ಸ್ಥಿರಾಸ್ತಿ ಮಾರ್ಗಸೂಚಿ ದರ; ದೆಹಲಿಯಂತೆ ಶೇ.20ರಷ್ಟು ಇಳಿಸದೇ ಶೇ.10ರಷ್ಟು ಇಳಿಕೆ ಮಾಡಿದ ಸರ್ಕಾರ

ಬೆಂಗಳೂರು; ಕೋವಿಡ್‌ 19 ಸೋಂಕಿನ ಹರಡುವಿಕೆಯಿಂದ ಕುಸಿತಗೊಂಡಿದ್ದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗಿದ್ದ 2,101 ಕೋಟಿ ರು ಕೊರತೆಯನ್ನು ತುಂಬಲು ರಾಜ್ಯ ಬಿಜೆಪಿ ಸರ್ಕಾರವು ಇದೀಗ ರಾಜ್ಯದ ಎಲ್ಲಾ ವಿಧದ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳಿಗೆ ಶೇ.10ರಷ್ಟು ಕಡಿಮೆಗೊಳಿಸಿದ ದರಗಳನ್ನು ದಸ್ತಾವೇಜುಗಳ ನೋಂದಣಿಗೆ ಮಾರ್ಗಸೂಚಿ ದರಗಳೆಂದು ಪರಿಗಣಿಸಿ ಆದೇಶ ಹೊರಡಿಸಿದೆ.

ದೆಹಲಿ ರಾಜ್ಯದಲ್ಲಿ ನಿರ್ದಿಷ್ಟ ಅವಧಿಗೆ ಶೇ.20ರಷ್ಟು ಮಾರ್ಗಸೂಚಿ ದರಗಳನ್ನು ಕಡಿಮೆಗೊಳಿಸಿ ಹೊರಡಿಸಿರುವ ಆದೇಶವನ್ನು ಮಾದರಿಯನ್ನಾಗಿಸಿಕೊಂಡಿರುವ ಸರ್ಕಾರವು ಹೆಚ್ಚಿನ ರಾಜಸ್ವ ಸಂಗ್ರಹಿಸುವ ಮೂಲ ಉದ್ದೇಶದಿಂದ ಕೃಷಿ, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲಾಟ್‌ ಸೇರಿದಂತೆ ಇನ್ನಿತರೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಶೇ. 10ರಷ್ಟು ಕಡಿಮೆಗೊಳಿಸಿದೆ. ಈ ಮೂಲಕ ರಾಜಸ್ವ ಸಂಗ್ರಹಣೆಯನ್ನು ಹೆಚ್ಚಿಸಬಹುದು ಎಂದು ಸರ್ಕಾರವು ಲೆಕ್ಕಾಚಾರ ಮಾಡಿದೆ. 2022ರ ಜನವರಿ 1ರಂದು ಹೊರಡಿಸಿರುವ ಆದೇಶವು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳು ಕುಸಿತಗೊಂಡಿರುವ ಹಿನ್ನೆಲೆಯಲ್ಲಿ ಶೇ. 10ರಷ್ಟು ಕಡಿತಗೊಳಿಸಿದ ಮಾರ್ಗಸೂಚಿ ದರಗಳನ್ನು ದಸ್ತಾವೇಜುಗಳ ನೋಂದಣಿಗೆ ಮಾರ್ಗಸೂಚಿ ದರಗಳೆಂದು ಪರಿಗಣಿಸಿದೆಯಾದರೂ ಇದು ಕೇವಲ 3 ತಿಂಗಳ ಅವಧಿಗಷ್ಟೇ ಸೀಮಿತವಾಗಿದೆ. ಅಂದೆ ಆದೇಶ ಹೊರಬಿದ್ದಿರುವ 2022ರ ಜನವರಿ 1ರಿಂದ ಮಾರ್ಚ್‌ 31ರ ಅಂತ್ಯದವರಗಷ್ಟೇ ಈ ಆದೇಶವು ಚಾಲ್ತಿಯಲ್ಲಿರುತ್ತದೆ ಎಂಬುದು ಆದೇಶದಿಂದ ತಿಳಿದು ಬಂದಿದೆ.

2019ರ ಜನವರಿ 1ರಿಂದ ಬೆಂಗಳೂರು ನಗರ , ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಗೆ, 2018ರ ಡಿಸೆಂಬರ್‌ 5ರ ಅನ್ವಯ ಜಾರಿಗೆ(ನೋ.ಮು/ಸಿವಿಸಿ/485/2017-18 ) ಬಂದಿರುವ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಮಾರ್ಗಸೂಚಿ ದರ ನಿಗದಿಪಡಿಸಿರುವ ಸಂಬಂಧ ವಿವಿಧ ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು. ಈ ಮೂಲಕ 2019ರ ಜನವರಿಯಿಂದ ಜಾರಿಗೆ ಬಂದಿರುವ ಮಾರ್ಗಸೂಚಿ ದರಗಳನ್ನು 2020ರ ಜನವರಿಯಿಂದ 1ರಿಂದ 2022ರ ಮಾರ್ಚ್ 31ರವರೆಗಿನ ಅವಧಿಗೆ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿ ದರಗಳ ಶೇ. 10ರಷ್ಟು ಕಡಿಮೆಗೊಳಿಸಿದ ದರಗಳನ್ನು ದಸ್ತಾವೇಜುಗಳ ನೋಂದಣಿಗೆ ಮಾರ್ಗಸೂಚಿ ದರಗಳೆಂದು ಪರಿಗಣಿಸಿ ಆದೇಶಿಸಿದೆ.

‘ರಾಜ್ಯದಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ 2019ರ ಜನವರಿ 1ರಿಂದ ಜಾರಿಗೆ ತರಲಾಗಿದ್ದು ದಸ್ತಾವೇಜುಗಳ ನೋಂದಣಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ದರದ ಶೇ. 10ರಷ್ಟು ಕಡಿಮೆ ದರಗಳನ್ನು 2022ರ ಜನವರಿ 1ರಿಂದ 2022ರ ಮಾರ್ಚ್‌ 31ರವರೆಗೆ ಅವಧಿಗೆ ಮಾರ್ಗಸೂಚಿ ದರಗಳೆಂದು ಪರಿಗಣಿಸಬಹುದಾಗಿದೆ,’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45-ಬಿ ಮತ್ತು 2003ರ ನಿಯಮ 9 ಅನ್ವಯ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲು ಕೇಂದ್ರ ಮೌಲ್ಯಮಾಪನ ಸಮಿತಿಗೆ ಅಧಿಕಾರವಿದೆ.2019-20ನೇ ಸಾಲಿನಿಂದ ಸಂಗ್ರಹಿಸಲಾದ ರಾಜಸ್ವದ ಮಾಹಿತಿಯನ್ನು ಅವಲೋಕಿಸಿದಾಗ ಕೋವಿಡ್‌ ಇದ್ದದ್ದರಿಂದ 2,101 ಕೋಟಿಗಳಷ್ಟು ರಾಜಸ್ವ ಸಂಗ್ರಹಣೆಯಲ್ಲಿ ಕೊರತೆ ಉಂಟಾಗಿರುವುದು ಕಂಡು ಬರುತ್ತದೆ.

ಸಾಮಾನ್ಯವಾಗಿ ಪ್ರತಿ ವರ್ಷ ಕೇಂದ್ರ ಮೌಲ್ಯಮಾಪನ ಸಮಿತಿಯು ಉಪ ಸಮಿತಿಗಳಿಗೆ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಿ ನಿರ್ದೇಶಿಸಿ ನಂತರ ಉಪ ಸಮಿತಿಗಳಿಂದ ಸ್ವೀಕರಿಸಿದ ಪರಿಷ್ಕರತ ಮಾರ್ಗಸೂಚಿ ದರಗಳನ್ನು ನಿಗದಿಪಡಿಸಿ ಅನುಮೋದನೆ ನೀಡಲಾಗುತ್ತದೆ. ಆದರೆ ಇದಕ್ಕೆ ಸಾಕಷ್ಟುಕಾಲಾವಕಾಶ ಬೇಕಿದೆ ಎಂಬ ಕಾರಣವನ್ನು ಮುಂದೊಡ್ಡಿರುವ ಸರ್ಕಾರವು ತುರ್ತಾಗಿ ಈ ಆದೇಶವನ್ನು ಹೊರಡಿಸಿರುವುದು ಗೊತ್ತಾಗಿದೆ.

‘ಈ ಪ್ರಕ್ರಿಯೆಯು ಚಾಲನೆಯಲ್ಲಿದ್ದು ಪರಿಷ್ಕರಿಸಿದ ದರಗಳಿಗೆ ಸಾರ್ವಜನಿಕರಿಂದ ಆಹ್ವಾನಿಸಲಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ನಂತರ ಪರಿಷ್ಕರಿಸಿದ ದರಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ಅನುಮೋದನೆ ನೀಡಲು ಸಾಕಷ್ಟು ಕಾಲಾವಕಾಶ ಬೇಕಾಗಿರುತ್ತದೆ. ಪರಿಷ್ಕರಿಸಿದ ದರಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ಅನುಮೋದನೆ ನೀಡಲು ಸಾಕಷ್ಟು ಕಾಲಾವಕಾಶ ಬೇಕಾಗಿರುತ್ತದೆ,’ ಎಂದು ಆದೇಶದಲ್ಲಿ ವಿವರಿಸಿದೆ.

ಸ್ಥಿರಾಸ್ತಿಗಳಾದ ಕೃಷಿ ಜಮೀನು, ನಿವೇಶನ, ಕಟ್ಟಡಗಳು ಭೂ ಪರಿವರ್ತಿತ ಜಮೀನುಗಳು, ಅಪಾರ್ಟ್‌ಮೆಂಟ್‌ಗಳು, ಮತ್ತು ಇನ್ನಿತರೆ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಸ್ತಾವೇಜುಗಳಾದ ಕ್ರಯ, ದಾನ, ಅದಲು ಬದಲು ವರ್ಗಾವಣೆ, ಸೆಟಲ್‌ಮೆಂಟ್‌, ಸಾಮಾನ್ಯ ಅಧಿಕಾರ ಪತ್ರ, ಲೀಸ್‌, ಸ್ವಾಧೀನ ಸಹಿತ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನ ಸಹಿತ ಆಧಾರ ಪತ್ರಗಳು ಮತ್ತು ಇತರೆ ದಸ್ತಾವೇಜುಗಳಿಗೆ ಮಾರ್ಗಸೂಚಿ ಮೌಲ್ಯಗಳ ಆಧಾರದ ಮೇರೆಗೆ ಶುಲ್ಕಗಳನ್ನು ಸಂಗ್ರಹಿಸುವುದರಿಂದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಬರಲಿದೆ ಎಂದು ಸರ್ಕಾರವು ನಿರೀಕ್ಷಿಸಿದೆ.

‘ ಶೇ. 10ರಷ್ಟು ಸಡಿಲಗೊಳಿಸಿದ ಮಾರ್ಗಸೂಚಿ ದರಗಳು ಮೇಲಿನ ದಸ್ತಾವೇಜುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದಸ್ತಾವೇಜುಗಳ ನೋಂದಣಿ ಹೆಚ್ಚಾಗಬಹುದಾಗಿದ್ದು ರಾಜಸ್ವ ಸಂಗ್ರಹಣೆಯು ಸಹ ಹೆಚ್ಚಾಗುವ ಸಂಭವವಿರುತ್ತದೆ,’ ಎಂದು ಅಂದಾಜಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಕೋವಿಡ್‌ 19 ಸೋಂಕಿನ ಹರಡುವಿಕೆಯಿಂದ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳು ಕುಸಿತಗೊಂಡಿದ್ದರ ಹಿನ್ನೆಲೆಯಲ್ಲಿ ಶೇ. 10ರಷ್ಟು ಕಡಿತಗೊಳಿಸಿದ ಮಾರ್ಗಸೂಚಿ ದರಗಳನ್ನು ದಸ್ತಾವೇಜುಗಳ ನೋಂದಣಿಗೆ 3 ತಿಂಗಳ ಅವಧಿಗೆ ಅಳವಡಿಸಿ ರಾಜಸ್ವದ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸಬಹುದು ಎಂದು ಕ್ರೆಡೆಯ್‌ (credai) ನೋಂದಣಿ ಮುದ್ರಾಂಕ ಇಲಾಖೆಗೆ 2021ರ ಡಿಸೆಂಬರ್‌ 8ರಂದು ಮನವಿ ನೀಡಿತ್ತು.

the fil favicon

SUPPORT THE FILE

Latest News

Related Posts