5 ಲಕ್ಷ ಸುಲಿಗೆ ಆರೋಪ; ಸಿಪಿಐ, ಎಎಸ್‌ಐ ವಿರುದ್ಧ ಶಿಸ್ತುಕ್ರಮ, ಐಪಿಎಸ್‌ಗೆ ಕ್ಲೀನ್‌ಚಿಟ್‌

ಬೆಂಗಳೂರು; ಅತ್ತಿಬೆಲೆಯ ಕ್ರಷರ್‌ ಉದ್ಯಮಿಯೊಬ್ಬರಿಂದ ಲಕ್ಷಾಂತರ ರುಪಾಯಿ ಸುಲಿಗೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳ ಪೈಕಿ ಐಪಿಎಸ್‌ ಅಧಿಕಾರಿಯೊಬ್ಬರಿಗೆ ಕ್ಲೀನ್‌ ಚಿಟ್‌ ನೀಡಿರುವ ಪೊಲೀಸ್‌ ಇಲಾಖೆಯು ಇದೇ ಪ್ರಕರಣದಲ್ಲಿ ಸಿಪಿಐ ಮತ್ತು ಎಎಸ್‌ಐಗಳಿಬ್ಬರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದೆ.

ಕ್ರಷರ್‌ ಉದ್ಯಮಿಯೊಬ್ಬರು ನೀಡಿದ್ದ ದೂರನ್ನಾಧರಿಸಿ ಕ್ರಮಕೈಗೊಳ್ಳಬೇಕಿದ್ದ ಪೊಲೀಸ್‌ ಅಧಿಕಾರಿಗಳು ಆರೋಪಿಗಳೊಂದಿಗೆ ಶಾಮೀಲಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬೆಂಗಳೂರು ಕೇಂದ್ರ ವಲಯದ ಐಜಿಪಿ ಎಂ ಚಂದ್ರಶೇಖರ್‌ ಅವರು ವಿಚಾರಣೆ ನಡೆಸಿ ಪೊಲೀಸ್‌ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಿದ್ದಾರೆ. ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವರದಿಯನ್ನು ಪ್ರಕಟಿಸದಂತೆ ಐಪಿಎಸ್‌ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಡೆಯಾಜ್ಞೆ ತಂದಿರುವುದರಿಂದ ಅವರ ********** ಹೆಸರನ್ನು ಮತ್ತು ದೂರುದಾರರ ಹೆಸರನ್ನು ಇಲ್ಲಿ ಉಲ್ಲೇಖಿಸಿಲ್ಲ. ಹಾಗೆಯೇ ಐಜಿಪಿ ಚಂದ್ರಶೇಖರ್‌ ಅವರು ವರದಿ ಜತೆ ಸಲ್ಲಿಸಿರುವ ಪತ್ರದಲ್ಲಿ ಐಪಿಎಸ್‌ ಅಧಿಕಾರಿ ********** ಹೆಸರು ಇರುವ ಕಾರಣ ಪತ್ರವನ್ನೂ ಇಲ್ಲಿ ಪ್ರಕಟಿಸುತ್ತಿಲ್ಲ.

 

5 ಲಕ್ಷ ಪಡೆದಿದ್ದು ಸಾಬೀತು!

 

ಅಂದಾಜು 5 ಕೋಟಿ ರು. ವಂಚನೆ ಮಾಡಲಾಗಿದೆ ಎಂದು ಕ್ರಷರ್‌ ಉದ್ಯಮಿಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ವಿಚಾರಣೆ ಕೈಗೊಂಡು ಆರೋಪಿಯನ್ನು ಬಂಧಿಸಬೇಕಿದ್ದ ಪೊಲೀಸ್‌ ಅಧಿಕಾರಿಗಳು 5 ಲಕ್ಷ ರು.ಗಳನ್ನು ದೂರುದಾರರಿಂದಲೇ ವಸೂಲು ಮಾಡಿದ್ದರು ಎಂಬುದು ವಿಚಾರಣೆ ವೇಳೆಯಲ್ಲಿ ದೃಢಪಟ್ಟಿರುವುದು ಐಜಿಪಿ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

ಬೆಂಗಳೂರು ಜಿಲ್ಲೆಯ ಡಿಸಿಐಬಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಟಿ ಶ್ರೀನಿವಾಸ್‌ (ಹಾಲಿ ವಿಜಯಪುರ ಸಿಪಿಐ) ಅವರು ಎಎಸ್‌ಐ ಎನ್ ಶುಭ ಮತ್ತು ಕೆ ಜಿ ಅನಿತಾ ಅವರ ಮುಖೇನ 5,00,000 ರು.ಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಐಜಿಪಿ ಚಂದ್ರಶೇಖರ್‌ ಅವರು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ವಿಚಾರಣೆ ವೇಳೆಯಲ್ಲಿ ಐಜಿಪಿ ಚಂದ್ರಶೇಖರ್‌ ಅವರು ಐಪಿಎಸ್‌ ಅಧಿಕಾರಿ ********** ಅವರ ಹೇಳಿಕೆಯ ಪಡೆದಿದ್ದಾರೆ. ‘ತಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರತಿನಿತ್ಯ ಹಲವಾರು ಜನ ಅರ್ಜಿದಾರರು ತಮ್ಮ ದೂರುಗಳನ್ನು ಸಲ್ಲಿಸಲು ಕಚೇರಿಗೆ ಬರುತ್ತಿದ್ದು ಅದರಂತೆ ಅರ್ಜಿದಾರರು ದೂರನ್ನು ಕೊಟ್ಟಾಗ ಅದನ್ನು ಸೂಕ್ತ ಕ್ರಮಕ್ಕಾಗಿ ಅತ್ತಿಬೆಲೆ ಪೊಲೀಸ್‌ ಠಾಣೆಗೆ ತದನಂತರ ಸಿಇಎನ್‌ ಪೊಲೀಸ್‌ ಠಾಣೆಗೆ ರವಾನಿಸಲಾಗಿತ್ತು. ಉಳಿದಂತೆ ಯಾವುದೇ ವಿಚಾರಗಳು ತನಗೆ ಸಂಬಂಧಿಸಿರುವುದಿಲ್ಲ,’ ಎಂದು ಐಪಿಎಸ್‌ ಅಧಿಕಾರಿ ********** ಎಂದು ತಿಳಿಸಿರುವುದನ್ನು ಐಜಿಪಿ ಪ್ರಸ್ತಾಪಿಸಿರುವುದು ಪತ್ರದಿಂದ ಗೊತ್ತಾಗಿದೆ.

 

‘ಇವರ ಹೇಳಿಕೆಯನ್ನು ಪರಿಶೀಲಿಸಿದ್ದು ಮತ್ತು ವರದಿಯಲ್ಲಿನ ಅಂಶಗಳಿಂದ ಈ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ********** ಪಾತ್ರವು ಕಂಡುಬರುವುದಿಲ್ಲ,’ ಎಂದು ಐಜಿಪಿ ಚಂದ್ರಶೇಖರ್‌ ಅವರು ಉಲ್ಲೇಖಿಸಿದ್ದಾರೆ.

 

‘ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳಾದ ಟಿ ಶ್ರೀನಿವಾಸ್‌, ಎಎಸ್‌ಐ ಎನ್‌ ಶುಭ, ಮತ್ತು ಕೆ ಜಿ ಅನಿತಾ ಇವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಜರುಗಿಸಲು ಕೋರಲಾಗಿದೆ,’ ಬೆಂಗಳೂರು ಕೇಂದ್ರ ವಲಯದ ಪೊಲೀಸ್‌ ಮಹಾನಿರೀಕ್ಷಕ ಎಂ ಚಂದ್ರಶೇಖರ್‌ ಅವರು ಪತ್ರದಲ್ಲಿ ಡಿಜಿಐಜಿಪಿಯನ್ನು ಕೋರಿದ್ದಾರೆ.

 

ಪ್ರಕರಣದ ಹಿನ್ನೆಲೆ

 

ಹಲವರಿಂದ 3.96 ಕೋಟಿ ವಂಚನೆಯಾಗಿದೆ ಎಂದು ಕ್ರಷರ್‌ ಉದ್ಯಮಿಯೊಬ್ಬರು 2021ರ ಸೆಪ್ಟಂಬರ್‌ 28ರಂದು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅದೇ ದೂರಿನ ಮೇಲೆ ಸೂಚಿಸಿದ್ದರು.

 

ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಲು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ದೂರಲಾಗಿತ್ತು. ಇವರಿಗೆ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಡೆಸಿದ್ದ ಸಂಭಾಷಣೆಯ ಧ್ವನಿಮುದ್ರಿಕೆಯೂ ತಮ್ಮ ಬಳಿ ಇದೆ ಎಂದು ದೂರುದಾರರು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದಿದ್ದರು.

 

‘ನನಗೀಗ ಯಾವುದೇ ದಾರಿ ಕಾಣಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನಗೆ ಹೆಣ್ಣು ಮಗಳಿದ್ದಾಳೆ. ನಾನು ನನ್ನ ಜವಾಬ್ದಾರಿಯಿಂದ ಪಲಾಯನ ಮಾಡಲು ಮನಸು ಒಪ್ಪುತ್ತಿಲ್ಲ. ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಧ್ವನಿ ಮುದ್ರಣ, ವಾಟ್ಸಾಪ್‌ ಸಂದೇಶಗಳು ನನ್ನ ಬಳಿ ಇವೆ. ತನಿಖೆಯ ಸಂದರ್ಭದಲ್ಲಿ ಇವೆಲ್ಲವನ್ನೂ ಮುಂದಿರಿಸುತ್ತೇನೆ. ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು,’ ಎಂದು ದೂರಿನಲ್ಲಿ ಕೋರಿದ್ದರು.

 

ನನ್ನ ಮನೆ ಬ್ಯಾಂಕ್‌ನಿಂದ ಹರಾಜಿಗೆ ಬಂದಿದ್ದರೂ ಪೊಲೀಸ್‌ ಅಧಿಕಾರಿಗಳು ಬೇಡಿಕೆ ಇರಿಸಿದ್ದ ಹಣವನ್ನು ನೀಡಿದ್ದೇನೆ. ಆಭರಣಗಳ ಮಾರಾಟದಿಂದ ಬಂದ ಹಣವನ್ನು ನೀಡಿದ್ದರೂ ಪೊಲೀಸ್‌ ಅಧಿಕಾರಿಗಳು ಆರೋಪಿಗಳಿಗೆ ಸಹಕರಿಸಿದ್ದಾರೆ. ಐಪಿಎಸ್‌ ಅಧಿಕಾರಿ ********** ಗೆ 25.00 ಲಕ್ಷ, ಡಿವೈಎಸ್ಪಿಗೆ 15 ಲಕ್ಷ ಮತ್ತು ಡಿವೈಎಸ್ಪಿ ಕಚೇರಿಯ ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರು.ಗಳನ್ನು ನೀಡಲಾಗಿದೆ ಎಂದು ಆರೋಪಿಗಳ ಪೈಕಿ ಒಬ್ಬಾತ ಬಾಯ್ಬಿಟ್ಟಿದ್ದಾನೆ,’ಎಂದು ಅರ್ಜಿದಾರರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿದ್ದರು.

 

ವಂಚನೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗುವ ಮುನ್ನವೇ ಐಪಿಎಸ್‌ ಅಧಿಕಾರಿ ********** ಹೆಸರಿನಲ್ಲಿ 5.00 ಲಕ್ಷ ರು.ಗಳಿಗೆ ಬೇಡಿಕೆ ಇರಿಸಲಾಗಿತ್ತು. ಈ ಪೈಕಿ 4 ಲಕ್ಷ ರು.ಗಳನ್ನು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಎಂಬುವರ ಸೂಚನೆ ಮೇರೆಗೆ ಮತ್ತೊಬ್ಬ ಪೊಲೀಸ್‌ ಅಧಿಕಾರಿ ಶುಭಾ/ಅನಿತಾ ಎಂಬುವರಿಗೆ ತಲುಪಿಸಲಾಗಿತ್ತು. ಹಣ ತಲುಪಿರುವ ಬಗ್ಗೆ ಶುಭಾ ಎಂಬುವರು ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರಿಗೆ ಮೊಬೈಲ್‌ ಫೋನ್‌ ಮೂಲಕ ಖಚಿತಪಡಿಸಿದ್ದರು. ಬೇಡಿಕೆ ಇರಿಸಿದ್ದ ಒಟ್ಟು 5 ಲಕ್ಷ ರು. ಪೈಕಿ ಇನ್ನೂ ಒಂದು ಲಕ್ಷ ರು. ಬಾಕಿ ಹಣವನ್ನು ಐಪಿಎಸ್‌ ಅಧಿಕಾರಿ ********** ಕೇಳಿದ್ದರು ಎಂದು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts