ನೇರ ನಗದು ವರ್ಗಾವಣೆ; ಇಲಾಖೆಗಳಲ್ಲಿಲ್ಲ ತಂತ್ರಾಂಶ, ಸರ್ಕಾರದ ಮುಖವಾಡ ಕಳಚಿತು ಇ-ಆಡಳಿತ

ಬೆಂಗಳೂರು; ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಪಿಂಚಣಿ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ಮಾಸಾಶನ, ನರೇಗಾ ಕೂಲಿ, ಇಂಧನ ಸಹಾಯ ಧನ, ಆಹಾರ ಧಾನ್ಯ ಸಹಾಯಧನ, ವಿದ್ಯಾರ್ಥಿ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ಸೌಲಭ್ಯಗಳ ನಗದು ಹಣ ಸೋರಿಕೆಯಾಗದಂತೆ ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ನಗದು ಜಮೆ ಮಾಡುವ ಆಧಾರ್ ಆಧಾರಿತ ನೇರ ನಗದು (ಡಿಬಿಟಿ) ವರ್ಗಾವಣೆ ವೇದಿಕೆಯ ತಂತ್ರಾಂಶವನ್ನು ರಾಜ್ಯದ ಬಹುತೇಕ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

4 ವರ್ಷಗಳಾದರೂ ಬಹುತೇಕ ಇಲಾಖೆಗಳು ನೇರ ನಗದು ತಂತ್ರಾಂಶ ವ್ಯವಸ್ಥೆಯನ್ನೇ ಹೊಂದಿಲ್ಲ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ವೇ ಇದೀಗ ಒಪ್ಪಿಕೊಂಡಿದೆ. ನೇರ ನಗದು ವ್ಯವಸ್ಥೆಯಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ ಎಂದು ರಾಜ್ಯ ಬಿಜೆಪಿ ಸರ್ಕಾರವು ಭರ್ಜರಿ ಪ್ರಚಾರ ಪಡೆದು ಹೆಮ್ಮೆಯಿಂದ ಬೀಗಿತ್ತು. ನೇರ ನಗದು ವ್ಯವಸ್ಥೆಯಲ್ಲಿ ಪ್ರಗತಿ ಸಾಧಿಸಿದೆ ಎಂಬುದು ಕಾಗದದ ಮೇಲಷ್ಟೇ ಉಳಿದಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಪ್ರಚಾರ ನಡೆಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಮುಖವಾಡವನ್ನು ಇ-ಆಡಳಿತ ಇಲಾಖೆಯೇ ಕಳಚಿಟ್ಟಿದೆ.

ಫಲಾನುಭವಿ ಆಧಾರಿತ ಯೋಜನೆಗಳಡಿ ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕವೇ ವಿತರಿಸಲು 2022ರ ಜನವರಿ 31ರೊಳಗೆ ಕ್ರಮ ಕೈಗೊಳ್ಳಬೇಕು ಮತ್ತು ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕು. ನೇರ ನಗದು ತಂತ್ರಾಂಶವನ್ನು ಕಾಲಮಿತಿಯೊಳಗೆ ಅಳವಡಿಸಿಕೊಳ್ಳಬೇಕು ಎಂದು ಇಲಾಖೆಗಳಿಗೆ ಸೂಚಿಸಿದೆ. ಈ ಸಂಬಂಧ 2021ರ ನವೆಂಬರ್‌ 16ರಂದು ಸರ್ಕಾರದ ಎಲ್ಲಾ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ. ‘ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿವಿಧ ಕಲ್ಯಾಣ ಯೋಜನೆಗಳಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಾಡುವ ಉದ್ದೇಶದಿಂದ ಜಾರಿಗೊಳಿಸಿರುವ ರಾಜ್ಯದಲ್ಲಿ ನೇರ ನಗದು ವರ್ಗಾವಣೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲದಿರುವುದಕ್ಕೆ ಇಲಾಖೆ ಮುಖ್ಯಸ್ಥರ ನಿರ್ಲಕ್ಷ್ಯವೇ ಮೂಲ ಕಾರಣ ಎನ್ನಲಾಗಿದೆ. ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದುವರೆಗೂ ನಿರ್ಲಕ್ಷ್ಯ ವಹಿಸಿರುವ ಇಲಾಖಾ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

‘ಪ್ರಸ್ತುತ ಸರ್ಕಾರದ 90 ಯೋಜನೆಗಳಡಿ ಫಲಾನುಭವಿಗಳೀಗೆ ಆರ್ಥಿಕ ನೆರವನ್ನು ಆಧಾರ್‌ ಪಾವತಿಯ ಡಿಬಿಟಿ ವೇದಿಕೆಯಡಿ ಪಾವತಿ ಮಾಡಲಾಗುತ್ತಿದೆ. ಸೌಲಭ್ಯ ವಿತರಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಎಲ್ಲಾ ಯೋಜನೆಗಳಿಗೂ ಡಿಬಿಟಿ ವೇದಿಕೆಯಡಿ ಪಾವತಿ ಮಾಡಲು ಕ್ರಮ ವಹಿಸಲಾಗುವುದು,’ ಎಂದು 2021-22ನೇ ಸಾಲಿನ ಆಯವ್ಯಯದ ಭಾಷಣ (ಕಂಡಿಕೆ 312)ದಲ್ಲಿ ಘೋಷಿಸಿತ್ತು. ಆದರಿದು ಘೋಷಣೆಗಷ್ಟೇ ಸೀಮಿತವಾಗಿದೆಯೇ ವಿನಃ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಹುತೇಕ ಯೋಜನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳು ನೇರ ನಗದು ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ.

ಪತ್ರದಲ್ಲೇನಿದೆ?

‘ಇಲಾಖೆಗಳು ತನ್ನ ಫಲಾನುಭವಿ ಯೋಜನೆಗಳ ಏಕೀಕೃತ ನೇರ ನಗದು ವರ್ಗಾವಣೆ (Core DBT Portal) ವೇದಿಕೆ ಮೂಲಕ ಅನುಷ್ಠಾನಗೊಳಿಸಬೇಕಾದಲ್ಲಿ ತನ್ನದೇ ಆದ ಫಲಾನುಭವಿ ನಿರ್ವಹಣಾ ತಂತ್ರಾಂಶ ವ್ಯವಸ್ಥೆ ಹೊಂದಿರಬೇಕು. ಆದರೆ ಸರ್ಕಾರದ ಬಹುತೇಕ ಇಲಾಖೆಗಳು ಯಾವುದೇ ತಂತ್ರಾಂಶ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಲಾಗಿದೆ,’ ಎಂದು ಇ-ಆಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ನೇರ ನಗದು ತಂತ್ರಾಂಶ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದ ಕಾರಣ ಫಲಾನುಭವಿಗಳಿಗೆ ನೇರ ನಗದು ಸೌಲಭ್ಯ ತಲುಪಿಲ್ಲ. ಯೋಜನೆಯ ನೋಂದಣಿ, ಫಲಾನುಭವಿಗಳ ಆಧಾರ್‌ ಜೋಡಿತ ಬ್ಯಾಂಕ್‌ ಖಾತೆಗೆ ನಗದು ವರ್ಗಾವಣೆ ಮತ್ತು ವಿಫಲ ಪಾವತಿಗಳ ನಿರ್ವಹಣೆ ಸೇರಿದಂತೆ ಖಜಾನೆ-2 ನೊಂದಿಗೆ ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆಯನ್ನು ಸಂಯೋಜಿಸುವ ಕುರಿತು ಕಾರ್ಯವಿಧಾನವನ್ನು ಬಹುತೇಕ ಇಲಾಖೆಗಳು ಜಾರಿಗೊಳಿಸಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.

ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕ ಅನುಷ್ಠಾನಗೊಳಿಸಲು ಕಾರ್ಯವಿದಾನವನ್ನು ರೂಪಿಸಿ ಮತ್ತು ಈ ಕಾರ್ಯವಿಧಾನವನ್ನು ಅನುಷ್ಠಾನಗೊಳಿಸಲು 2021ರ ಡಿಸೆಂಬರ್‌ 30ರ ಕಾಲಮಿತಿಯೊಳಗೆ ಸಮಯ ಸೂಚಿ ನಿಗದಿಪಡಿಸಬೇಕು ಎಂದು ಸೂಚಿಸಲಾಗಿದೆ.

ಅದೇ ರೀತಿ ಎಲ್ಲಾ ಇಲಾಖೆಗಳು ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಬಳಸಿ ಸವಲತ್ತುಗಳನ್ನು ನೀಡುವ ಸಲುವಾಗಿ ಇಲಾಖೆಗ ಫಲಾನುಭವಿ ನಿರ್ವಹಣಾ ತಂತ್ರಾಂಶ ವ್ಯವಸ್ಥೆಯನ್ನು 2021ರ ಡಿಸೆಂಬರ್‌ 15ರೊಳಗೆ ಸಂಯೋಜಿಸಬೇಕು. 2022ರ ಡಿಸೆಂಬರ್‌ 31ರೊಳಗೆ ಎಲ್ಲಾ ಇಲಾಖೆಗಳು ಫಲಾನುಭವಿ ಆಧಾರಿತ ಯೋಜನೆಗಳಡಿ ಸವಲತ್ತುಗಳನ್ನು ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆ ಮೂಲಕ ವಿತರಿಸಬೇಕು ಎಂದು ಕಾಲಮಿತಿ ನಿಗದಿಪಡಿಸಿದೆ.

ಏಕೀಕೃತ ನೇರ ನಗದು ವರ್ಗಾವಣೆ ವೇದಿಕೆಯು 2018ರಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಇಲ್ಲಿಯವರೆಗೆ 41 ಇಲಾಖೆಗಳ 166 ಯೋಜನೆಗಳು ಈ ವೇದಿಕೆ ಮೂಲಕ ಅನುಷ್ಠಾನಗೊಂಡಿದೆ. ಕಳೆದ ಮೂರು ವರ್ಷಗಳಲ್ಲಿ 5.85 ಕೋಟಿ ಫಲಾನುಭವಿಗಳಿಗೆ 17,853 ಕೋಟಿ ಸವಲತ್ತುಗಳನ್ನು ಈ ವೇದಿಕೆ ಮೂಲಕ ನೇರವಾಗಿ ವರ್ಗಾಯಿಸಿದೆ.

ಸಾಮಾಜಿಕ ಭದ್ರತೆ, ಪಿಂಚಣಿ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ , ಸಂಧ್ಯಾ ಸುರಕ್ಷಾ ಯೋಜನೆ, ನಿರ್ಗತಿಕ ವಿಧವೆ ವೇತನ, ಅಂಗವಿಕಲರ ಮಾಸಾಶನ , ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯ ಕೂಲಿ ಹಣವೂ ಇದರಲ್ಲಿ ಸೇರಿದೆ.

ವಿವಿಧ ವರ್ಗಗಳ ಫಲಾನುಭವಿಗಳಿಗೆ ಅದರಲ್ಲೂ ದೀನದಲಿತರಿಗೆ ನೀಡುವ ಕೂಲಿ ಹ ಣ ಪಾವತಿ, ಇಂಧನ ಸಹಾಯ ಧನ, ಆಹಾರ ಧಾನ್ಯ ಸಹಾಯಧನ, ಪಿಂಚಣಿ ಹಣ, ವಿದ್ಯಾರ್ಥಿ ವೇತನ ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗಳಿಗೆ ಹಾಕುವ ಮುಖಾಂತರ ಸೋರಿಕೆ ತಡೆಯುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಅಲ್ಲದೆ ಆರ್ಥಿಕ ವ್ಯವಸ್ಥೆಯೊಳಗೆ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ವಿವಿಧ ವರ್ಗಗಳ ಫಲಾನುಭವಿಗಳಿಗೆ ವಿವಿಧ ವರ್ಗಾವಣೆಗಳನ್ನು ಪಾರದರ್ಶಕವಾಗಿಸಲು ಜಾರಿಗೊಳಿಸಿರುವ ನೇರ ಲಾಭ ವರ್ಗಾವಣೆ ಯೋಜನೆಯನ್ನು ಕೇಂದ್ರ ಸರ್ಕಾರವು 2013ರ ಜನವರಿ 1ರಂದು ಆರಂಭಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts