18,292 ಕೋಟಿ ನಷ್ಟವಾಗಿದ್ದರೂ 2,123 ಕೋಟಿ ನೆರವು ಕೋರಿರುವ ರಾಜ್ಯದಲ್ಲಿರುವುದು 41ಕೋಟಿಯಷ್ಟೇ

ಬೆಂಗಳೂರು; ಮುಂಗಾರು ಋತುವಿನಲ್ಲಿ ಜುಲೈ 21ರಿಂದ 26ರವರೆಗೆ ಮತ್ತು ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಒಟ್ಟು 18,292.27 ಕೋಟಿ ನಷ್ಟವಾಗಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಕೇವಲ 2,123.57 ಕೋಟಿ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಇಂದು ನಡೆದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮ್ಮೇಳನ ಸಭೆಯಲ್ಲಿ ಕಂದಾಯ ಇಲಾಖೆಯು ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾದ ಅಂದಾಜು ಹಾನಿ ಹಾಗೂ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಮಂಡಿಸಿದೆ. ಸಭೆಗೆ ಮಂಡಿಸಿರುವ ಅಂಕಿ ಅಂಶದ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲು ಮಾರ್ಚ್‌ ಅಂತ್ಯದವರೆಗೆ 108.00 ಕೋಟಿ (2019-20, 2020-21) ಅನುದಾನ ಬೇಕಿದೆ ಎಂದು ಹೇಳಿರುವ ಕಂದಾಯ ಇಲಾಖೆಯ ಬಳಿ ಸದ್ಯ ಕೇವಲ 41.64 ಕೋಟಿಯಷ್ಟೇ ಇದೆ.

ಈ ವೇಳೆ ಕಂದಾಯ ಇಲಾಖೆಯು (ವಿಪತ್ತು ನಿರ್ವಹಣೆ) ಸಲ್ಲಿಸಿರುವ ಅಂಕಿ ಅಂಶಗಳ ಪ್ರಕಾರ ಅತಿವೃಷ್ಟಿ ಮತ್ತು ಪ್ರವಾಹದಿಂದ ಉಂಟಾಗಿರುವ ಒಟ್ಟು 18, 292.27 ಕೋಟಿ ರು. ನಷ್ಟಕ್ಕೆ ರಾಜ್ಯ ಸರ್ಕಾರವು 2,123.57 ಕೋಟಿ ಮೊತ್ತವನ್ನು ಪರಿಹಾರ ರೂಪದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿರುವುದು ಗೊತ್ತಾಗಿದೆ.

ಪ್ರವಾಹ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಒಟ್ಟು ಫಲಾನುಭವಿಗಳಿಗೆ ಮಾರ್ಚ್ ಅಂತ್ಯದವರೆಗೆ ಬಿಡುಗಡೆ ಮಾಡಲು ಒಟ್ಟು 108.00 ಕೋಟಿ ರು. ಅನುದಾನ ಬೇಕಿದೆ. 2019-20 (2,200.27 ಕೋಟಿ) ಮತ್ತು 2020-21ನೇ ಸಾಲಿಗೆ (571.68 ಕೋಟಿ) ಒಟ್ಟು 2,771.95 ಕೋಟಿ ರು.ಎಂದು ಅಂದಾಜಿಸಲಾಗಿತ್ತು. ಈ ಪೈಕಿ 1,849.59 ಕೋಟಿ ರು. ಬಿಡುಗಡೆಯಾಗಿದೆ. ಇನ್ನೂ 922.36 ಕೋಟಿ ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ ಒಟ್ಟು ಮೊತ್ತದಲ್ಲಿ 2,207.97 ಕೋಟಿ ರು. ಖರ್ಚಾಗಿದೆ. ಸದ್ಯ ಈ ಲೆಕ್ಕ ಶೀರ್ಷಿಕೆಯಲ್ಲಿ 41.64 ಕೋಟಿಯಷ್ಟೇ ಇದೆ ಎಂಬ ಮಾಹಿತಿಯು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಪ್ರಸಕ್ತ ಸಾಲಿನ ಪ್ರವಾಹದಿಂದ ಉತ್ತರ ಕನ್ನಡದಲ್ಲಿ ಅತಿ ಹೆಚ್ಚು 828.82 ಕೋಟಿಯಷ್ಟು ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಹಾವೇರಿಯ್ಲಿ 686.26 ಕೋಟಿ, ಬೆಳಗಾವಿಯಲ್ಲಿ 647.79 ಕೋಟಿ, ಶಿವಮೊಗ್ಗ ಜಿಲ್ಲೆಯಲ್ಲಿ 536.43 ಕೋಟಿ ಬೆಂಗಳೂರು ನಗರ ಜಿಲ್ಲೆಯಲ್ಲಿ 515, 03 ಕೋಟಿಯಷ್ಟು ಹಾನಿಯುಂಟಾಗಿದೆ.

ಮುಂಗಾರು ಋತುವಿನಲ್ಲಿ ಜುಲೈ 21ರಿಂದ 26ವರೆಗೆ ರಾಜ್ಯದ ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಬೆಳೆಹಾನಿ, ಮನೆ ಹಾಗೂ ಮೂಭೂತ ಸೌಕರ್ಯಕ್ಕೆ ಹಾನಿಯುಂಟಾಗಿತ್ತು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆಯಿಂದಾಗಿ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದ ಒಟ್ಟು 11,916 ಕೋಟಿ ರು.ನಷ್ಟು ನಷ್ಟವಾಗಿದೆ ಎಂದು ಕಂದಾಯ ಇಲಾಖೆಯು ಅಂದಾಜಿಸಿದೆ. ಆದರೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ 1,282 ಕೋಟಿ ಅನುದಾನ ಕೋರಿ ಸೆಪ್ಟಂಬರ್‌ನಲ್ಲಿ ಮನವಿ ಸಲ್ಲಿಸಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಇದೇ ಅವಧಿಯಲ್ಲಿ ಮಹಾರಾಷ್ಟ್ರ ಜಲಾಶಯಗಳಿಂದ ಹರಿಸಿದ ಭಾರೀ ಪ್ರಮಾಣದ ನೀರಿನಿಂದ ರಾಜ್ಯದ ಕೃಷ್ಣಾ ನದಿ ಹಾಗೂ ಇದರ ಉಪ ನದಿಗಳಳ್ಲಿ ಉಂಟಾದ ಪ್ರವಾಹದಿಂದ ಈ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆ, ಮನೆ ಹಾಗೂ ಮೂಲಭೂತ ಸೌಕರ್ಯಕ್ಕೆ ಹಾನಿಯಾಗಿದೆ. ಈ ಭಾಗದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ 6,376.27 ಕೋಟಿ ರು. ಅಂದಾಜು ನಷ್ಟವಾಗಿದೆ ಎಂದು ಲೆಕ್ಕಚಾರ ಮಾಡಿರುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಕೇವಲ 841.57 ಕೋಟಿ ರು.ಅನುದಾನ ಒದಗಿಸುವ ಸಂಬಂಧ ಕೋರಿಕೆ ಸಲ್ಲಿಸಿದೆ.

2021ನೇ ಸಾಲಿನಲ್ಲಿ ನೆರ ಹಾವಳಿಯಿಂದ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 53,331 ಮನೆಗಳಿಗೆ ಹಾನಿಯುಂಟಾಗಿದೆ ಎಂದು ತಹಶೀಲ್ದಾರ್‌ಗಳು ವರದಿ ಸಲ್ಲಿಸಿದ್ದರ ಪೈಕಿ ಜಿಲ್ಲಾಧಿಕಾರಿಗಳು 45,548 ಮನೆಗಳಿಗಷ್ಟೇ ಹಾನಿಯಾಗಿದೆ ಎಂದು ಅನುಮೋದಿಸಿದ್ದಾರೆ. ಜಿಲ್ಲಾಧಿಕಾರಿಗಳ ಹಂತದಲ್ಲೇ ಇನ್ನೂ 7,783 ಪ್ರಕರಣಗಳಿಗೆ ಅನುಮೋದನೆ ಬಾಕಿ ಇದೆ. ಒಟ್ಟು ನಮೂದಾಗಿರುವ ಮನೆಗಳಿಗೆ ಜಿಲ್ಲಾಧಿಕಾರಿಗಳು 268.26 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನೂ 390.72 ಕೋಟಿ ರು.ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಬೇಕಿದೆ. ಬಿಡುಗಡೆ ಮಾಡಿರುವ ಒಟ್ಟು ಅನುದಾನದಲ್ಲಿ ಶೇ. 69ರಷ್ಟು ಪ್ರಗತಿಯಾಗಿದೆ ಎಂಬುದು ನಡವಳಿಯಿಂದ ಗೊತ್ತಾಗಿದೆ.

ಕಲ್ಬುರ್ಗಿಯಲ್ಲಿ 190 ಮನೆ, ರಾಮನಗರದಲ್ಲಿ 487, ಬೆಂಗಳೂರು ನಗರದಲ್ಲಿ 471, ತುಮಕೂರಿನಲ್ಲಿ 1,687 ಮನೆಗಳನ್ನು ತಹಶೀಲ್ದಾರ್‌ಗಳು ಗಳನ್ನು ನಮೂದಿಸಿದ್ದಾರದಾದರೂ ಈ ಪೈಕಿ ಜಿಲ್ಲಾಧಿಕಾರಿಗಳು ಒಂದಕ್ಕೂ ಅನುಮೋದನೆ ನೀಡಿಲ್ಲ. ಇವಿಷ್ಟು ಡಿಸೆಂಬರ್‌ 30ರ ಅಂತ್ಯಕ್ಕೆ ಅನುಮೋದನೆಗೆ ಬಾಕಿ ಇರುವುದು ತಿಳಿದು ಬಂದಿದೆ.

ಇನ್ನು 2019ನೇ ಸಾಲಿನಲ್ಲಿ ಸಂಪೂರ್ಣ, ಭಾಗಶಃ ಪುನರ್‌ ನಿರ್ಮಾಣ , ಭಾಗಶಃ ದುರಸ್ತಿಗೆ ಹಾನಿಗೊಳಗಾದ ಮನೆಗಳಿಗೆ ಸಂಬಂಧಿಸಿದಂತೆ 39,613 ಪ್ರಕರಣಗಳಿಗೆ ಅನುಮೋದನೆ ದೊರೆತಿದೆ. ಈ ಪೈಕಿ 20,858 ಮನೆಗಳು ಪೂರ್ಣಗೊಂಡಿದ್ದರೆ 12,447 ಮನೆಗಳು ಇನ್ನೂ ಪ್ರಗತಿಯಲ್ಲಿವೆ. ಇನ್ನೂ 3,968 ಮನೆಗಳ ಕಾಮಗಾರಿ ಪ್ರಾರಂಭವಾಗಬೇಕಿದೆ.

2020ನೇ ಸಾಲಿನಲ್ಲಿಯೂ ಒಟ್ಟು 8,321 ಮನೆಗಳಿಗೆ ಅನುಮೋದನೆ ನೀಡಿದ್ದರೆ ಈ ಪೈಕಿ 660 ಮನೆಗಳಷ್ಟೇ ಪೂರ್ಣಗೊಂಡಿದೆ.

5,036 ಮನೆಗಳ ಕಾಮಗಾರಿ ಪ್ರಗತಿಯಲ್ಲಿವೆ. ಇನ್ನೂ 2,618 ಮನೆಗಳ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಕಂದಾಯ ಇಲಾಖೆಯು ಸಲ್ಲಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

Your generous support will help us remain independent and work without fear.

Latest News

Related Posts