ಬೊಕ್ಕಸಕ್ಕೆ 2,362 ಕೋಟಿ ಹೊರೆ; ಸುಗ್ರೀವಾಜ್ಞೆ ಬೆನ್ನಲ್ಲೇ ತಿದ್ದುಪಡಿ ವಿಧೇಯಕ ಮಂಡನೆಗೆ ಸಿದ್ಧತೆ

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಈಗಾಗಲೇ ಸಂಗ್ರಹಿಸಿರುವ 2,362 ಕೋಟಿ ರು.ಗಳ ಮರು ಪಾವತಿ ಮಾಡುವುದರಿಂದ ಎದುರಾಗುವ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ನಗರಪಾಲಿಕೆಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2021ನ್ನು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಡೆಸಿದ್ದ ಸಿದ್ಧತೆಯು ಅಂತಿಮ ಹಂತಕ್ಕೆ ತಲುಪಿದೆ.

ಈ ವಿಧೇಯಕಕ್ಕೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ರಕ್ಷಣೆ ಪಡೆದಿದ್ದ ಸರ್ಕಾರವು ಇದೀಗ ತಿದ್ದುಪಡಿ ವಿಧೇಯಕವನ್ನು ಮಂಡಿಸಲು ಮುಂದಾಗಿದೆ. ಈ ವಿಧೇಯಕವು ಅಧ್ಯಾದೇಶದ ಬದಲಿ ವಿಧೇಯಕವಾಗಿದೆ. ಇದರ ಕರಡು ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮೂಲಕ ಸಂಗ್ರಹಿಸಲಾದ ಶುಲ್ಕವನ್ನು ಈಗಾಗಲೇ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಉಪಯೋಗಿಸಿಕೊಂಡಿರುವುದರಿಂದ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಗೆ ಅದನ್ನು ಮರು ಪಾವತಿಸಲು 2,362 ಕೋಟಿ ಆರ್ಥಿಕ ಹೊರೆ ಉದ್ಭವಿಸಲಿದೆ.

ಹೀಗಾಗಿ ‘ ಬಿಬಿಎಂಪಿಯು ಕಟ್ಟಡ ನಕ್ಷೆಯ ಮಂಜೂರಾತಿ ಮತ್ತು ಪ್ರಾರಂಭ ಪ್ರಮಾಣಪತ್ರದ ಅನುಮತಿ ಹಾಗೂ ಕಟ್ಟಡ ಮುಕ್ತಾಯ ಪ್ರಮಾಣಪತ್ರವನ್ನು ಮಂಜೂರು ಮಾಡುವ ಸಮಯದಲ್ಲಿ ಸಂಗ್ರಹಿಸಲಾದ ಫೀಜು ಮತ್ತು ದಂಡಗಳನ್ನು ಮಾನ್ಯಗೊಳಿಸುವುದಕ್ಕಾಗಿ ಹಾಗೂ ಮಂಡಳಿ, ನಿಗಮ ಅಥವಾ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮಾಲೀಕತ್ವವಿರುವ ಅಥವಾ ನಿಯಂತ್ರಣದಲ್ಲಿರುವ ಸಂಸ್ಥೆಗೆ ಅಂಥ ಶುಲ್ಕದ ಪಾವತಿಯಿಂದ ವಿನಾಯಿತಿ ನೀಡಿರುವುದನ್ನು ಸಹ ಪೂರ್ವಾನ್ವಯವಾಗಿ ಜಾರಿಗೆ ತರಲು ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ, 1976 (1977ರ ಕರ್ನಾಟಕ ಅಧಿನಿಯಮ 14) ಮತ್ತು ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಅಧಿನಿಯಮ, 2020(2020ರ ಕರ್ನಾಟಕ ಅಧಿನಿಯಮ 53)ನ್ನು ತಿದ್ದುಪಡಿ ಮಾಡುವುದು ಅವಶ್ಯಕ ಎಂದು ಪರಿಗಣಿಸಿದೆ,’ ಎಂದು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಿತ್ತು. ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿತ್ತು ಅಧ್ಯಾದೇಶಕ್ಕೆ ರಾಜ್ಯಪಾಲರು ಇತ್ತೀಚೆಗಷ್ಟೇ ಅಂಕಿತ ಹಾಕಿದ್ದರು.

ಪರವಾನಗಿ ಶುಲ್ಕ, ಪರವಾನಗಿ ಪಡೆದು ನಿರ್ಮಿಸಿದ ಕಟ್ಟಡ ಸುರಕ್ಷತೆ, ಮಂಜೂರಾದ ನಕ್ಷೆಗೆ ಅನುಗುಣವಾಗಿ ಕಟ್ಟಡ ನಿರ್ಮಾಣವಾಗಿರುವುದನ್ನು‌ ಖಚಿತಪಡಿಸಲು ಭದ್ರತೆ, ಪ್ರಾರಂಭಿಕ ಪ್ರಮಾಣಪತ್ರ, ಅಧಿಭೋಗ ಪ್ರಮಾಣಪತ್ರ, ನೆಲಬಾಡಿಗೆ ಮತ್ತಿತರ ರೂಪದಲ್ಲಿ ಈವರೆಗೆ ಸುಮಾರು 2,362 ಕೋಟಿ ರು. ಸಂಗ್ರಹಿಸಿದೆ.

ವಲಯ ರಚನೆ, ಕಟ್ಟಡ ಉಪ ವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದ ನಿರ್ಬಂಧಗಳಿಗೆ ಮತ್ತು ಷರತ್ತುಗಳಿಗೆ ಒಳಪಟ್ಟು ಭೂಮಿಯ ನಿವೇಶನ ನಕ್ಷೆ, ಭೂ ನಕ್ಷೆ, ಕಟ್ಟಡದ ಎತ್ತರಿಸುವಿಕೆ, ವಿಭಾಗದೊಂದಿಗೆ ಕಾಮಗಾರಿಯನ್ನು ಕಾರ್ಯಗತಗೊಳಿಸಲು ಆಯುಕ್ತರು ಅನುಮತಿ ನೀಡಬಹುದು. ಅಥವಾ 303ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು ಅಂತಹ ಲೈಸೆನ್ಸ್‌ನ್ನು ನೀಡಲು ನಿರಾಕರಿಸಬಹುದು ಎಂದು ತಿದ್ದುಪಡಿ ವಿಧೇಯಕದ 299ಎ ನಲ್ಲಿ ವಿವರಿಸಲಾಗಿದೆ.

ಅದೇ ರೀತಿ ನಕ್ಷೆ ಅನುಮೋದಿಸಲು, ಮಂಜೂರು ಮಾಡುವುದು ಅಥವಾ ಪ್ರಾರಂಭ ಪ್ರಮಾಣಪತ್ರ, ಪೂರ್ಣಗೊಳಿಸಿದ ಪ್ರಮಾಣಪತ್ರವನ್ನು ನೀಡಲು ಕರ್ನಾಟಕ ಸ್ಟಾಂಪ್‌ ಅಧಿನಿಯಮ, 1957ರ ಉಪಬಂಧಗಳ ಅಡಿಯಲ್ಲಿ ಸ್ಟಾಂಪ್‌ಗಳು ಮತ್ತು ನೋಂದಣಿ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿ ಮೌಲ್ಯವನ್ನಾಧರಿಸಿದಂಥ ದರಗಳಲ್ಲಿ ಶುಲ್ಕವನ್ನು ವಿಧಿಸಬಹುದು ಮತ್ತು ವಸೂಲು ಮಾಡಬಹುದು ಎಂದು ಹೇಳಲಾಗಿದೆ.

ಮಾರ್ಗಸೂಚಿ ಮೌಲ್ಯದ ಪ್ರಕಾರ ಈ ದರ ನಿಗದಿಗೆ ಬಿಬಿಎಂಪಿ ತನ್ನ ಬೈಲಾದಲ್ಲಿ ಅವಕಾಶ ಮಾಡಿಕೊಂಡಿತ್ತು. ಶುಲ್ಕ ವಸೂಲಿಯು ಕಾನೂನು ಬಾಹಿರ ಎಂದು ಹಲವರು ನ್ಯಾಯಾಲಯದ ಕಟಕಟೆಯೇರಿದ್ದರು. ಅಲ್ಲದೆ ಶುಲ್ಕ ವಸೂಲಾತಿಯು ಬೈಲಾದಲ್ಲಿದೆಯೇ ಹೊರತು ಕಾಯ್ದೆ ಬದ್ಧವಾಗಿಲ್ಲ ಎಂಬುದು ಪರಿಶೀಲನೆ ವೇಳೆ ದೃಢಪಟ್ಟಿತ್ತು. ಒಂದೊಮ್ಮೆ ಹೈಕೋರ್ಟ್ ಆದೇಶ ಹೊರಡಿಸಿದರೆ ವಸೂಲಿ ಮಾಡಿರುವ 2, 362 ಕೋಟಿ ರು.ಗಳನ್ನು ತೆರಬೇಕಾಗುತ್ತದೆ.

ಹೀಗಾಗಿ ಬಿಬಿಎಂಪಿಯ ಮೇಲೆ ಬೀಳುವ ಆರ್ಥಿಕ ಹೊರೆ ತಪ್ಪಿಸಲು ಸರ್ಕಾರ ಧಾವಿಸಿತ್ತು. ಅಲ್ಲದೆ ಕಾಯ್ದೆ ತಿದ್ದುಪಡಿ ಅಧ್ಯಾದೇಶ ಹೊರಡಿಸಿತ್ತು. ಈಗಾಗಲೇ ವಸೂಲು ಮಾಡಿರುವ ಶುಲ್ಕವನ್ನು ಮರು ಸಂದಾಯ ಮಾಡುವಂತೆ ಕೇಳುವಂತಿಲ್ಲ. ಯಾವುದೇ ನ್ಯಾಯಾಲಯ ಈ ಕುರಿತು ಡಿಕ್ರಿ ಅಥವಾ ಆದೇಶ ಹೊರಡಿಸುವಂತಿಲ್ಲ ಎಂದು ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.

the fil favicon

SUPPORT THE FILE

Latest News

Related Posts