ಹೇಮಾವತಿ; ಭೂಪರಿಹಾರ ಅವ್ಯವಹಾರ ಪ್ರಕರಣಗಳಿಗೆ ಮರುಜೀವ, ಎಸ್‌ಐಟಿಗೆ ಶಿಫಾರಸ್ಸು

ಬೆಂಗಳೂರು; ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆಗಳ ಆರಂಭಿಕ ಅಧಿಸೂಚನೆಯಿಂದ ಇಲ್ಲಿಯವರೆಗೆ ಭೂ ಸಂತ್ರಸ್ತರಿಗೆ ನೀಡಲಾಗಿರುವ ಭೂ ಪರಿಹಾರ, ಅರಣ್ಯ ಭೂ ಪರಿಹಾರ ಸೇರಿದಂತೆ ಇನ್ನಿತರೆ ಪ್ರಕರಣಗಳ ಕುರಿತು ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಶಿಫಾರಸ್ಸು ಮಾಡಿದೆ.

ಅದೇ ರೀತಿ ಭೂ ಸಂತ್ರಸ್ತರಿಗೆ ಮೀಸಲಿರಿಸಿದ್ದ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯ ಲೋಪವೆಸಗಿರುವ ಅಧಿಕಾರಿ,ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳನ್ನು ಶೀಘ್ರದಲ್ಲಿ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. 2005ರ ನಂತರ ಆಗಿರುವ ಅಕ್ರಮ ಭೂ ಪರಭಾರೆಯನ್ನು ರದ್ದುಗೊಳಿಸಬೇಕು. ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ವರದಿ ಮಾಡಬೇಕು ಎಂದು ಮಧ್ಯಂತರ ವರದಿ ಶಿಫಾರಸ್ಸು ಮಾಡಿದೆ.

ಬೆಳಗಾವಿಯಲ್ಲಿ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ (ಡಿ. 14) ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಮಂಡಿಸಿರುವ ವರದಿಯು ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯ ಯೋಜನೆಗಳಲ್ಲಿ ನಡೆದಿದೆ ಎನ್ನಲಾಗಿರುವ ದೊಡ್ಡ ಮಟ್ಟದ ಅವ್ಯವಹಾರದ ಪ್ರಕರಣಗಳಿಗೆ ಮರು ಜೀವ ನೀಡಿದೆ.

ಮತ್ತೊಂದು ವಿಶೇಷ ಸಂಗತಿ ಎಂದರೆ ಹೇಮಾವತಿ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ 1979ರಲ್ಲಿದ್ದ ಸರ್ಕಾರವು ಎಸ್‌ ಆರ್‌ ಬೊಮ್ಮಾಯಿ ಅವರ (ಮಾಜಿ ಮುಖ್ಯಮಂತ್ರಿಯೂ ಆಗಿದ್ದರು) ನೇತೃತ್ವದಲ್ಲಿ ರಚಿಸಿದ್ದ ವಿಚಾರಣೆ ಸಮಿತಿಯು 1982ರಲ್ಲಿ ಮಾಡಿದ್ದ ಶಿಫಾರಸ್ಸುಗಳನ್ನು 40 ವರ್ಷ ಕಳೆದರೂ ಕಂದಾಯ ಇಲಾಖೆಯು ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಅಲ್ಲದೆ ಹಾಸನ ಜಿಲ್ಲಾಧಿಕಾರಿ ರಚಿಸಿದ್ದ ತನಿಖಾ ತಂಡ ನೀಡಿದ್ದ ವರದಿಯನ್ನೂ ಕಸದ ಬುಟ್ಟಿಗೆ ಎಸೆದಿರುವುದು ವರದಿಯಿಂದ ತಿಳಿದು ಬಂದಿದೆ. ಕಂದಾಯ ಇಲಾಖೆಯ ಈ ಧೋರಣೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಬೊಮ್ಮಾಯಿ ಸಮಿತಿ ವರದಿಯೂ ಮೂಲೆಗುಂಪು

ಹೇಮಾವತಿ ಜಲಾಶಯ ಯೋಜನೆಗೆ ಸಂಬಂಧಿಸಿದಂತೆ ನಕಲಿ ಭೂ ದಾಖಲೆ ಸೃಷ್ಟಿಯಾಗಿರುವುದು, ಭೂ ಸಂತ್ರಸ್ತರಲ್ಲದವರಿಗೆ ಭೂ ಪರಿಹಾರ ನೀಡಿರುವುದು, ಕೆಲವು ಸಂತ್ರಸ್ತರಿಗೆ ಸರ್ಕಾರವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಪರಿಹಾರ ನೀಡಿರುವುದು, ವಿಶೇಷ ಭೂ ಸ್ವಾಧೀನಾಧಿಕಾರಿಗಳ ಮುಳುಗಡೆ ಪ್ರಮಾಣ ಪತ್ರಗಳು ಇಲ್ಲದಿದ್ದರೂ ಗ್ರಾಮ ಪಂಚಾಯ್ತಿ ಪ್ರಮಾಣ ಪತ್ರಗಳ ಮೇಲೆ ಮಂಜೂರು ಮಾಡಿರುವುದನ್ನು ಎಸ್‌ ಆರ್‌ ಬೊಮ್ಮಾಯಿ ನೇತೃತ್ವದ ವಿಚಾರಣೆ ಸಮಿತಿಯು ವರದಿ ಮಾಡಿತ್ತು.

ವಿಚಾರಣೆ ಸಮಿತಿಯು ನೀಡಿದ್ದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕಿದ್ದ ಕಂದಾಯ ಇಲಾಖೆಯು ಭೂ ಸಂತ್ರಸ್ತರಿಗೆ ಇಂದಿಗೂ ಭೂ ಮಂಜೂರಾತಿ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ಭೂ ದಾಖಲೆ ಸೃಷ್ಟಿಸಿರುವುದು, ಸರ್ಕಾರಿ ಭೂ ಪರಿಹಾರ ಅಧಿಸೂಚನೆಯಲ್ಲಿ ಕಾಯ್ದಿರಿಸದಂತಹ ಭೂಮಿಯನ್ನು ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುತ್ತಿದೆ. ಅದೇ ರೀತಿ ಸಂತ್ರಸ್ತರಲ್ಲದವರಿಗೆ ಭೂ ಮಂಜೂರಾತಿ ಹಾಗೂ ಕೆಲವು ಸರ್ವೆ ನಂಬರ್‌ಗಳಲ್ಲಿ ಭೂ ಪರಿವೀಕ್ಷಣೆ ಮಾಡದೇ ಲಭ್ಯವಿರುವ ಜಮೀನಿಗಿಂತ ಹೆಚ್ಚುವರಿಯಾಗಿ ಈಗಲೂ ಭೂ ಮಂಜೂರಾತಿ ಮಾಡುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ ಹೇಮಾವತಿ ಜಲಾಶಯ ಯೋಜನೆಯಿಂದ ಭೂ ಮುಳುಗಡೆಯಾದ ರೈತರಿಗೆ ಜಮೀನು ಮಂಜೂರು ಮಾಡುವ ಸಂಬಂಧ 15 ರ್ಷಗಳ ಭೂ ಮಂಜೂರಾತಿ ಪರಭಾರೆ ಅವಧಿಯು/ನಿಷೇಧ ಷರತ್ತನ್ನುಇಲಾಖೆಯು ಹಿಂಪಡೆದಿದೆ. ಕಾನೂನು ಇಲಾಖೆಯು ಪರಭಾರೆ ನಿಷೇಧ ಷತ್ತುನ್ನು ಅಳವಡಿಸುವುದು ಆಡಳಿತ ಇಲಾಖೆಯ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಮತ್ತು ಅದಕ್ಕೆ ಯಾವುದೇ ಕಾನೂನು ತೊಡಕುಗಳು ಇರುವುದಿಲ್ಲವೆಂದು ತಿಳಿಸಿದ್ದರೂ ಅದನ್ನು ಮರು ಸೇರಿಸುವಿಕೆಯಲ್ಲಿಯೂ ಕಂದಾಯ ಇಲಾಖೆಯು ವಿಳಂಬ ಧೋರಣೆ ಅನುಸರಿಸಿದೆ ಎಂದು ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

ಕಸದ ಬುಟ್ಟಿಗೆ ಸೇರಿದ ಹಾಸನ ಜಿಲ್ಲಾಧಿಕಾರಿ ತನಿಖಾ ತಂಡ ವರದಿ

ಹೇಮಾವತಿ ಜಲಾಶಯ ಯೋಜನೆಯಿಂದ ಮುಳುಗಡೆಯಾದ ಭೂ ಸಂತ್ರಸ್ತರಿಗೆ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚಿಸಿದ್ದ ತನಿಖಾ ತಂಡ ನೀಡಿದ್ದ ವರದಿಯನ್ನೂ ಕಂದಾಯ ಇಲಾಖೆಯು ಕಸದ ಬುಟ್ಟಿಗೆ ಎಸೆದಿದೆ. 1,654 ಎಕರೆ ವಿಸ್ತೀರ್ಣದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿದೆ ಎಂದು ತನಿಖಾ ತಂಡ ವರದಿ ನೀಡಿದ್ದರೂ ಕಂದಾಯ ಇಲಾಖೆಯು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

95 ಸಾವಿರ ಎಕರೆ ಜಮೀನು ಭೂ ಮಂಜೂರಾತಿಗಾಗಿ ಇಲಾಖೆಯು ಕಾಯ್ದರಿಸಿತ್ತು. 2015-16ನೇ ಸಾಲಿನ ನಂತರ 979 ಪ್ರಕರಣಗಳಲ್ಲಿ ಭೂ ಮಂಜೂರಾತಿಯಾಗಿದೆ. ಈ ಪೈಕಿ 569 ಪ್ರಕರಣಗಳು ವಿಶೇ‍ಷ ಭೂ ಸ್ವಾಧೀನಾಧಿಕಾರಿಗಳ ಆದೇಶದ ಅನ್ವಯ ಮಂಜೂರು ಮಾಡಿರುವುದು ಮತ್ತು ಉಳಿದ 410 ಪ್ರಕರಣಗಳು ವಿಶೇಷ ಭೂ ಸ್ವಾಧೀನಾಕಾರಿ ಕಚೇರಿಯಿಂದ ಮಂಜೂರಾಗದೇ ಇದ್ದರೂ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಮತ್ತು ಸೃಷ್ಟಿಸಿದ್ದ ದಾಖಲೆಗಳಿಂದ ಜಮೀನು ಮಂಜೂರು ಮಾಡಲಾಗಿತ್ತು ಎಂದು ಪಿಎಸಿ ವರದಿಯಲ್ಲಿ ಪ್ರಸ್ತಾಪವಾಗಿದೆ.

ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯಲೋಪ ಎಸಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಎಂದು 2020ರ ಫೆಬ್ರುವರಿಯಲ್ಲಿಯೇ ಆದೇಶವನ್ನು ಹೊರಡಿಸಿದ್ದರೂ ಕಂದಾಯ ಇಲಾಖೆಯು ಈ ಪ್ರಕರಣದಲ್ಲಿ ಗಣನೀಯವಾದ ಪ್ರಗತಿ ಸಾಧಿಸಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಇನ್ನು, ಅರಣ್ಯ ಇಲಾಖೆಗೆ ಸೇರಿದ ಅಧಿಸೂಚಿತ ಪ್ರದೇಶವನ್ನು ನಿಯಮಬಾಹಿರವಾಗಿ 648 ಪ್ರಕರಣಗಳಲ್ಲಿ ಅಕ್ರಮ ಭೂ ಮಂಜೂರಾತಿ ಕುರಿತಂತೆ ಹಲವು ದೂರುಗಳು ಸ್ವೀಕೃತವಾಗಿದ್ದವು. ಆದರೆ ಈ ದೂರಿನ ಮೇಲೆ ಅರಣ್ಯ ಪ್ರದೇಶವನ್ನು ರಕ್ಷಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶೇಷ ಭೂ ಸ್ವಾಧೀನಾಧಿಕಾರಿ ಕ್ಯಾಪ್ಟನ್‌ ಶ್ರೀನಿವಾಸಗೌಡ ಅವರ ಅವಧಿಯಲ್ಲಿ 648 ಪ್ರಕರಣಗಳಲ್ಲಿ ಸೃಷ್ಟಿಯಾಗಿದ್ದ ಜಮೀನು ಮಂಜೂರಾತ ಪ್ರಕರಣಗಳ ತನಿಖೆ ಮಾಡಲು ಸೂಚಿಸಿದ್ದರೂ ವರದಿಯನ್ನು ಸಲ್ಲಿಸಿಲ್ಲ. ಹಾಗೆಯೇ 2015ರ ಜನವರಿ 1ರಿಂದ 2018ರ ನವೆಂಬರ್‌ 30ರವರೆಗೆ ಭೂ ಮಂಜೂರಾದ 414 ಅಧಿಕೃತ ಜ್ಞಾಪನ ಪತ್ರಗಳು ಅಧಿಕೃತವಾಗಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಿಂದ ಹೊರಡಿಸದೇ ತಹಶೀಲ್ದಾರ್‌ ಕಚೇರಿಯಿಂದ ಸೃಷ್ಟಿಯಾಗಿತ್ತು ಎಂದು ಸಮಿತಿಯ ವರದಿಯು ಹೊರಗೆಡವಿದೆ.

‘ಸರ್ಕಾರಿ ಜಮೀನು ಸಂರಕ್ಷಣೆಯ ಹೊಣೆಗಾರಿಕೆ ಹೊಂದಿರುವ ಕಂದಾಯ ಇಲಾಖೆಯ ಅಧಿಕಾರಿ, ನೌಕರರು ದುಷ್ಟ ಹಾಗೂ ದುರಾಸೆಯ ಮನೋಭಾವದಿಂದ ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಸೃಷ್ಟಿ ಮಾಡಲು ಸಹಾಯ ಮಾಡಿ ಅಕ್ರಮವಾಗಿ ಭೂ ಪರಭಾರೆ ಮಾಡಿರುವುದು ಅತಿ ದೊಡ್ಡ ದುರಂತವಾಗಿರುತ್ತದೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದರೆ ಬೆಳೆಯನ್ನು ರಕ್ಷಿಸುವವರ್ಯಾರು,’ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ.

ಹಾಸನ ಜಿಲ್ಲೆಯಲ್ಲಿ 1970ರ ದಶಕದಲ್ಲಿ ಹೇಮಾವತಿ, ಯಗಚಿ, ವಾಟೆಹೊಳೆ ನೀರಾವರಿ ಯೋಜನೆ ನಿರ್ಮಾಣ ಕೈಗೆತ್ತಿಕೊಳ್ಳಲಾಗಿತ್ತು. ಮತ್ತು ಜಲಾಶಯಗಳ ನಿರ್ಮಾಣದಿಂದ ಸಾವಿರಾರು ಜನರ ಮನೆ, ಜಮೀನು ಒಳಗೊಂಡಂತೆ ಆಸ್ತಿಪಾಸ್ತಿಗಳು ಮುಳುಗಡೆಯಾಗಿತ್ತು.

ಈ ಯೋಜನೆಗಳಿಂದ ಬಾಧಿತರಾದ ಕುಟುಂಬಗಳಿಗೆ ಜಮೀನು ಮಂಜೂರು ಮಾಡಿ ಪುನರ್‌ ವಸತಿ ಕಲ್ಪಿಸಲು ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು, ಹಾಸನ, ಅರಕಲಗೂಡು, ಹೊಳೆನರಸೀಪುರ, ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕು, ಮಂಡ್ಯ ಜಿಲ್ಲೆಯ ಕೆ ಆರ್‌ ಪೇಟೆ ತಾಲೂಕು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕುಗಳಲ್ಲಿ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 71ರ ಅಡಿ 1970, 1972, ಮತ್ತು 1978ರಲ್ಲಿ ಒಟ್ಟಾರೆ 95,359.08 ಎಕರೆ ಭೂಮಿಗಳನ್ನು ಕಾಯ್ದರಿಸಿ ಆದೇಶ ಹೊರಡಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts