15ನೇ ಹಣಕಾಸು ಆಯೋಗ; 2,142 ಕೋಟಿ ಬಾಕಿ ಉಳಿಸಿಕೊಂಡರೂ ತುಟಿಬಿಚ್ಚದ ಈಶ್ವರಪ್ಪ

ಬೆಂಗಳೂರು; ಜಿಲ್ಲಾ ಪಂಚಾಯ್ತಿ ಸೇರಿದಂತೆ ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆರೋಗ್ಯ, ವಿಪತ್ತು ನಿರ್ವಹಣೆ ಸೇರಿದಂತೆ ಇನ್ನಿತರೆ ವಲಯಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ 15ನೇ ಹಣಕಾಸು ಆಯೋಗ ಮಾಡಿದ್ದ ಶಿಫಾರಸ್ಸಿನ ಒಟ್ಟು ಮೊತ್ತದ ಎರಡನೇ ಕಂತಿನ ಅನುದಾನ ಪೈಕಿ 2021ರ ಡಿಸೆಂಬರ್‌ 10ರ ಅಂತ್ಯಕ್ಕೆ ಒಟ್ಟು 2,142.70 ಕೋಟಿ ರು. ಗಳನ್ನು ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಅವರು ಕೇಂದ್ರದ ಈ ಧೋರಣೆ ಕುರಿತು ಇದುವರೆಗೂ ತುಟಿ ಬಿಚ್ಚಿಲ್ಲ.

15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ ಒಟ್ಟು 4,890.53 ಕೋಟಿ ರು. ಪೈಕಿ 2021ರ ನವೆಂಬರ್‌ ಅಂತ್ಯಕ್ಕೆ ಒಟ್ಟು 2,747.83 ಕೋಟಿ ರು.ಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಿದೆ. ಆದರೆ ಇನ್ನೂ 2,142.70 ಕೋಟಿ ರು. ಅನುದಾನ ಬಾಕಿ ಇದೆ ಎಂಬುದು ಆರ್ಥಿಕ ಇಲಾಖೆಯ ಟಿಪ್ಪಣಿಯಿಂದ ತಿಳಿದು ಬಂದಿದೆ. ಈ ಟಿಪ್ಪಣಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2021ರ ಜೂನ್‌ ತಿಂಗಳಿನಿಂದಲೂ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡುವಲ್ಲಿನ ವಿಳಂಬದ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಹಲವು ಬಾರಿ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದಿದ್ದರೂ 5 ತಿಂಗಳಾದರೂ ಬಾಕಿ ಬರಬೇಕಿರುವ ಒಟ್ಟು 2,142.70 ಕೋಟಿ ರು.ನಲ್ಲಿ ಬಿಡಿಗಾಸೂ ಬಂದಿಲ್ಲ ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.

ರಾಜ್ಯಕ್ಕೆ 4,891.00 ಕೋಟಿ ರು. ಅನುದಾನ ಒದಗಿಸಲು ಶಿಫಾರಸ್ಸು ಮಾಡಿತ್ತು. ಇದರಲ್ಲಿ ಮೊದಲನೇ ಕಂತಿನಲ್ಲಿ 2,445.50 ಕೋಟಿ ಹಂಚಿಕೆಯಾಗಿತ್ತು. ಈ ಪೈಕಿ 2021ರ ಜೂನ್‌ ಅಂತ್ಯಕ್ಕೆ ರಾಜ್ಯ ಸರ್ಕಾರಕ್ಕೆ ಕೇವಲ 941.80 ಕೋಟಿ ರು. ಬಿಡುಗಡೆ ಮಾಡಿ ಇನ್ನೂ 1,503.70 ಕೋಟಿ ಬಾಕಿ ಉಳಿಸಿಕೊಂಡಿದೆ. ಈ ಕುರಿತು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‌ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ’15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಪ್ರಕಾರ 2021-22ನೇ ಸಾಲಿನ ಮೊದಲ ಕಂತಿನಲ್ಲಿ ಬಾಕಿ ಉಳಿದಿರುವ 1,503.70 ಕೋಟಿ ರು. ಬಿಡುಗಡೆಗೆ ಗಮನಹರಿಸಬೇಕು,’ ಎಂದು ಕೋರಿದ್ದರು.

2021ರ ಜೂನ್‌ ಅಂತ್ಯಕ್ಕೆ 945 ಕೋಟಿ ರು.ಮಾತ್ರ ಸರ್ಕಾರ ಸ್ವೀಕರಿಸಿತ್ತು . ಆದರೆ 5 ತಿಂಗಳಾದರೂ ಸಚಿವ ಕೆ ಎಸ್‌ ಈಶ್ವರಪ್ಪ ಅವರಾಗಲಿ, ಇಲಾಖೆಯ ಅಧಿಕಾರಿಗಳಾಗಲೀ ಈ ಬಗ್ಗೆ ಸೊಲ್ಲೆತ್ತದ ಕಾರಣ 2021ರ ಡಿಸೆಂಬರ್‌ 10ರ ಅಂತ್ಯಕ್ಕೆ 2,142.70 ಕೋಟಿ ರು. ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.

ಡಿಸೆಂಬರ್‌ 10ರ ಅಂತ್ಯಕ್ಕೆ ಬಾಕಿ ಎಷ್ಟೆಷ್ಟಿದೆ?

ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ 2,377 ಕೋಟಿ ರು.ಗಳನ್ನು 15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿತ್ತು. ಈ ಪೈಕಿ ನವಂಬರ್‌ ಅಂತ್ಯಕ್ಕೆ 1,188.05 ಕೋಟಿ ರು.ಗಳನ್ನಷ್ಟೇ ರಾಜ್ಯ ಸರ್ಕಾರವು ಸ್ವೀಕರಿಸಿದೆ. 1,188.5 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ಅದೇ ರೀತಿ ಗ್ರಾಮೀಣ ನೈರ್ಮಲ್ಯೀಕರಣ ಮತ್ತು ವಾಯುಗುಣಮಟ್ಟ ವೃದ್ಧಿಸಲು ಒಟ್ಟು 421 ಕೋಟಿ ರು.ಗಳನ್ನು ಶಿಫಾರಸ್ಸು ಮಾಡಿತ್ತು. ಡಿಸೆಂಬರ್‌ 10ರವರೆಗೆ ಈ ಬಾಬ್ತಿನಲ್ಲಿ ಬಿಡಿಗಾಸನ್ನೂ ರಾಜ್ಯ ಸರ್ಕಾರವು ಸ್ವೀಕರಿಸಿಲ್ಲ.

ಹಾಗೆಯೇ ನಾನ್‌ ಮಿಲಿಯನ್‌ ಪ್ಲಸ್‌ ಸಿಟಿ ಯೋಜನೆಯಡಿಯಲ್ಲಿ ಒಟ್ಟು 750 ಕೋಟಿ ರು.ಗಳಿಗೆ ಶಿಫಾರಸ್ಸು ಮಾಡಿತ್ತು. ಈ ಪೈಕಿ ನವೆಂಬರ್‌ ಅಂತ್ಯಕ್ಕೆ 375 ಕೋಟಿ ರು. ಗಳನ್ನು ಸ್ವೀಕರಿಸಿದೆಯಾದರೂ ಡಿಸೆಂಬರ್‌ 10ರ ಅಂತ್ಯಕ್ಕೆ ಇನ್ನು 375 ಕೋಟಿ ರು. ಬಿಡುಗಡೆಗೆ ಬಾಕಿ ಇದೆ. ವಿಪತ್ತು ನಿರ್ವಹಣೆಗೆ 395.5 ಕೋಟಿ ಪೈಕಿ 79.10 ಕೋಟಿ ರು.ಗಳನ್ನು ಜೂನ್‌ನಲ್ಲಿ ಬಾಕಿ ಉಳಿಸಿಕೊಂಡಿತ್ತು. ಆದರೆ ಡಿಸೆಂಬರ್‌ 10ರ ತನಕ ಇನ್ನೂ 158.20 ಕೋಟಿ ರು.ಗಳು ಬಿಡುಗಡೆಗೆ ಬಾಕಿ ಇರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 15ನೇ ಹಣಕಾಸು ಆಯೋಗದ ಅನುದಾನಕ್ಕೆ 2021-22ನೇ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಲು 2021ರ ಜುಲೈ 6ರಂದು ಸುತ್ತೋಲೆ ಹೊರಡಿಸಿದೆ. ’15ನೇ ಹಣಕಾಸು ಆಯೋಗದ ಅನುದಾನದಲ್ಲಿ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ 2,377.00 ಕೋಟಿ ನಿಗದಿಪಡಿಸಿದೆ. ಈ ಅನುದಾನದಲ್ಲಿ ರಾಜ್ಯ ಸರ್ಕಾರವು ಶೇ.85ರಷ್ಟು ಅನುದಾನವನ್ನು ಗ್ರಾಮ ಪಂಚಾಯ್ತಿಗಳಿಗೆ ಶೇ.10ರಷ್ಟು ಅನುದಾನವನ್ನು ತಾಲೂಕು ಪಂಚಾಯ್ತಿಗಳಿಗೆ ಮತ್ತು ಶೇ.5ರಷ್ಟು ಅನುದಾನವನ್ನು ಜಿಲ್ಲಾ ಪಂಚಾಯ್ತಿಗಳಿಗೆ ನಿಗದಿಪಡಿಸಬೇಕಿದೆ,’ ಎಂದು ಸುತ್ತೋಲೆ ಹೊರಡಿಸಿದೆ.

ಒಟ್ಟು ಅನುದಾನದಲ್ಲಿ ಗ್ರಾಮಾಂತರ ಪ್ರದೇಶದ ನೈರ್ಮಲ್ಯೀಕರಣ ಸೇವೆ ಉತ್ತಮಪಡಿಸುವುದು, ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸುಸ್ಥಿರತೆ ಕಾಯ್ದುಕೊಳ್ಳುವುದು, ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರು ಮರು ಬಳಕೆಗೆ ಸಂಬಂಧಿಸಿದಂತಹ ಕೆಲಸ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದು ಸೂಚಿಸಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

ಕೇಂದ್ರ ಸರ್ಕಾರದ ಪತ್ರದ ಪ್ರಕಾರ ಶೇ.,60ರಷ್ಟು ಅನುದಾನದಲ್ಲಿ ಶೇ.50ರಷ್ಟನ್ನು ಕಡ್ಡಾಯವಾಗಿ ಕುಡಿಯುವ ನೀರಿಗೆ ಮತ್ತು ಶೇ. 50ರಷ್ಟನ್ನು ಕಡ್ಡಾಯವಾಗಿ ನೈರ್ಮಲ್ಯ ಕಾಪಾಡಲು ಬಳಸಬೇಕು. ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ತಯಾರಿಸಬೇಕು ಎಂದು ಸುತ್ತೋಲೆ ಹೊರಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳು ತಮ್ಮ ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು ಒಗ್ಗೂಡಿಸುವ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು ಎಂದೂ ತಿಳಿಸಿದೆ.

the fil favicon

SUPPORT THE FILE

Latest News

Related Posts