿ ಶೇ. 0.01ರಷ್ಟು ಮರು ಹಂಚಿಕೆ ಮಾಡಿದೆ ಎಂದು ಉತ್ತರದಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts