ಅನುದಾನ ರಹಿತ ಸೇವಾವಧಿ ಪರಿಗಣಿಸಿದರೆ 5,081 ಕೋಟಿ ಹೊರೆ; ಬೇಡಿಕೆ ಈಡೇರಿಸಲು ಹಿಂದೇಟು?

ಬೆಂಗಳೂರು; ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ, ಇತರೆ ಸೌಲಭ್ಯಗಳ ನಿಯಂತ್ರಣ ವಿಧೇಯಕದ ಪ್ರಕಾರ ಅನುದಾನ ರಹಿತ ಅವಧಿಯ ಸೇವೆಯನ್ನು ಪರಿಗಣಿಸಿದಲ್ಲಿ ಸರ್ಕಾರದ ಬೊಕ್ಕಸಕ್ಕೆ 5,081.01 ಕೋಟಿ ಆರ್ಥಿಕ ಹೊರೆಯಾಗಲಿದೆ.

ಅಲ್ಲದೆ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಾಯನಿರ್ವಹಿಸುತ್ತಿರುವ ಶಿಕ್ಷಕರು, ಉಪನ್ಯಾಸಕರಿಗೆ ಕಾಲ್ಪನಿಕ ವೇತನ ನಿಗದಿಗೊಳಿಸಿದರೆ ಪ್ರತಿ ವರ್ಷ 359.86 ಕೋಟಿ ರು. ಹೆಚ್ಚುವರಿ ವೇತನ ಹೊಂದಿಸಬೇಕು. ಕೋವಿಡ್‌ ಹಿನ್ನೆಲೆಯಲ್ಲಿ ಉದ್ಬವಿಸಿರುವ ಸದ್ಯ ಆರ್ಥಿಕ ಸಂಕಷ್ಟ ಮತ್ತು ಸಂಪನ್ಮೂಲ ಸಂಗ್ರಹಣೆಯಲ್ಲಿನ ಕುಸಿತದಿಂದಾಗಿ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ಸರ್ಕಾರವು ಅನುದಾನರಹಿತ ಅವಧಿ ಸೇವೆಯನ್ನು ಪರಿಗಣಿಸಲು ಹಿಂದೇಟು ಹಾಕುತ್ತಿದೆ.

ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ, ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014 ಮಂಡನೆಯಾಗಿತ್ತು. ಇದರ ಪ್ರಕಾರ ಅನುದಾನಿತ ಅವಧಿಯ ಸೇವೆಯನ್ನು ಪರಿಗಣಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ನಿಗದಿಗೊಳಿಸಲು ಪ್ರತಿ ವರ್ಷ 72.25 ಕೋಟಿ ಹೆಚ್ಚುವರಿ ವೇತನ ಬೇಕಾಗಲಿದೆ. ಅದೇ ರೀತಿ ಬಾಕಿ ವೇತನಕ್ಕೆ 612.11 ಕೋಟಿ, ಪಿಂಚಣಿ ಸೌಲಭ್ಯಕ್ಕೆ 302.18 ಕೋಟಿ ಸೇರಿ ಒಟ್ಟಾರೆ 986.54 ಕೋಟಿ ಬೇಕಾಗಲಿದೆ. ಅದೇ ರೀತಿ ಪ್ರೌಢಶಿಕ್ಷಣಕ್ಕೆ ಕಾಲ್ಪನಿಕ ವೇತನ ನಿಗದಿಗೊಳಿ8ಸಿಲು ಪ್ರತಿವರ್ಷ 141.58 ಕೋಟಿ, ಬಾಕಿ ವೇತನಕ್ಕೆ 1,276.39 ಕೋಟಿ, ಪಿಂಚಣಿ ಸೌಲಭ್ಯಕ್ಕೆ 766.26 ಕೋಟಿ ಸೇರಿ 2,184.23 ಕೋಟಿ ರು. ಬೇಕು ಎಂದು ಅಂದಾಜಿಸಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ನಿಗದಿಗೊಳಿಸಲು ಪ್ರತಿವರ್ಷ 91.35 ಕೋಟಿ ರು., ಬಾಕಿ ವೇತನಕ್ಕೆ 511.10 ಕೋಟಿ, ಪಿಂಚಣಿ ಸೌಲಭ್ಯಕ್ಕೆ 305.74 ಕೋಟಿ, ಸೇರಿ ಒಟ್ಟು 908.19 ಕೋಟಿ ಬೇಕು. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾಲ್ಪನಿಕ ವೇತನ ನಿಗದಿಗೊಳಿಸಲು ಪ್ರತಿ ವರ್ಷ 38.52 ಕೋಟಿ, ಬಾಕಿ ವೇತನಕ್ಕೆ 447.22 ಕೋಟಿ, ಪಿಂಚಣಿ ಸೌಲಭ್ಯಕ್ಕೆ 147.76 ಕೋಟಿ ಸೇರಿ ಒಟ್ಟು 633.50 ಕೋಟಿ ಅಗತ್ಯವಿದೆ. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಾಲ್ಪನಿಕ ವೇತನ ನಿಗದಿಗೆ ಪ್ರತಿ ವರ್ಷ 16.16 ಕೋಟಿ, ಬಾಕಿ ವೇತನಕ್ಕೆ 236.76 ಕೋಟಿ, ಪಿಂಚಣಿ ಸೌಲಭ್ಯಕ್ಕೆ 115.67 ಕೋಟಿ ಸೇರಿ ಒಟ್ಟು 368.55 ಕೋಟಿ ರು.ಬೇಕು ಎಂದು ಶಿಕ್ಷಣ ಇಲಾಖೆಯು ಆರ್ಥಿಕ ಹೊರೆಯನ್ನು ಮುಂದಿಟ್ಟಿರುವುದು ತಿಳಿದು ಬಂದಿದೆ.

ಹಾಗೆಯೇ ವಿವಿಧ ವಿಶ್ವವಿದ್ಯಾಲಯಗಳಿಗೆ ಮೂಲಭೂತ ಸೌಲಭ್ಯ, ಪಿಂಚಣಿ, ವೈದ್ಯಕೀಯ ವೆಚ್ಚ ಮತ್ತು ಇತರೆ ವೆಚ್ಚಗಳಿಗೆ 401 ಕೋಟಿ ರು. ಅಗತ್ಯವಿದೆ. ಮಂಡ್ಯ ವಿಶ್ವವಿದ್ಯಾಲಯಕ್ಕೆ 150 ಬೋಧಕ, 95 ಬೋಧಕೇತರ, 50 ಮಂದಿ ಹೆಚ್ಚುವರಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯಬೇಕಿದೆ. ಮೂಲಭೂತ ಸೌಲಭ್ಯಕ್ಕೆ 2 ಕೋಟಿ ರು. ಬೇಕಿದೆ. ಮಹಾರಾಣಿ ವಿಶ್ವವಿದ್ಯಾಲಯಕ್ಕೆ 392 ಬೋಧಕ ಸಿಬ್ಬಂದಿ, 121 ಬೋಧಕೇತರ ಸಿಬ್ಬಂದಿ ನೇಮಕವಾಗಬೇಕಿದೆ. ಈ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಲಭ್ಯಕ್ಕೆ 2 ಕೋಟಿ ರು. ಅನುದಾನ ಬೇಕು ಎಂದು ಇಲಾಖೆ ಅಂದಾಜುಪಟ್ಟಿಯನ್ನು ಸಲ್ಲಿಸಿದೆ.

ಬೆಂಗಳೂರಿನಲ್ಲಿ ಹೊಸದಾಗಿ ರಚಿಸಿರುವ ನೃಪತುಂಗ ವಿಶ್ವವಿದ್ಯಾಲಯಕ್ಕೆ 269 ಬೋಧಕ, 67 ಬೋಧಕೇತರ ಸಿಬ್ಬಂದಿ ನೇಮಕವಾಗಬೇಕು. ಮೂಲಭೂತ ಸೌಲಭ್ಯಕ್ಕೆ 2 ಕೋಟಿ ರು. ಬೇಕಿದೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿಯಾಗಿ 110 ಅತಿಥಿ ಉಪನ್ಯಾಸಕರು, 60 ಮಂದಿ ಬೋಧಕೇತರ ಸಿಬ್ಬಂದಿ(ಹೊರಗುತ್ತಿಗೆ) ನೇಮಕ ಮಾಡಿಕೊಳ್ಳಬೇಕಿದೆ. ಈ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಒಟ್ಟಾರೆ 15 ಕೋಟಿ ರು.ಬೇಕು ಎಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯಕ್ಕೆ ಅನುದಾನ ಕೊರತೆ ಇದ್ದು, ಹೆಚ್ಚುವರಿಯಾಗಿ 50 ಮಂದಿ ಅತಿಥಿ ಉಪನ್ಯಾಸಕರ ಸೇವೆ ಮತ್ತು 40 ಮಂದಿ ಬೋಧಕೇತರ ಸಿಬ್ಬಂದಿ ಅಗತ್ಯವಿದೆ. ಮೂಲಭೂತ ಸೌಲಭ್ಯಕ್ಕೆ 2 ಕೋಟಿ ಬೇಕಿದೆ ಎಂಬುದು ಗೊತ್ತಾಗಿದೆ. ಅದೇ ಎರೀತಿ ಜಾನಪದ ವಿಶ್ವವಿದ್ಯಾಲಯಕ್ಕೂ ಅನುದಾನದ ಕೊರತೆ ಇದೆ. ಈ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ಕೊರತೆ ಕಂಡು ಬಂದಿದೆ. ಹೀಗಾಗಿ 30 ಮಂದಿ ಅತಿಥಿ ಉಪನ್ಯಾಸಕರು ಮತ್ತು 40 ಮಂದಿ ಹೊರಗುತ್ತಿಗೆ ಅಡಿಯಲ್ಲಿ ನೇಮಕ ಮಾಡಿಕೊಳ್ಳಬೇಕಿದೆ. ಮೂಲಭೂತ ಸೌಲಭ್ಯಕ್ಕೆ 2 ಕೋಟಿ ರು. ಬೇಡಿಕೆ ಸಲ್ಲಿಕೆಯಾಗಿದೆ.

ಡಾ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಮಿಕ್ಸ್ ವಿಶ್ವವಿದ್ಯಾಲಯಕ್ಕೆ ಎಸ್‌ ಸಿ ಪಿ, ಟಿಎಸ್‌ಪಿ ಯೋಜನೆಯಡಿಯಲ್ಲಿ ಕಟ್ಟಡ ಕಾಮಗಾರಿಗೆ 40 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಹೆಚ್ಚುವರಿ ಅಭಿವೃದ್ಧಿ ಕಾರ್ಯಗಳಿಗೆ 38 ಕೋಟಿ, ಕಾರ್ಪಸ್‌ ಫಂಡ್‌ಗೆ 50 ಕೋಟಿ ಮತ್ತು ವಿಶ್ವವಿದ್ಯಾಲಯದ ದೈನಂದಿನ ಕಾರ್ಯಗಳಿಗೆ ವೆಚ್ಚ ಭರಿಸಲು 10 ಕೋಟಿ ರು. ಬೇಕಿದೆ ಎಂದು ಅಂದಾಜು ಪಟ್ಟಿ ಸಲ್ಲಿಕೆಯಾಗಿದೆ.

ಇದಲ್ಲದೆ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಪಿಂಚಣಿ, ವೈದ್ಯಕೀಯ ವೆಚ್ಚ ಮತ್ತು ಇತರೆ ವೆಚ್ಚಗಳಿಗೆಂದು 200 ಕೋಟಿ ರು. ಬೇಡಿಕೆ ಇರಿಸಿದೆಯಲ್ಲದೆ ಕನ್ನಡ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವೇತನ ಪಾವತಿಗೆ 2 ಕೋಟಿ, ತುಮಕೂರು ವಿಶ್ವವಿದ್ಯಾಲಯಕ್ಕೆ ಇನ್ನೂ 40 ಕೋಟಿ ರು ಬಿಡುಗಡೆಗೆ ಬಾಕಿ ಇದೆ ಎಂದು ಗೊತ್ತಾಗಿದೆ.

ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಅನುದಾನ ಕೊರತೆ ಕುರಿತಂತೆ ಸಚಿವ ಡಾ ಅಶ್ವಥ್‌ನಾರಾಯಣ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ 3 ತಿಂಗಳ ಹಿಂದೆಯೇ ಚರ್ಚೆ ನಡೆಸಿದ್ದರೂ ವಿಶ್ವವಿದ್ಯಾಲಯಗಳ ಬೇಡಿಕೆ ಪೂರೈಸಲು ಸಕಾರಾತ್ಮಕ ಬೆಳವಣಿಗೆಗಳು ನಡೆದಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts