ಬೆಂಗಳೂರು; ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮವು ಅನುಷ್ಠಾನಗೊಳಿಸಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯು ಹಿಂದುಳಿದ ವರ್ಗಗಳಾದ ಉಪ್ಪಾರ, ತಿಗಳ, ಅಲೆಮಾರಿ, ಅರೆ ಅಲೆಮಾರಿ, ಮಡಿವಾಳ, ಸವಿತಾ ಸಮಾಜದಂತಹ ಅತ್ಯಂತ ದುರ್ಬಲ ಸಮುದಾಯಗಳನ್ನು ಒಳಗೊಂಡಿಲ್ಲ ಎಂಬ ಸಂಗತಿಯನ್ನು ಅಧ್ಯಯನ ವರದಿಯೊಂದು ಬಹಿರಂಗಗೊಳಿಸಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯ ಕುರಿತಾಗಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಪರವಾಗಿ ಅಧ್ಯಯನ ನಡೆಸಿರುವ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೋಕಸಿ ಮೂವ್‌ಮೆಂಟ್ ಸಂಸ್ಥೆಯು (2011-12ರಿಂದ 2017-18ರವರೆಗೆ ) 2021ರ ಜೂನ್‌ನಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯು ಹಿಂದುಳಿದ ಸಮುದಾಯದ ಎಲ್ಲಾ ವರ್ಗಗಳನ್ನು ಒಳಗೊಂಡಿಲ್ಲ ಮತ್ತು ಆ ಸಮುದಾಯಗಳಲ್ಲಿನ ಕನಿಷ್ಠ ಸಂಖ್ಯೆಯ ಫಲಾನುಭವಿಗಳಷ್ಟೇ ಯೋಜನೆಯು ತಲುಪಿದೆ ಎಂಬ ಅಂಶವನ್ನು ಹೊರಗೆಡವಿದೆ. ವರದಿಯ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ನಿರ್ದಿಷ್ಟ ಹಿಂದುಳಿದ ಸಮುದಾಯಗಳಾದ ಅಲೆಮಾರಿ ಮತ್ತು ಅರೆ ಅಲೆಮಾರಿ, ಸವಿತಾ, ಕುಂಬಾರ, ತಿಗಳ, ಉಪ್ಪಾರ ಸಮುದಾಯಗಳಿಗೆ ಈ ಯೋಜನೆಯು ವ್ಯಾಪ್ತಿ ಮತ್ತು ಗುರಿಗಳನ್ನು ಹೊಂದಿಲ್ಲ. ಈ ಅತ್ಯಂತ ದುರ್ಬಲ ಸಮುದಾಯಗಳನ್ನು ಅದರಲ್ಲೂ ವಿಶೇಷವಾಗಿ ಮೊದಲ ತಲೆಮಾರಿನ ಕುಟುಂಬಗಳನ್ನು ತಲುಪಲು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಕಾರ್ಯ ವಿಧಾನವನ್ನು ರಾಜ್ಯವು ಗಂಭೀರವಾಗಿ ಪರಿಶೀಲಿಸುವ ಅಗತ್ಯವಿದೆ,’ ಎಂದು ವರದಿಯು ಅಭಿಪ್ರಾಯಪಟ್ಟಿದೆ.
ಅಧ್ಯಯನ ವರದಿ ಸಲ್ಲಿಕೆಯಾಗಿ 6 ತಿಂಗಳಾದರೂ ವರದಿ ಶಿಫಾರಸ್ಸಿನಂತೆ ನೀತಿ ನಿರೂಪಣೆ ಸೇರಿದಂತೆ ಇನ್ನಿತರೆ ಶಿಫಾರಸ್ಸುಗಳ ಕುರಿತು ದೇವರಾಜ ಅರಸು ಅಭಿವೃದ್ದಿ ನಿಗಮದಲ್ಲಾಗಲೀ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಾಗಲಿ ಚರ್ಚೆ ನಡೆದಿಲ್ಲ. ಅಲ್ಲದೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವರದಿಯನ್ನು ಗಮನಿಸಿಲ್ಲ ಎಂದು ಗೊತ್ತಾಗಿದೆ. ವರದಿ ಸಲ್ಲಿಕೆಯಾದ ನಂತರ 2 ಬಾರಿ ವಿಧಾನಮಂಡಲ ಅಧಿವೇಶನ ನಡೆದಿದ್ದರೂ ಯೋಜನೆಯನ್ನು ಮರು ವಿನ್ಯಾಸಗೊಳಿಸುವ ಬಗ್ಗೆಯೂ ಚರ್ಚೆ ನಡೆದಿಲ್ಲ.
ಅರಿವು ಶೈಕ್ಷಣಿಕ ಸಾಲ ಯೋಜನೆ ಪಡೆದುಕೊಂಡಿರುವ ಹಿಂದುಳಿದ ವರ್ಗಗಳ ಪೈಕಿ ಪ್ರವರ್ಗ 2ಎ ಅತಿ ದೊಡ್ಡ ಫಲಾನುಭವಿಗಳ ಗುಂಪಾಗಿ ಹೊರಹೊಮ್ಮಿದೆ. ಈ ಯೋಜನೆಯಲ್ಲಿ ಸಿಂಹಪಾಲನ್ನು ಪಡೆದಿರುವ ಪ್ರವರ್ಗ 2 ಎ ನಲ್ಲಿಯೇ (ಶೇ.60) ಹೆಚ್ಚಿನ ಮಟ್ಟದ ನಿರುದ್ಯೋಗಿಗಳಿದ್ದಾರೆ. ಯೋಜನೆಯ ಲಾಭವನ್ನು ಹೆಚ್ಚಾಗಿ (ಶೇ.54)ರಷ್ಟು ಪಡೆಯುವುದರಿಂದ ಈ ವರ್ಗದವರಲ್ಲಿಯೇ ನಿರುದ್ಯೋಗವು ಹೆಚ್ಚಾಗಿರುವುದು ಸಹಜವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ ಈ ಯೋಜನೆಯು ಉದ್ಯೋಗದ ಮೇಲೆ ಹೇಗೆ ಪ್ರಭಾವ ಬೀರಿದ ಎಂಬುದನ್ನೂ ಅಧ್ಯಯನ ತಂಡ ವಿಶ್ಲೇಷಿಸಿದೆ. ಉದ್ಯೋಗಿಗಳಿಗೆ ಹೋಲಿಸಿದರೆ (ಶೇ.41.5) ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು (ಶೇ.58.1) ನಿರುದ್ಯೋಗಿಗಳಾಗಿದ್ದಾರೆ. ಕಡಿಮೆ ಫಲಾನುಭವಿಗಳನ್ನು ಹೊದಿರುವ ಸಾಮಾನ್ಯ ಪದವಿ ಮತ್ತು ವೈದ್ಯಕೀಯ ಕಾರ್ಯಕ್ರಮವನ್ನು ಹೊರತುಪಡಿಸಿದರೆ ನಿರುದ್ಯೋಗಿಗಳ ಪ್ರಮಾಣವು ಸ್ನಾತಕೋತ್ತರ ಫಲಾನುಭವಿಗಳಲ್ಲಿ (ಶೇ. 66) ಮತ್ತು ಇಂಜಿನಿಯರಿಂಗ್ (ಬಿಇ) ಪದವೀಧರ (ಶೇ.52)ರಲ್ಲಿ ಹೆಚ್ಚಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ಫಲಾನುಭವಿ ಕುಟುಂಬಗಳಲ್ಲಿ ಹೆಚ್ಚಿನವರು (ಶೇ. 58) ಯಾವುದೇ ರೀತಿಯ ಕೃಷಿ ಭೂಮಿ ಹೊಂದಿಲ್ಲ. ಇದು ಯೋಜನೆಯಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ನೀಡಿದ ಆದ್ಯತೆ ಸೂಚಿಸುತ್ತದೆ. ಅದರಲ್ಲೂ ಬೆಂಗಳೂರು (ಶೇ.73) ಮತ್ತು ಬೆಳಗಾವಿ (ಶೆ.60) ವಿಭಾಗಗಳಲ್ಲಿ ಕೃಷಿ ಭೂ ರಹಿತರ ಸಂಖ್ಯೆ ಹೆಚ್ಚಳವಿದೆ. ವರ್ಗ 3 ಬಿ ಯಲ್ಲಿ ಭೂ ರಹಿತ ಫಲಾನುಭವಿಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಫಲಾನುಭವಿಗಳ ಅತಿ ದೊಡ್ಡ ಭಾಗ ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿದ್ಧಾರೆ. ಸಾಲದ ಮೊತ್ತವು ದೊಡ್ಡ ಪ್ರಮಾಣದಲ್ಲಿದ್ದರೂ ವೈದ್ಯಕೀಯ ವಿದ್ಯಾರ್ಥಿಗಳು ಭರಿಸುವ ಖರ್ಚಿಗೆ ಅದು ಸರಿ ಹೊಂದುತ್ತಿಲ್ಲ. ಹಾಗಾಗಿ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳಿಗಿರುವ ಅಧಿಕ ಖರ್ಚು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಸಾಲದ ಪ್ರಮಾಣವನ್ನು ವರ್ಧಿಸುವ ಅಗತ್ಯವಿದೆ ಎಂದು ವರದಿಯು ಶಿಫಾರಸ್ಸು ಮಾಡಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯ ಫಲಾನುಭವಿಗಳ ಪೈಕಿ ಶೇ. 18.4ರಷ್ಟು ಮಾತ್ರ ಮರುಪಾವತಿ ಮಾಡಿದ್ದಾರೆ. ವಿವಿಧ ವರ್ಗಗಳನ್ನು ಹೋಲಿಕೆ ಮಾಡಿದಲ್ಲಿ ಪ್ರವರ್ಗ 3 ಬಿ ಫಲಾನುಭವಿಗಳಲ್ಲಿ ಸಾಲ ಮರು ಪಾವತಿಯು ಉತ್ತಮವಾಗಿದೆ. ಅವರಲ್ಲಿ ಶೇ. 30ರಷ್ಟು ಪ್ರತಿಶತ ಜನರು ಸಾಲವನ್ನು ಮರು ಪಾವತಿಸುತ್ತಿದ್ದಾರೆ. ಪ್ರವರ್ಗ 2 ದವರು ಅರಿವು ಕಾರ್ಯಕ್ರಮದ ಅತಿ ದೊಡ್ಡ ಫಲಾನುಭವಿಗಳಾಗಿದ್ದರೂ ಸಹ ವರ್ಗ 1 ಮತ್ತು ವರ್ಗ 2 ಫಲಾನುಭವಿಗಳಲ್ಲಿ ಮರು ಪಾವತಿಯ ಪ್ರಮಾಣ ಕಡಿಮೆ ಇದೆ ಎಂಬುದು ವರದಿಯಿಂದ ತಿಳಿದು ಬಂದಿದೆ.
ಅಲೆಮಾರಿ ಮತ್ತು ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ 2011-12ರಿಂದ 2018-19ರವರೆಗೆ ಒಟ್ಟು 882 ವಿದ್ಯಾರ್ಥಿಗಳಿಗೆ 445.56 ಲಕ್ಷ ರು. ಸಾಲ ನೀಡಲಾಗಿದೆ. ಮಡಿವಾಳ ಸಮುದಾಯಕ್ಕೆ 2011-12ರಿಂದ 2015-16ರವರೆಗೆ ಬಿಡಿಗಾಸೂ ಹಂಚಿಕೆಯಾಗಿಲ್ಲ. 2016-17ರಲ್ಲಿ 75, 2017-18ರಲ್ಲಿ 100, 2018-19ರಲ್ಲಿ 62 ವಿದ್ಯಾರ್ಥಿಗಳಿಗೆ ಒಟ್ಟು 152.35 ಲಕ್ಷ ಹಂಚಿಕೆ ಆಗಿದೆ.
ಸವಿತಾ ಸಮಾಜದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ 2011-12ರಿಂದ 2015-16ರವರೆಗೆ ಹಂಚಿಕೆಯಾಗಿಲ್ಲ. 2016-17ರಲ್ಲಿ 75, 2017-18ರಲ್ಲಿ 100, 2018-19ರಲ್ಲಿ 62 ವಿದ್ಯಾರ್ಥಿಗಳಿಗೆ ಒಟ್ಟು 152.35 ಲಕ್ಷ ಹಂಚಿಕೆಯಾಗಿದೆ.
ಕುಂಬಾರ ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2015-16ರವರೆಗೆ ಯಾವುದೇ ಹಂಚಿಕೆಯಾಗಿಲ್ಲ. 2016-17ರಲ್ಲಿ 75, 2017-18ರಲ್ಲಿ 100, 2018-19ರಲ್ಲಿ 62 ವಿದ್ಯಾರ್ಥಿಗಳಿಗೆ ಒಟ್ಟು 152.35 ಲಕ್ಷ ಹಂಚಿಕೆಯಾಗಿದೆ.
ತಿಗಳ ಸಮುದಾಯಕ್ಕೆ 2016-17ರಲ್ಲಿ 75, 2017-18ರಲ್ಲಿ 138, 2018-19ರಲ್ಲಿ 69 ವಿದ್ಯಾರ್ಥಿಗಳಿಗೆ 179.35 ಲಕ್ಷ ಹಂಚಿಕೆಯಾಗಿದೆ. ಉಪ್ಪಾರ ಸಮುದಾಯಕ್ಕೆ 2015-16ರವರೆಗೆ ಯಾವುದೇ ಹಂಚಿಕೆಯಾಗಿಲ್ಲ. 2016-17ರಲ್ಲಿ 75, 2017-18 ಮತ್ತು 2018-19ರಲ್ಲಿ ಒಟ್ಟು 45 ಲಕ್ಷ ಹಂಚಿಕೆಯಾಗಿದೆ. ಇತರೆ ಹಿಂದುಳಿದ ವರ್ಗಗಳ ವಿಭಾಗಗಳಾದ ಮಡಿವಾಳ, ಸವಿತಾ, ಕುಂಬಾರ, ತಿಗಳ ಸಮುದಾಯಗಳ ಪೈಕಿ ಉಪ್ಪಾರ ಸಮುದಾಯದಲ್ಲಿ ಯೋಜನೆಯ ವ್ಯಾಪ್ತಿಯು ಕೇವಲ ಒಂದು ವರ್ಷಕ್ಕಷ್ಟೇ ಮಾತ್ರ ಕಾಣಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ಬಹುತೇಕ ಯೋಜನೆಗಳೆಲ್ಲವೂ ಅವೈಜ್ಞಾನಿಕವಾಗಿ ರೂಪಿತವಾಗಿವೆ. ಯೋಜನೆಯು ಯಾರನ್ನು ಒಳಗೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬ ಬಗ್ಗೆ ಕಾರಣಗಳನ್ನು ಕೊಟ್ಟಿಲ್ಲ. ಯಾರು ಅತಿ ಹಿಂದುಳಿದವರು, ಹಿಂದುಳಿದವರು ಎಂಬುದಕ್ಕೆ ದತ್ತಾಂಶಗಳಿಲ್ಲ. ಇದು ಬರೀ ಅಧಿಕಾರಶಾಹಿ ಬೃಹಸ್ಪತಿಗಳು ಮಾಡುವ ಅಥವಾ ರೂಪಿಸುವ ಯೋಜನೆಗಳಿವು. ಇದಕ್ಕೆ ರಾಜಕೀಯ ಸ್ಪಷ್ಟತೆಯಾಗಲೀ, ಸಾಮಾಜಿಕ ಹಿನ್ನೆಲೆಯಾಗಲಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಯೋಜನೆಗಳು ತಾನೇ ಹೇಗೆ ಯಶಸ್ವಿಯಾಗಬಲ್ಲವು? ಚರ್ಚೆ ನಡೆಸದೆಯೇ ಅನುಷ್ಠಾನಗೊಳಿಸಿದರೆ ಇಂತಹ ಯೋಜನೆಗಳು ದಿಕ್ಕಿಲ್ಲದಂತಾಗುತ್ತವೆ. ಇಡೀ ಯೋಜನೆಯನ್ನು ಮರು ರೂಪಿಸಬೇಕಾಗಿದೆ,’ ಎನ್ನುತ್ತಾರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ ಸಿ ಎಸ್ ದ್ವಾರಕನಾಥ್