ಬೆಂಗಳೂರು; ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಮತ್ತೊಂದು ಉಪ ಲೋಕಾಯುಕ್ತರ ಹುದ್ದೆಯು ಕಳೆದೊಂದು ವರ್ಷದಿಂದ ಖಾಲಿ ಇದೆ. 2020ರ ಡಿಸೆಂಬರ್‌ನಲ್ಲಿಯೇ ಎರಡನೇ ಉಪ ಲೋಕಾಯುಕ್ತ ಹುದ್ದೆಯಿಂದ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರು ನಿವೃತ್ತರಾಗುವ 4 ತಿಂಗಳ ಮೊದಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೇಮಕಾತಿ ಸಂಬಂಧ ಪ್ರಕ್ರಿಯೆ ಆರಂಭಿಸಿದ್ದರೂ ವರ್ಷ ಕಳೆದರೂ ಲೋಕಾಯುಕ್ತ ಸಂಸ್ಥೆಗೆ ಎರಡನೇ ಉಪ ಲೋಕಾಯುಕ್ತ ನೇಮಕ ಭಾಗ್ಯ ದೊರೆತಿಲ್ಲ.
ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಸಂಬಂಧ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ಕುರಿತು ಕಟಕಟೆಯಲ್ಲಿ ನಿಂತಿದ್ದ ರಾಜ್ಯ ಬಿಜೆಪಿ ಸರ್ಕಾರವು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಪ್ರಮಾಣಪತ್ರ ಸಲ್ಲಿಸಿತ್ತಾದರೂ ಇದುವರೆಗೂ ನೇಮಕಾತಿ ಸಂಬಂಧದ ಕಡತಕ್ಕೆ ಮುಕ್ತಿ ದೊರೆತಿಲ್ಲ.
‘ನೇಮಕಾತಿ ಸಂಬಂಧದ ಕಡತವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಇದೆ. ಕಡತವನ್ನು ಅವರು ಈವರೆವಿಗೂ ಪರಿಶೀಲಿಸಿಲ್ಲ. ಹೀಗಾಗಿ ನೇಮಕಾತಿ ವರ್ಷದಿಂದಲೂ ನೆನೆಗುದಿಗೆ ಬಿದ್ದಿದೆ. ಅಲ್ಲದೆ ಪ್ರತಿಪಕ್ಷ ನಾಯಕ, ವಿಧಾನಮಂಡಲದ ಉಭಯ ಸದನಗಳ ಸಭಾಪತಿ, ಸಭಾಧ್ಯಕ್ಷರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಉಪ ಲೋಕಾಯುಕ್ತ ಹುದ್ದೆಗೆ ಶಿಫಾರಸ್ಸು ಮಾಡಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಇದುವರೆಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜಾಗೃತ ವಿಭಾಗಕ್ಕೆ ಇದುವರೆಗೂ ಮುಖ್ಯಮಂತ್ರಿಗಳ ಕಚೇರಿಯಿಂದ ಕಡತವು ಹಿಂದಿರುಗಿಲ್ಲ ಹಾಗೂ ಈ ಸಂಬಂಧ ಯಾವುದೇ ಮಾಹಿತಿಯೂ ಇಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕ ಲೋಕಾಯುಕ್ತ ಅಧಿನಿಯಮ, 1984ರ ಸೆಕ್ಷನ್ 3(2)(ಬಿ)ರ ಅಡಿ ಉಪ ಲೋಕಾಯುಕ್ತರಾಗಿ ನೇಮಕಗೊಳ್ಳುವವರು ಕಡ್ಡಾಯವಾಗಿ ಐದು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿರಬೇಕು. ಈ ಹಿನ್ನೆಲೆಯಲ್ಲಿ ಸೂಕ್ತ ನಿವೃತ್ತ ನ್ಯಾಯಮೂರ್ತಿಗಳ ಹೆಸರನ್ನು ಸೂಚಿಸಿದರೆ ತಮ್ಮ ಅಭಿಪ್ರಾಯವನ್ನು ಸೇರಿಸಿ ರಾಜ್ಯಪಾಲರ ಅನುಮೋದನೆ ಕಳುಹಿಸಿಕೊಡಲಾಗುವುದು” ಎಂದು ಬೊಮ್ಮಾಯಿ ಪತ್ರದಲ್ಲಿ ಉಲ್ಲೇಖಿಸಿದ್ದರು.
ಲೋಕಾಯುಕ್ತ ಸಂಸ್ಥೆಯಲ್ಲಿ ಎರಡು ಉಪ ಲೋಕಾಯುಕ್ತ ಹುದ್ದೆಗಳನ್ನು ಸೃಜಿಸಲಾಗಿದ್ದು, 2019ರ ನವೆಂಬರ್ 20ರಂದು ನಿವೃತ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ನಿವೃತ್ತ ನ್ಯಾ. ಎನ್ ಆನಂದ್ ಅವರ ನಿವೃತ್ತಿಯ ಬಳಿಕ ಮತ್ತೊಂದು ಸ್ಥಾನವು ವರ್ಷದಿಂದಲೂ ಖಾಲಿ ಉಳಿದಿದೆ.
ಅರ್ಜಿದಾರ ವಕೀಲ ಎಸ್ ಉಮಾಪತಿ ಸಲ್ಲಿಸಿದ್ದ ಮನವಿ ಆಧರಿಸಿ ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡುವ ಸಂಬಂಧ ಪ್ರಸಕ್ತ ವರ್ಷದ ಜನವರಿ 27ರಂದು ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಪೀಠವು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದನ್ನು ಸ್ಮರಿಸಬಹುದು.
ವಿಚಾರಣೆಯಲ್ಲಿ ಭಾಗಿಯಾಗಿದ್ದ ಹೆಚ್ಚುವರಿ ಸರ್ಕಾರಿ ವಕೀಲ ಧ್ಯಾನ್ ಚಿನ್ನಪ್ಪ ಅವರು, ಉಪ ಲೋಕಾಯುಕ್ತರನ್ನು ನೇಮಕ ಮಾಡುವ ಸಂಬಂಧ ರಾಜ್ಯ ಸರ್ಕಾರವು ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಸರ್ಕಾರ ಕೈಗೊಂಡ ನಿರ್ಧಾರವನ್ನು ದಾಖಲೆಯಲ್ಲಿ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಬೇಕು. ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪಿ ಹೇಮಲತಾ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನು ಸಲ್ಲಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಪೀಠವು ನವೆಂಬರ್ 8ಕ್ಕೆ ಮುಂದೂಡಿತ್ತು.
ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅನುಪಾಲನಾ ವರದಿಯಲ್ಲಿ ಉಪ ಲೋಕಾಯುಕ್ತರಾಗಿದ್ದ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರು ಕಳೆದ ವರ್ಷದ ಡಿಸೆಂಬರ್ 16 ರಂದು ನಿವೃತ್ತರಾಗಿದ್ದಾರೆ. ಈ ಸಂಬಂಧ ಅವರ ಸ್ಥಾನಕ್ಕೆ ಅರ್ಹರನ್ನು ನೇಮಿಸುವಂತೆ ಜನವರಿ 27ರಂದು ಹೈಕೋರ್ಟ್ ಆದೇಶಿಸಿತ್ತು. ಕೋವಿಡ್ ಸಂದರ್ಭದಲ್ಲಿ ಇಡೀ ಆಡಳಿತ ಯಂತ್ರವನ್ನು ಕೊರೊನಾ ವೈರಸ್ ನಿಯಂತ್ರಿಸಲು ನಿಯೋಜಿಸಿದ್ದರಿಂದ ನ್ಯಾಯಾಲಯದ ಆದೇಶ ಪಾಲಿಸಲಾಗಿಲ್ಲ. ಉಪ ಲೋಕಾಯುಕ್ತರನ್ನು ನೇಮಿಸುವ ಪ್ರಕ್ರಿಯೆ ಆರಂಭಿಸಿರುವುದರಿಂದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡಬೇಕು ಎಂದು ಮನವಿ ಮಾಡಲಾಗಿತ್ತು.