‘ಮಿನಿಸ್ಟರ್‌, ಅಧ್ಯಕ್ಷರಿಗೆ ಹಣ ಕೊಡಬೇಕು,’; ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಲಂಚಕ್ಕೆ ಬೇಡಿಕೆ

ಬೆಂಗಳೂರು; ‘ನಾನು ರೆಡ್‌ ಇಂಕ್‌ನಲ್ಲಿ ಬರೆದರೆ ಕೈಗಾರಿಕೆ ಮುಚ್ಚಬೇಕಾಗುತ್ತದೆ ಗ್ರೀನ್‌ ಇಂಕ್‌ನಲ್ಲಿ ಬರೆದರೆ ಕೈಗಾರಿಕೆ ನಡೆಸಬೇಕಾಗುತ್ತದೆ, ನಾನು ಹೇಳಿದಷ್ಟು ಹಣ ಕೊಟ್ಟರೆ ನಿಮ್ಮ ಕೆಲಸವಾಗುತ್ತದೆ. ನೀವು ಕೊಟ್ಟ ಹಣವನ್ನು ಮಿನಿಸ್ಟರ್‌, ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಆಡಳಿತಾಧಿಕಾರಿ, ಹಿರಿಯ ಪರಿಸರ ಅಧಿಕಾರಿಗಳಿಗೆ ಕೊಡಬೇಕು,’ ಹೀಗೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೈಗಾರಿಕೋದ್ಯಮಗಳಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ!

ನೆಲಮಂಗಲ ವ್ಯಾಪ್ತಿಯಲ್ಲಿರುವ ಪರಿಸರ ಮಂಡಳಿಯ ಅಧಿಕಾರಿಗಳಿಬ್ಬರ ವಿರುದ್ಧ ದೂರು ಸಲ್ಲಿಕೆಗೂ ಮುನ್ನವೇ ಕೈಗಾರಿಕೋದ್ಯಮಿ ರಾಜೇಂದ್ರಪ್ರಸಾದ್‌ ಎಂಬುವರು ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್‌ಸಿಂಗ್‌ ಅವರಿಗೆ ಸಲ್ಲಿಸಿರುವ ದೂರು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಭ್ರಷ್ಟಾಚಾರವನ್ನು ಮತ್ತಷ್ಟು ಅನಾವರಣಗೊಳಿಸಿದೆ. 2021ರ ಅಕ್ಟೋಬರ್‌ 28ರಂದು ಸಚಿವ ಆನಂದ್‌ ಸಿಂಗ್‌ ಅವರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ನೆಲಮಂಗಲ ಮತ್ತು ಪೀಣ್ಯದಲ್ಲಿ ಕಚೇರಿ ಹೊಂದಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಕೈಗಾರಿಕೋದ್ಯಮಿಗಳ ಬಳಿ ಉದ್ಧಟತನದಿಂದ ವರ್ತಿಸುತ್ತಾರೆ. ಅಲ್ಲದೆ ಸಚಿವರು, ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ, ಆಡಳಿತಾಧಿಕಾರಿ, ಹಿರಿಯ ಪರಿಸರ ಅಧಿಕಾರಿಗಳಿಗೆ ಎಷ್ಟೆಷ್ಟು ಹಣ ಕೊಡಬೇಕು ಎಂದು ಕ್ಯಾಲುಕ್ಯುಲೇಟರ್‌ನಲ್ಲಿ ಲೆಕ್ಕ ಮಾಡಿ ಪಟ್ಟಿಯನ್ನು ತೋರಿಸುತ್ತಾರೆ ಎಂದು ಕೈಗಾರಿಕೋದ್ಯಮಿಗಳು ದೂರಿನಲ್ಲಿ ವಿವರಿಸಿದ್ದಾರೆ.

‘ಗುರುಮೂರ್ತಿ, ರಾಜಣ್ಣ ಎಂಬುವರು ದಿನನಿತ್ಯ ಕೈಗಾರಿಕೆಗಳಿಗೆ ಪರವಾನಿಗೆ ಮಾಡಿಸಿಕೊಡುವುದು , ಪರಿಸರ ವರದಿ, ಲೆಕ್ಕ ಪರಿಶೋಧನೆ ವರದಿ, ವಿಶ್ಲೇಷಣೆವರದಿ, ಯೋಜನೆ ವರದಿ ಮಾಡಿಸಿಕೊಡುವ ಹೆಸರಿನಲ್ಲಿ ಲಕ್ಷಗಟ್ಟಲೇ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ಮಂಡಳಿಯ ಹಿರಿಯ ಅಧಿಕಾರಿಗಳಿಂದಲೇ ಫೋನ್ ಮಾಡಿಸಿ ಗುರುಮೂರ್ತಿ ಎಂಬುವರಿಂದಲೇ ಲೈಸೆನ್ಸ್‌ ರಿಪೋರ್ಟ್‌ ಮಾಡಿಸಿಕೊಳ್ಳಿ ಎಂದು ಆದೇಶ ಮಾಡಿಸುತ್ತಾರೆ,’ ಎಂದು ವರದಿಯಲ್ಲಿ ದೂರಲಾಗಿದೆ.

ಕೈಗಾರಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಕಂಪ್ಯೂಟರ್‌ ಮೂಲಕ ಅಪ್‌ ಲೋಡ್‌ ಮಾಡಿಸಲು 10-15 ಸಾವಿರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೈಗಾರಿಕೋದ್ಯಮಿಗಳು ದೂರಿದ್ದಾರಲ್ಲದೆ ಈ ಹಣದಲ್ಲಿ ಪರಿಸರ ಅಧಿಕಾರಗಳಿಗೂ ಪಾಲಿದೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೆಖಿಸಲಾಗಿದೆ.

‘ಪರಿಸರ ಮಂಡಳಿಯಲ್ಲಿ ಕೆಲಸ ಮಾಡುವ ಪ್ರಾಜೆಕ್ಟ್‌ ಅಸಿಸ್ಟೆಂಟ್‌, ಡೇಟಾ ಎಂಟ್ರಿ ಆಪರೇಟರ್‌ಗಳು ದಿನಕ್ಕೆ 50,000 ರು.ಗಳಿಂದ 80,000 ರು.ಗಳವರೆಗೆ ಹಣ ಸಂಪಾದಿಸುತ್ತಿದ್ದಾರೆ. ಕಚೇರಿಗೆ ಹೋದಾಗ ಇಂತಿಷ್ಟೇ ಹಣ ಕೊಡಿ ಎನ್ನುತ್ತಾರೆ. ಇಷ್ಟು ಹಣ ತಂದಿಲ್ಲ ಎಂದರೆ ಬ್ಯಾಂಕ್‌, ಎಟಿಎಂ ಅಡ್ರೆಸ್‌ಗಳನ್ನು ಅವರೇ ತೋರಿಸುತ್ತಾರೆ. ಅಥವಾ ಗೂಗಲ್‌ ಪೇ, ಪೋನ್‌ ಪೇ ಮಾಡಿ ಎನ್ನುತ್ತಾರೆ,’ ಎಂದು ಕೈಗಾರಿಕೋದ್ಯಮಿಗಳು ದೂರಿದ್ದಾರೆ.

ಪರಿಸರ, ಜೀವಿಶಾಸ್ತ್ರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರಿಗೆ 2021ರ ನವೆಂಬರ್‌ 4ರಂದು ಪತ್ರ ಬರೆದಿದ್ದರು. ಕೈಗಾರಿಕೆಗಳಿಗೆ ಪರವಾನಿಗೆ ನೀಡುವುದು ಮತ್ತು ಪರವಾನಿಗೆ ನವೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಲಂಚಕ್ಕಾಗಿ ಬೇಡಿಕೆ ಇರಿಸುತ್ತಿರುವುದನ್ನು ವಿವರಿಸಿದ್ದರು.

ಪರವಾನಿಗೆ ಶುಲ್ಕವೆಂದು ಮಂಡಳಿಗೆ 60,000 ರು.ಗಳನ್ನು ಭರಿಸಲಾಗುತ್ತಿತ್ತು. ಆದರೆ ಲಂಚದ ಹಣವನ್ನು ಇದೀಗ 2 ಲಕ್ಷದಿಂದ 3 ಲಕ್ಷಕ್ಕೆ ಏರಿಸಲಾಗಿದೆ. ಇಷ್ಟು ಹಣವನ್ನು ಮಂಡಳಿಯ ಎಲ್ಲಾ ಅಧಿಕಾರಿಗಳಿಗೆ ಕೊಡಬೇಕು. ಇಲ್ಲದಿದ್ದರೆ ಕೈಗಾರಿಕೆಗಳಿಗೆ ಭೇಟಿ ಕೊಟ್ಟು ಬೆಸ್ಕಾಂ ಮೂಲಕ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುತ್ತಾರೆ ಎಂದೂ ಬೆದರಿಸಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆಯಲ್ಲದೆ ಕೈಗಾರಿಕೆಗಳಿಂದ ಕೋಟಿ ಕೋಟಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದೂ ಕೈಗಾರಿಕೋದ್ಯಮಿಗಳು ದೂರಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts