ದಲಿತ ಮಹಿಳೆಗೆ ಅವಮಾನ; ಕೆಎಟಿ ಸದಸ್ಯ, ಹಿರಿಯ ನ್ಯಾಯವಾದಿ ವಿರುದ್ಧ ಕ್ರಮವಿಲ್ಲವೆಂದ ಪೊಲೀಸರು

ಬೆಂಗಳೂರು; ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೆರೆದ ನ್ಯಾಯಾಲಯದಲ್ಲಿ ದಲಿತ ಮಹಿಳಾ ಅರ್ಜಿದಾರರನ್ನು ಜರಿದಿದ್ದಾರೆ ಎಂಬ ಪ್ರಕರಣದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಹಿರಿಯ ನ್ಯಾಯವಾದಿ ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿ ಸದಸ್ಯರಾದ ಎನ್‌ ಶಿವಶೈಲಮ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ತನಿಖೆ ನಡೆಸಲು ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ದೂರರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ.

1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ‘ಕೆ ಆರ್ ಮಾರುಕಟ್ಟೆಯ ಪರಿಶಿಷ್ಟ ಜಾತಿಯ ಮಹಿಳೆ’ ಎಂದು ತೆರೆದ ನ್ಯಾಯಾಲಯದಲ್ಲಿ ದಲಿತ ಮಹಿಳೆಯ ಅರ್ಜಿದಾರಳನ್ನು ಜರಿದಿದ್ದಾರೆ ಎಂದು ಆರೋಪಿಸಿ ತುಮಕೂರಿನ ಲೀಲಾವತಿ ಎಂಬುವರು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ 2021ರ ಡಿಸೆಂಬರ್‌ 22ರಂದು ದೂರು ಸಲ್ಲಿಸಿದ್ದರು.

ಈ ದೂರರ್ಜಿಯನ್ನು ಪರಿಶೀಲಿಸಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಅವರು ‘ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಉಂಟಾಗುವ ಯಾವುದೇ ಕೃತ್ಯಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ. ಹಿಂಬರಹದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಿಂಬರಹದಲ್ಲೇನಿದೆ?

ಕರ್ನಾಟಕ ಆಡಳಿತ ಮಂಡಳಿಯ ಸದಸ್ಯರು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985,’ರ ಅಡಿಯಲ್ಲಿ ಬರುವ ನ್ಯಾಯಾಧೀಶ ಪದದ ವ್ಯಾಪ್ತಿಗೆ ಒಳಪಡುವ ಅಧಿಕಾರಿಯಾಗಿರುತ್ತಾರೆ. ವಿಚಾರಣೆ ಸಮಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಉಂಟಾಗುವ ಯಾವುದೇ ಕೃತ್ಯಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲು ‘ನ್ಯಾಯಾಧೀಶರ ಸಂರಕ್ಷಣಾ ಅಧಿನಿಯಮ 1985’ರ ಕಲಂ 3 ಅಡಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಹಿಂಬರಹದಲ್ಲಿ ಹೇಳಲಾಗಿದೆ.

ಅದೇ ರೀತಿ Scheduled caste women from K R Market ಎಂದು ಸಂಬೋಧಿಸಿ ಅವಮಾನ ಮಾಡಿರುತ್ತಾರೆ ಎಂಬ ದೂರಿನಂಶದ ಬಗ್ಗೆಯೂ ಹಿಂಬರಹದಲ್ಲಿ ಪ್ರಸ್ತಾಪಿಸಿರುವ ಸಬ್‌ ಇನ್ಸ್‌ಪೆಕ್ಟರ್‌ ಅವರು ‘ಪರಿಶಿಷ್ಟ ಜಾತಿ ಎಂಬ ಪದವು ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಪದವಾಗಿರುವ ಕಾರಣ ಈ ಪದ ಬಳಕೆಯಾದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ 1989ರ ಕಲಂ 3ರ ಅಡಿಯಲ್ಲಿ ಕೃತ್ಯಕ್ಕೆ ಬಳಸಿದ ಪದವೆಂದು ಪರಿಗಣಿಸಲು ಬರುವುದಿಲ್ಲ ಎಂದಿದ್ದಾರೆ.

ಹಾಗೆಯೇ ಕೆ ಆರ್‌ ಮಾರ್ಕೆಟ್‌ ಎಂಬ ಪದವು ಒಂದು ಸ್ಥಳವಾಗಿರುತ್ತದೆ. ಇದು ಯಾವುದೇ ಕಾಯ್ದ ಕಾನೂನಿನಲ್ಲಿ ಅವಹೇಳನಕಾರಿ ಶಬ್ದ ಎಂದು ನಮೂದಿಸಿರುವುದಿಲ್ಲ. ಆದ್ದರಿಂದ ಈ ದೂರರ್ಜಿಯಲ್ಲಿ ವಿವರಿಸಿರುವ ಅಂಶಗಳು ಅಪರಾಧ ಕೃತ್ಯದ ಅಂಶಗಳಾಗಿ ಕಂಡು ಬರದೇ ಇರುವುದರಿಂದ ದೂರರ್ಜಿಯನ್ನು ವಿಲೇ ಮಾಡಲಾಗಿದೆ ಎಂದು 2021ರ ಡಿಸೆಂಬರ್‌ 25ರಂದು ಹಿಂಬರಹ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ

1998ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಿಂದಲೂ ಕೆಎಟಿಯಲ್ಲಿ ವಿಚಾರಣೆ ನಡೆಯುತ್ತಿದೆ. 2015-16ರಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಪಿಎಸ್‌ಸಿ ಪರ ಹಿರಿಯ ವಕೀಲ ರಾಜಗೋಪಾಲ್‌ ಎಂಬುವರು ಅರ್ಜಿದಾರರಾದ ಲೀಲಾವತಿ ಅವರನ್ನು ಕೆ ಆರ್‌ ಮಾರ್ಕೇಟ್‌ನಿಂದ ಬಂದ ಪರಿಶಿಷ್ಟ ಜಾತಿ ಮಹಿಳೆ ಎಂದು ಜರಿದಿದ್ದರು ಎಂದು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಕೆಪಿಎಸ್‌ಸಿ ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಅವರು ಜರಿದಿದ್ದಕ್ಕೆ ಆಕ್ಷೇಪ ಎತ್ತಿದ್ದ ಲೀಲಾವತಿ ಅವರು ರಿಜಿಸ್ಟ್ರಾರ್‌, ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತು ಆಡಳಿತ ಮಂಡಳಿಯ ಅಂದಿನ ಅಧ್ಯಕ್ಷ ನ್ಯಾಯಮೂರ್ತಿ ಭಕ್ತವತ್ಸಲ ಅವರಿಗೂ ದೂರು ಸಲ್ಲಿಸಿದ್ದರು. ಇದಾದ ನಂತರ ವಿಚಾರಣೆಯು ಹಲವು ಬಾರಿ ಮುಂದೂಡಲಾಗಿತ್ತು. ಇದರ ಅಂತಿಮ ತೀರ್ಪು 2021ರ ಜುಲೈ 14ರಂದು ಹೊರಬಿದ್ದಿತ್ತು. ಕೆಪಿಎಸ್‌ಸಿ ಪರ ಹಿರಿಯ ನ್ಯಾಯವಾದಿ ಅವರು ಜರಿದಿದ್ದನ್ನು ಅಂತಿಮ ತೀರ್ಪಿನಲ್ಲಿ ಉಲ್ಲೇಖವಾಗಿತ್ತು.

7 ವರ್ಷಗಳ ಹಿಂದೆ ತೆರೆದ ನ್ಯಾಯಾಲಯದಲ್ಲಿ ಕೆಪಿಎಸ್‌ಸಿ ಹಿರಿಯ ನ್ಯಾಯವಾದಿ ರಾಜಗೋಪಾಲ್‌ ಎಂಬುವರು ಜರಿದಿದ್ದನ್ನು 2021ರ ಜುಲೈ 14ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಪ್ರಕಟಿಸಿದ ಅಂತಿಮ ತೀರ್ಪಿನಲ್ಲಿಯೂ ಪ್ರಸ್ತಾಪಿಸಿರುವುದು ಸಂವಿಧಾನದತ್ತವಾದ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಲೀಲಾವತಿ ಅವರು ಹೇಳಿದ್ದರು. ಸಂವಿಧಾನದ 14, 15, 15(2), 15(3), 15(4) 16, 12, 18, 21, 46, 335, 141, ಮತ್ತು 144 ಅನುಚ್ಛೇಧವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಉಲ್ಲಂಘಿಸಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ವಿವರಿಸಿದ್ದರು.

ಹಂಗಾಮಿ ಅಧ್ಯಕ್ಷರು ತಮ್ಮ ವಿವೇಚನೆಯನ್ನು ಬದಿಗೊತ್ತಿ ಒಬ್ಬ ನ್ಯಾಯಾಂಗ ಸದಸ್ಯರ ಅಧಿಕಾರವನ್ನು ಆಡಳಿತ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ನ್ಯಾಯಾಂಗ ಕ್ರಿಯಾಶೀಲತೆಗೆ ಅನಿವಾರ್ಯ ಸಮಯ ಒದಗಿದೆ. ನನ್ನ ಆತ್ಮ ವಿಶ್ವಾಸವನ್ನು ಕುಗ್ಗಿಸಲಾಗಿದೆಯಲ್ಲದೇ ಮಾನಸಿಕವಾಗಿ ಜರ್ಝರಿತನ್ನಾಗಿಸಿದೆ. ಅದೇ ರೀತಿ ಈ ಮಂಡಳಿಯು ನೈತಿಕ ಮೌಲ್ಯ ರಹಿತವಾಗಿದ್ದು ಮೂಲಭೂತ ಕಾನೂನಿನ ನೀತಿಗಳನ್ನು ಉಲ್ಲಂಘಿಸಿ ನಾಗರಿಕ ಸಮಾಜದ ಮರ್ಯಾದೆಯನ್ನು ಭಂಗ ಮಾಡಿ ದಲಿತ ಮಹಿಳೆಯ ಅಸ್ತಿತ್ವವನ್ನೇ ಅಳಿಸಿ ಹಾಕಿದಂತಾಗಿದೆ,’ ಎಂದು ಪರಿಶೀಲನಾ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

ಈ ಪ್ರಕರಣದಲ್ಲಿ ವಕೀಲ ರಾಜಗೋಪಾಲ್‌ ಮಾಡಿದ್ದ ಹೇಳಿಕೆಯು ಅಕ್ಷ್ಯಮ್ಯವಾಗಿದೆ. ಅದಕ್ಕೆ ಬಾರ್‌ ಕೌನ್ಸಿಲ್‌, ಕೆಪಿಎಸ್‌ಸಿ ಸೇರಿ ಎಲ್ಲರೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ವಿಷಯವನ್ನು ಲೀಲಾವತಿ ಅವರು ಬಾರ್‌ ಕೌನ್ಸಿಲ್‌ ಸೇರಿ ಹಲವರಿಗೆ ವಿಷಯ ತಲುಪಿಸಿದ್ದರಿಂದ ಅದು ನಾಲ್ಕು ಗೋಡೆಗಳಾಚೆಗೂ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೆಖಿಸಿದ್ದು, ಘಟನೆಗೆ ಸಂಬಂಧಿಸಿದ ವಿಷಯವಾಗಿದೆಯಷ್ಟೆ. ನ್ಯಾಯಾಧೀಶರು ತಮ್ಮ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದಿಲ್ಲ. ಈ ಮಾತನ್ನು ಹೇಳಿದ್ದ ವ್ಯಕ್ತಿಯ ವಿರುದ್ಧ ದೂರನ್ನು ಸಲ್ಲಿಸುವುದಾಗಲಿ ಅಥವಾ ಸಲ್ಲಿಸಿದ್ದ ದೂರಿನ ಬಗ್ಗೆ ಕ್ರಮಕ್ಕೆ ಅರ್ಜಿದಾರರು ಒತ್ತಾಯಿಸುವ ಅವಕಾಶವಿದೆ. ಮಾಜಿ ಸ್ಟೇಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ ಟಿ ವೆಂಕಟೇಶ್‌ ಅವರು ‘ದಿ ಫೈಲ್‌’ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಹಿರಿಯ ನ್ಯಾಯವಾದಿ ಕೆಪಿಎಸ್‌ಸಿ ಪ್ರತಿನಿಧಿಸಿರುವುದರಿಂದ ಈ ಹೇಳಿಕೆಯನ್ನು ಕೆಪಿಎಸ್‌ಸಿಯ ಪ್ರತಿನಿಧಿಯಾಗಿ ಮಾಡಿದಂತಾಗಿದೆ. ಈ ಹೇಳಿಕೆಗೆ ಸಂಬಂಧಪಟ್ಟಂತೆ ಕೆಪಿಎಸ್‌ಸಿಯೂ ಜವಾಬ್ದಾರನಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಪಿಎಸ್‌ಸಿ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದರು.

the fil favicon

SUPPORT THE FILE

Latest News

Related Posts