ತೊಗರಿ ಖರೀದಿ ಮಿತಿ ತೆಗೆದಿಲ್ಲ, ಕಡಲೆಕಾಳು ಖರೀದಿಗೆ ಕೇಂದ್ರಕ್ಕೂ ಪ್ರಸ್ತಾವನೆ ಸಲ್ಲಿಸಿಲ್ಲ

ಬೆಂಗಳೂರು; ಕೇಂದ್ರ ಸರ್ಕಾರವು 2021-22ನೇ ಸಾಲಿನ ಹಿಂಗಾರು ಹಂಗಾಮಿಗೆ ಎಫ್‌ ಎ ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನಕ್ಕೆ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತಲೂ ಕಡಿಮೆ ಧಾರಣೆಯಲ್ಲಿ ಮಾರಾಟವಾಗುತ್ತಿದೆ. ಆದರೂ ರಾಜ್ಯ ಸರ್ಕಾರವು ಇದುವರೆಗೂ ಕಡಲೆಕಾಳು ಖರೀದಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ!

ಬೆಂಬಲ ಬೆಲೆಯಲ್ಲಿ 2,50,000 ಮೆಟ್ರಿಕ್‌ ಟನ್‌ನಷ್ಟು ತೊಗರಿ ಖರೀದಿಸಬೇಕು ಎಂದು ಕೇಂದ್ರ ಸರ್ಕಾರವು 2021ರ ನವೆಂಬರ್‌ 1ರಂದು ಗುರಿ ನಿಗದಿಪಡಿಸಿತ್ತಾದರೂ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ದಿ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಂಡಳದ ಮೂಲಕ ಇದುವರೆಗೆ ಕೇವಲ 12,826 ಕ್ವಿಂಟಲ್‌ನಷ್ಟೇ ಖರೀದಿಸಿದೆ. ಅದೇ ರೀತಿ 15 ಕ್ವಿಂಟಾಲ್‌ನಷ್ಟು ಮಾತ್ರ ತೊಗರಿ ಖರೀದಿಸಬೇಕು ಎಂಬ ಮಿತಿಯನ್ನು ತೆಗೆದಿಲ್ಲ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್‌ ಕತ್ತಿ ಅಧ್ಯಕ್ಷತೆಯಲ್ಲಿ ರಚಿಸಿರುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆಗಳ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ರಚನೆಯಾಗಿರುವ ಸಚಿವ ಸಂಪುಟ ಉಪ ಸಮಿತಿಯು 2022ರ ಜನವರಿ 19ರಂದು ನಡೆಸಿದ ಸಭೆಯಲ್ಲಿ ಸಹಕಾರ ಇಲಾಖೆಯು ಈ ವಿಷಯವನ್ನು ಮಂಡಿಸಿದೆ. ಸಭೆಗೆ ಮಂಡಿಸಿರುವ ಟಿಪ್ಪಣಿ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಚಿತ್ರದುರ್ಗ, ಧಾರವಾಡ, ಗದಗ್‌, ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ, ಬೀದರ್‌ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಕಡಲೆಕಾಳನ್ನು ಬೆಳೆಯಲಾಗುತ್ತಿದೆ. 2021-22ನೇ ಸಾಲಿಬನಲ್ಲಿ ಹಿಂಗಾರು ಹಂಗಾಮಿನಲ್ಲಿ 11.13 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆಕಾಳು ಬಿತ್ತನೆಯಾಗಿದೆ. ಪ್ರಸಕ್ತ ಹಂಗಾಮಿನಲ್ಲಿ 6.69 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಉತ್ಪಾದನೆಯನ್ನು ನಿರೀಕ್ಷಿಸಿದೆ.

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರಸ್ತುತ ಕಡಲೆಕಾಳು ಉತ್ಪನ್ನದ ಪ್ರತಿ ಕ್ವಿಂಟಲ್‌ಗೆ 4,744ರಿಂದ 5,025 ರು. ವರೆಗೆ ಮಾದರಿ ಧಾರಣೆಯಲ್ಲಿ ಮಾರಾಟವಾಗುತ್ತಿದೆ. ಕೇಂದ್ರ ಸರ್ಕಾರವು 2021-22ನೇ ಸಾಲಿನ ಹಿಂಗಾರು ಹಂಗಾಮಿಗೆ ಎಫ್‌ ಎ ಕ್ಯೂ ಗುಣಮಟ್ಟದ ಕಡಲೆಕಾಳು ಉತ್ಪನ್ನಕ್ಕೆ ನಿಗದಿಪಡಿಸಿರುವ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 5,230 ರು.ಗಳಗಿಂತ ಕಡಿಮೆ ಧಾರಣೆಯಲ್ಲಿ ಮಾರಾಟವಾಗುತ್ತಿದೆ ಎಂದು ಸಹಕಾರ ಇಲಾಖೆಯ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಪ್ರಸ್ತುತ ಸೋಯಾಬಿನ್‌ ಮಾರುಕಟ್ಟೆಗಳ ಧಾರಣೆಯು ಪ್ರತಿ ಕ್ವಿಂಟಲ್ ಗೆ 4,870 ರಿಂದ 6,168 ರು. ದರದಲ್ಲಿ ಮಾರಾಟ ಆಗುತ್ತಿದೆ. ಈ ಧಾರಣೆಯು ಕೇಂದ್ರ ಸರ್ಕಾರವು ಘೋಷಿಸಿರುವ ಎಫ್‌ಎಕ್ಯೂ ಗುಣಮಟ್ಟದ ಸೋಯಾಬಿನ್‌ ಪ್ರತಿ ಕ್ವಿಂಟಾಲ್‌ಗೆ 3,950 ರು.ಗಿಂತ ಹೆಚ್ಚಿನ ಧಾರಣೆಯಲ್ಲಿ ಮಾರಾಟ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಲು ರೈತರು ಆಸಕ್ತಿ ತೋರಿಲ್ಲ ಎಂದು ತಿಳಿದು ಬಂದಿದೆ.

2021-22ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಸೋಯಾಬಿನ್‌ ಖರೀದಿಸಲು ಬೀದರ್‌, ಕಲ್ಬುರ್ಗಿ, ಬೆಳಗಾವಿ, ಧಾರವಾಡ, ಗದಗ್‌ ಮ್ತು ಹಾವೇರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾ ಟಾಸ್ಕ್‌ ಪೋರ್ಸ್ ಸಮಿತಿಗಳಿಗೆ ಅನುಮೋದನೆಗೆ ಪತ್ರ ಬರೆದಿದೆ. ಈ ಪೈಕಿ ಧಾರವಾಡ ಜಿಲ್ಲೆಯ ಟಾಸ್ಕ್‌ಪೋರ್ಸ್‌ ಸಮಿತಿ ಮಾತ್ರ ಅನುಮೋದನೆ ನೀಡಿದೆ ವಿನಃ ಉಳಿದ ಜಿಲ್ಲೆಗಳು ಇದುವರೆಗೂ ಅನುಮೋದನೆ ನೀಡಿಲ್ಲ ಎಂದು ಗೊತ್ತಾಗಿದೆ.

ತೊಗರಿ ಖರೀದಿ ಸಂಬಂಧ ಕೇಂದ್ರದ ಸೂಚನೆಯಂತೆ ರಾಜ್ಯ ಸರ್ಕಾರವು 2021ರ ನವೆಂಬರ್‌ 15ರಂದು ಆದೇಶ ಹೊರಡಿಸಿತ್ತು. ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ 507 ಖರೀದಿ ಕೇಂದ್ರಗಳನ್ನು ತೆರೆದಿರುವ ರಾಜ್ಯ ಸರ್ಕಾರವು 2022ರ ಜನವರಿ 17ರ ಅಂತ್ಯಕ್ಕೆ 69,156 ನೋಂದಾಯಿತ ರೈತರ ಪೈಕಿ 1,007 ರೈತರಿಂದ ಸುಮಾರು 12,826 ಕ್ವಿಂಟಾಲ್‌ನಷ್ಟು ತೊಗರಿ ಖರೀದಿಸಿದೆ. ಇದರ ಮೌಲ್ಯ ಒಟ್ಟು 8.08 ಕೋಟಿ ಎಂದು ಅಂದಾಜಿಸಿದೆ.

ಇನ್ನುಳಿದ ರೈತರಿಂದ ತೊಗರಿ ಖರೀದಿಸಿ ರೈತರಿಗೆ ಹಣ ಪಾವತಿಸಲು ಅನುಕೂಲವಾಗಲು ಆವರ್ತ ನಿಧಿಯಿಂದ 25.00 ಕೋಟಿ ರು. ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯು ಕೋರಿದ್ದರೆ 10.00 ಕೋಟಿಗಳ ಮೊತ್ತವನ್ನು ಮುಂಗಡವಾಗಿ ಪಾವತಿಸಲು ಮಾರ್ಕ್‌ಫೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿರುವುದು ತಿಳಿದು ಬಂದಿದೆ.

ಸಾರ್ವಜನಿಕ ಪಡಿತರ ವಿತರಣೆ ಯೋಜನೆಯಡಿ ತೊಗರಿ ವಿತರಿಸಲು ಗರಿಷ್ಠ 8.00 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದಲ್ಲಿ ಬೆಂಬಲ ಬೆಲೆ ಯೋಜನೆ ಅಥವಾ ಬಫರ್‌ ಸ್ಟಾಕ್‌ ಯೋಜನೆಗಳಲ್ಲಿ ಖರೀದಿಸಲು ಕೇಂದ್ರ ಸರ್ಕಾರವು ಉದ್ದೇಶಿಸಿದೆ. ಈಗಾಗಲೇ ನಿಗದಿಪಡಿಸಿರುವ ಪ್ರತಿ ಎಕರೆಗೆ ಗರಿಷ್ಠ 7.5 ಕ್ವಿಂಟಾಲ್‌ ನಂತೆ ಮುಂದುವರೆಸಲು ಮತ್ತು ಪ್ರತಿ ರೈತರಿಂದ ನಿಗದಿಪಡಿಸಿರುವ ಗರಿಷ್ಠ ಮಿತಿ 15 ಕ್ವಿಂಟಾಲ್‌ ಪ್ರಮಾಣವನ್ನು ತೆಗೆದು ಹಾಕಲು ನ್ಯಾಫೆಡ್‌ ಸಂಸ್ಥೆಯು ಪ್ರಸ್ತಾವನೆ ಸಲ್ಲಿಸಿದೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts