3 ವರ್ಷಗಳಲ್ಲಿ 16 ಮತಾಂತರ ಪ್ರಕರಣ ದಾಖಲು; ಸಾಮಾಜಿಕ ಕ್ಷೋಭೆ ಹೆಸರಿನಲ್ಲಿ ದಿಕ್ಕುತಪ್ಪಿಸಿದರೇ?

ಬೆಂಗಳೂರು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಮಿಷ, ಬಲಪ್ರಯೋಗ ಮತ್ತು ದುಮಾರ್ಗಗಳ ಮೂಲಕ ಮತಾಂತರ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿವೆ ಎಂದು ರಾಜ್ಯ ಬಿಜೆಪಿ ಸರ್ಕಾರವು ಬಿಂಬಿಸಿರುವ ರೀತಿಯಲ್ಲಿ ಮತಾಂತರ ನಡೆದ ಪ್ರಕರಣಗಳು ದಾಖಲಾಗಿಲ್ಲ ಎಂಬ ಅಂಕಿ ಅಂಶಗಳ ಮಾಹಿತಿ ಇದೀಗ ಹೊರಬಿದ್ದಿದೆ.

ರಾಜ್ಯದಲ್ಲಿ ಬಲವಂತ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆಯುತ್ತಿರುವುದರಿಂದಲೇ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ಮಂಡಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಂಕಿ ಅಂಶಗಳ ವಿಚಾರದಲ್ಲಿ ದಿಕ್ಕು ತಪ್ಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

‘ರಾಜ್ಯದ ವಿವಿಧ ಭಾಗಗಳಲ್ಲಿ ಆಮಿಷಗಳು, ಬಲ ಪ್ರಯೋಗ, ದುಮಾರ್ಗಗಳ ಮೂಲಕ ಮತಾಂತರ ಮತ್ತು ಸಾಮೂಹಿಕ ಮತಾಂತರ ಕೃತ್ಯಗಳು ನಡೆದಿರುವ ಬಗ್ಗೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುತ್ತವೆ. ಇಂತಹ ಕೃತ್ಯಗಳು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿ ಸಾಮಾಜಿಕ ಕ್ಷೋಭೆಗಳಿಗೆ ಕಾರಣವಾಗಲಿದೆ. ಇದು ಸಾರ್ವಜನಿಕ ರಕ್ಷಣೆ ಹೊತ್ತಿರುವ ಸಿಬ್ಬಂದಿಗಳಿಗೆ ಸವಾಲಿನ ಕೆಲಸವೂ ಆಗಿರುತ್ತದೆ. ಪ್ರಸ್ತುತ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ದಂಡಿಸಲು ರಾಜ್ಯದಲ್ಲಿ ಯಾವುದೇ ಕಾನೂನು ಅಸ್ತಿತ್ವದಲ್ಲಿ ಇರುವುದಿಲ್ಲ. ಸಮಾಜವನ್ನು ಒಡೆಯುತ್ತಿರುವ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಯಾವುದೇ ವಿಳಂಬಕ್ಕೆ ಅವಕಾಶವಾಗದಂತೆ ತಕ್ಷಣ ಕಾನೂನುಕ್ರಮ ವಹಿಸಿ ನಿಯಂತ್ರಣಕ್ಕೆ ತರಬೇಕೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಕಾಯ್ದೆ ತರುವ ಅಗತ್ಯವಿದೆ,’ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿತ್ತು.

ಸಚಿವ ಸಂಪುಟದ ಪ್ರಸ್ತಾವನೆಗೂ ಮುನ್ನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 2021ರ ಡಿಸೆಂಬರ್‌ 7ರಂದು ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಟಿಪ್ಪಣಿ ಕಳಿಸಿದ್ದರು.

ಆದರೆ ವಾಸ್ತವದಲ್ಲಿ ರಾಜ್ಯದಲ್ಲಿ 2018, 2019, 2020, 2021ರ ಫೆಬ್ರುವರಿ ಅಂತ್ಯಕ್ಕೆ 16 ಪ್ರಕರಣಗಳಷ್ಟೇ ದಾಖಲಾಗಿದೆ. ವಿಶೇಷವೆಂದರೆ ಕರ್ನಾಟಕ ಧಾರ್ಮಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ ತರಲು ವಿಧಾನಸಭೆ ಅಧಿವೇಶನದಲ್ಲಿ ಕೂಗೆಬ್ಬಿಸಿದ್ದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು 2021ರ ಫೆಬ್ರುವರಿ 2ರಂದು ಕೇಳಿದ್ದ ಪ್ರಶ್ನೆಗೆ ಅಂದಿನ ಗೃಹ ಸಚಿವ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಅಂಕಿ ಅಂಶಗಳನ್ನು ಸದನಕ್ಕೆ ಉತ್ತರಿಸಿದ್ದರು.

ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕಳೆದ 10, 15 ವರ್ಷಗಳಿಂದ ಬಲವಂತವಾಗಿ ಜನರನ್ನು ಮತಾಂತರಗೊಳಿಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಸದನಲ್ಲಿ ಎತ್ತರಿಸಿದ ದನಿಯಲ್ಲಿ ಮಾತನಾಡಿದ್ದರು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಇನ್ನು ಗೂಳಿಹಟ್ಟಿ ಶೇಖರ್‌ ಅವರ ಸ್ವಕೇತ್ರ ಹೊಸದುರ್ಗ ತಾಲೂಕಿನಲ್ಲಿ ಯಾವುದೇ ಬಲವಂತವಾಗಿ ಅಥವಾ ಆಮಿಷವೊಡ್ಡಿ ಮತಾಂತರವನ್ನು ಮಾಡಿದ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಬಸವರಾಜ ಬೊಮ್ಮಾಯಿ ಅವರು ಲಿಖಿತ ಉತ್ತರ ನೀಡಿದ್ದರು.

ಮತಾಂತರ ಪ್ರಕರಣಗಳ ವಿವರ

2018ರಲ್ಲಿ 3, 2019ರಲ್ಲಿ 7, 2020ರಲ್ಲಿ 5, 2021ರಲ್ಲಿ 1 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2018ರಲ್ಲಿ 1, 2019ರಲ್ಲಿ 1, 2020ರಲ್ಲಿ 2 ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಈ ಮೂರೂ ವರ್ಷದಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಮೈಸೂರು ಜಿಲ್ಲೆಯಲ್ಲಿ 2020ರಲ್ಲಿ 1 ಪ್ರಕರಣ ಮಾತ್ರ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2019ರಲ್ಲಿ 1, 2020ರಲ್ಲಿ 2 ಮತ್ತು 2021ರಲ್ಲಿ 1 ಪ್ರಕರಣ, ರಾಮನಗರದಲ್ಲಿ 2019ರಲ್ಲಿ 2, ಹಾಸನ ಜಿಲ್ಲೆಯಲ್ಲಿ 2018ರಲ್ಲಿ 2, ಧಾರವಾಡದಲ್ಲಿ 2019ರಲ್ಲಿ 1, ಉಡುಪಿಯಲ್ಲಿ 2019ರಲ್ಲಿ 1 ಪ್ರಕರಣವು ದಾಖಲಾಗಿದೆ ಎಂಬುದು ಬಸವರಾಜ ಬೊಮ್ಮಾಯಿ ಅವರು ನೀಡಿದ್ದ ಉತ್ತರದಿಂದ ತಿಳಿದು ಬಂದಿದೆ.

ಮತಾಂತರ ನಿಷೇಧಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನ ಸದಸ್ಯ ಬಿಜೆಪಿಯ ಎನ್‌ ರವಿಕುಮಾರ್‌ ಅವರು 2020ರ ಸೆ. 23ರಂದು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ್ದ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವನೆಯೇ ಇಲ್ಲ ಎಂದಿದ್ದರು.

‘ಮತಾಂತರ ನಿಷೇಧ ಕಾನೂನು ಜಾರಿಗೆ ತರುವ ಪ್ರಸ್ತಾವ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿರುವುದಿಲ್ಲ. ಕಳೆದ 2 ವರ್ಷಗಳಲ್ಲಿ ಮತಾಂತರಗೊಂಡವರ ಸಂಖ್ಯೆ ಮತ್ತು ಮತಾಂತರಗೊಂಡವರು ಯಾವ ಧರ್ಮದಿಂದ ಯಾವ ಧರ್ಮಕ್ಕೆ ಮತಾಂತರಗೊಂಡಿರುತ್ತಾರೆ ಎಂಬುದಕ್ಕೆ ಯಾವುದೇ ಕಾನೂನು ಇಲ್ಲದೇ ಇರುವದರಿಂದ ಯಾವುದೇ ಅಂಕಿ ಅಂಶಗಳು ಲಭ್ಯವಿರುವುದಿಲ್ಲ,’ ಎಂದು ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು ಉತ್ತರಿಸಿದ್ದರು.

ಪರಿಶಿಷ್ಟ ಜಾತಿ ಜನರು ಹಿಂದೂ, ಸಿಖ್‌ ಮತ್ತು ಬೌದಧ ಧರ್ಮವನ್ನು ಮಾತ್ರ ಆಚರಿಸುತ್ತಿರುವವರು ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಆದರೆ ಪರಿಶಿಷ್ಟ ಜಾತಿ ಜನರು ಇತರ ಯಾವುದೇ ಧರ್ಮಕ್ಕೆ ಸೇರಿದಲ್ಲಿ ಮೀಸಲಾತಿ ಸವಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಪರಿಶಿಷ್ಟ ಪಂಗಡದವರು ಯಾವುದೇ ಧರ್ಮಕ್ಕೆ ಸೇರಿದರೂ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ,’ ಎಂದೂ ಉತ್ತರಿಸಿದ್ದನ್ನು ಸ್ಮರಿಸಬಹುದು.

ಭಾರತದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆತ್ಮಸಾಕ್ಷಿಗೆ ಸರಿಯೆನಿಸುವ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಆಚರಿಸುವ, ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಆದರೆ ಬಲವಂತದ ಮತಾಂತರಕ್ಕೆ ಸಂವಿಧಾನಕ್ಕೆ ಅವಕಾಶವಿಲ್ಲ ಎಂಬುದು ಭಾರತ ಸಂವಿಧಾನದ ಅನುಚ್ಛೇದ 25ರಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts